ಮೈಕ್ರೋಗ್ರೀನ್ಸ್
ಸಣ್ಣಗೆ ತುರಿದ ಗಜ್ಜರಿ ಅಥವಾ ಸೌತೆಕಾಯಿ,
ಮೊಳಕೆ ಕಟ್ಟಿದ ಹೆಸರು ಕಾಳು, ಉಪ್ಪು-ಹುಳಿ-ಖಾರ; ‘ಕೋಸಂಬರಿ’ ಎಂದು ಕರೆಯಲ್ಪಡುವ ಈ ಹಸಿ ತರಕಾರಿ
ಕಲಸುಮೇಲೋಗರಕ್ಕೆ ಇತ್ತೀಚಿನ ಸೇರ್ಪಡೆ ದಾಳಿಂಬೆ, ಜೋಳದ್ದು; ಬಿಟ್ಟರೆ ಶತಶತಮಾನದಿಂದ ನಮ್ಮ ‘ದೇಸೀ
ರೆಸಿಪಿ'ಯಲ್ಲಿ ಹೆಚ್ಚೇನೂ ನವೀನತೆಯಿಲ್ಲ. ಫೈವ್ ಸ್ಟಾರ್ ಹೋಟೆಲ್ಲಿನ ‘ಸಲಾಡ್' ಎಂಬ ಇದರದ್ದೇ ಪ್ರತಿರೂಪ
ದಿನವೂ ಹೊಸತನ ಪಡೆಯುತ್ತಿದೆ. ‘ಶೆಫ್'ಗಳ ಕೈಯಲ್ಲಿ ‘ತಿನ್ನುವುದಕ್ಕಿಂತ ನೋಡುವುದೇ ಚಂದ' ಎಂಬಷ್ಟು
ಸೊಗಸಾಗಿ ಮೂಡುತ್ತಿದೆ.
ನಾವು ತಿನ್ನುವ ಆಹಾರ ನಾಲಿಗೆಗೆ ರುಚಿಯೆನಿಸುವ
ಮೊದಲು ಕಣ್ಣಿಗೆ-ಮೂಗಿಗೆ ಖುಷಿಯೆನಿಸಬೇಕು ಅಲ್ಲವೇ! ಅದೇ, ಸಲಾಡ್‌ನ ಪವಾಡ. ಹಾಗಾಗಿಯೇ ಆರೋಗ್ಯಕರವಾದ,
ಊಟದ ತಟ್ಟೆಗೆ ರಂಗು ತುಂಬುವ, ಬೇಯಿಸಿದ ಪದಾರ್ಥಗಳ ನಡುವೆ ತಾಜಾತನ ಭರಿಸುವ ಕೋಸಂಬರಿ ಮಹತ್ವ ಪಡೆದಿದ್ದು.
ಈಗಂತೂ ಸ್ಥಳೀಯ ತರಕಾರಿಗಳನ್ನು ಬದಿಗೊತ್ತಿ ಲೆಟ್ಯುಸ್, ಕೇಲ್, ಅರುಗುಲಾ, ಸೆಲೆರಿ, ಜು಼ಕಿನಿ, ಹೀಗೆ
ಪರದೇಶೀ ಸೊಪ್ಪು ತರಕಾರಿಗಳು ಸಲಾಡ್ ನ ಭಾಗವಾಗಿವೆ. ಇವುಗಳ ಜೊತೆ ಗಮನ ಸೆಳೆಯುತ್ತಿರುವುದು ‘ಮೈಕ್ರೋಗ್ರೀನ್ಸ್'.
1980ರ ಸಮಯದಲ್ಲಿ ಅಮೇರಿಕಾದ ರೆಸ್ಟೊರೆಂಟ್ ಗಳಲ್ಲಿ ಐಷಾರಾಮಿ ಆಗಿ ಬಳಕೆಯಲ್ಲಿದ್ದ ಮೈಕ್ರೋಗ್ರೀನ್ಸ್
ಆರೋಗ್ಯವರ್ಧಕ ಮೌಲ್ಯಗಳಿಂದ ಮಧ್ಯಮ ವರ್ಗದಲ್ಲೂ ಹೆಚ್ಚು ಪ್ರಚಲಿತವಾಯಿತು. ವಿಶ್ವದೆಲ್ಲೆಡೆ ಹಬ್ಬಿ
ಈಗ ನಮ್ಮ ನಡುವೆಯೂ ಕಾಲಿರಿಸಿದೆ.
ಏನಿದು
ಮೈಕ್ರೋಗ್ರೀನ್ಸ್!?
