ಲಕ್ಕಿ ಬಾಂಬೂ
'ಡ್ರೆಸಿನಾ ಸಾಂಡೇರಿಯಾನಾ', ಹೀಗೆಂದಾಗ ಒಮ್ಮೆಲೆಗೆ ನಮ್ಮ ಮನಸ್ಸು ಚಲಿಸುವುದು
ಕಷ್ಟಪಟ್ಟು ಸಸ್ಯಶಾಸ್ತ್ರೀಯ ಹೆಸರುಗಳನ್ನು ಉರು ಹೊಡೆಯುತ್ತಿದ್ದ ಕಾಲೇಜಿನ ಜೀವಶಾಸ್ತ್ರದ ತರಗತಿಗೆ.
ಚಿರಪರಿಚಿತವಾದ ಈ ಸಸ್ಯವನ್ನು ನಾವೆಲ್ಲರೂ ನೋಡಿರುತ್ತೇವೆ, ಕೊಂಡಿರುತ್ತೇವೆ. ಈಗೊಂದು ದಶಕದ ಹಿಂದಂತೂ
ಪ್ರತಿ ಕಚೇರಿ, ಮನೆಗಳಲ್ಲಿ ಅದೃಷ್ಟದ ಸಂಕೇತವಾಗಿ ಈ ಸಸ್ಯ ನೆಲೆಯಾಗಿತ್ತು. ಈಗಲೂ ಇದು ಒಳಾಂಗಣ ಸಸ್ಯ
ಪ್ರೇಮಿಗಳ ನಂ.1 ಆಯ್ಕೆ. ಸದಾ ಹಸಿರನ್ನು ಹೊಂದಿರುವ, ಒಳಾಂಗಣದ ನೆರಳನ್ನು ಪ್ರೀತಿಸುವ ಈ ಸಸ್ಯವೇ
ಲಕ್ಕಿ ಬಾಂಬೂ.
ಲಕ್ಕಿ ಬಾಂಬೂ ಬಿದಿರಲ್ಲ, ಬಿದಿರಿಗೂ ಇದಕ್ಕೂ ಕೌಟುಂಬಿಕವಾಗಿ ತೀರಾ ದೂರದ
ಸಂಬಂಧ ಎಂದರೆ ಆಶ್ಚರ್ಯವೆನಿಸಬಹುದು. ಆದರೆ ನಿಜಕ್ಕೂ ಲಕ್ಕಿ ಬಾಂಬೂಗಳು ಸೇರುವುದು 'ಡ್ರೆಸಿನಾ'ಗಳ
ಕುಟುಂಬಕ್ಕೆ. ಬಿದಿರು ಮತ್ತು ಡ್ರೆಸಿನಾಗಳು ಏಕದಳ ಸಸ್ಯಗಳೆಂಬುದೊಂದೇ ಎರಡರ ನಡುವಿನ ಸಾಮ್ಯತೆ.
ಸಾಂಡರ್ ಎಂಬ ವಿಜ್ಞಾನಿಯ ಕೊಡುಗೆಯಿಂದ 'ಸಾಂಡೇರಿಯಾನಾ' ಆದ ಈ ಡ್ರೆಸಿನಾ,
ಚೀನಾದ 'ಫೆಂಗ್ ಶೂಯಿ' ಸಂಪ್ರದಾಯದ ಪ್ರಕಾರ 'ಲಕ್ಕಿ'ಯೆಂದು ಕರೆಯಲ್ಪಟ್ಟಿತು, ಬಿದಿರನ್ನೇ ಹೋಲುವ
ಕಾರಣ 'ಬಾಂಬೂ' ಎನಿಸಿಕೊಂಡಿತು. ಆಫ್ರಿಕಾದಲ್ಲಿ ಹುಟ್ಟಿದ್ದರೂ ಗಾಳಿ ಶುದ್ಧೀಕರಿಸುವ, ಸಂಪತ್ತನ್ನು
ಆಹ್ವಾನಿಸುವ ವಾಸ್ತು ಗಿಡ ಎಂಬ ಮಾರುಕಟ್ಟೆಯ ತಂತ್ರದೊಡನೆ ಭಾರತಕ್ಕೂ ಪರಿಚಯವಾಯಿತು. ಬಣ್ಣದ ಕಲ್ಲುಗಳಿಂದ
