ಪ್ರಿಸರ್ವಡ್ ಮೋಸ್

ಮಣ್ಣು, ನೀರು, ಗಾಳಿ, ಬೆಳಕು, ಗಿಡ-ಮರದಂತಹ ಪ್ರಾಕೃತಿಕ ಅಂಶಗಳಿಂದ ಯಾವಾಗಲೂ ಸುತ್ತವರಿದಿರಬೇಕೆಂಬುದು ನಮ್ಮ ಬಯಕೆ. ಹಳ್ಳಿ ಜೀವನದಲ್ಲಿ ಇವೆಲ್ಲವೂ ಸಹಜಲಭ್ಯ. ಪಟ್ಟಣಗಳಲ್ಲಿ ವಿದ್ಯುತ್ ದೀಪ, ಹವಾನಿಯಂತ್ರತೆ, ನೀರಿನ ಕಾರಂಜಿ, ಮರದ ಪೀಠೋಪಕರಣಗಳು, ಹೀಗೆ ಕೃತಕವಾದರೂ ಸರಿ, ಒಂದಿಲ್ಲೊಂದು ರೀತಿಯಲ್ಲಿ ನಿಸರ್ಗದ ಅಂಶಗಳನ್ನು ಒಳಾಂಗಣದಲ್ಲಿ ಅಳವಡಿಸಿಕೊಳ್ಳುವುದನ್ನು ನಾವು ಕಲಿತಿದ್ದೇವೆ. ಪ್ರಾಕೃತಿಕವಾದುದ್ದೇ ಬೇಕೆಂಬ ಹಟ ಬಹುಶಃ ಒಳಾಂಗಣ ಸಸ್ಯಗಳ ಬಳಕೆಯನ್ನು ಮುಂಚೂಣಿಗೆ ತಂದಿರಬೇಕು.

ಎಷ್ಟೇ ಇಷ್ಟವಾದರೂ ಒಳಾಂಗಣದಲ್ಲಿ ಸಸ್ಯಗಳನ್ನು ಸಲಹುವುದು ಎಲ್ಲಾ ಸಂದರ್ಭದಲ್ಲೂ ಕಷ್ಟ. ಹೂಕುಂಡಗಳನ್ನಿಡಲು ಜಾಗ, ನೀರು-ಬೆಳಕಿನ ಕನಿಷ್ಟ ನಿರ್ವಹಣೆಯಾದರೂ ಅಗತ್ಯವಿರುವ ಸಲುವಾಗಿ ಹೆಚ್ಚಿನ ಬಾರಿ ಸಸ್ಯ ಪಾಲನೆಗೆ ಹಿಂದೇಟು ಹಾಕುತ್ತಿರುತ್ತೇವೆ. ಮತ್ತು ಪರ್ಯಾಯಗಳನ್ನು ಹುಡುಕುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಗೋಡೆಗಳಿಗೆ ಹೊಸ ಆಯಾಮ ನೀಡಿ, ಶೂನ್ಯ ಕಾಳಜಿಯಲ್ಲಿ ಹಸಿರನ್ನು ಹೊಂದುವ ಆಲೋಚನೆಯನ್ನು ಪ್ರೋತ್ಸಾಹಿಸುವುದು ಹಾವಸೆಗಳ ‘ಮೋಸ್ ಫ್ರೇಮ್’.

