ನೀರ ತಾರೆಯರು

 

ಇನ್ನೂ ಬೇರೂರದ ಆಗಷ್ಟೇ ಮೊಳಕೆಯೊಡೆದ ಬೀಜ ನಮ್ಮಂತೆ ಎಲುಬು-ಕೀಲುಗಳಿಲ್ಲದಿದ್ದರೂ ಎರಡೆಲೆ ತಳೆದು ಧೃಡವಾಗಿ ನೆಲದಿಂದ ಮೇಲೇಳಬಲ್ಲದು. ಇದು ಹೇಗೆ ಸಾಧ್ಯವೆಂದು ಎಂದಾದರೂ ಯೋಚಿಸಿದ್ದೀರಾ?. ಎಲ್ಲಾ ನೀರಿನ ಲೀಲೆ!. ಜೀವಕೋಶದ ಗೋಡೆಗಳ ಮೇಲೆ ಒತ್ತಡ ಹೇರುವ (ಇದಕ್ಕೆ turgor pressure ಎನ್ನಲಾಗುತ್ತೆ) ನೀರೆಂಬ ಜೀವರಸವೇ ಈ ಧೃಡತ್ವಕ್ಕೆ ಕಾರಣ. ಸಸ್ಯಗಳ ದೇಹ 95% ನೀರಿನಿಂದಲೇ ಮಾಡಲ್ಪಟ್ಟಿದ್ದೂ ಹಲವಾರು ರಾಸಾಯನಿಕ ಕ್ರಿಯೆಗಳಿಗೆ ನೀರು ಮಾಧ್ಯಮವಾಗಿದೆ. ದ್ಯುತಿ ಸಂಶ್ಲೇಷಣೆಯೆಂಬ ಯಜ್ಞಕ್ಕೆ ಆಹುತಿ ನೀರು ಎಂದರೆ ಆಶ್ಚರ್ಯವೆನಿಸಬಹುದು. ಆಮ್ಲಜನಕ, ಜಲಜನಕ ಎಂಬ ಎರಡು ಪೋಷಕಾಂಶಗಳು ಸಿಗುವುದೇ ನೀರಿನಿಂದ. ವಿಜ್ಞಾನ ಏನೇ ಹೇಳಲಿ ಸಸ್ಯಗಳಿಗಿರುವ ನೀರಿನ ಅವಶ್ಯಕತೆಯ ಸಾಮಾನ್ಯ ಜ್ಞಾನ ನಮಗೆಲ್ಲಾ ಇದ್ದೇ ಇದೆ. ಹಾಗಾಗಿ ಯಾವ ಕೆಲಸ ತಪ್ಪಿಸಿದರೂ ಗಿಡಗಳಿಗೆ ನೀರೆರೆಯುವ ಕೆಲಸ ತಪ್ಪಿಸುವುದಿಲ್ಲ.

ಆದರೆ ಹಲವಾರು ಬಾರಿ ನೀರುಣಿಸುವ ಈ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ; ಕೆಲವೊಮ್ಮೆ ಮರೆತು ಬಿಡುತ್ತೇವೆ; ಕೆಲವೊಮ್ಮೆ ಸಮಯ ಹೊಂದುವುದಿಲ್ಲ; ವಿಶೇಷವಾಗಿ ನಗರದಲ್ಲಿ ವಲಸಿಗರಾಗಿದ್ದಲ್ಲಿ, ಹಬ್ಬ-ವಾರಾಂತ್ಯಗಳಲ್ಲಿ ಊರಿಗೆ ಹೊರಟು ನಿಂತರೆ ಗಿಡಗಳ ಪರಿಸ್ಥಿತಿ ಏನೆಂಬ ಚಿಂತೆ ಕಾಡುತ್ತದೆ. ಸಸ್ಯಗಳು ನೀರಲ್ಲೇ ಬೆಳೆಯುವಂತಿದ್ದರೇ ಈ ಸಮಸ್ಯೆಗೆ ಪರಿಹಾರ ಸಿಕ್ಕಬಹುದಲ್ಲಾ!. ಹಾಗಾಗಿ ಮಹತ್ವ ಹೊಂದಿದ್ದು ಜಲಸಸ್ಯಗಳು ಮತ್ತು ನೀರಲ್ಲಿ ಬೆಳೆಯಬಲ್ಲ ಒಳಾಂಗಣ ಸಸ್ಯಗಳು.

