ಜಗದ ತಟ್ಟೆಗೆ ಸಿರಿಧಾನ್ಯ ಬಡಿಸಿದ ಭಾರತ - 2023- International Year of Millets
ನಮ್ಮ ಭೂಮಂಡಲದಲ್ಲಿ ಇದುವರೆಗೆ ದಾಖಲಾಗಿರುವುದು ನಾಲ್ಕು ಲಕ್ಷ ಜಾತಿಯ ಸಸ್ಯ
ಸಂಪತ್ತು; ಇವುಗಳಲ್ಲಿ ಐವತ್ತು ಸಾವಿರ ಸೇವನೆಗೆ ಯೋಗ್ಯವಾದವು. ಆದರೆ ನಮ್ಮ ಆಹಾರ, ಗಿರಕಿ ಹೊಡೆಯುತ್ತಿರುವುದು ಅಕ್ಕಿ, ಗೋಧಿ, ಮೆಕ್ಕೆಜೋಳದ
ಮಧ್ಯೆ. ಹೆಚ್ಚು ಸಂಶೋಧನೆ ನಡೆಯುತ್ತಿರುವುದು ಇವೇ ಮೂರು ಬೆಳೆಗಳ ಮೇಲೆ. ‘ಕೆಲವೇ ಬೆಳೆ’ಗಳಿಗೆ ಕೇಂದ್ರಿತವಾದ
ಪಥ್ಯ ಪದ್ಧತಿ ಆಹಾರ ಭದ್ರತೆಯನ್ನು ದುರ್ಬಲವಾಗಿಸುತ್ತಿದೆ ಎಂಬ ಅಭಿಪ್ರಾಯ ಜಾಗತಿಕವಾಗಿ ವ್ಯಕ್ತವಾಗುತ್ತಿದೆ.
ಜೊತೆಗೆ ಹವಾಮಾನ ವೈಪರಿತ್ಯಕ್ಕೆ ನಲುಗಿ ಇವುಗಳ ಕುಸಿಯುತ್ತಿರುವ ಇಳುವರಿ ತಜ್ಞರ ನಿದ್ದೆಗೆಡಿಸಿದೆ.
‘ವಾವಿಲೋವ್’ನ
ವಾದಗಳು
ಭತ್ತ ಹುಟ್ಟಿದ್ದು ಭಾರತದಲ್ಲಾದರೂ ನಾವು ಪ್ರೀತಿಯಿಂದ ಸೇವಿಸುತ್ತಿರುವ
ಗೋಧಿ ಹುಟ್ಟಿದ್ದು ಮಧ್ಯಪ್ರಾಚ್ಯದಲ್ಲಿ, ಮೆಕ್ಕೆಜೋಳ ಹುಟ್ಟಿದ್ದು ಮೆಕ್ಸಿಕೋದಲ್ಲಿ. ಹೀಗೆ ಪ್ರತಿ
ಬೆಳೆಗೂಂದು ತವರಿದೆ; ಆ ತವರಿನಲ್ಲಿ ಬಳಗವಿದೆ; ಕೆಲ ಸದಸ್ಯರಷ್ಟೇ ತಮ್ಮದಲ್ಲದ ದೂರದ ಊರಿನಲ್ಲಿ ನೆಲೆಯೂರಿವೆ
ಎಂದಿದ್ದು ರಷ್ಯನ್ ವಿಜ್ಞಾನಿ ವಾವಿಲೋವ್
(1887-1943). ಬೆಳೆಗಳು ಹುಟ್ಟಿ ಬೆಳೆದ ತವರೂರಿನಲ್ಲಿ ಜೈವಿಕ ವೈವಿಧ್ಯತೆ ಅಗಾಧವಾಗಿರುತ್ತದೆ; ಸಸ್ಯವೊಂದರ
ಉಳಿವೆಗೆ ಬೇಕಾಗುವ ಅನುವಂಶಿಕ ಧಾತುಗಳ ಶಕ್ತಿ, ನಮ್ಮ ದೇಹಕ್ಕೆ ಬೇಕಾದ ಪೌಷ್ಟಿಕತೆ ವೈವಿಧ್ಯತೆಯಲ್ಲಡಗಿದೆ;
ಸಂಕರಣದಂತ ತಳಿ ಅಭಿವೃದ್ಧಿಗೆ ವೈವಿಧ್ಯತೆ ವರ; ದುರಾದೃಷ್ಟವೆಂದರೆ ಈ ದೇಸೀ ವೈವಿಧ್ಯತೆ ಭವಿಷ್ಯದಲ್ಲಿ
ಪೂರ್ತಿಯಾಗಿ ನಶಿಸಿಹೋಗುವ ಸಾದ್ಯತೆಗಳಿವೆ; ಹಾಗಾಗಿ ಇವುಗಳ ಸಂರಕ್ಷಣೆಯಾಗಬೇಕು ಎಂಬುದು ವಾವಿಲೋವ್ನ
ವಾದ.
