ಮನೆಗೆ ಮನಸ್ಸಿಗೆ ಡಿಟಾಕ್ಸ್ ತುಳಸಿ
ಜಲಂಧರನೆಂಬ ರಾಕ್ಷಸನ ಪತಿವ್ರತೆ ಪತ್ನಿ, ವಿಷ್ಣುವಿನ ಪರಮಭಕ್ತೆ 'ವೃಂದಾ'
ದೇವಾಸುರರ ಯುದ್ಧದಲ್ಲಿ ವಿಷ್ಣುವಿನ ಮಾರುವೇಷಕ್ಕೆ ಮೋಸಹೋಗಿ ಅಪವಿತ್ರರಾದೆಳೆಂದು ಅಗ್ನಿಗಾಹುತಿಯಾಗಿ
ಸಸ್ಯವಾಗಿ ಪುನಃಜನ್ಮ ತಳೆದವಳು; ಲಕ್ಷ್ಮೀಯ ರೂಪವಾಗಿ, ವಿಷ್ಣುವಿನ ಮಡದಿಯಾಗಿ, ಪ್ರತಿ ಮನೆಯಲ್ಲೂ ನೆಲೆಸಿರುವವಳು 'ತುಳಸಿ'. ಬುಡದಲ್ಲಿ
ಸರ್ವ ತೀರ್ಥಗಳು, ಮಧ್ಯದಲ್ಲಿ ಸರ್ವ ದೇವತೆಗಳು, ತುದಿಯಲ್ಲಿ ಸರ್ವ ವೇದಗಳನ್ನು ಒಳಗೊಂಡಿರುವAತೆ ಈ
ಸಸ್ಯವನ್ನು ಪೂಜಿಸಲಾಗುತ್ತದೆ. ಪುರಾಣ ಕಥೆಗಳು ಸತ್ಯವೋ ಮಿಥ್ಯವೋ, ಆದರೆ ಸಸ್ಯವೊಂದನ್ನು ಈ ಮಟ್ಟಕ್ಕೆ
ಗೌರವಿಸಲಾಗುತ್ತದೆಂದರೆ ಅದಕ್ಕೆ ಕಾರಣ ಆ ಸಸ್ಯದಿಂದಾಗುವ ಅಗಾಧ ಅನುಕೂಲಗಳು.
ಅಲಂಕಾರಿಕವಾಗಿ ಗಾರ್ಡನ್ ನಲ್ಲಿ, ಕೆಲವೆಡೆ ಅಡುಗೆಗೂ ಬಳಕೆಯಲ್ಲಿರುವ
ತುಳಸಿಯ ಓಷಧೀಯ ಗುಣಗಳಂತೂ ಪಟ್ಟಿ ಮಾಡಲಾಗದಷ್ಟು ಅಧಿಕ. ತುಳಸಿ ನಮ್ಮ ಮನೆ-ಮನಸ್ಸು ಎರಡನ್ನೂ ಡಿಟಾಕ್ಸ್
ಮಾಡಬಲ್ಲದು. ಆದ್ದರಿಂದ ಮನೆ ಎದುರೇ ಕೈಗೆಟುಕುವ ದೂರದಲ್ಲಿ ಈ ಸಸ್ಯವನ್ನು ಬೆಳೆಸುವ ಹಿರಿಯರ ರೂಢಿ
ಅತ್ಯಂತ ಸಮಂಜಸ.
