ಮನೆಯೊಳಗೊಂದು ಮಿನಿ ಮರ
ಸಾಹಿತಿಯ ಮನೆ ತುಂಬ
ಪುಸ್ತಕಗಳು, ಚಿತ್ರಕಾರನ ಮನೆ ತುಂಬ ಕಲಾಕೃತಿಗಳು, ಪ್ರವಾಸಿಗನ ಮನೆ ತುಂಬ ತಿರುಗಾಟದ ಸ್ಮರಣಿಕೆಯ
ಸಂಗ್ರಹಗಳು; ನಮ್ಮ ಮನೆ ನಮ್ಮ ಮನಸ್ಸಿನ ಪ್ರತಿಫಲನ.
ನಾವ್ಯಾರು, ನಮ್ಮ ಅಭಿರುಚಿಯೇನು, ನಮ್ಮ ಹವ್ಯಾಸಗಳೇನು ಎಂಬುದರ ಬಗ್ಗೆ ನಮ್ಮ ಮನೆ ಕಂತೆ ಕತೆಯನ್ನು
ಬಿಚ್ಚಿಡುತ್ತದೆ. ಈ ಹಿನ್ನೆಲೆಯಲ್ಲಿ ಮನೆ ಮಾಲೀಕನ ಹಸಿರು ಮನಸ್ಸನ್ನು ಒಳಾಂಗಣ ಸಸ್ಯಗಳ ಬಗೆಗಿನ ಒಲವು
ಸಾರಿ ಹೇಳುತ್ತದೆ.
ಒಳಾಂಗಣ ಸಸ್ಯಗಳ ಬಳಕೆಯಲ್ಲಿ
ಮೇಲ್ನೋಟಕ್ಕೆ ಎರಡು ತರಹದ ಹವ್ಯಾಸಿ ವರ್ಗಗಳನ್ನು ಗುರುತಿಸಬಹುದು. ವೈವಿಧ್ಯತೆ ಬಯಸುವ, ಮನೆಯ ಪ್ರತಿ
ಕೋಣೆ, ಪ್ರತಿ ಮೂಲೆ, ಶೆಲ್ಫ್ ನಲ್ಲಿ ಗಿಡಗಳನ್ನು ಬೆಳೆಸಿ ಹಸುರು ಕಾಡೊಂದನ್ನು ನಿರ್ಮಿಸುವ ‘ಮ್ಯಾಕ್ಸಿಮಲಿಸ್ಟ್’ಗಳ
ವರ್ಗ ಒಂದಾದರೆ; ಸರಳತೆ ಬಯಸುವ ಒಂದೆರಡು ಗಿಡದೊಂದಿಗೆ ಅನ್ಯೋನತೆಯಿಂದ ದಿನವೂ ಸಂವಾದಿಸುವ ‘ಮಿನಿಮಲಿಸ್ಟ್’ಗಳ
ವರ್ಗವೊಂದು. ಅನಾವಶ್ಯಕವಾಗಿ ನರ್ಸರಿಯಲ್ಲಿ ಕಂಡ ಗಿಡವನ್ನೆಲ್ಲಾ ತಂದು ಗುಡ್ಢೆ ಹಾಕಿ, ಗೊಂದಲದ ಗೂಡಾಗಿ,
ಅವುಗಳ ಕಾಳಜಿಯಲ್ಲಿ ಹೈರಾಣಾಗುವ ಬದಲು ಎರಡೇ ಗಿಡಗಳನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಒಳ್ಳೆಯದೆಂಬುದು
ಮಿನಿಮಲಿಸ್ಟ್ ಗಳ ವಾದ.
