ತೂಗು ಗಿಡಗಳ ಜೋಗುಳ

 

ಗೋಡೆಗಂಟಿಸಿದ ನಲವತ್ತಿಂಚಿನ ಟಿವಿ; ಅಕ್ಕ ಪಕ್ಕ ಶೋ ಕೇಸ್; ಮುಂದೊಂದು ಸೋಫಾ; ಪತ್ರಿಕೆ-ಪುಸ್ತಕ ಜೋಡಿಸಿಟ್ಟ ಟೇಬಲ್; ಒಂದೆರಡು ಕುರ್ಚಿ; ಹರಗಣವನ್ನೆಲ್ಲಾ ಬಚ್ಚಿಡಲೊಂದು ಕಪಾಟು. ಇಂತಹ ನೀರಸ ‘ಲಿವಿಂಗ್ ರೂಮ್’ಗೆ ಜೀವ ತುಂಬುವ ಒಳಾಂಗಣ ಸಸ್ಯಗಳು ಇವತ್ತಿನ ಪೇಟೆ ಮಂದಿಯ ಹೊಸ ಗೀಳು. ಮನೆಯೊಳಕ್ಕೆ ಸಸ್ಯಸಂಪತ್ತನ್ನು ಬರಮಾಡಿಕೊಂಡು ಅವುಗಳ ಆರೈಕೆಯಲ್ಲಿ ಖುಷಿ ಕಾಣುತ್ತಿರುವ ನಗರವಾಸಿಗಳು ಇಂದು ಹಲವಾರು. ನರ್ಸರಿಗೆ ಹೋದಾಗಲೆಲ್ಲಾ ಹೊಸ ಗಿಡ ಕೊಳ್ಳುವ ಆಸೆ ಅವರದು. ಆದರೇನು! ಜಾಗದ್ದೇ ಸಮಸ್ಯೆ. ಈ ಹಿನ್ನೆಲೆಯಲ್ಲಿ ‘ಹ್ಯಾಂಗಿಂಗ್ಸ್’ಗಳ ಟ್ರೆಂಡ್ ಹಸಿರು ಮನಸ್ಸುಗಳನ್ನು ಆಕರ್ಷಿ ಸುತ್ತಿದೆ.

ಮನೆಯ ಸೀಲಿಂಗ್ ಗಾರ್ಡನ್ ಆದಾಗ

ಯಾವುದೇ ಇಂಜಿನಿಯರ್ ಆಗಿರಲಿ, ಮನೆ ಕಟ್ಟುವಾಗ ಮೇಲ್ಛಾವಣಿಗೆ ‘ಹುಕ್’ಗಳನ್ನು ನಿರ್ಮಿಸಿಯೇ ಇರುತ್ತಾರೆ. ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವ, ‘ಝೂಮರ್’ ದೀಪಗಳನ್ನು ಸಸ್ಯಗಳಿಂದ ಬದಲಿಸುವ ಸುಸಮಯವಿದು. ಮನೆಯ ಹಜಾರ, ಬಾಲ್ಕನಿಯ ಛಾವಣಿಗಿರುವ ಕೊಕ್ಕೆ-ಕೊಂಡಿಗಳಿಗೆಲ್ಲಾ ಹ್ಯಾಂಗಿಂಗ್ ಪ್ಲಾಂಟ್ ಗಳನ್ನು ಸಿಕ್ಕಿಸಿ, ಇಳಿಯುವ ತರುಲತೆಗಳ ಸೌಂದರ್ಯವನ್ನು ಅನುಭವಿಸುವ ಸಂದರ್ಭವಿದು.

