ಲಿಥೋಪ್ಸ್


1811, ದಕ್ಷಿಣ ಆಫ್ರಿಕಾದ ಸಸ್ಯ ಸಂಪತ್ತಿನ ಅನ್ವೇಷಣೆಯಲ್ಲಿದ್ದ ಸಸ್ಯಶಾಸ್ತ್ರಜ್ಞ ವಿಲಿಯಮ್ ಬರ್ಶೆಲ್ ತಾ ನಡೆಯುತ್ತಿದ್ದ ಕಲ್ಲು ಹಾಸಿನ ನೆಲದ ಮೇಲೊಂದು ಚಂದದ ಕಲ್ಲನ್ನು ಕಂಡು ಹೆಕ್ಕಿದಾಗ ಆಶ್ಚರ್ಯದಿಂದ ಉದ್ಘರಿಸಿದ್ದ. ನಿಜಕ್ಕೂ ಅದೊಂದು ಕಲ್ಲಾಗಿರದೆ ಅಕ್ಷರಶಃ ಕಲ್ಲನ್ನೇ ಹೋಲುವ ಸಸ್ಯವಾಗಿತ್ತು. ಅದೇ ಬಣ್ಣ, ಅದೇ ತೋರಿಕೆ, ಅದೇ ಗಾತ್ರ, ಕಲ್ಲು ಹಾಸಿನ ಸಾವಿರ ಕಲ್ಲುಗಳ ನಡುವೆ ತಾನೊಂದು ನಿರ್ಜೀವಿಯಂತೆ ಆ ಸಸ್ಯ ಮರೆಮಾಚಿಕೊಂಡಿತ್ತು.

ಕಲಾವಿದನೂ ಆಗಿದ್ದ ಬರ್ಶೆಲ್ ತನ್ನ ಪಟ್ಟಿಯಲ್ಲಿ ಅದರದ್ದೊಂದು ಚಿತ್ರ ಬಿಡಿಸಿ, 'ಮೆಸೆಂಬ್ರಾಂಥೆಮಮ್' ಎಂದು ಹೆಸರಿಸಿ, ಮಾದರಿ ಸಂಗ್ರಹಿಸಿ, ಸಸ್ಯ ಜಗತ್ತಿನ ಕೌತುಕವೊಂದನ್ನು ದಾಖಲಿಸಿದ್ದ. ಇದಾದ ನೂರು ವರ್ಷಗಳ ನಂತರ ಇಂತದ್ದೇ ಜಾತಿಯ ಹತ್ತಾರು ಪ್ರಭೇಧಗಳು ಸಂಶೋಧನೆಯಾಗಿದ್ದೇ ಹೊಸದೊಂದು ಸಸ್ಯ ಕುಟುಂಬದ ಪರಿಚಯವಾಗಿತ್ತು. ಕಲ್ಲನ್ನೇ ಹೋಲುವ ಈ ಸಸ್ಯಗಳನ್ನು 'ಲಿಥೋಪ್ಸ್' ಎಂದು ಮರುನಾಮಕರಣ ಮಾಡಲಾಯಿತು (ಗ್ರೀಕ್ ಭಾಷೆಯ ಪ್ರಕಾರ ಲಿಥೋಸ್ ಎಂದರೆ ಕಲ್ಲು, ಒಪ್ಸ್ ಎಂದರೆ ಮುಖ). ಪಠ್ಯಕ್ಕಷ್ಟೇ ಸೀಮಿತವಾಗಿದ್ದ ಲಿಥೋಪ್ಸ್ ಗಳು ಇತ್ತೀಚೆಗೆ ಒಳಾಂಗಣ ಸಸ್ಯಗಳಾಗಿ ಸಸ್ಯಪ್ರೇಮಿಗಳ ಆಟದಂಗಳಕ್ಕಿಳಿಯುತ್ತಿವೆ. ಸರಳ ನಿರ್ವಹಣೆಯ ಕಾರಣ ಮತ್ತಷ್ಟು ಪ್ರಚಲಿತವಾಗುತ್ತಿವೆ.

ಬೆಳವಣಿಗೆ, ವಿಕಸನ, ರಚನೆಯಲ್ಲಿ ಲಿಥೋಪ್ಸ್ ಗಳು ಸಸ್ಯ ವರ್ಗದ ಬಾಕಿ ಎಲ್ಲಾ ಸಸ್ಯಗಳಿಗಿಂತ ವಿಶೇಷ. ಚಿಕ್ಕ ಗಾತ್ರ ಮತ್ತು ರಸಭರಿತ ಎಲೆಯ ರಚನೆ ಆಫ್ರಿಕಾದ ಒಣ ಹವೆಯಲ್ಲಿ ತೇವಾಂಶ ಸಂಗ್ರಹಿಸಿ ಭಾಷ್ಪೀಕರಣದ ಸವಾಲನ್ನು ಎದುರಿಸಲು ಸಮರ್ಥ ಉಪಾಯವಾಗಿದೆ. ಹೆಬ್ಬೆರಳಿನಷ್ಟು ಗಾತ್ರದ ಉಂಡೆ ಕಲ್ಲನ್ನು ಹೋಲುವ ಲಿಥೋಪ್ಸಗಳು ತಮ್ಮ ಸುತ್ತಲಿನ ಮಣ್ಣಿನ ಬಣ್ಣವನ್ನೇ ಅಣಕಿಸುತ್ತವೆ; ಪರಭಕ್ಷಕರಿಂದ ಪಾರಾಗುತ್ತವೆ.