ಏಕಮೇವ
ಅದ್ವಿತೀಯ
ಕಣ್ ಮನ ಮೆಚ್ಚುವಂತಹ
ಒಂದೇ ಸಸ್ಯವನ್ನು ಸಲಹುವ ಮಿನಿಮಲಿಸ್ಟ್ ಗಳ ಮನಸ್ಥಿತಿ ಇಂದು ‘ಸ್ಟೇಟಮೆಂಟ್ ಪ್ಲಾಂಟ್’ಗಳ ಹೊಸ ಅಲೆಯನ್ನು
ಹುಟ್ಟುಹಾಕಿದೆ. ‘ವಾಹ್!’ ಎನಿಸುವ, ತನ್ನಂತೇ ಮತ್ತೊಬ್ಬರಿಲ್ಲ ಎಂಬಂತೆ ಸೆಳೆಯುವ ‘ಸ್ಟೇಟಮೆಂಟ್ ಪ್ಲಾಂಟ್’ಗಳಿಗೆ
ಇಂದು ಒಳಾಂಗಣದಲ್ಲಿ ‘ವಿಐಪಿ’ಗಳ ವಿಶೇಷ ಸ್ಥಾನಮಾನ. ಮನೆಯೊಳಗೆ ಹಸುರಿರಬೇಕು, ನಿರ್ವಹಣೆ ಸುಲಭವಿರಬೇಕು,
ನೋಟ ಅದ್ದೂರಿಯಿರಬೇಕು ಎನ್ನುವವರಿಗೆ ಇವು ಒಳ್ಳೆಯ ಆಯ್ಕೆ.
ಕಾಡುವ ಸರಳತೆ, ಎದ್ದು
ಕಾಣುವ ಬೃಹತ್ ಗಾತ್ರ ಇವುಗಳ ವಿಶೇಷತೆ. ಎಲೆ-ಚಿಗುರುಗಳ ಸೂಕ್ಷ್ಮಗಳನ್ನು ಗಮನಿಸಿ ಮುಟ್ಟಿ ಅನುಭವಿಸಲು
ಅನುವು ಮಾಡಿಕೊಡುವ ಈ ಸಸ್ಯಗಳು ಚಿತ್ತಾಕರ್ಷಕ. ಬಿಳಿ ಅಥವಾ ಯಾವುದೇ ಏಕವರ್ಣದ ಗೋಡೆಯ ಮುಂದೆ ಎದ್ದುಕಾಣುವಂತೆ
ದೊಡ್ಡ ಅಲಂಕಾರಿಕ ಸಿರಾಮಿಕ್ ಕುಂಡ ಅಥವಾ ತಾಮ್ರದ/ಹಿತ್ತಾಳೆಯ ಕಂಟೇನರ್ ನಲ್ಲಿ ಇರಿಸಿದ ಸ್ಟೇಟಮೆಂಟ್
ಪ್ಲಾಂಟ್ ಒಳಾಂಗಣ ವಿನ್ಯಾಸದ ಇತ್ತೀಚಿನ ಟ್ರೆಂಡ್.
ಸ್ಟೇಟಮೆಂಟ್
ಆಗಬಲ್ಲ ಸಸ್ಯಗಳು
ಒಳಾಂಗಣ ಸಸ್ಯಗಳದ್ದು
ದೊಡ್ಡ ಬಳಗ. ಆದರೆ ಎಲ್ಲವೂ ಸ್ಟೇಟಮೆಂಟ್ ಆಗಲಾರವು. ಚಿಕ್ಕ ಗಾತ್ರದ ಸಕ್ಯುಲೆಂಟ್, ಮನಿ ಪ್ಲಾಂಟ್,
ಫೀಲೋಗಳು ಈ ಆಟದಿಂದ ಹೊರಕ್ಕೆ. ಕನಿಷ್ಟ ಆರಡಿ ಎತ್ತರದ, ಅನನ್ಯ ವಿನ್ಯಾಸದ, ನಿಧಾನ ಬೆಳವಣಿಗೆಯ, ದೂರದಿಂದಲೇ
ಅಲಂಕಾರಿಕವಾಗಿ ಪ್ರದರ್ಶಿತವಾಗುವ ಸಸ್ಯಗಳು ಹೆಚ್ಚು ಸೂಕ್ತ. ಸ್ಟೇಟ್ ಮೆಂಟ್ ಆಗಬಲ್ಲ ಕೆಲ ಸಸ್ಯಗಳನ್ನು
ಈ ಕೆಳಗಿನಂತೆ ಉದಾಹರಿಸಬಹುದು.