ಪುದೀನಾ, ಕಾಮಕಸ್ತೂರಿ ಸಸ್ಯಗಳ ಕುಟುಂಬಕ್ಕೆ ಸೇರಿದ ತುಳಸಿಯಲ್ಲಿ
ಹಲವಾರು ಬಗೆ. 'ಹೋಲಿ ಬೆಸಿಲ್', ಓಸಿಮಮ್ ಸ್ಯಾಂಕ್ಟಮ್ (ಟೆನುಫ್ಲೋರಮ್) ಎಂದು ಕರೆಯಲ್ಪಡುವ (ಸ್ಯಾಂಕ್ಟಮ್
ಎಂದರೆ ಪವಿತ್ರವಾದ ಸ್ಥಳವೆಂಬ ಅರ್ಥವಿದೆ) ಹಸಿರು ಎಲೆಯ ರಾಮ ತುಳಸಿಯನ್ನು ಮತ್ತು ಕಪ್ಪು ಎಲೆಯ ಕೃಷ್ಣ
ತುಳಸಿಯನ್ನು ಭಾರತದೆಲ್ಲೆಡೆ ಕಾಣಬಹುದು. ಸುಗಂಧಭರಿತ (ಅರೋಮ್ಯಾಟಿಕ್) ಸಸ್ಯಗಳ ಗುಂಪಿಗೆ ಸೇರುವ ತುಳಸಿಯನ್ನು
ಪರಿಮಳಯುಕ್ತ ದ್ರವ್ಯಗಳನ್ನು, ಔಷಧಿ ಗುಣಗಳನ್ನು ಪ್ರತ್ಯೇಕಿಸಲು ವಾಣಿಜ್ಯವಾಗಿಯೂ ಬೆಳೆಯಲಾಗುತ್ತದೆ.
ಬಹುಶಃ ಸಸ್ಯಪ್ರೇಮಿಗಳಿಲ್ಲದ ಮನೆಯಲ್ಲೂ ಬೆಳೆವ ಸಸ್ಯವೊಂದಿದ್ದರೆ
ಅದು ತುಳಸಿ. ಕಟ್ಟೆ ಕಟ್ಟಿ, ಪ್ರದಕ್ಷಿಣೆ ಹಾಕಿ, ದಿನವೂ ನೀರು ಹೊಯ್ದು, ರಂಗೋಲಿ ಎಳೆದು, ಸ್ತೋತ್ರ
ಹೇಳಿ ಹಸಿರ ಸಮೃದ್ಧಿಯನ್ನು ಬರಮಾಡಿಕೊಳ್ಳುವ ಈ ಧಾರ್ಮಿಕ ನಂಬಿಕೆ ಸೂಕ್ಷ್ಮವಾಗಿ ಸಸ್ಯಪಾಲನೆಯೆಡೆ
ಬೊಟ್ಟು ಮಾಡುವುದು ವಿಶೇಷ. ಇಷ್ಟೆಲ್ಲಾ ಒಳ್ಳೆಯ ಗುಣಗಳಿರುವ ತುಳಸಿಯನ್ನು ಅಂಗೈ ಅಗಲ ಜಾಗವಿರುವ ಪಟ್ಟಣದ
ಬಾಡಿಗೆ ಮನೆಯಲ್ಲೂ ಬೆಳೆಸುವುದೇನೂ ಆಶ್ಚರ್ಯವಲ್ಲ. ಆದರೆ ಈ ಪ್ರಯತ್ನದಲ್ಲಿ ಬಹಳಷ್ಟು ಬಾರಿ ಸೋತವರು
ಬೇಸರಿಸುವವರನ್ನು ಕಂಡಿದ್ದೀದೆ. ಅಂಥವರಿಗಾಗಿ ಈ ವಿಶೇಷ ಟಿಪ್ಪಣಿ.