ನಮ್ಮಲ್ಲೂ ಸ್ಥಳೀಯ ತರಕಾರಿ, ಕಾಳು-ಕಡಿಗಳನ್ನು ಅಡುಗೆಗೆ ಬಳಸುವ ಪರಿಪಾಟಲು
ಈಗ ಅಪರೂಪ. ಸಂಸ್ಕೃತಿಯ ಭಾಗವಾಗಿದ್ದ ವಿಶೇಷ ಪ್ರಭೇದಗಳು ಅಳಿಸಿ ಹೋಗುತ್ತಿವೆ (ದೀಪಾವಳಿಗೆ ‘ಶಿಂಡ್ಲೆಕಾಯಿ’,
‘ಪತ್ರೊಡೆ’ಗೂ ಕೆಸುವನ್ನು ಹುಡುಕಬೇಕಾದ ಪರಿಸ್ಥಿತಿ). ಹಾಗಾಗಿ ಆಹಾರ ಭದ್ರತೆಯ ದೃಷ್ಟಿಯಿಂದ ನಮ್ಮಲ್ಲೇ
ಹುಟ್ಟಿ ಬೆಳೆದ, ಭೋಜನವನ್ನು ಪುಷ್ಟಿಗೊಳಿಸುವ ಧವಸ-ಧಾನ್ಯಗಳ ಬಳಕೆ ಆದ್ಯತೆಯಾಗಬೇಕು. ಈ ದಾರಿಯಲ್ಲಿ
‘ಸಿರಿ ಧಾನ್ಯ’ಗಳತ್ತ ಮರಳುವುದು ಒಳ್ಳೆಯ ಪರಿಕಲ್ಪನೆ.
ಪ್ರಸ್ತಾವನೆ ಭಾರತದ್ದು
ಸಿರಿಧಾನ್ಯಗಳ ತವರು ಭಾರತ ಒಳಗೊಂಡಂತೆ ಏಷಿಯಾ ಆಫ್ರಿಕಾಗಳ ಶುಷ್ಕ ಪ್ರದೇಶ.
ಬರಗಾಲ ಗೆಲ್ಲುವ ಛಾತಿ ಇವುಗಳ ಹುಟ್ಟುಗುಣ. ನೀರು, ಮಣ್ಣು, ಸಂಪನ್ಮೂಲಗಳನ್ನು ದಕ್ಷವಾಗಿ ಬಳಸಬಲ್ಲ
ಜೀವ ರಚನೆ ಇವುಗಳದ್ದು. ಜೀಣಕ್ರಿಯೆಗೆ ಸಹಕಾರಿಯಾಗಿ, ಶಕ್ತಿ ಪೋಷಕಾಂಶಗಳ ಖಜಾನೆಯಾಗಿರುವ ಸಿರಿಧಾನ್ಯಗಳಿಗೆ
ಪ್ರಾಧಾನ್ಯತೆ ಬಂದಿದ್ದು ‘ಗ್ಲುಟೇನ್’ಮುಕ್ತ ಆಹಾರದ ಟ್ರೆಂಡ್ ಶುರುವಾದಾಗ.
ಸಿರಿಧಾನ್ಯಗಳ ಬಳಕೆ, ಉತ್ಪಾದನೆಯಲ್ಲಿ ಆಫ್ರಿಕಾದ ದೇಶಗಳು ಮುಂಚೂಣಿಯಲ್ಲಿದ್ದರೂ
ಭಾರತ ನಂಬರ್ ಒನ್. ರಾಜಸ್ಥಾನ ಉತ್ಪಾದನೆಯಲ್ಲಿ ಹಾಗೂ ಅಸ್ಸಾಮ್ ಸೇವನೆಯಲ್ಲಿ ಮೊದಲಿಗರು. ವಿಶ್ವಸಂಸ್ಥೆಯ
ಮುಂದೆ 2023ನ್ನು ಸಿರಿಧಾನ್ಯಗಳ ವರ್ಷವನ್ನಾಗಿ ಆಚರಿಸಬೇಕೆಂಬ ಪ್ರಸ್ತಾವನೆ ಇಟ್ಟಿದ್ದು ಭಾರತ.