ಕ್ರಿಯಾಶೀಲತೆಯ ಅನುಸಾರವಾಗಿ ಕರ್ಟನ್ ರಾಡ್ ಗಳು, ಬಟ್ಟೆಯ ನ್ಯಾಲೆಗಳು ಕೂಡಾ ಹ್ಯಾಂಗಿಂಗ್ ಪಾಟ್ ಗಳ ನೆಚ್ಚಿನ ನೆಲೆಯಾಗಬಹುದು. ಹುಕ್ ಗಳಿಲ್ಲದಿದ್ದರೂ ಪರವಾಗಿಲ್ಲ, ಗೋಡೆಯಿಂದ ಮುಂದೆ ಚಾಚಿದ ಕಬ್ಬಿಣದ ಸ್ಟಾಂಡ್ ಗಳ ಮೂಲಕ ಹ್ಯಾಂಗಿಂಗ್ ಪಾಟ್ ಗಳನ್ನು ತೂಗುಹಾಕಬಹುದು. ಮನೆಯ ವಿನ್ಯಾಸಕ್ಕೆ ತಕ್ಕಂತೆ ಸಿರಾಮಿಕ್ ಕುಂಡಗಳು, ಗಾಜಿನ ಗೋಳಗಳು, ಮ್ಯಾಕ್ರೇಮ್ ಹ್ಯಾಂಗರ್ ಗಳಲ್ಲಿ ಪುಟ್ಟ ಗಿಡಗಳನ್ನು ಕೂರಿಸಿ ಇಳಿಬಿಡಬಹುದು. ಟೆರೆರಿಯಮ್, ಕೊಕೆಡಾಮಾಗಳನ್ನು ನೇತು ಹಾಕಬಹುದು. ಹೆಚ್ಚಿನ ಬೇಡಿಕೆಯಲ್ಲಿರುವ ನೈಸರ್ಗಿಕವಾಗಿ ಕಾಣುವ ತೆಂಗಿನ ನಾರಿನ ‘ಕೊಯಿರ್ ಪಾಟ್‘ಗಳನ್ನು ಬಳಸಬಹುದು .

ಹ್ಯಾಂಗಿಂಗ್ ಪ್ಲಾಂಟ್ ಗಳ ನೋಟವೇನೋ ಮಾಟವೇ. ಆದರೆ ಅವುಗಳ ನಿರ್ವಹಣೆ ತೀರಾ ಸುಲಭದ್ದಲ್ಲ. ಹಾಗಾಗಿ ಕೆಳಗಿನ ಕೆಲ ಅಂಶಗಳನ್ನು ಗಮನದಲ್ಲಿರುಸುವುದು ಒಳ್ಳೆಯದು.

  • ಸಸ್ಯಗಳ ಆಯ್ಕೆ

ಯಾವುದೇ ಸ್ಥಳಕ್ಕೂ ಒಪ್ಪುವ ವೈವಿಧ್ಯತೆ ಒಳಾಂಗಣ ಸಸ್ಯಗಳಲ್ಲಿದೆ. ಬೆಳಕು, ಸಸ್ಯದ ಬೆಳವಣಿಗೆ, ನಮ್ಮ ಅನುಕೂಲತೆ ಆಧರಿಸಿ ಹ್ಯಾಂಗಿಂಗ್ ಸಸ್ಯಗಳನ್ನು ಆಯ್ಕೆ ಮಾಡುವುದು ಅವಶ್ಯಕ. ಮನೆಯ ಸೀಲಿಂಗ್ ಎಂದರೆ ಬೆಳಕು ಅಷ್ಟಕಷ್ಟೆ. ಅಂತಹ ಜಾಗಗಳಲ್ಲಿ ಮನಿ ಪ್ಲಾಂಟ್, ಫಿಲೋಡೆಂಡ್ರಾನ್, ಇಂಗ್ಲೀಷ್ ಐವಿಗಳು ಒಳ್ಳೆಯ ಆಯ್ಕೆ. ತುಸು ಪ್ರಕಾಶಮಾನವಾದ ಕಿಟಕಿ ಬಳಿಯ ಸ್ಥಳಗಳಿಗೆ, ಹೊರಗಿನ ಹಜಾರಕ್ಕೆ ಸ್ಟ್ರಿಂಗ್ ಆಫ್ ಪರ್ಲ್, ಸ್ಟ್ರಿಂಗ್ ಆಫ್ ಡಾಲ್ಫಿನ್, ಸ್ಟ್ರಿಂಗ್ ಆಫ್ ಹಾರ್ಟ್, ಡಾಂಕಿ ಟೇಲ್, ಟರ್ಟಲ್ ವೈನ್, ಫರ್ನ್ ಗಳು ಒಗ್ಗಿಕೊಳ್ಳುತ್ತವೆ. ದಿನದ ಕೆಲ ಹೊತ್ತು ಪ್ರಕಾಶ ಸಿಕ್ಕುವ ಬಾಲ್ಕನಿಯಲ್ಲಿ ಹೂಬಿಡುವ ಪೆಟುನಿಯಾ, ಪೊರ್ಚುಲೆಕಾಗಳು ಬಣ್ಣ ತುಂಬಬಲ್ಲವು. ಸ್ಪೈಡರ್ ಪ್ಲಾಂಟ್, ಟ್ರೆಡಸ್ಕಾಂಶಿಯಾ, ಸಿಂಗೋನಿಯಮ್, ಮೊನೆಸ್ಟೆರಾ, ಮುಂತಾದ ಒಳಾಂಗಣ ಸಸ್ಯಗಳನ್ನು ಹ್ಯಾಂಗಿಂಗ್ ಗೆ ಬಳಸಬಹುದು.