ತುಂಬಿದ ಗಾಜಿನ ತಟ್ಟೆಯಲ್ಲಿ ಹತ್ತಾರು ಚಿಕ್ಕ ದಂಟುಗಳನ್ನು ಸೇರಿಸಿ ಕೆಂಪು ರಿಬ್ಬನ್ ಕಟ್ಟಿ ನೀರಿನಲ್ಲಿರಿಸಿದ
ಲಕ್ಕಿ ಬಾಂಬೂಗಳು ಗಿಫ್ಟ್ ಶಾಪ್ ನಲ್ಲಿ ಬಿಕರಿಯಾಗತೊಡಗಿದವು. ಸೌಭಾಗ್ಯ, ಸಂತೋಷ ಬರಮಾಡಿಕೊಳ್ಳಬಹುದೆಂಬ
ಆಸೆಯಿಂದ ಮನೆ ಮನೆ ಸೇರಿ ಅಂಗಡಿ-ಕಚೇರಿಗಳಲ್ಲೂ ಪ್ರಸಿದ್ಧವಾದವು. ಏನೇ ಆಗಲಿ ಮನೆಯಲ್ಲೊಂದು ಸಸ್ಯ
ಒಳ್ಳೆಯದೇ ಅಲ್ಲವೇ!
ಲಕ್ಕಿ ಬಾಂಬೂ ಜೊತೆಗೆ ಇದೇ ಕುಟುಂಬದ ಲೋಟಸ್ ಬಾಂಬೂ, ಸಾಂಗ್ ಆಫ್ ಇಂಡಿಯಾ,
ಸ್ನೇಕ್ ಪ್ಲಾಂಟ್ ಗಳಂತಹ ಹತ್ತಕ್ಕೂ ಹಲವು ಡ್ರೆಸಿನಾಗಳು ಒಳಾಂಗಣಕ್ಕೆ ಸೂಕ್ತವೆನಿಸಿವೆ. ಹೊರಾಂಗಣದ
ತೀಕ್ಷ್ಣ ಬೆಳಕನ್ನೂ ತಾಳಬಲ್ಲ ಈ ಸಸ್ಯಗಳು ಒಳಾಂಗಣದ ನೆರಳನ್ನೂ ಸಹಿಸಬಲ್ಲವು. ಲಕ್ಕಿ ಬಾಂಬೂವಂತೂ
ತೀರಾ ಕತ್ತಲಿರುವ ಮೂಲೆಯಲ್ಲಿಯೂ ಬದುಕಬಲ್ಲದು. ಒತ್ತೊತ್ತಾಗಿರುವ ಗೆಣ್ಣುಗಳು, ಅಲ್ಲಲ್ಲಿ ಗೆಣ್ಣುಗಳಿಂದ
ಹೊರಟ ಮರಿ ಗೆಲ್ಲುಗಳು, ತುದಿಯಲ್ಲಿ ಹಕ್ಕಿ ಪುಚ್ಚದಂತೆ ಹರಡಿರುವ ಗುಂಪಾದ ಹಚ್ಚುಹಸಿರು ಮಿರುಗುವ
ಎಲೆಗಳು, ಹೀಗೆ ಡ್ರೆಸಿನಾಗಳದ್ದು ಅನುಪಮ ಅಂದ.
ನೀರು ಮತ್ತು ಮಣ್ಣು ಎರಡರಲ್ಲೂ ಬೆಳೆಯುವಂತದ್ದು ಲಕ್ಕಿ ಬಾಂಬೂ ಮತ್ತು ಇತರೇ
ಡ್ರೆಸಿನಾಗಳ ವಿಶೇಷತೆ. ಹೂಕುಂಡ ಮತ್ತು ಹೊರಾಂಗಣದ ಮಣ್ಣಿನಲ್ಲಿ ಇವು ಆರೆಂಟು ಅಡಿ, ಇನ್ನೂ ಎತ್ತರಕ್ಕೆ
ಬೆಳೆದರೆ ನೀರಿನಲ್ಲಿ ನಿಧಾನಕ್ಕೆ ಒಂದೆರಡು ಅಡಿ ಬೆಳೆಯುತ್ತಾ ಸಾಗುತ್ತವೆ.