ನೀರಲ್ಲಿ ಗಿಡ ಬೆಳೆಸುವ ಈ ಪ್ರಯತ್ನಕ್ಕೆ ಹೆಚ್ಚೇನು ಕಸರತ್ತು ಬೇಡ. ಕೆಲವೇ ಸೀಮಿತ ಸಸ್ಯಗಳೊಂದಿಗೆ ಮನೆಯ ಬಾಲ್ಕನಿಯ ಮೂಲೆಯಲ್ಲಿ ‘ಮಿನಿ ಪಾಂಡ್’ ನಿರ್ಮಿಸಬಹುದು. ಈಗಾಗಲೇ ಕುಂಡದಲ್ಲಿ ಬೆಳೆಯುತ್ತಿರುವ ಮನೀ ಪ್ಲಾಂಟ್ ಗಳ ಕಂಟಿಂಗ್ಸ್ ಗಳನ್ನು ನೀರು ತುಂಬಿದ ಗಾಜಿನ ಜಾಡಿಗಳಲ್ಲಿರಿಸಿ ಒಳಾಂಗಣದಲ್ಲಿ ಜೋಡಿಸಬಹುದು.

ಮಿನಿ ಪಾಂಡ್

ಸಸ್ಯಗಳಂತೆ ಹರಿಯುತ್ತಿರುವ ನೀರು ಕೂಡಾ ಮನೆಯ ಜೀವಂತಿಕೆಯನ್ನು ಪ್ರತಿನಿಧಿಸುತ್ತದೆ. ಆದರೆ ಮನೆಯೊಳಗೆ ಹೊಳೆ ಹರಿಸುವದು ಅಸಾಧ್ಯ. ಬಾಲ್ಕನಿ ಅಥವಾ ತಾರಸಿಯಲ್ಲಿ ಆಹ್ಲಾದಕರವಾದ ಮಿನಿ ಪಾಂಡ್ ನಿಮಿಸುವುದರ ಮೂಲಕ ಈ ಆಸೆಯನ್ನು ಪೂರೈಸಿಕೊಳ್ಳಬಹುದು. ಒಳಾಂಗಣ ಸಸ್ಯಗಳಿಗಿಂತ ಭಿನ್ನವಾದ ಬೇರೊಂದು ಜಲಸಸ್ಯಗಳ ಜಗತ್ತನ್ನು ಇವು  ತೆರೆದಿಡುತ್ತವೆ.

ಮಿನಿ ಪಾಂಡ್ ನಿರ್ಮಿಸುವ ಮೊದಲು ಗಮನಿಸಬೇಕಾದ ಅಂಶ ಬೆಳಕು, ಜಾಗದ ಲಭ್ಯತೆ. ಪಾಂಡ್ ಗಳಲ್ಲಿ ಬೆಳೆಯುವ ಲಿಲ್ಲಿಯಂತ ಜಲಸಸ್ಯಗಳಿಗೆ ಸೂರ್ಯ ಪ್ರಕಾಶದ ಅಗತ್ಯವಿರುವ ಕಾರಣ ದಿನವಿಡೀ ಬೆಳಕು, ಜೊತೆಗೆ ಮಹಡಿಯ ನೆರಳಿರುವ ಬಾಲ್ಕನಿ ಅತ್ಯುತ್ತಮ ಸ್ಥಳವಾಗಬಲ್ಲದು. ಅಗಲ ಬಾಯಿಯ ತೀರಾ ಆಳವಲ್ಲದ ಅಗಲವಾದ ಪ್ಲಾಸ್ಟಿಕ್ ಟಬ್, ಸಿಮೆಂಟ್, ಪಿಂಗಾಣಿ, ಟೆರಾಕೊಟ ಕಂಟೇನರ್ ಗಳನ್ನೇ ಕೊಳವನ್ನಾಗಿ ಪರಿವರ್ತಿಸಬಹುದು.