ಬೀಜ ಮೊಳಕೆಯೊಡೆದು ಎರಡು ಮೂರೆಲೆಯೊಂದಿಗೆ
ಎಂಟ್ಹತ್ತು ದಿನಗಳ ಬೆಳವಣಿಗೆ ಹೊಂದಿದ ತರಕಾರಿ ಸಸಿಗಳಿಗೆ 'ಮೈಕ್ರೋಗ್ರೀನ್ಸ್' ಎಂದು ಕರೆಯಲಾಗುತ್ತದೆ.
ಘಾಡವಾದ ಬಣ್ಣ, ರುಚಿ, ಕಂಪನ್ನು ನೀಡಬಲ್ಲ ಮೈಕ್ರೋಗ್ರೀನ್ಸ್ ಗಳನ್ನು ಸೂಪ್, ಫ್ರೆöÊಸ್, ಪಾಸ್ತಾಗಳ
ಅಲಂಕಾರಕ್ಕಾಗಿ ಬಳಸಲಾಗುತ್ತದೆ. ಸೊಪ್ಪು ತರಕಾರಿಗಳ ಈ ಪುಟ್ಟ ತದ್ರೂಪಿಗಳನ್ನು ಸಲಾಡ್ ಗಳಲ್ಲಿ ಬಳಸುವುದು
ರೂಢಿಯಲ್ಲಿದೆ. ಬರಿಯ ಹೋಟೆಲ್ ತಿಂಡಿಗಳಿಗಷ್ಟೇ ಮೀಸಲಿದ್ದ ಮೈಕ್ರೋಗ್ರೀನ್ಸ್ ಗಳು ಇಂದು ತಮ್ಮ ಪೌಷ್ಟಿಕತೆ
ದೃಷ್ಟಿಯಿಂದ ಮನೆಮನೆಯ ಅಡುಗೆಯಲ್ಲೂ ಬಳಕೆಯಾಗುತ್ತಿದೆ.
ಬೀಜ ಮೊಳಕೆಯೊಡೆದು ಗಿಡವಾಗುವುದು ಒಂದು
ಅದ್ಭುತ ಕ್ರಿಯೆ. ಬೀಜಗಳಲ್ಲಿ ಸಂಗ್ರಹವಾದ ಪೋಷಕಾಂಶದ ದಾಸ್ತಾನಿನಲ್ಲಿ ಹಲವಾರು ಬದಲಾವಣೆಗಳು ಈ ಸಮಯದಲ್ಲಿ
ಜರುಗುತ್ತದೆ. ಇಷ್ಟು ದಿನ ಸಂಗ್ರಹವಾಗಿದ್ದ ಬೀಜದ ಶಕ್ತಿಯೆಲ್ಲಾ ಅಘಟಿತವಾಗಿ ಸುಲಭಲಭ್ಯ ರೂಪವನ್ನು
ಪಡೆಯುವುದು ಆಗಲೇ. ಪತ್ರಹರಿತ್ತು ಇನ್ನೂ ಸರಿಯಾಗಿ ತಳೆಯದ ಈ ಹಂತದಲ್ಲಿ ವಿಶೇಷವಾದ ಜೈವಿಕ ಅಂಶಗಳು
ಬೀಜಗಳಲ್ಲಿ ಉತ್ಪತ್ತಿಯಾಗಿರುತ್ತದೆ. ಹಾಗಾಗಿ ಮೊಳಕೆಗಳಿಗಿಂತಲೂ, ಬೆಳೆದ ಸೊಪ್ಪು ತರಕಾರಿಗಳಿಗಿಂತಲೂ
ವಿಶೇಷವಾದ ಪೋಷಕಾಂಶಗಳನ್ನು ಮೈಕ್ರೋಗ್ರೀನ್ ಹಂತದಲ್ಲಿ ಪಡೆಯಲು ಸಾಧ್ಯ.
ವಿವಿಧ ವೈಜ್ಞಾನಿಕ ಅಧ್ಯಯನಗಳ ಪ್ರಕಾರ ಬೆಳೆದ
ತರಕಾರಿಗಳಿಗಿಂತಲೂ ನಾಲ್ಕಾರು ಪಟ್ಟು ಹೆಚ್ಚಿನ ಪೋಷಕಾಂಶಗಳು ಮೈಕ್ರೋಗ್ನೀನ್ಸ್ ನಲ್ಲಿ ಅಡಕವಾಗಿದೆ.