  • ನೀರಿನ ನಿರ್ವಹಣೆ

ಹ್ಯಾಂಗಿಂಗ್ ಪ್ಲಾಂಟ್ ಗಳು ಎತ್ತರದ ಕೈಗೆಟುಕದ ಸ್ಥಳದಲ್ಲಿ ಇರುವುದರಿಂದ ನೀರಿನ ನಿರ್ವಹಣೆ ಸವಾಲಾಗಬಹುದು. ಅತಿಯಾಗಿ ನೀರೆರೆದು ಇಡೀ ನೆಲವನ್ನು ಗಲೀಜು ಮಾಡದಂತೆ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಅತಿ ಹೆಚ್ಚೂ ಅಲ್ಲದ, ಅತಿ ಕಡಿಮೆಯೂ ಅಲ್ಲದ, ಸಮರ್ಪಕ ನೀರಿನ ಬಳಕೆ ಮಹತ್ವದ್ದು. ಒಳಾಂಗಣದಲ್ಲಿ ನೀರು ಆವಿಯಾಗುವ ಪ್ರಮಾಣ ಕಮ್ಮಿಯಾಗಿರುವುದರಿಂದ ವಾರಕ್ಕೊಮ್ಮೆ ನೀರುಣಿಸಿದರೆ ಸಾಕಾಗಬಹುದು.ಹೂಕುಂಡಗಳಿಗೆ ಅಡಿ ಭಾಗಗಳಲ್ಲಿ ದೊಡ್ಡ ರಂಧ್ರಗಳಿದ್ದಲ್ಲಿ ಇಡೀ ಕುಂಡವನ್ನೇ ನೀರಿನ ಸಿಂಕ್ ನಲ್ಲಿಟ್ಟು ನೀರು ಬಸಿದ ಮೇಲೆ ಪುನಃ ತೂಗು ಹಾಕುವ ಅಭ್ಯಾಸ ಮಾಡಿಕೊಳ್ಳಬಹುದು. ಆದರೆ ಪ್ರತಿ ಸಲ ಇದು ಅಸಾಧ್ಯ. ಹಾಗಾಗಿ ಸ್ಟೂಲ್ ಮೇಲೆ ಹತ್ತಿ ನಿಂತು ಸ್ಕ್ವೀಜ್ ಬಾಟಲ್ ಗಳಿಂದ, ಸ್ಪ್ರೇಯರ್ ನಿಂದ ಹನಿಯಾಗಿ ನೀರುಣಿಸಿ. ಸೆಲ್ಫ್ ವಾಟರಿಂಗ್ ಪಾಟ್ ಗಳು, ನೀರುಣಿಸುವ ಗ್ಲೋಬ್ ಗಳನ್ನು ಬಳಸಬಹುದು. ಬಹು ಪ್ರಸಿದ್ಧಿ ಪಡೆಯುತ್ತಿರುವ, ಗಾಳಿಯಿಂದಲೇ ತನ್ನೆಲ್ಲಾ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವ ‘ಏರ್ ಪ್ಲಾಂಟ್’ ಗಳು, ಕಡಿಮೆ ನೀರು ಬಯಸುವ ಸಕ್ಯುಲೆಂಟ್ ಗಳನ್ನು ಆರಿಸಬಹುದು .