ಪಾಂಡ್ ಗಳಲ್ಲಿ ಬೆಳೆಯಬಲ್ಲ ಸಸ್ಯಗಳ ಆಯ್ಕೆಯೂ ಮಹತ್ವದ್ದು. ನೀರ ಮೇಲೆ ತೇಲುವ ಕಮಲದಂತೆ ಕಾಣುವ ಬಣ್ಣ ಬಣ್ಣದ ವಾಟರ್ ಲಿಲ್ಲಿಗಳು ಮಿನಿ ಪಾಂಡ್ ಗಳ ಬಳಕೆಗೆ ಹೆಚ್ಚು ಪ್ರಚಲಿತದಲ್ಲಿರುವ ಸಸ್ಯಗಳು. ಇದರ ಜೊತೆ ಹಸಿರು ಗುಲಾಬಿಯಂತೆ ಎಸಳು ಎಸಳಾಗಿರುವ ವಾಟರ್ ಕ್ಯಾಬೇಜ್; ಹರಡಿದ ಚೂಪಾದ ಎಲೆಗಳ ಅಂಬ್ರೆಲ್ಲಾ ಪ್ಲಾಂಟ್; ರೇಡಿಯಮ್ ನಂತೆ ಹೊಳೆಯುವ ಕಾಂಡಗಳುಳ್ಳ ಹಾರ್ಸ್ ಟೇಲ್; ಸುಲಭವಾಗಿ ಹರಡಬಲ್ಲ ವಾಟರ್ ಹಯಾಸಿಂತ್; ವಾಟರ್ ಮೊಸಾಯಿಕ್; ಚಿಕ್ಕ ಎಲೆಗಳ ಅಜೋಲ್ಲಾ, ಡಕ್ ವೀಡ್ ಗಳು ಸುಂದರವಾಗಿ ಕಾಣಬಲ್ಲವು.

ಈ ಎಲ್ಲಾ ಸಸ್ಯಗಳ ಬೇರು ಆಳದ ಮಣ್ಣಿನಲ್ಲಿ ಹುದುಗಿರುತ್ತದೆ. ಹಾಗಾಗಿ ಸಸ್ಯಗಳನ್ನು ಹೂಕುಂಡದ ಅಂಟು ಮಣ್ಣಲ್ಲಿ ಮೊದಲು ನೆಟ್ಟು ನೀರಿನಲ್ಲಿರಿಸುವುದು ಒಳ್ಳೆಯದು. ಹೀಗೆ ಮಾಡುವುದರಿಂದ ಕಾಲ ಕಾಲಕ್ಕೆ ಅವುಗಳ ನಿರ್ವಹಣೆಯೂ ಸುಲಭವಾಗುತ್ತದೆ. ಕುಂಡದ ಮಿಶ್ರಣಕ್ಕೆ ಪೋಷಕಾಂಶಗಳ ಅಗತ್ಯವಿಲ್ಲ. ಹೊಳೆ ಬದಿ ಸಿಕ್ಕುವ ಕಲ್ಲುಗಳನ್ನು ಬಳಸಿ ಪಾಂಡ್ ಗಳ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

ಜಾಡಿಯಲ್ಲಿ ಜಾದೂ

ಶಾಲೆಯ ರಸಾಯನ ಶಾಸ್ತ್ರದ ಪ್ರಾಯೋಗಿಕ ತರಗತಿಗಳಲ್ಲಿ ಬಳಸುತ್ತಿದ್ದ ಬೀಕರ್, ಟೆಸ್ಟ್ ಟ್ಯುಬ್, ಕೋನಿಕಲ್ ಫ್ಲಾಸ್ಕ್, ಸಿಲಿಂಡರ್, ಗಳು ಇವತ್ತು ಒಳಾಂಗಣ ಸಸ್ಯಗಳನ್ನು ಬೆಳೆಸುವ ಗಾಜಿನ ಜಾಡಿಗಳಾಗಿ ಹೊಸ ರೂಪ ಪಡೆಯುತ್ತಿವೆ. ಲೋಹಗಳಿಗೆ ಅಂಟಬಲ್ಲ ಫ್ರಿಡ್ಜ್ ಮಾಗ್ನೆಟ್, ಮರುಬಳಕೆ ಮಾಡಿದ ಪ್ಲಾಸ್ಟಿಕ್ ಬಾಟಲ್, ಲೈಟ್ ಬಲ್ಬ್ ಬಳಕೆಯೂ ಈಗಿನ ಟ್ರೆಂಡ್.

