ಮಿಣುಕುತಿರು ಮಿಂಚುಹುಳು


ಮುಂಗಾರು ಮಳೆಯ ಪೂರ್ವದ ಮೇ ತುದಿಯ ಮಬ್ಬು ದಿನಗಳು, ಕಿವಿ ಕೆಪ್ಪಾಗುವ ಜೀರುಂಡೆಯ ಹಾಡು, ವಲೆಯ ಬೆಂಕಿಯಲ್ಲಿ ಅಜ್ಜಿ ಸುಡುತ್ತಿದ್ದ ಗೇರು ಬಂಡಿ, ಇವುಗಳ ಜೊತೆ ಚಿಕ್ಕವಳಿದ್ದಾಗ ನಾನಂತೂ ಕಾಯುತ್ತಿದ್ದದ್ದು ನಕ್ಷತ್ರವೂ ಇಣುಕದ ಕಗ್ಗತ್ತಲ ರಾತ್ರಿಯಲ್ಲಿ ಮನೆ ಮುಂದೆಯೇ ನಡೆಯುವ ‘ಮ್ಯಾಜಿಕ್ ಶೋ’ಗಾಗಿ. ಸಾವಿರಾರು ಪುಟ್ಟ ಯಕ್ಷಿಣಿಯರು ಮನೆಯ ಮುಂದಿನ ಮರದಲ್ಲಿ ಮಿಣಿ ಮಿಣಿ ಬೆಳಕಿನ ಮಂತ್ರ ದಂಡ ಬೀಸುವುದನ್ನು ನೋಡುತ್ತಾ ಕೂತರೇ ‘ವಂಡರಲ್ಯಾಂಡ್‌ನ ಆಲಿಸ್’ ನಾನಾಗುತ್ತಿದ್ದೆ. ಕೋಣೆ ಸೇರಿ ಅಲ್ಲೊಂದು ಇಲ್ಲೊಂದು ಮಿನುಗುತ್ತಿದ್ದ ಮಿಣುಕು ಹುಳಗಳು ಮಲಗುವಾಗಲೂ ಮನಸ್ಸಿಗೆ ಮುದ ಕೊಡುತ್ತಿದ್ದವು. ಕಾಡುವ ಈ ನೆನಪುಗಳು ಮುಂದೊAದು ದಿನ ಕಾಲ್ಪನಿಕವೇ ಆಗಬಹುದೇನೋ ಎಂದು ವಿಜ್ಞಾನಿಗಳು ಇಂದು ಎಚ್ಚರಿಸುತ್ತಿದ್ದಾರೆ!

ಮಿಣುಕು ಹುಳಗಳ ಮಾಯಾ ಜಗತ್ತು

ಹೆಸರಲ್ಲೇ ಬೆಳಕಿರುವ ‘ಲಾಂಪಿರಿಡೇ’ ಕುಟುಂಬಕ್ಕೆ ಸೇರಿದ ಮಿಂಚು ಹುಳಗಳಲ್ಲಿ ಸುಮಾರು ಎರಡು ಸಾವಿರ ಜಾತಿಗಳಿವೆ. ಭಾರತದಲ್ಲಿ ಕಂಡುಬರುವುದು ಆರೇಳು ಜಾತಿಗಳಷ್ಟೇ. ದೇಹದಲ್ಲಿ ನೈಸರ್ಗಿಕವಾಗಿ ನಡೆಯುವ ರಾಸಾಯನಿಕ ಕ್ರಿಯೆಗಳಿಂದ ಮಿಣುಕು ಹುಳಗಳು ಬೆಳಕನ್ನು ಪ್ರಕಾಶಿಸುವ ವಿದ್ಯಮಾನ ಇಂದು ರಹಸ್ಯವೇನಲ್ಲ. ಈ ಪ್ರಕಾಶವೆಲ್ಲ ಹೆಣ್ಣು-ಗಂಡುಗಳ ಆಕರ್ಷಣೆಗೆ ಎನ್ನುವುದೂ ತಿಳಿದ ವಿಷಯ. ಗಂಡು ಮಿಂಚು ಹುಳಗಳು ಸಾಮಾನ್ಯವಾಗಿ ಹಾರುತ್ತಾ ಮಕರಂದ ಹೀರುತ್ತಾ ಪರಾಗಸಸ್ಪರ್ಷ ಮಾಡುತ್ತಾ ಜೀವನವನ್ನು ಕಳೆಯುತ್ತವೆ. ಹೆಣ್ಣು ಹುಳಗಳು ವಯಸ್ಕರಾದರೂ ಲಾರ್ವಾ ರೂಪದಲ್ಲಿಯೇ ‘ಗ್ಲೋ  ವರ್ಮ್’ಗಳಂತೆ ಮಿಣುಕುತ್ತಾ ಎಲೆಗಳ ಮೇಲೆ ನೆಲದ ಮೇಲೆ ಹರೆಯುತ್ತಾ ಬದುಕುತ್ತವೆ. ಕೆಲ ಜಾತಿಗಳಲ್ಲಿ ರೆಕ್ಕೆ ಹೊಂದಿರುವ ಹೆಣ್ಣು ಹುಳಗಳು ಗಂಡು ಹುಳಗಳಂತೆ ಹಾರಾಡುತ್ತಾ ಇತರೇ ಹುಳಗಳನ್ನು ತಿನ್ನುತ್ತಾ ಬದುಕಬಲ್ಲವು.   

