ಮನೆಯೊಳಗೊಂದು ಹರಟೆ ಕಟ್ಟೆ
ಮನೆಯೊಳಗೊಂದು ಮರವ ಬೆಳೆಸಿ : ಇತ್ತೀಚೆಗೆ
ಹೋಟೆಲ್, ರೆಸಾರ್ಟ್, ಸ್ಟಾರ್ ಸೆಲೆಬ್ರೆಟಿಗಳ ಐಷಾರಾಮಿ ಬಂಗಲೆಗಳಲ್ಲಿ ಎತ್ತರದ ಛಾವಣಿ ಸಾಮಾನ್ಯ ಅಂಶ.
ಈ ‘ಹೈ ಸೀಲಿಂಗ್’ ಪರಿಕಲ್ಪನೆ ಮನೆಯೊಳಗಡೆ ವಿಶಾಲ ಜಾಗವನ್ನು ಕಲ್ಪಿಸುವುದಲ್ಲದೇ ಸಾಕಷ್ಟು ಗಾಳಿ ಬೆಳಕಿಗೂ
ಅವಕಾಶ ಮಾಡಿಕೊಡುತ್ತದೆ. ಹಾಗಾಗಿ ಇಂತಹ ಕಟ್ಟಡಗಳಲ್ಲಿ ಇತರೇ ಒಳಾಂಗಣ ಸಸ್ಯಗಳೊಂದಿಗೆ ಮರವೂ ಸೇರಿರುವುದನ್ನು
ಗಮನಿಸಬಹುದು.
ಈಗೀಗ ಇಂತದ್ದೇ ಕಲ್ಪನೆಗೆ ರೆಕ್ಕೆ ಪುಕ್ಕ ಕೊಡುವ ಒಳಾಂಗಣ ವಿನ್ಯಾಸದ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಅದೇ ಜಗಲಿಯೊಳಗಣ ಹರಟೆ ಕಟ್ಟೆ.
ಖಾಲಿ ಗೋಡೆಯ ಕಾನ್ವಾಸ್ ನ ಮೇಲೆ ಹಸಿರು
ಗಿಡ ಮರಗಳ ನೈಸರ್ಗಿಕ ಲೈವ್ ಆರ್ಟ್ ಇಂದು ಎಲ್ಲರ ಇಷ್ಟದ ಕಲಾತ್ಮಕತೆಯಾಗಿದೆ. ಮನೆಯೊಳಗಣ ಮರ ಹಸಿರು
ಪ್ರೀತಿಯಷ್ಟೇ ಅಲ್ಲದೇ ಕ್ಷೇಮ-ಆರೋಗ್ಯವನ್ನು, ಮಾನಸಿಕ ಸಂತುಲತೆಯನ್ನು ವರ್ಧಿಸುತ್ತದೆ. ಹಾಗಾಗಿ ಪಟ್ಟಣದ
ವೆಲನೆಸ್ ಸೆಂಟರ್, ಮೆಡಿಟೇಶನ್ ಸೆಂಟರ್ ಗಳಲ್ಲಂತೂ ಒಳಾಂಗಣದ ಮರದ ಕಟ್ಟೆಗಳು ಕಡ್ಡಾಯವೇನೋ ಅನ್ನುವಷ್ಟು
ಪ್ರಸಿದ್ಧ.
ಎಲ್ಲ ಮರಗಳು ಸಲ್ಲ: ಮನೆಯೊಳಗೆ ಮರ ಬೆಳೆಸಬೇಕೆಂದು
ಕಾಡಿನ ಮರವೊಂದರ ಸಸಿಯನ್ನು ತಂದು ನೆಡಲು ಸಾಧ್ಯವಿಲ್ಲ. ಕಾಡು ಮರಗಳ ಬದುಕು, ಬೆಳವಣಿಗೆ, ಸಂಪನ್ಮೂಲಗಳ
ಬಳಕೆಯ ರೀತಿ ಒಳಾಂಗಣಕ್ಕೆ ಒಪ್ಪುವಂತದ್ದಲ್ಲ. ಈ ನಿಟ್ಟಿನಲ್ಲಿ ಒಳಾಂಗಣಕ್ಕೆ ಸೂಕ್ತವಾದ ಮರಗಳ ಆಯ್ಕೆ
ಮೊದಲ ಹಂತದ್ದಾಗಬೇಕು. ನಂತರದ್ದು ಸಮೃದ್ಧ ಬೆಳಕಿರುವ ಸ್ಥಳದ ಆಯ್ಕೆ.