- ಅಚ್ಚಹಸಿರ ಉದ್ದನೆಯ ಬಾಗುವ ಎಲೆಗಳನ್ನು ಹೊಂದಿರುವ ‘ಕಾಸ್ಟ್ ಐರನ್ ಪ್ಲಾಂಟ್’. ಕಳಪೆ ನಿರ್ವಹಣೆಯಲ್ಲೂ ಬೆಳೆಯಬಲ್ಲ ಇವು ಆರಂಭಿಕರಿಗೆ ಹೇಳಿ ಮಾಡಿಸಿದ ಗಿಡಗಳು.
- ಒಳಾಂಗಣದಲ್ಲಿ ಚೆನ್ನಾಗಿ ಬೆಳೆಯಬಲ್ಲ, ಕಂದು, ಹಸಿರು, ಗುಲಾಬಿ ವಿವಿಧ ವರ್ಣಗಳಿಂದ ಮಿಶ್ರಿತವಾದ ‘ರಬ್ಬರ್ ಪ್ಲಾಂಟ್’
- ಕಾಡಿನ ಹಳೆ ಮರಗಳನ್ನು ಹೋಲುವ, ದಪ್ಪ ಒರಟು ಕಾಂಡ, ಕಾರಂಜಿಯಂತೆ ಚಿಮ್ಮಿಇಳಿಬೀಳುವ ಖಡ್ಗದಂತ ಎಲೆಗಳ ‘ಯುಕ್ಕಾ’
- ಚೀಸ್ ನ ತುಣುಕನ್ನು ಹೋಲುವಂತೆ ಎಲೆಯಲ್ಲಿ ರಂಧ್ರ ಹೊಂದಿರುವ ದೊಡ್ಡ ಗಾತ್ರದ ‘ಮೊನೆಸ್ಟೆರಾ’
- ಹಲವಾರು ಜಾತಿಯ, ಮರದಂತೆ ಎತ್ತರರೆತ್ತರ ಬೆಳೆಯುತ್ತಾ ಸಾಗುವ ‘ಡ್ರೆಸಿನಾ’ಗಳು
- ಬಣ್ಣ ಬಣ್ಣದ ಎಲೆಗಳ ‘ಕ್ರೋಟೋನ್’
- ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಪ್ರಚಲಿತದಲ್ಲಿರುವ, ಪಿಟೀಲಿನಂತೆ ವಿಶೇಷ ವಿನ್ಯಾಸದ ಎಲೆಗಳನ್ನು ಹೊಂದಿರುವ ‘ಫಿಡಲ್ ಲೀಫ್ ಫಿಗ್’
- ಚಿಕ್ಕ ಚಿಕ್ಕ ನಾಣ್ಯದಂತ ಎಲೆಗಳ, ಸಮೃದ್ಧ ಹಸಿರಿನ ನೋಟ ನೀಡಬಲ್ಲ ‘ವೀಪಿಂಗ್ ಫಿಗ್/ಬೆಂಜಮೀನಾ ಫಿಗ್ ‘
- ಛತ್ರಿಯಂತೆ ಮೈ ಹರಡಿಕೊಂಡ ಬಿಳಿ-ಹಸಿರು ಮಿಶ್ರಣದ ಎಲೆಗಳ ‘ಶೆಫ್ಲರಾ’
- ಬಾಳೆ ಗಿಡದ ಎಲೆಗಳನ್ನು ಹೋಲುವ, ಆಗಾಗ ಹೂಬಿಡುವ ‘ಹೆಲಿಕೋನಿಯಾ/ಕಾಬಾಳೆಗಳು’
ಸ್ಟೇಟಮೆಂಟ್
ಪ್ಲಾಂಟ್ ಹೊಂದುವ ಮುನ್ನ
ಮೇಲಿನ ಯಾವುದೇ ಸಸ್ಯಗಳು
‘ಸ್ಟೇಟಮೆಂಟ್ ಲುಕ್’ ನೀಡಲು ಮುಖ್ಯ ಕಾರಣ ನಮ್ಮ ಒಳಾಂಗಣ. ರಂಗು ರಂಗಾದ ಚಿತ್ರ ರಚನೆಯಿರುವ ಗೋಡೆಯ
ಮುಂದೆ ಇವು ಮಂಕಾಗಿ ಕಾಣಬಹುದು. ಬಿಳಿಯ ಗೋಡೆ ಮುಂದೆ ಪ್ರಕಾಶಿತವಾಗಬಲ್ಲವು. ಹಾಗಾಗಿ ಸಸ್ಯಗಳ ಆಯ್ಕೆಗೂ
ಮೊದಲು ಕೋಣೆಯ ವಿನ್ಯಾಸದ ಬಗೆಗಿನ ತಿಳುವಳಿಕೆ ಮುಖ್ಯ. ಜೊತೆಗೆ ಕುಂಡಗಳ ಆಯ್ಕೆಯಲ್ಲಿನ ಜಾಣ್ಮೆ ಸ್ಟೇಟಮೆಂಟ್
ಸಸ್ಯಗಳ ವೈಭವವನ್ನು ಹೆಚ್ಚಿಸಬಲ್ಲವು.