ಏಪ್ರಿಲ್-ಮೇ ತಿಂಗಳ ಇರುಳಲ್ಲಿ ತಮ್ಮದೇ ವಿಶಿಷ್ಟ ಪ್ರಕಾಶತೆಯ ಬೆಳಕಿನ ಸಂಕೇತದ ಮೂಲಕ ಸಂವಹಿಸುವ ಮಿಂಚು ಹುಳಗಳು ಉಳಿದ ಕಾಲದಲ್ಲಿ ಕಾಣುವುದು ತೀರಾ ಅಪರೂಪ. ಮಿಲನದ ನಂತರ ಹೆಣ್ಣು ಹುಳಗಳು ಗಂಡು ಹುಳವನ್ನು ಪೋಷಕಾಂಶಗಳಿಗಾಗಿ ಭಕ್ಷಿಸುವುದನ್ನೂ ಕಾಣಬಹುದು. ಸೂಕ್ತ ಜಾಗ ಹುಡುಕಿ ಹಸಿ ನೆಲದ ಮಣ್ಣಿನಲ್ಲಿ ಹೆಣ್ಣು ಹುಳ ಇಟ್ಟ ಮೊಟ್ಟೆ ಲಾರ್ವಾ ಆಗುವುದು ನಾಲ್ಕಾರು ವಾರಗಳಲ್ಲಿ. ಈ ಲಾರ್ವಾಗಳು ಕುಂಭಕರ್ಣನAತೆ ಹುಳ-ಹುಪ್ಪಟೆ ಕೊಳೆಯುತ್ತಿರುವ ವಸ್ತುಗಳನ್ನು ಗಡದ್ದಾಗಿ ತಿಂದು ನಿದ್ದೆಗೆ ಹೋದರೆ ಎಚ್ಚರವಾಗುವುದು ಕೆಲವು ತಿಂಗಳು ಅಥವಾ ವರ್ಷಗಳ ನಂತರ; ಮಳೆ ಮುನ್ಸೂಚನೆ ಸಿಕ್ಕಾಗ. ಎರಡೇ ವಾರದ ಗಡಿಬಿಡಿಯಲ್ಲಿ ಲಾರ್ವಾಗಳು ಪ್ಯೂಪಾ ಹಂತ ದಾಟಿ ವಯಸ್ಕರಾಗಿ ಹೊರಬರುತ್ತವೆ. ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ ನರ್ತನ ಮಾಡುತ್ತಾ ಮತ್ತೊಂದು ಮಿಲನಕ್ಕೆ ತಯಾರಾಗುತ್ತವೆ.