ಹಾವಸೆಗಳ ಹಾಸು

ತೇವವಾದ ಕಾಂಪೌಂಡ್ ಗೋಡೆಯ ಮೇಲೆ ಬೆಳೆಯುವ, ಮಳೆಕಾಡುಗಳಲ್ಲಿ ಮರದ ಮೇಲೆ ಹಬ್ಬುವ ವಿವಿಧ ಜಾತಿಯ ಹಾವಸೆಗಳನ್ನು ನೋಡಿರುತ್ತೀರಾ. ‘ಪಿನ್ ಕುಷನ್’ ‘ಸ್ಪಾಗ್ನಮ್’ ಮುಂತಾದ ಜಾತಿಯ ಈ ಪಾಚಿಗಳನ್ನು‘ಕೊಕೆಡಾಮಾ’, ‘ಟೆರೇರಿಯಮ್’ಗಳಲ್ಲೂ ಬಳಸಿರುತ್ತೀರಾ. ಯುಟ್ಯೂಬ್ ವೀಡಿಯೋ ನೋಡಿ ಮರದ ಚೂರು, ಕಲ್ಲು, ಜರಿಗಿಡಗಳು, ಹಾವಸೆಯನ್ನು ಬಳಸಿ ಕಾಡಿನ ಚಿತ್ರಣವನ್ನು ಮರುಸೃಷ್ಟಿಸಿ ‘ಲೈವ್ ಮೋಸ್ ಫ್ರೇಮ್’ಗಳನ್ನು ಮಾಡಲು ಪ್ರಯತ್ನಿಸಿರುತ್ತೀರಾ. ಆದರೆ ಇವು ವಾರವೊಂದರಲ್ಲಿ ತಮ್ಮ ತಾಜಾತನ ಕಳೆದುಕೊಂಡು ನಿಸ್ತೇಜವಾಗುತ್ತವೆ. ತೇವಾಂಶದ ಮೇಲೆಯೇ ಅವಲಂಬಿತವಾದ ಇವುಗಳ ನಿರ್ವಹಣೆಯೂ ಕಠಿಣ.

ಹಾಗಾಗಿ ಮುನ್ನೆಲೆಗೆ ಬಂದಿದ್ದು ‘ಒಣಗಿಸಿ’ ‘ಸಂರಕ್ಷಿಸಲ್ಪಟ್ಟ’ ಪಾಚಿಗಳ ಬಳಕೆ. ನಿಸರ್ಗದ ಹಸಿರನ್ನೇ ಅಣಕಿಸುವಂತೆ ಒಳಾಂಗಣ ವಿನ್ಯಾಸದಲ್ಲಿ ಬಳಕೆಯಾಗುತ್ತಿರುವ, ಅದರಲ್ಲೂ ಐಟಿ ಕಚೇರಿಗಳಲ್ಲಿ ಕಂಡುಬರುವ ಹಸಿರು ಗೋಡೆಗಳ ಹಿಂದಿರುವ ಜಾದೂ ಇದೇ ‘ಪ್ರಿಸವರ್ಡ್ ಮೋಸ್’. ಹೊರಾಂಗಣದಲ್ಲೇ ಆರಿಸಿ ತಂದ ಪಾಚಿಗಳಿಂದ ಇವುಗಳನ್ನು ತಯಾರಿಸಲಾಗುತ್ತದೆ . ನೀರಿನಂಶವನ್ನೆಲ್ಲಾ ಕಳೆದುಕೊಂಡ ಮೇಲೆ ಜೀವಂತವಾಗಿದ್ದಂತೆ ಕಂಡರೂ ಇವು ಸಜೀವಿಗಳಲ್ಲ. ಆದರೆ ನೋಡಲು, ಮುಟ್ಟಲು ಮಾತ್ರ ಅದೇ ಹಸಿರು, ಅದೇ ಮೃದುತ್ವ, ಥೇಟ್ ಜೀವಂತ ಪಾಚಿಗಳಂತೆ.

ನಮ್ಮಲ್ಲಿಯಂತೆ ಯುರೋಪ್ ದೇಶಗಳ ಎತ್ತರದ ಹಿಮ ಪರ್ವತಗಳಲ್ಲಿ ವಿಶಿಷ್ಟವಾದ ಪಾಚಿಯೊಂದು ನೆಲದ ಮೇಲೆ ಹಾಸಾಗಿ ಬೆಳೆಯುತ್ತದೆ. ಕವಲು ಕವಲಾಗಿ ಬೆಳೆಯುವ ಬಿಳಿ ಬಣ್ಣದ ಈ ಪಾಚಿ ಅಲ್ಲಿನ ‘ರೇನ್ ಡೀರ್’ ಹಿಮಸಾರಂಗಿಗಳ ಅಚ್ಚುಮೆಚ್ಚಿನ ಆಹಾರ. ಹಾಗಾಗಿ ಈ ಪಾಚಿಗೆ ‘ರೇನ್ ಡೀರ್ ಮೋಸ್’ ಎಂದೇ ಕರೆಯುಲಾಗುತ್ತದೆ. ಇಂದು ಮಾರುಕಟ್ಟೆಯಲ್ಲಿ ವಿವಿಧ ಬಣ್ಣಗಳಲ್ಲಿ ಲಭ್ಯವಿರುವ ಸಂರಕ್ಷಿತ ಪಾಚಿಗಳಲ್ಲಿ ಹೆಚ್ಚಿನವು ಇದೇ ರೇನ್ ಡೀರ್ ಮೋಸ್’.