  • ಹೂಕುಂಡಗಳ ಆಯ್ಕೆ

ಹಗುರವಾದ ಪ್ಲಾಸ್ಟಿಕ್ ಹೂಕುಂಡಗಳಿಗೆ ಪ್ರಾಶಸ್ತ್ಯ ನೀಡಿ. ಭಾರದ ಸಿಮೆಂಟ್ ಪಾಟ್, ಟರ‍್ರಾಕೊಟಾಗಳು ಬೇಡ. ಆರರಿಂದ ಎಂಟು ಇಂಚಿನ ಪಾಟ್ ಗಳು ನೋಡಲೂ ಚಂದ, ಬಳಕೆಗೂ ಸೂಕ್ತ. ನಿರ್ವಹಣೆ ಸುಲಭವಾಗಿಸಲು ಹೂಕುಂಡದ ಹೊರಗಿನಿಂದ ಕಂಟೇನರ್ ಅಥವಾ ಹ್ಯಾಂಗರ್ ಬಳಸುವುದು ಒಳ್ಳೆಯದು.

  • ಮಣ್ಣಿನ ಮಿಶ್ರಣ.

ನೀರೆರೆದ ಮೇಲೆ ಪಾಟ್ ಮಿಶ್ರಣ ಮತ್ತೂ ಭಾರವಾಗುತ್ತದೆ. ಹಾಗಾಗಿ ಹೆಚ್ಚು ಭಾರವಿರದ ಹಗುರವಾದ ಮಿಶ್ರಣ ತಯಾರಿಸಿಕೊಳ್ಳಿ. ಹೆಚ್ಚು ಕಾಲ ನೀರು ಹಿಡಿದಿಟ್ಟುಕೊಳ್ಳುವ ಕೋಕೋಪಿಟ್, ಪರ್ಲೈಟ್ ಬಳಸಿ. ಮಣ್ಣು-ಮರಳು ಕಡಿಮೆ ಪ್ರಮಾಣದಲ್ಲಿರಲಿ.

ತೂಗು ‘ದಾನಿ’ಯಲ್ಲಿ ಕೂತು

ಧುಮ್ಮಿಕ್ಕುತ್ತಿರುವ ಜಲಧಾರೆಯಂತೆ, ಚಿಮ್ಮುತ್ತಿರುವ ಕಾರಂಜಿಯಂತೆ, ಸುತ್ತಲೂ ಬಣ್ಣದ ಕಿಡಿ ಹಾರಿಸುತ್ತಾ ಸಿಡಿಯುತ್ತಿರುವ ಪಟಾಕಿಯಂತೆ, ಹಸಿರು ಸೀರೆಯುಟ್ಟ ರಂಭೆ ಆಕಾಶದಿಂದ ಧರೆಗಿಳಿದು ಬರುವಂತೆ ಹೀಗೆ ಏನೇನೋ ರಮ್ಯ ಕಲ್ಪನೆ ಮೂಡಿಸುವ ಹ್ಯಾಂಗಿಂಗ್ ಪ್ಲಾಂಟ್ ಗಳ ಜಗತ್ತು ಉಲ್ಲಾಸದಾಯಕ. ಬ್ಯುಸಿ ಜೀವನದ ಏಕತಾನತೆಗೆ ಬಣ್ಣ ಬಳಿಯುವ ಇಷ್ಟವಿದ್ದಲ್ಲಿ ಒಳಾಂಗಣ ಸಸ್ಯಗಳನ್ನೊಮ್ಮೆ ಮಾತನಾಡಿಸಿ ನೋಡಿ. ಅದರಲ್ಲೂ ಹೊಸ ಪ್ರಯತ್ನವಾಗಿ ಹ್ಯಾಂಗಿಂಗ್ ಪ್ಲಾಂಟ್ ಗಳ ಪರಿಚಯ ಮಾಡಿಕೊಳ್ಳಿ. ಬೋರಿಂಗ್ ಒಳಾಂಗಣಕ್ಕೊಂದು ಅಲಂಕಾರಿಕ ಸ್ಷರ್ಷ ನೀಡಿ. 






Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