ಮಣ್ಣಿನಲ್ಲಿ ವಾಸಿಸುವ ಸಸ್ಯ-ಭಾದಕ ಕೀಟಗಳನ್ನು ಹದ್ದುಬಸ್ತಿನಲ್ಲಿರಡುವ ಕಾರಣ ಮಿಂಚು ಹುಳಗಳು ಎರೆಹುಳಗಳಂತೆ ರೈತ ಮಿತ್ರರು. ಪರಾಗಸ್ಪರ್ಷದಲ್ಲಿಯೂ ಭಾಗಿಯಾಗುವ ಕಾರಣ ಇವು ಪ್ರಯೋಜನಕಾರಿ. ವಿವಿಧ ಜೀವಿಗಳು ಪರಸ್ಪರ ಆರೋಗ್ಯಕರ ಸಂಬAಧದಲ್ಲಿರುವ ವ್ಯವಸ್ಥೆಯಲ್ಲಿ ಕಂಡು ಬರುವ ಮಿಂಚು ಹುಳಗಳು ಪರಿಸರದ ಸಮತೋಲನವನ್ನು ಸೂಚಿಸುತ್ತವೆ.

ಮಿಂಚು ಹುಳಗಳ ದೇಹದಲ್ಲಿರುವ ವಿಷಕಾರಿ ರಾಸಾಯನಿಕಗಳ ರುಚಿಯನ್ನು ಇಷ್ಟಪಡದ ಪರಭಕ್ಷಕ ಹುಳು/ಪ್ರಾಣಿಗಳು  ಅವುಗಳ ಮಿಂಚಿನ ಮಾಟದಿಂದ ದೂರವಿರುತ್ತವೆ. ದುರಾದೃಷ್ಟವೆಂದರೆ ಇಂತಹ ಅಜಾತಶತ್ರುಗಳ ಸಂತತಿಯೂ ವಿಶ್ವದಾದ್ಯಂತ ಕ್ಷೀಣಿಸುತ್ತಿರುವುದನ್ನು ಗಮನಿಸಲಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಅಧ್ಯಯನವೊಂದು ಇದೇ ಕಳವಳವನ್ನು ವ್ಯಕ್ತಪಡಿಸಿದೆ.

ನಶಿಸುತ್ತಿರುವ ಸಂತತಿ

ಹೆಣ್ಣು ಮಿಂಚು ಹುಳಗಳು ಮೊಟ್ಟೆ ಇಡಲು ಆಯ್ಕೆ ಮಾಡುವುದು ಮರಿಗಳ ಬೆಳವಣಿಗೆಗೆ ಬೇಕಾಗುವ ಪೋಷಕಾಂಶಗಳು ಲಭ್ಯವಿರುವ ಮತ್ತು ಸದಾ ತೇವವಾಗಿರುವ ಜವುಗು ನೆಲವನ್ನು. ನಗರೀಕರಣದಿಂದ ಅಂತಹ ಪ್ರದೇಶಗಳು ಕಾಣದಾಗುತ್ತಿವೆ. ನಿಧಾನಕ್ಕೆ ಮಿಂಚು ಹುಳಗಳ ವಾಸಸ್ಥಾನ ನಾಶವಾಗುತ್ತಿದೆ. ರಾಸಾಯನಿಕಗಳಿಂದ ಕಲುಷಿತವಾದ ಜಲಮೂಲಗಳು, ಅತಿಯಾದ ಕೀಟನಾಶಕಗಳ ಬಳಕೆ, ಅವುಗಳ ಪ್ರಾಣಕ್ಕೆ ಕುತ್ತು ತಂದಿವೆ. ಪಟ್ಟಣದ ಕೃತಕ ಬೆಳಕು ಅವುಗಳ ಮಿಲನ ಕ್ರಿಯೆಗೆ ಕಂಟಕವಾಗಿದೆ. ಬದಲಾಗುತ್ತಿರುವ ವಾತಾವರಣ ಅವುಗಳ ಜೀವನ ಚಕ್ರವನ್ನು ಏರು ಪೇರು ಮಾಡಿದೆ. ಹೀಗೆ ಒಂದು ಕಾಲದಲ್ಲಿ ಹೇರಳವಾಗಿ ಕಾಣಸಿಗುತ್ತಿದ್ದ ಮಿಂಚು ಹುಳಗಳ ಸಂತತಿ ಅವನತಿಯತ್ತ ಸಾಗುತ್ತಿದೆ.