- ತುಳಸಿ ಒಂದರಿಂದ ಎರಡು ವರ್ಷ ಅವಧಿಯಲ್ಲಿ ಬೆಳೆದು, ಹೂ ಹಣ್ಣು ಬೀಜ ಬಿಟ್ಟು ಅಂತ್ಯವಾಗುವ ಏಕವಾರ್ಷಿಕ ಬೆಳೆ. ಅದರ ಕದಿರನ್ನು ಚಿವುಟುವುದರ ಮೂಲಕ ಬಹುವಾರ್ಷಿಕವಾಗಿ ಬೆಳೆಯಬಹುದು. ಆದಾಗ್ಯೂ ಮೂರಕ್ಕಿಂತ ಹೆಚ್ಚು ವರ್ಷಗಳ ಕಾಲ ಅದು ಬದುಕುವುದು ಕಷ್ಟ. ಹಾಗಾಗಿ ನಿಮ್ಮಲ್ಲಿರುವ ತುಳಸಿ ಸತ್ತರೆ ಬೇಸರಿಸಬೇಡಿ. ಅಪಶಕುನವೆಂದು ತಿಳಿಯಬೇಡಿ.
- ನಿಮ್ಮ ತುಳಸಿಗಿಡ ಹೆಚ್ಚು ಸಮಯ ಬದುಕಬೇಕೆಂದರೆ ಕದಿರನ್ನು ಚಿವುಟುತ್ತಿರಬೇಕು. ಇದು ಸಸ್ಯದ ಸಂತಾನೋತ್ಪತಿಯನ್ನು ಮುಂದೂಡುವುದರ ಮೂಲಕ ಹೆಚ್ಚು ಸಮಯ ಬದುಕುವಂತೆ ಪ್ರೇರೆಪಿಸುತ್ತದೆ. ಜೊತೆಗೆ ಚಿಗುರನ್ನು ಚಿವುಟುವುದು ಹೆಚ್ಚು ಕವಲುಗಳನ್ನು ರೂಪಿಸಿ ಸಸ್ಯ ಪೊದೆಯಾಗಿ ಅಲಂಕಾರಿಕವಾಗಿ ಕಾಣಲು ಸಹಾಯಕ.
- ತುಳಸಿ ಆಳವಾದ ತಾಯಿ ಬೇರುಗಳನ್ನು ಹೊಂದಿರುವ ಸಸ್ಯ. ಹಾಗಾಗಿ ಅವುಗಳನ್ನು ನೆಲಕ್ಕೆ ನೆಡುವುದು ಸೂಕ್ತ. ಹೂಕುಂಡದಲ್ಲಿ ನೆಡುವವರು ದೊಡ್ಡದಾದ ಎಂಟು-ಹತ್ತು ಇಂಚಿನ ವ್ಯಾಸದ ಕುಂಡವನ್ನು ಆರಿಸುವುದು ಒಳ್ಳೆಯದು.
- ಹೂಕುಂಡದ ಮಣ್ಣಿನ ಮಿಶ್ರಣ ತೀರಾ ಅಂಟು ಅಂಟಾಗಿರದೆ ನೀರು ಬಸಿದು ಹೋಗಲು ಅನುಕೂಲವಾಗುವಂತಿರಬೇಕು. ಮಣ್ಣು ಮರಳು ಎರೆಗೊಬ್ಬರ/ಕೊಟ್ಟಿಗೆ ಗೊಬ್ಬರದ ಮಿಶ್ರಣ ಒಳ್ಳೆಯದು. ಹೂಕುಂಡದ ಅಡಿಯಲ್ಲಿ ನೀರು ಬಸಿದು ಹೋಗಲು ರಂಧ್ರ ಇರಲೇಬೇಕು.
- ಗಿಡ ಸೊಂಪಾಗಿ ಬೆಳೆಯಲು ಆಗಾಗ ತಿಂಗಳಿಗೊಮ್ಮೆ ಗೊಬ್ಬರ ಕೊಡುವದನ್ನು ಪಾಲಿಸಬಹುದು.