ಹೂವು-ಕಾಯಿ ಬಿಡದ ಅಲಂಕಾರಿಕ ಸಸ್ಯಗಳನ್ನು ಪ್ರಸರಣ ಮಾಡುವ ‘ಕಂಟಿಂಗ್ಸ್’ವಿಧಾನದಿಂದ ಒಳಾಂಗಣ ಸಸ್ಯಗಳನ್ನು ನೀರಿನಲ್ಲಿ ಬೆಳೆಸಬಹುದು. ನಮ್ಮ ಸುತ್ತ ಸಾಮಾನ್ಯವಾಗಿ ಕಂಡು ಬರುವ ಒಳಾಂಗಣ ಸಸ್ಯಗಳಾದ ಮನಿ ಪ್ಲಾಂಟ್, ಡ್ರೆಸಿನಾ, ಕೋಲಿಯಸ್, ಮೊನೆಸ್ಟೆರಾ, ಸಿಂಗೋನಿಯಮ್, ಸ್ನೇಕ್ ಪ್ಲಾಟ್, ಲಕ್ಕಿ ಬಾಂಬೂ ಇವೆಲ್ಲವೂ ನೀರಿನಲ್ಲಿ ಬೆಳೆಯಲು ಯೋಗ್ಯ. ಕಂಟಿಗ್ಸ್ ಗಳನ್ನು ಆರಿಸಿಕೊಳ್ಳುವಾಗ ಅವು ಚೆನ್ನಾಗಿ ಬಲಿತಿರಬೇಕು, ಎಳೆಯ ಕಟಿಂಗ್ಸ್ ಗಳಾದರೆ ಕೊಳೆಯುವ ಸಂಭವ ಹೆಚ್ಚು, ಜೊತೆಗೆ ಒಂದೆರಡು ಗೆಣ್ಣು ನೀರಿನಲ್ಲಿರುವ ಹಾಗೆ ಉದ್ದದ ಕಟಿಂಗ್ಸ್ ಆಯ್ದುಕೊಳ್ಳಿ.

ನಿರ್ವಹಣೆ

ನೀರಿನಲ್ಲಿ ಗಿಡ ಬೆಳೆಸುವುದರ ದೊಡ್ಡ ಸಮಸ್ಯೆಯೆಂದರೆ ಸೊಳ್ಳೆಗಳ ಕಾಟ. ನಿಂತ ನೀರು ಸೊಳ್ಳೆ ಗೂಡಾಗಬಹುದು. ಅಂತೆಯೇ ಪಾಚಿ ಬೆಳೆದು ಕೊಳಕಾಗಬಹುದು. ಹಾಗಾಗಿ ಪಾಂಡ್ ಮತ್ತು ಜಾಡಿಯಲ್ಲಿರುವ ಹಳೆಯ ನೀರನ್ನು ಆಗಾಗ ಚೆಲ್ಲಿ ತಾಜಾ ನೀರಿನಿಂದ ಬದಲಾಯಿಸುತ್ತಿರಬೇಕು. ಅಕ್ವೇರಿಯಮ್ ನಲ್ಲಿ ಬಳಸುವ ಬಬ್ಲರ್/ಏರ್ ಪಂಪ್ ಬಳಸಿ ಸಣ್ಣ ಕಾರಂಜಿಯನ್ನು ನಿರ್ಮಿಸುವುದರಿಂದ ಸೊಳ್ಳೆಗಳನ್ನು, ಪಾಚಿಗಳನ್ನು ದೂರವಿರಿಸಬಹುದು. ಜೊತೆಗೆ ಸೊಳ್ಳೆಯ ಮರಿಗಳನ್ನು ತಿನ್ನುವ ಮೀನನ್ನೂ ಕೊಳಗಳಲ್ಲಿ ಸಾಕಬಹುದು.

ಕಾಂಕ್ರೀಟ್ ಕಾಡಿನ ಓಯಸಿಸ್ ಆಗಬಲ್ಲ ಸಣ್ಣ ಕೊಳ ನಗರದ ಪ್ರತಿಯೊಬ್ಬರು ಅನುಸರಿಸಬಲ್ಲ ಮೋಜಿನ ಹವ್ಯಾಸ. ಬೇಸಿಗೆ ರಜೆಯಲ್ಲಿ ಮಿನಿ ಪಾಂಡ್ ನಿರ್ಮಾಣದ ಪ್ರಾಜೆಕ್ಟ್ ಮಾಡಬಹುದು. ಗಾಜಿನ ಜಾಡಿಗಳಲ್ಲಿ ಬಿಳಿ ಬಿಳಿ ಬೇರು ಬಿಡುವ ಗಿಡಗಳ ಬೆಳವಣಿಗೆಯನ್ನು ಗಮನಿಸಿ ಖುಷಿ ಪಡಬಹುದು. 



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