ಏರ್ ಪ್ಲಾಂಟ್ಸ್
ನಮ್ಮ ಇಡೀ ಭೂಮಂಡಲದಲ್ಲಿ ಹತ್ತಿರತ್ತಿರ ನಾಲ್ಕು
ಲಕ್ಷ ಜಾತಿಯ ಸಸ್ಯಗಳಿವಿಯೆಂದು ಲೆಕ್ಕ ಹಾಕಲಾಗಿದೆ. ಈ ಎಲ್ಲ ಸಸ್ಯಗಳು ತಮ್ಮ ಸುತ್ತಲ ವಾತಾವರಣಕ್ಕೆ
ಒಗ್ಗಿಕೊಂಡು ಮಣ್ಣು, ನೀರು, ಬೆಳಕು, ಉಷ್ಣಾಂಶ ಹೀಗೆ ಲಭ್ಯವಾಗುವ ಸಂಪನ್ಮೂಲಗಳನ್ನಷ್ಟೇ ಬಳಸಿ ಬೆಳೆಯಲು
ವಿಕಸನವಾಗಿರುತ್ತವೆ. ಬುದ್ಧಿಜೀವಿ ಮಾನವರು ಇವೆಲ್ಲ ಮಿತಿಯನ್ನು ಮೀರಿ ಒಂದು ಪ್ರದೇಶದ ಸಸ್ಯವನ್ನು
ಮತ್ತೊಂದೆಡೆ ಕೊಂಡೊಯ್ಯುವಲ್ಲಿ ನಿಸ್ಸೀಮರು. ಎಷ್ಟೋ ಆಹಾರ ಬೆಳೆಗಳು, ಅಲಂಕಾರಿಕ ಸಸ್ಯಗಳು ಹೀಗೆಯೇ
ನಮಗೆ ಪರಿಚಿತವಾಗಿದ್ದು. ಅಂತವುಗಳಲ್ಲಿ ಇತ್ತೀಚಿನ ಸೇರ್ಪಡೆ 'ಟಿಲಾಂಡ್ಸಿಯಾ'ಗಳದ್ದು.
ಅನಾನಸ್ ಹಣ್ಣಿನ 'ಬ್ರೊಮೇಲಿಯಾಸಿ' ಕುಟುಂಬಕ್ಕೆ
ಸೇರಿದ ಟಿಲಾಂಡ್ಸಿಯಾಗಳ ತವರು ಮೆಕ್ಸಿಕೋ ಸುತ್ತಮುತ್ತಲ ಕಾಡು-ಮೇಡು, ಮರಳುಗಾಡು. ಮರಗಳ ಮೇಲೆ, ಕಲ್ಲು
ಗುಡ್ಡದ ಆಸರೆಯ ಮೇಲೆ ಬೆಳೆವ ಈ ‘ಎಪಿಫೈಟ್’ಗಳು ಇಂದು ಒಳಾಂಗಣಕ್ಕೆ ಲಗ್ಗೆ ಇಟ್ಟಿವೆ. ಮಣ್ಣಿನ ಆಧಾರವೇ
ಬೇಡದ ಕಾರಣ ‘ಏರ್ ಪ್ಲಾಂಟ್ಸ್’ ಎಂಬ ಬಿರುದಿನೊಂದಿಗೆ ಪ್ರಸಿದ್ಧಿ ಪಡೆಯುತ್ತಿವೆ.
ಕನಿಷ್ಟ ಬೇರುಗಳು, ಬೂದು ಹಸಿರು ಬಣ್ಣದ ರೋಮಭರಿತವಾದ
ಚೂಪು ಎಲೆಗಳ ಈ ಸಸ್ಯ ಮುಟ್ಟಲು ಕೃತಕ (ನೀರಿನ ನಷ್ಟವನ್ನು ನೀಗಿಸಲು ಈ ಉಪಾಯ), ಇತರೆ ಒಳಾಂಗಣ ಸಸ್ಯಗಳಿಗಿಂತ
ತೀರಾ ವಿಭಿನ್ನ. ನೈಸರ್ಗಿಕವಾಗಿ ಮರದ ಕೊಂಬೆಯ ಮೇಲೆ ಬೆಳೆವ ಈ ಸಸ್ಯಗಳಿಗೆ ಆಗಾಗ ಸಿಕ್ಕುವ ಮಳೆ ನೀರು,
ಇಬ್ಬನಿಯೇ ಆಹಾರ. ಒಳಾಂಗಣದಲ್ಲಿ ಬೆಳೆಸಲು ವಾರಕ್ಕೊಮ್ಮೆ ನೀರನ್ನಷ್ಟೇ ಬೇಡುವ ಈ ಸಸ್ಯಗಳನ್ನು ಯಾವುದೇ
ಪೋಷಣೆಯಿಲ್ಲದೆ ಅತಿ ನಿರ್ಲಕ್ಷಿತ ಸಂದರ್ಭದಲ್ಲೂ ಬೆಳೆಸಬಹುದು.