2021ರಲ್ಲಿ 72 ದೇಶಗಳ ಬೆಂಬಲದೊಂದಿಗೆ ಈ ಪ್ರಸ್ತಾವನೆ ಸ್ವೀಕೃತವಾಯಿತು.
ಸಿರಿಧಾನ್ಯಗಳ ರಾಯಭಾರಿಯಾಗಿ ಈ ವರ್ಷವನ್ನು ವಿಜೃಂಭಿಸುವ ಎಲ್ಲಾ ತಯಾರಿಯನ್ನು
ಭಾರತ ಮಾಡಿಕೊಂಡಂತಿದೆ. ಇತ್ತೀಚೆಗೆ ಸಂಸತ್ ಭವನದ ಭೋಜನ ಕೂಟದಲ್ಲಿ ಸಿರಿಧಾನ್ಯಗಳ ರುಚಿ ರುಚಿ ಭಕ್ಷ್ಯಗಳು
ಲೋಕಸಭಾ ಸದಸ್ಯರ ‘ಥಾಲಿ’ಸೇರಿದ್ದವು. ಕೇಂದ್ರ ಸಚಿವಾಲಯ ‘ನ್ಯೂಟ್ರಿ ಸಿರಿಯಲ್ಸ್’ ಎಂಬ ಹೊಸದಾದ ಶಬ್ಧವನ್ನು
ಬಳಕೆ ಮಾಡತೊಡಗಿದೆ. ಮುಂದೂ ಕೂಡಾ ಸಿರಿಧಾನ್ಯಗಳ ಕುರಿತು ವಿಶೇಷ ಸಮ್ಮೇಳನಗಳು, ಆಹಾರ ಪ್ರದರ್ಶನಗಳೂ
ನಡೆಯಲಿವೆಯಂತೆ.
ಮುಂದೊಂದು ದಿನ
ಒಂದಾನೊಂದು ಕಾಲದಲ್ಲಿ ಇವೇ ಸಣ್ಣ ಪುಟ್ಟ ಬೆಳೆಗಳ ಮೇಲೆ ನಮ್ಮ ಬದುಕು ನಿಂತಿತ್ತು.
ಕಂದ ಮೂಲಗಳಿಂದಲೇ ಹೊಟ್ಟೆ ಪೂಜೆ ನಡೆಯುತ್ತಿತ್ತು. ನಾವು ಸಾಕಿದ ಪ್ರಾಣಿ ಪಕ್ಷಿಗಳಿಗೂ ಇದೇ ಆಹಾರವನ್ನು
ಉಣಿಸಲಾಗುತ್ತಿತ್ತು. ಕಾಲ ಕಳೆದಂತೆ ಇವುಗಳನ್ನು ಮರೆತಾಯಿತು. ಈಗ ಕಾಲ ವೇ ಮತ್ತೆ ನೆನಪಿಸುತ್ತಿದೆ. ಅನ್ನವೇ
ಪ್ರಾಣವಾದ ನನ್ನಂತ ಮಲೆನಾಡಿಗರೂ ಬಯಲುಸೀಮೆಯ ನವಣೆ ಅಕ್ಕಿ ಬಳಸತೊಡಗಿದ್ದಾರೆ. ವಾವಿಲೋವ್ ನಂತಹ ವಿಜ್ಞಾನಿಗಳ
ಆಶಯಗಳಿಗೆ ಜೀವ ತುಂಬುತ್ತಿರುವ, ಸಿರಿಧಾನ್ಯಗಳನ್ನು ಪುನಃ ಬಳಕೆಗೆ ತರುತ್ತಿರುವ ಭಾರತದ ಹೆಜ್ಜೆಗಳು
ವಿಶ್ವದೆಲ್ಲೆಡೆ ಸಂಚಲನ ಮೂಡಿಸಿದೆ.

Comments
Post a Comment