ಇವುಗಳ ಗಾತ್ರ ದೊಡ್ಡದಾದ
ಕಾರಣ ಹತ್ತು-ಹನ್ನೆರಡು ಇಂಚಿನ ಕುಂಡಗಳು (ಅಥವಾ ಅದಕ್ಕಿಂತ ಹೆಚ್ಚು) ಅವಶ್ಯವಾಗಬಹುದು. ಈ ಕುಂಡಗಳನ್ನು
ಪೂರ್ತಿ ಮಣ್ಣಿನ ಮಿಶ್ರಣದಿಂದ ತುಂಬುವ ಅಗತ್ಯವಿಲ್ಲ. ಅರ್ಧ ಕುಂಡವನ್ನು ಹಗುರವಾದ ತೆಂಗಿನ ನಾರು,
ಇಟ್ಟಂಗಿ ಚೂರುಗಳಿಂದ ತುಂಬಬಹುದು. ಅಲ್ಲದೇ ಕುಂಡಗಳನ್ನು ಬರಿಯ ಕಂಟೇನರ್ ಆಗಿಯೂ ಬಳಸಬಹುದು.
ಗಾತ್ರ ದೊಡ್ಡದಾದ ಮಾತ್ರಕ್ಕೆ
ಇವುಗಳ ನಿರ್ವಹಣೆಯೇನು ಕಷ್ಟವಲ್ಲ. ಉಳಿದ ಒಳಾಂಗಣ ಸಸ್ಯಗಳಿಗೆ ತೋರುವ ಬೆಳಕು-ನೀರು-ಪೋಷಕಾಂಶಗಳ ಆರೈಕೆಯನ್ನೇ
ಇವು ಸಹ ನಿರೀಕ್ಷಿಸುತ್ತವೆ.
ನವೀನ
ರೂಪ
ಒಳಾಂಗಣಕ್ಕೆ ಹೊಸ ರೂಪ
ನೀಡಬೇಕಾದರೆ ಸುಣ್ಣ-ಬಣ್ಣ ಬಳಿಯುವ ಕಾಲ ದೂರವಾಯಿತು. ಕ್ಷಣ ಮಾತ್ರದಲ್ಲಿ ಸುಂದರ ಬದಲಾವಣೆಯ ಸ್ಪರ್ಷ
ನೀಡಲು ಹಂಬಲಿಸುತ್ತಿದ್ದರೆ ಈ ತರಹದ ಹೊಸ ಪ್ರಯತ್ನಕ್ಕೆ ಮುಂದಾಗಬಹುದು. ನಿಸರ್ಗವೆನೋ ಹೊಸ ವಸಂತಕ್ಕೆ
ತಯಾರಿ ನಡೆಸುತ್ತಿದೆ. ನೀವೂ ಕೂಡಾ ‘ಸ್ಟೇಟಮೆಂಟ್ ಪ್ಲಾಂಟ್’ನೊಂದಿಗೆ ಈ ವರ್ಷ ಮನೆಗೊಂದು ನವೀನ ರೂಪ
ನೀಡಿ ವಸಂತವನ್ನು ಸ್ವಾಗತಿಸಿ.

Comments
Post a Comment