ಲಕ್ಕಿ ಬಾಂಬೂಗಳು ಅಗಲಬಾಯಿಯ ಗಾಜು, ಸಿರಾಮಿಕ್, ಟರ‍್ರಾಕೊಟ್ಟಾ ಬೌಲ್ ನಲ್ಲಿ
ಚಂದವಾಗಿ ಒಪ್ಪುತ್ತವೆ. ತೀರಾ ತೀಕ್ಷ್ಣವಾದ ಬೆಳಕಲ್ಲಿ ಎಲೆಯ ತುದಿ ಸುಡುವ ಕಾರಣ ಇವುಗಳಿಗೆ ನೆರಳೇ
ಹೆಚ್ಚು ಸೂಕ್ತ. ತೀರಾ ಕತ್ತಲಿನಲ್ಲಿ ಬಿಳುಚಿಕೊಳ್ಳುವ ಸಸ್ಯಗಳು ಆಕಾರ ಕೆಟ್ಟಂತಾಗಬಹುದು. ಹಾಗಾಗಿ
ಹದವಾದ ನೆರಳು-ಬೆಳಕಿನ ಅಗತ್ಯವನ್ನು ಪೂರೈಸಬೇಕು.
ನೆರಳು-ಬೆಳಕಿನ ಸಮಸ್ಯೆಯಾದರೂ ಸಾಯದೇ ಈ ಗಟ್ಟಿ ಜೀವಗಳನ್ನು ನೀರಿನಲ್ಲಿಯೇ
ಇರಿಸಿ ಕಾಳಜಿ ಮಾಡಬಹುದು. ಹೀಗೆ ಮಾಡುವುದಾದಲ್ಲಿ ಬೇರು ಬಿಟ್ಟ ಕೊನೆಯ ಗೆಣ್ಣು ನೀರಿನಲ್ಲೇ ಇರುವಂತೆ
ನೀರಿನ ಮಟ್ಟವನ್ನು ಕಾಪಾಡಿಕೊಳ್ಳಬೇಕು. ವಾರಕ್ಕೊಮ್ಮೆ ನೀರನ್ನು ಬದಲಿಸುತ್ತಿರಬೇಕು. ಕೆಲವೊಮ್ಮೆ
ಆರೋಗ್ಯಕರವಾಗಿದ್ದ ದಂಟು ಇದ್ದಕ್ಕಿದ್ದಂತೇ ಹಳದಿಯಾಗಿ ಬುಡದಿಂದ ಕೊಳೆಯುವ ಸಮಸ್ಯೆಯನ್ನು ಕಾಣಬಹುದು.
ನೀರಿನಲ್ಲಿರುವ ಫ್ಲೋರೈಡ್ ಇತರೆ ಲವಣ-ಖನಿಜಗಳು ಅತಿಯಾದಲ್ಲಿ, ನೀರಿನಲ್ಲಿ ಹರಡುವ ಸೋಂಕಿನಿಂದ ಈ ಸಮಸ್ಯೆ
ಉದ್ಭವಿಸಬಹುದು. ಹಳದಿ ದಂಟು ಕಂಡಿದ್ದೇ ಅವುಗಳನ್ನು ಇತರೇ ದಂಟುಗಳಿಂದ ಬೇರ್ಪಡಿಸಿ ನೀರನ್ನು ಬದಲಿಸಬೇಕು.
ತಿರುಚು ಮುರುಚಾದ, ಸುರುಳಿಯಾದ, ಜಡೆಯಂತೆ ಹೆಣೆದ ವೈವಿಧ್ಯಮಯ ಆಕಾರದ ಲಕ್ಕಿ
ಬಾಂಬೂಗಳು ಇಂದು ಲಭ್ಯವಿವೆ. ಒಳಾಂಗಣ ಸಸ್ಯಗಳನ್ನು ಬೆಳೆಸುವತ್ತ ಆರಂಭಿಕರಾಗಿದ್ದಲ್ಲಿ ಲಕ್ಕಿ ಬಾಂಬೂ
ನಿಮ್ಮ ಆಯ್ಕೆಯಾಗಿರಲಿ.

.jpg)
Comments
Post a Comment