ಶೂನ್ಯ ನಿವಹಣೆ

ನೈಸರ್ಗಿಕವಾಗಿ ಬೆಳೆದ ಹಾವಸೆಗಳನ್ನು ಆರಿಸಿ ತಂದು ಅವುಗಳನ್ನು ರಾಸಾಯನಿಕ(ಸಾಮಾನ್ಯವಾಗಿ ‘ಗ್ಲಿಸರಿನ್’ನಿಂದ) ದಿಂದ ಉಪಚರಿಸಿ, ಬಣ್ಣ (ಸಾಮಾನ್ಯವಾಗಿ ಫುಡ್ ಗ್ರೇಡ್ ಬಣ್ಣ) ಬಳಿದು ನೈಜ ರೂಪದಲ್ಲಿಯೇ ಸಂರಕ್ಷಿಸಲಾಗುತ್ತದೆ. ಸದ್ಯಕ್ಕೆ ನಮ್ಮ ದೇಶದಲ್ಲಿ ಇವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಗಾಗಿ ಬೆಲೆ ಸಲ್ಪ ಹೆಚ್ಚೆ. ಆದರೆ ತಾಳಿಕೆ-ಬಾಳಿಕೆ, ಹಾಗು ಇವುಗಳ ನೈಜತೆಗೆ ಹೋಲಿಸಿದರೆ ಈ ಬೆಲೆಯೇನೂ ಭಾರವಲ್ಲ.

ದಿನನಿತ್ಯ ಬಳಕೆಯಲ್ಲಿರುವ ಗ್ಲಿಸರಿನ್, ಆಹಾರಕ್ಕಾಗಿ ಬಳಸುವ ರಂಗುಗಳನ್ನೇ ಬಳಸುವ ಕಾರಣ ಇವು ಆರೋಗ್ಯಕ್ಕೆ ಹಾನಿಕಾರಕವಲ್ಲ. ನೈಜ ರೂಪದಲ್ಲಿ ಸಂರಕ್ಷಿಸಲ್ಪಟ್ಟ ಕಾರಣ ಇವು ಬೆಳೆಯಲಾರವು, ನೀರು, ಬೆಳಕು, ಗೊಬ್ಬರಗಳ ಗೊಡವೆಯೇ ಇಲ್ಲ. ಬದುಕು-ಸಾವಿನ ಎಲ್ಲೆ ಇಲ್ಲದ ಕಾರಣ ಇವುಗಳ ನಿರ್ವಹಣೆಗೆ ಸಮಯ, ಶ್ರಮ ಎರಡೂ ಬೇಡ. ಸೊಳ್ಳೆಯಂತ ಯಾವುದೇ ಹುಳಗಳನ್ನು ಆಕರ್ಷಿಸುವುದೂ ಇಲ್ಲ. ಬೆಳಕಿನ ಪ್ರಕಾಶ ತೀರಾ ಹೆಚ್ಚಾದಲ್ಲಿ ಬಣ್ಣ ಮಸುಕಾಗುವ ಸಾಧ್ಯತೆ ಇದ್ದರೂ ಒಳಾಂಗಣದಲ್ಲಿ ಈ ಸಮಸ್ಯೆಯಿಲ್ಲ.