- ತುಳಸಿ ಹೆಚ್ಚು ನೀರು ಬೇಡುವ ಸಸ್ಯ. ಪ್ರತಿದಿನವೂ ಹದವಾಗಿ ನೀರು ಹನಿಸುವುದು ಒಳ್ಳೆಯದು. ಎಲೆಗಳು ಇಳಿಬೀಳುವಂತಾಗುವುದು ನೀರಿನ ಅಭಾವದಿಂದಾದರೆ, ಅಗತ್ಯಕ್ಕಿಂತ ಹೆಚ್ಚು ನೀರು ಎಲೆಗಳ ಉದುರುವಿಕೆಗೆ ಕಾರಣವಾಗುತ್ತದೆ. ಮಣ್ಣಿನ ತೇವಾಂಶ ಆಧರಿಸಿ ನೀರನ್ನು ಹಾಯಿಸಬೇಕು.
- ಪ್ರಕಾಶಮಾನವಾದ ದಿನದ ಬೆಳಕನ್ನು ಬಯಸುವ ತುಳಸಿಯನ್ನು ಮನೆಯ ಹೊರಗೆ ಬಿಸಿಲು ಬೀಳುವ ಜಾಗದಲ್ಲಿರಿಸುವುದು ಒಳ್ಳೆಯದು. ನೆರಳಲ್ಲಿಟ್ಟರೂ ಇಡೀ ದಿನದ ಬೆಳಕು ಸಿಗುವಂತಿರಬೇಕು. ತೀರಾ ನೆರಳು, ಕತ್ತಲು ಬೇಡ.
- ಒಮ್ಮೆ ಒಣಗಿ ಸತ್ತ ತುಳಸಿ ಗಿಡವನ್ನು ಮತ್ತೆ ಬದುಕಿಸುವುದು ಸಾಧ್ಯವಿಲ್ಲ
- ತುಳಸಿಯ ಬೀಜದ ಮೂಲಕ ಹೊಸ ಸಸಿಯನ್ನು ಪಡೆಯಬಹುದು. ನೆಲಕ್ಕೆ ಬೇರೂರಿದ ದೊಡ್ಡ ಗಿಡಗಳನ್ನು ಕಿತ್ತು ನೆಡುವುದು ಸಾಧ್ಯವಿಲ್ಲ. ಆಗಷ್ಟೇ ನಾಲ್ಕು ಎಲೆ ಮೂಡಿದ ಸಸ್ಯವನ್ನು ಕಿತ್ತು ನೆಡಬಹುದಾದರೂ ಹಾಗೆ ಮಾಡುವಾಗ ಬೇರಿಗೆ ಪೆಟ್ಟಾಗದಂತೆ ಎಚ್ಚರ ವಹಿಸಬೇಕು.
- ವಾತಾವರಣ ಬೆಚ್ಚಗಿರುವ ಬೇಸಿಗೆ ಮತ್ತು ಮಳೆಗಾಲದ ಪೂರ್ವ ಹೊಸ ಗಿಡಗಳನ್ನು ನೆಡಲು ಒಳ್ಳೆಯ ಕಾಲ,
- ತಂಪನ್ನು ಸ್ವಲ್ಪವೂ ಇಷ್ಟಪಡದ ತುಳಸಿ ಚಳಿಗಾಲದಲ್ಲಿ ನಿಸ್ತೇಜವಾಗುವುದು ಸಹಜ, ಬೇಸಿಗೆಯಲ್ಲಿ ಮತ್ತೆ ಚಿಗುರಿ ಹೊಸ ಎಲೆ ಹೊರಹಾಕುತ್ತವೆ. ಹಾಗಾಗಿ ಚಳಿಗಾಲದಲ್ಲಿ ಅವುಗಳಿಗೆ ತೊಂದರೆ ಕೊಡದೆ (ಹೂಕುಂಡದ ಮಣ್ಣನ್ನು ಕೆದರುವುದು, ಗಿಡಗಳನ್ನು ಕಿತ್ತು ನೆಡುವುದು, ರಿಪಾಟಿಂಗ್ ಮುಂತಾದ ಕೆಲಸಗಳನ್ನು ಮಾಡದೇ) ಕಾಳಜಿ ಮಾಡುವುದು ಅಗತ್ಯ

.jpg)
Comments
Post a Comment