ಅರಳಿಯದೇ ಜಾತಿಯ ಫೈಕಸ್ ಬೆಂಜಮಿನಾ, ಫೈಕಸ್
ಲೈರಾಟಾ, ಉಳಿದಂತೆ ಅಂಬ್ರೆಲ್ಲಾ ಪಾಮ್, ಫ್ಯಾನ್ ಲೀಫ್ ಪಾಮ್, ಕಣಗಿಲು/ಪ್ಲುಮೇರಿಯಾ, ಪಚೀರಾ/ಮನೀ
ಟ್ರೀಗಳು ಒಳಾಂಗಣಕ್ಕೆ ಸೂಕ್ತ.
ಕಂಟೇನರ್/ಪಾಟ್ ಗಳನ್ನು ಬಳಸದೇ ನೆಲದಲ್ಲೇ
ಗಿಡ ನೆಟ್ಟರೆ ವಿಶಾಲ ಒಳಾಂಗಣಕ್ಕೆ ಹೊಸ ರೀತಿಯ ಲುಕ್ ನೀಡಲು ಸಾಧ್ಯ. ಈಗೆಲ್ಲಾ ನರ್ಸರಿಗಳಲ್ಲಿ ಮರಗಳನ್ನು
ಹೋಲುವ ಬೃಹತ್ ಸಸ್ಯಗಳು ಲಭ್ಯವಿರುತ್ತವೆ. ಅವುಗಳನ್ನೇ ಬುಡ ಸಮೇತ ಪೆಟ್ಟಾಗದಂತೆ ನೆಟ್ಟು ಕೊಡುವ ವ್ಯವಸ್ಥೆಯೂ
ಇದೆ. ಮನೆಯೊಳಗೆ ಗುರುತು ಪಡಿಸಿದ ಜಾಗದಲ್ಲಿ ನಾಲ್ಕಡಿ ಆಳ ಅಗಲದ ಸಿಮೆಂಟ್ ತೊಟ್ಟಿ ನಿರ್ಮಿಸಿ ಅದರಲ್ಲಿಯೇ
ಮರಗಳನ್ನು ನೆಡಬಹುದು. ಮರದ ಬೇರುಗಳು ತೊಟ್ಟಿ ಬಿಟ್ಟು ಬಾರದಂತೆ ಅವುಗಳನ್ನು ನಿರ್ಬಂಧಿಸುವುದು ಅತ್ಯಂತ
ಅವಶ್ಯಕ. ನೆಟ್ಟ ಗಿಡಕ್ಕೆ ಹಾಕಿದ ನೀರು ಹೊರ ಹೋಗುವಂತೆ ಡ್ರೇನೇಜ್ ನಿರ್ಮಿಸಿದರೆ ಇನ್ನೂ ಒಳಿತು.
ಗಿಡದ ಸುತ್ತ ಕಟ್ಟೆ, ಲಾನ್ ಗ್ರಾಸ್ ಅಥವಾ
ಚಂದದ ಕಲ್ಲಿನ ಮುಚ್ಚಿಗೆ, ಮರದ ಮೇಲೆ ಅಲ್ಲೊಂದು ಇಲ್ಲೊಂದು ಫರ್ನ್, ಹೀಗೆ ಸೃಜನಶೀಲತೆಗೆ ತಕ್ಕಂತೆ
ಒಳಾಂಗಣವನ್ನು ಇನ್ನಷ್ಟು ಸುಂದರವಾಗಿಸಬಹುದು. ಸಾಕಷ್ಟು ಜಾಗದ ಲಭ್ಯತೆಯಿದ್ದಲ್ಲಿ ಈ ಐಡಿಯಾವನ್ನು
ಅನುಸರಿಸಬಹುದು.

Comments
Post a Comment