ಸುತ್ತಲಿನ ತೇವಾಂಶಕ್ಕೆ ಅನುಗುಣವಾಗಿ ಈ ಪಾಚಿಗಳು ತಮ್ಮ ಮೃದುತ್ವವನ್ನು ಹೊಂದಿಸಿಕೊಳ್ಳುತ್ತವೆ. ತೇವಾಂಶ (30%ಗಿಂತ) ಕಡಿಮೆಯಾದಲ್ಲಿ ಗಡುಸಾಗಿ, ತೇವಾಂಶ ಏರುತ್ತಿದಂತೆ ಮತ್ತೆ ಮುಂಚಿನ ಮೃದುತ್ವಕ್ಕೆ ತಿರುಗುತ್ತವೆ. ಹಾಗಾಗಿ ಒಳಾಂಗಣದ ವಾತಾವರಣವನ್ನೂ ಇವು ಸೂಚಿಸಬಲ್ಲವು. ವಾತಾವರಣದ ತೇವಾಂಶ ಹೀರುವ ರೀತಿಯಲ್ಲೇ ಶಬ್ಧವನ್ನೂ ಹೀರಬಲ್ಲ ಇವು ‘ಸೌಂಡ್ ಪ್ರೂಫ್’ ಆಗಿಯೂ ವತಿಸಬಲ್ಲವು.

ಹಸಿರು ಹೊರಮೈ

ನೈಜ ಗಿಡಗಳನ್ನು ಬಳಸಿ ಹಸಿರು ವರ್ಟಿಕಲ್ ಗಾಡನ್ ನಿರ್ಮಿಸಿ ನಿರ್ವಹಿಸಲು ಸಾಧ್ಯವಾಗದೇ ಇದ್ದಲ್ಲಿ ‘ಮೋಸ್ ವಾಲ್’ಗಳನ್ನು ನಿರ್ಮಿಸಿ ಸಂತಸ ಪಡಬಹುದು. ‘ವಾಲ್ ಪೇಪರ್’ನಂತೆ ಗೋಡೆಗೆ ಅಂಟಿಸುವ ಚಾಪೆಗಳನ್ನು ಅಂತಜಾಲ ತಾಣಗಳಲ್ಲಿ ಕೊಳ್ಳಬಹುದು. ಟೇಬಲ್ ಮೇಲೆ ಇಡಬಹುದಾದ, ಗೋಡೆಗೂ ತೂಗುಹಾಕಬಹುದಾದ ವಿವಿಧ ಗಾತ್ರದ ಫ್ರೇಮಗಳಾಗಿಯೂ ಇವು ಲಭ್ಯ. ಬರಿಯ ಮೋಸ್ ಖರೀದಿಸಿ ನಮಗೆ ಬೇಕಾದ ಹಾಗೆ ಬಳಸಲೂ ಅವಕಾಶವಿದೆ. ಕಚೇರಿಗಳ ರಿಸೆಪ್ಷನ್ ನಲ್ಲಿ ‘ಲೋಗೋ’ ಮೂಡಿಸುವ ನಮ್ಮ ಇಚ್ಚೆಯ ವಿನ್ಯಾಸವನ್ನು ಕಸ್ಟಮೈಸ್ ಮಾಡಿಕೊಡುವ ಹಲವಾರು ಇಂಟೀರಿಯರ್ ಡಿಸೈನ್ ಕಂಪನಿಗಳೂ ಇವೆ.

ಒಳಾಂಗಣಕ್ಕೆ ಹಸಿರು ಹಚ್ಚುವ ಸುಲಭವಾದ ಹಾದಿ ‘ಪ್ರಿಸವರ್ಡ್ ಮೋಸ್’ಗಳ ಬಳಕೆ. ಕಾಡು ಹಸಿರು, ಗಿಳಿ ಹಸಿರು, ಆಕಾಶ ನೀಲಿ, ಕೆಂಪು, ಹಳದಿ, ಹೀಗೆ ಹತ್ತು ಹಲವು ಬಣ್ಣಗಳಲಿ ಲಭ್ಯವಿರುವ ಪಾಚಿಗಳನ್ನು ಬಳಸಿ ಗೋಡೆಗಳಿಗೆ ಬಣ್ಣ ತುಂಬಬಹುದು. ಮನಸೋಲುವ ಇವುಗಳ ಮೃದು ರಚನೆಯನ್ನೊಮ್ಮೆ ಕೊಂಡು ಅನುಭವಿಸಿ ನೋಡಿ.



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