ಸಂರಕ್ಷಣೆಯ ಹೊಣೆ

ಕರ್ನಾಟಕ ಸರ್ಕಾರದ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ)ಯ ಸಂಶೋಧಕರು ಮಿಂಚು ಹುಳಗಳ ಸಂಖ್ಯೆ, ವೈವಿಧ್ಯತೆ, ಅವುಗಳ ವಾಸಸ್ಥಾನಗಳ ಕುರಿತಂತೆ ಅಧ್ಯಯನ ನಡೆಸುತ್ತಿದ್ದೂ ಅವುಗಳ ಸಂರಕ್ಷಣೆಯತ್ತ ಅರಿವು ಮೂಡಿಸುತ್ತಿದ್ದಾರೆ. ಒಂದು ಕಾಲದಲ್ಲಿ ಬೆಂಗಳೂರಿನ ತುಂಬೆಲ್ಲಾ ಇದ್ದ ಮಿಂಚು ಹುಳಗಳು ಈಗ ಕೆಲವೇ ಜಲಾನಯನ ಪ್ರದೇಶಗಳು, ಕೆರೆಗಳಿಗೆ ಸೀಮಿತವಾಗಿರುವುದನ್ನು ಗಮನಿಸಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸ್ವಚ್ಛಂದವಾಗಿ ವಿಹರಿಸುವ ೧೨ ಹಾಟ್ ಸ್ಪಾಟ್ ಗಳನ್ನು ಅವರು ಗುರುತಿಸಿದ್ದಾರೆ. ನ್ಯಾಶನಲ್ ಸೆಂಟರ್ ಫಾರ್ ಬಯಾಲಾಜಿಕಲ್ ಸೈನ್ಸಸ್, ಜಿ.ಕೆ.ವಿ.ಕೆ, ಸಂಭ್ರಮ ಕಾಲೇಜು, ಜಾರಕಬಂಡಿ ಸ್ಟೇಟ್ ಫಾರೆಸ್ಟ್, ವುಡ್ ಸೈನ್ಸ್ ಇನ್ಸಿ÷್ಟಟ್ಯೂಟ್, ಹೆಬ್ಬಾಳ ಫಾರೆಸ್ಟ್ ನರ್ಸರಿ, ಹೇಸರಘಟ್ಟಾ ಟ್ಯಾಂಕ್, ಬನ್ನೇರುಘಟ್ಟಾ ರಾಷ್ಟಿçÃಯ ಉದ್ಯಾನವನ, ನಂದಿ ಬೆಟ್ಟ, ಕಗ್ಗಲೀಪುರ, ಆರ್ಟ್ ಆಫ್ ಲಿವಿಂಗ್ ಆಶ್ರಮ, ಎಚ್ ಕ್ರಾಸ್ ಈ ಹಾಟಸ್ಪಾಟ್ ತಾಣಗಳಾಗಿವೆ. 

ಬೆಂಗಳೂರಿನ ಕೆರೆಗಳು ಕಾಣೆಯಾದಂತೆ ಮಿಂಚು ಹುಳಗಳೂ ವಿರಳವಾಗುತ್ತಿರುವುದು ಅಪಾಯದ ಸೂಚನೆಯೇ ಆಗಿದೆ. ಮಿಂಚು ಹುಳಗಳನ್ನು ಇತರೇ ಕೆಲವು ಕೀಟಗಳಂತೆ ಕೃತಕವಾಗಿ ಸಾಕಲು ಅಸಾಧ್ಯವಾಗಿದ್ದು ಅವುಗಳ ಸಂರಕ್ಷಣೆಯ ಹಾದಿಯನ್ನು ಕಠಿಣಗೊಳಿಸಿದೆ. ಹಾಗಾಗಿ ಅವುಗಳ ವಾಸಸ್ಥಾನ ಸಂರಕ್ಷಿಸುವುದು ಇಂದಿನ ಆದ್ಯತೆಯಾಗಿದೆ.

                    



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