ಇದೊಂಥರಾ ಬೆಳೆದ ತರಕಾರಿಗಳಲ್ಲಿನ ಪೋಷಕಾಂಶಗಳನ್ನು ಕುಗ್ಗಿಸಿ ಚಿಕ್ಕ ಪೊಟ್ಟಣದಲ್ಲಿ ಕಟ್ಟಿಟ್ಟ ಹಾಗೆ.
ಆದ್ದರಿಂದ ಸಲಾಡ್ ನ ಮೂಲಕ ಕಣ್ಣು, ಮೂಗು, ನಾಲಿಗೆ ಎಂಬ ಇಂದ್ರಿಯಗಳನ್ನು ಜಾಗೃತಗೊಳಿಸುವ ಜೊತೆ ಪೋಷಕಾಂಶಗಳ
ಆಗರವಾಗಿರುವ ಮೈಕ್ರೋಗ್ರೀನ್ಸ್ ಭವಿಷ್ಯದ ‘ಸೂಪರ್ ಫುಡ್'ಗಳೆಂದೇ ಪ್ರಸಿದ್ಧಿ ಪಡೆಯುತ್ತಿವೆ. ಸುಲಭ
ನಿರ್ವಹಣೆ, ವರ್ಷಪೂರ್ತಿ ಲಭ್ಯತೆ, ಕಡಿಮೆ ಸಮಯದಲ್ಲಿ ಕಡಿಮೆ ಸಂಪನ್ಮೂಲಗಳಲ್ಲಿ ಕೃತಕ ವಾತಾವರಣದಲ್ಲೂ
ಬೆಳೆಯಬಲ್ಲ ಅನುಕೂಲತೆಗಳು ಈ ಪ್ರಸಿದ್ಧಿಯನ್ನು ಮತ್ತಷ್ಟು ಹೆಚ್ಚಿಸಿದೆ. ದೊಡ್ಡ ನಗರಗಳ ಸೂಪರ್ ಮಾರ್ಕೆಟ್
ನಲ್ಲಿ ಸಿಕ್ಕುವ ಮೈಕ್ರೋಗ್ರೀನ್ಸ್ ಗಳನ್ನು ಈಗ ಸುಲಭವಾಗಿ ಮನೆಯಲ್ಲೇ ಬೆಳೆಸಬಹುದು ಎಂಬುದು ಸಂತಸದ
ವಿಚಾರ.
ಬೆಳೆಸಿ
ಬಳಸುವ ಬಗೆ
ಎಲೆಕೋಸು, ಹೂಕೋಸು, ನವಿಲುಕೋಸು, ಮೂಲಂಗಿ,
ಸಾಸಿವೆ, ಬ್ರಕೋಲಿ, ಲೆಟ್ಯುಸ್, ಪಾಕ್-ಚೊಯ್, ಪಾಲಕ್, ಗಜ್ಜರಿ, ಬೀಟ್ರೂಟ್, ಹರಿವೆ, ಮೆಂತೆ, ಸೂರ್ಯಕಾಂತಿ
ಮೊದಲಾದ ತರಕಾರಿಗಳಿಂದ ಮೈಕ್ರೋಗ್ರೀನ್ಸ್ ಪಡೆಯಲು ಸಾಧ್ಯ. ಅಂತರ್ಜಾಲದಲ್ಲಿ ಮೈಕ್ರೋಗ್ರೀನ್ಸ್ ಗಳಿಗಾಗಿಯೇ
ವಿಶೇಷವಾಗಿ ದೊರಕುವ ಬೀಜಗಳನ್ನು ಕೊಂಡರೆ ಒಳ್ಳೆಯದು. ಇಲ್ಲವಾದಲ್ಲಿ ಬೀಜದಂಗಡಿಗಳಲ್ಲಿ ಸಿಕ್ಕುವ ಬೀಜವಾದರೂ
ಸರಿ. ಯಾವುದೇ ರಾಸಾಯನಿಕದಿಂದ ಉಪಚರಿಸದ, ಹೆಚ್ಚಿನ ಮೊಳಕೆ ಪ್ರಮಾಣ ಹೊಂದಿರುವ ಆರೋಗ್ಯಕರ ಬೀಜಗಳನ್ನು
ಆರಿಸುವುದು ಮುಖ್ಯ.
ಮೊದಲು ಶೂ ಬಾಕ್ಸ್ ನಷ್ಟು ದೊಡ್ಡದಾದ ಟ್ರೇ
ಅಥವಾ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಕೋಕೋಪೀಟ್ ನಂತಹ ಹಗುರವಾದ ಗಾಳಿಯಾಡುವ ಮಾಧ್ಯಮವನ್ನು ಹರಡಬೇಕು.