ಬಲ್ಬ್ ನಂತ ರಚನೆಯ ಜೋಡೆಲೆ, ಮಣ್ಣಿನಲ್ಲಿ ಹುದುಗಿದ ಕೂದಲೆಳೆಯಂತ ಬೇರುಗಳೇ ಇವುಗಳ ಸರ್ವಸ್ವ. ಚಳಿಗಾಲದಲ್ಲಿ ತಾಯಿ ಗಿಡದ ಒಡಲಿನಲ್ಲಿ ಜೋಡಿ ಮರಿ ಎಲೆ (ಕೆಲವೊಮ್ಮೆ ಒಂದಕ್ಕಿಂತ ಹೆಚ್ಚು) ಮೂಡುತ್ತವೆ. ಬೇಸಿಗೆಯಲ್ಲಿ ಈ ಜೋಡಿ ಮರಿ ಬೆಳೆಯುತ್ತಾ ದೊಡ್ಡದಾಗಿ ತಾಯಿ ಗಿಡವನ್ನೇ ಸೀಳಿ ಇಬ್ಬಾಗವಾಗಿಸಿ ಹೊರಬರುತ್ತವೆ. ಹೀಗೆ ವರ್ಷಕ್ಕೊಂದು ಬಾರಿ ಹೊಸದೊಂದು ಜೋಡಿ ಎಲೆ ಮೂಡುತ್ತಾ, ಹಳೆ ಎಲೆ ಒಣಗುತ್ತಾ ಇವುಗಳ ಜೀವನ ಚಕ್ರ ಸಾಗುತ್ತದೆ. ಪ್ರತಿಕೂಲ ವಾತಾವರಣದಲ್ಲಿ ಸುಪ್ತಾವಸ್ಥೆಗೆ ಜಾರುವ ಈ ಸಸ್ಯಗಳು ಆಗಾಗ ಹೂವುಗಳನ್ನು ಬಿಡುತ್ತವೆ. ಒಣಗಿದ ಎಲೆಯ ಆಧಾರದ ಮೇಲೆ ನೈಸರ್ಗಿಕವಾಗಿ ಇವು ಐವತ್ತು ನೂರು ವರ್ಷಗಳಂತೂ ನಿಕ್ಕಿ ಬದುಕುವುದನ್ನು ಕಾಣಲಾಗಿದೆ.

ಸಕ್ಯುಲೆಂಟ್ ಗಳ ಗುಂಪಿಗೇ ಸೇರುವ ಲಿವಿಂಗ್ ಸ್ಟೋನ್ಸ್, ಪೆಬ್ಬಲ್ ಪ್ಲಾಂಟ್ಸ್ ಎಂಬುದಾಗಿ ಪ್ರಖ್ಯಾತವಾದ ಲಿಥೋಪ್ಸ್ ಗಳಿಗೆ ಇಂದು ಒಳಾಂಗಣದಲ್ಲಿ ವಿಶೇಷ ಸ್ಥಾನ. ಗುಲಾಬಿ, ಪಾಚಿ ಹಸಿರು, ಕೆಂಪು, ತಿಳಿ ನೀಲಿ, ಕಂದು ಛಾಯೆಗಳಲ್ಲಿ ಲಭ್ಯವಿರುವ ಲೀಥೋಪ್ಸ್ ಗಳಲ್ಲಿ ನೂರಾರು ಬಣ್ಣದ ಆಯ್ಕೆಗಳಿವೆ. ಬಹಳ ನಿಧಾನಕ್ಕೆ ಬೆಳೆವ ಲಿಥೋಪ್ಸ್ ಗಳ ಗಾತ್ರ ಒಂದಿಂಚಿನ ಆಸು ಪಾಸಷ್ಟೇ!. ಮೂರಿಂಚು ಅಗಲದ ಚಿಕ್ಕ ಪಾಟ್ ನಲ್ಲಿ ಜೋಡಿಸಿಟ್ಟ ಬಣ್ಣ ಬಣ್ಣದ ವಿವಿಧ ವಿನ್ಯಾಸದ ಈ ಸಜೀವೀ ಕಲ್ಲುಗಳನ್ನು ನೋಡುವುದೇ ಚಂದ. ಅವುಗಳ ಬೆಳವಣಿಗೆ ಹಂತಗಳನ್ನು ಗಮನಿಸುವುದು ಇನ್ನೂ ಕುತೂಹಲಕಾರಿ. ಇತರೇ ಸಕ್ಯುಲೆಂಟ್ ಗಳಂತೆ ನೀರು ಬಸಿದು ಹೋಗುವಂತ ಕಡಿ-ಕಡಿಯಾದ ಮಣ್ಣಿನ ಮಿಶ್ರಣ, ತೇವಾಂಶ ಶೂನ್ಯವಾದಾಗ ನೀರು, ಪ್ರಕಾಶಮಾನವಾದ ಬೆಳಕು ಬೇಡುವ ಲಿಥೋಪ್ಸ್ ಗಳನ್ನು ಕಮ್ಮಿ ಕಾಳಜಿಯಲ್ಲಿ ಬೆಳೆಸಬಹುದು. ನರ್ಸರಿಗಳಲ್ಲಿ ಅಪರೂಪವಾಗಿ ಕಂಡು ಬರುವ ಈ ಸಸ್ಯಗಳು ಸದ್ಯಕ್ಕೆ ಅಂತರ್ಜಾಲದಲ್ಲಿ ಸುಲಭ ಲಭ್ಯ.




Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