ಸ್ಪಾನಿಷ್ ಮೋಸ್, ಕಾಟನ್ ಕ್ಯಾಂಡಿ, ಫಂಕಿಯಾನಾ,
ಡ್ರುಯ್ಡ್, ಹೀಗೆ ಆಂಗ್ಲ ಭಾಷಾ ಹೆಸರಿರುವ ಹಲವಾರು ಏರ್ ಪ್ಲಾಂಟ್ಸ್ ಗಳು ಅಂತರ್ಜಾಲ ಜಾಲತಾಣಗಳಲ್ಲಿ
ಲಭ್ಯವಿವೆ. ಸಾಮಾನ್ಯವಾಗಿ ಕೈ ಮುಷ್ಟಿಯಷ್ಟು ಗಾತ್ರದ
(ಅನುಕೂಲಕರ ವಾತಾವರಣದಲ್ಲಿ ಬೃಹತ್ತಾಗಿಯೂ ಬೆಳೆಯಬಲ್ಲವು) ಈ ಸಸ್ಯಗಳನ್ನು ಸಿರಾಮಿಕ್ ಕಂಟೇನರ್, ಕಪ್ಪೆ
ಚಿಪ್ಪು, ಮರದ ಪೊಟರೆ, ಲೈಟ್ ಬಲ್ಬ್, ಟೆರೆರಿಯಮ್ ಜಾಡಿ, ಗಾಜಿನ ಗೋಳಗಳಲ್ಲಿಟ್ಟು ಇನ್ನಷ್ಟು ಚಂದವಾಗಿಸಬಹುದು.
ಅಕ್ಟೋಪಸ್ ನಂತೆ ಕಾಣುವ ಸ್ಪಾನಿಷ್ ಮೋಸ್ ಅನ್ನು ತೂಗು ಬಿಡಬಹುದು.
ಏರ್ ಪ್ಲಾಂಟ್ ಗಳು ನೀರು/ತೇವಾಂಶವನ್ನು ತಮ್ಮ ಎಲೆಗಳಲ್ಲಿ
ಸಂಗ್ರಹಿಸಿಡಬಲ್ಲವು. ಅತಿಯಾದ ನೀರುಣಿಸುವಿಕೆ ಸಸ್ಯದ ಕೊಳೆಯುವಿಕೆಗೆ ದಾರಿ ಮಾಡಿಕೊಟ್ಟಂತೆ. ಹಾಗಾಗಿ
ವಾರಕ್ಕೊಮ್ಮೆ, ಅವಶ್ಯಕತೆಗನುಸಾರವಾಗಿ ಪೂರ್ತಿಯಾಗಿ ನೀರಿನಲ್ಲಿ ಅದ್ದಿ ತೆಗೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಮಿತವಾದ ಪ್ರಕಾಶಮಾನವಾದ ಬೆಳಕು ಸಿಕ್ಕುವ ಜಾಗ ಏರ್ ಪ್ಲಾಂಟ್ಸ್ ಗಳಿಗೆ ಸೂಕ್ತ. ವಾತಾವರಣ ಹೊಂದಿಕೆಯಾದಲ್ಲಿ
ಇವು ಹೂಗಳನ್ನು ತಳೆಯಬಲ್ಲವು, ಚಿಕ್ಕ ಮರಿಗಳನ್ನು ಹೊಂದಬಲ್ಲವು. ಮಣ್ಣಲ್ಲಿ ನೆಡುವ ಪ್ರಮೇಯವೇ ಇಲ್ಲದ
ಅನ್ಯಲೋಕದ ಜೀವಿಗಳಂತೆ ಕಾಣುವ ಈ ಸಸ್ಯಗಳು ಮನೆಯೊಳಗಣ ಅಂದವನ್ನು ಹೆಚ್ಚಿಸಿ ವಿಶೇಷವಾದ ಗಮನ ಸೆಳೆಯಬಲ್ಲವು.

.jpg)
Comments
Post a Comment