ನಂತರ ಇದರ ಮೇಲೆ ಬೀಜವನ್ನು ವತ್ತಟವಾಗಿ ಉದುರಿಸಿ ಮತ್ತೆ ತೆಳುವಾಗಿ ಕೋಕೋಪಿಟ್ ನಿಂದ ಹೊದಿಸಬೇಕು.
ಸಲ್ಪ ಕತ್ತಲೆಯಲ್ಲಿ ಮೂರು ದಿನ ಮುಚ್ಚಿಟ್ಟು ಬೀಜ ಮೊಳಕೆಯೊಡೆದ ನಂತರ ಬೆಳಕಿಗೆ ತೆರೆದಿಡಬೇಕು. ಆಗಾಗ
ನೀರನ್ನು ಚಿಮುಕಿಸುತ್ತಾ ತೇವಾಂಶ ಕಾಪಾಡಬೇಕು. ಏಳರಿಂದ ಹದಿನಾಲ್ಕು ದಿನಗಳಲ್ಲಿ ಗಿಡ ಇನ್ನೇನು ಎಲೆ
ಬಿಟ್ಟು ಎರಡಿಂಚು ಎತ್ತರವಾಗಿದ್ದೇ ಬುಡದಲ್ಲಿ ಕತ್ತರಿಸಿ ಅಡುಗೆಗೆ ಬಳಕೆ ಮಾಡಬಹುದು. ಒಂದರ್ಥಧಲ್ಲಿ
ಮೈಕ್ರೊಗ್ರೀನ್ಸ್ ಬೆಳೆಸುವುದು ವಿಜ್ಞಾನದ ಪ್ರಯೋಗದಂತೆ. ತಾಜಾತನಕ್ಕಾಗಿ ಬಳಸುವ ಇವುಗಳನ್ನು ಫ್ರಿಡ್ಜ್
ನಲ್ಲಿ ಕೊಯ್ದಿಟ್ಟು ಬಳಸುವುದು ಅಸಮಂಜಸ.
ಕೆಲವೊಮ್ಮೆ ಈ ಕ್ರಿಯೆಯಲ್ಲಿ ಶಿಲೀಂಧ್ರಗಳ
ರೋಗ ಉಂಟಾಗಬಹುದು. ಹಾಗಾಗಿ ರೋಗರಹಿತ ಬೀಜ, ಶುದ್ಧ ನೀರು, ಕ್ರಿಮಿರಹಿತ ಕೋಕೋಪೀಟ್, ಒಟ್ಟಾರೆ ಸ್ವಚ್ಛತೆ
ಕಾಪಾಡುವುದು ಅವಶ್ಯಕ. ಜೊತೆಗೆ ಬೀಜಗಳ ನಡುವಿನ ಅಂತರ ಅಥವಾ ಸಾಂದ್ರತೆ ಬಗ್ಗೆ ಲಕ್ಷ ವಹಿಸುವುದು ಅಗತ್ಯ.
ರಾಸಾಯನಿಕಗಳಿಂದ ಮುಕ್ತವಾದ ತಾಜಾ ತರಕಾರಿ ಬೆಳೆಸುವ ಹಂಬಲ ಎಲ್ಲರದು. ಆದರೆ ನಗರಗಳಲ್ಲಿ ಜಾಗದ ಕೊರತೆ
ಕೈತೋಟಕ್ಕೊಂದು ಮಿತಿ ಹೇರುತ್ತದೆ. ಆ ಸಮಯದಲ್ಲಿ ಮೈಕ್ರೋಗ್ರೀನ್ಸ್ ಒಳ್ಳೆಯ ಪರ್ಯಾಯ.
ಅಪೌಷ್ಟಿಕತೆ
ವಿರುದ್ಧದ ಅಸ್ತçವಾಗಿ...
ಅಪೌಷ್ಟಿಕತೆ ದೀರ್ಘಕಾಲದಿಂದ ಮಾನವ ಕುಲವನ್ನು
ಕಾಡುತ್ತಿರುವ ಪಿಡುಗು. ಬದಲಾದ ಜೀವನ ಕ್ರಮ, ಆಹಾರ ಪದ್ಧತಿ ಈ ತೊಂದರೆಯನ್ನು ಇನ್ನಷ್ಟು ಉಲ್ಬಣಗೊಳಿಸಿದೆ. ಹೊಟ್ಟೆಗೆ ಸಾಕಷ್ಟು ಸಿಕ್ಕರೂ ದೇಹಕ್ಕೆ ಬೇಕಾದಷ್ಟು
ಪೋಷಕಾಂಶ ಸಿಗದೇ ಕೃಶರಾಗುತ್ತಿರುವ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ರೋಗ ನಿರೋಧಕತೆ ಕುಂದುತ್ತಿದೆ,
ಹಲವಾರು ರೋಗಗಳನ್ನು ನಾವಾಗಿಯೇ ಬರಮಾಡಿಕೊಳ್ಳುತ್ತಿದ್ದೇವೆ. ಕಣ್ಣಿಗೆ ಕಾಣದ ಈ ಪೋಷಕಾಂಶಗಳ ಹಸಿವು
(Hidden Hunger) ಭವಿಷ್ಯದಲ್ಲಿ ಮಾರಕವಾಗಬಹುದು ಎಂದು ಊಹಿಸಲಾಗುತ್ತಿದೆ. ಇಂತಹ ಸಮಯದಲ್ಲಿ ಮೈಕ್ರೋಗ್ರೀನ್ಸ್ನಂತಹ
ಹಸಿರು ಶಕ್ತಿ ದೇಹದ ಸ್ವಾಸ್ಥ್ಯ ಬಲಪಡಿಸುವ ಸಾಧನವಾಗಬಲ್ಲದು.
ಕಬ್ಬಿಣ, ಸತು, ಅಯೋಡಿನ್, ಮಾಗ್ನೇಷಿಯಂ,
ಕ್ಯಾಲ್ಸಿಯಮ್, ನಂತಹ ಖನಿಜಾಂಶಗಳು; ಕೆರೋಟಿನಾಯಿಡ್ಸ್ (ವಿಟಮಿನ್ ಎ), ವಿಟಮಿನ್ ಬಿ ಕಾಂಪ್ಲೆಕ್ಸ್,
ಅಸ್ಕೊರ್ಬಿಕ್ ಆಸಿಡ್ (ವಿಟಮಿನ್ ಸಿ) ಫಿಲೋಕ್ವಿನಾನ್ (ವಿಟಮಿನ್ ಕೆ) ನಂತಹ ವಿಟಮಿನ್ ಗಳು; ಪೋಲಿಫಿನಾಲ್;
ಆಂಟಿ ಆಕ್ಸಿಡೆಂಟ್; ಗ್ಲುಕೋಸಿನೊಲೆಟ್ಸ್ (ವಿಶೇಷವಾಗಿ ಕೋಸುಗಳಲ್ಲಿ); ಹೀಗೆ ಹಲವಾರು ಪೋಷಕಾಂಶಗಳನ್ನು
ಮೈಕ್ರೋಗ್ರೀನ್ಸ್ ಗಳಲ್ಲಿ ಪಟ್ಟಿ ಮಾಡಲಾಗಿದೆ. ಈ ಎಲ್ಲಾ ಅಂಶಗಳು ಕ್ಯಾನ್ಸರ್, ಮಧುಮೇಹ, ನರ ಸಂಬAಧೀ
ಮತ್ತು ಹೃದಯ ಸಂಬAಧೀ ಕಾಯಿಲೆಗಳನ್ನು ದೂರವಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಮೈಕ್ರೋಗ್ರೀನ್ಸ್
ಸೇವನೆ ಶರೀರಕ್ಕೆ ಯಾವತ್ತೂ ಒಳ್ಳೆಯದೇ.
ಮೈಕ್ರೋಗ್ರೀನ್ಸ್ ಗಳ ದೊಡ್ಡ ಮಟ್ಟದ ಕೃಷಿ,
ಒಣಗಿಸಿ ಪುಡಿ ಮಾಡಿ ಮಾರಾಟ ಮಾಡುವ ಉದ್ಯೋಗವೂ ನಗರಗಳಲ್ಲಿ ಅಲ್ಲಲ್ಲಿ ನೆಲೆಯಾಗಿವೆ. ಅಂತರಿಕ್ಷ ಸುತ್ತುವ
ಗಗನಯಾತ್ರಿಗಳಿಗೂ ಪೂರಕವಾಗಬಲ್ಲವೆಂಬ ಕಾರಣಕ್ಕೆ ಬಾಹ್ಯಾಕಾಶದ ವಾತಾವರಣದಲ್ಲೂ ಅಧ್ಯಯನಕ್ಕೆ ಒಳಪಟ್ಟಿವೆ.

.jpg)
.jpg)
Comments
Post a Comment