ಕ್ರಿವೈಸ್ ಗಾರ್ಡನಿಂಗ್

 

ಅದೊಂದು ಮಹಾನಗರಿ; ಕಾಂಕ್ರೀಟ್ ಕಾಲುದಾರಿ-ಡಾಂಬರು ರಸ್ತೆ; ಮಣ್ಣಿನ ಕುರುಹೂ ಇರದ ಕಲ್ಲು ಹಾದಿಯ ಸಂದಿಯಲ್ಲೊಂದು ಕಳೆ ಗಿಡ; ಚಿಕ್ಕ ಹಳದಿ ಹೂ ಬಿಟ್ಟು ಯಾರ ಕಾಲ ತುಳಿತಕ್ಕೆ ಸಾಯುವೆನೋ ಎಂದು ಎದುರು ನೋಡುತ್ತಿರುತ್ತದೆ. ಪೇಟೆಯ ಹಳೆಯ ಮಣ್ಣಿನ ಗೋಡೆಯ ಮನೆಯ ಬಿರುಕಿನಲ್ಲಿ ಅಶ್ವತ್ಥಗಿಡವೊಂದು ಎರಡೆಲೆ ಬಿಟ್ಟು ಇಣುಕುತ್ತಿರುತ್ತದೆ. ಇವುಗಳನ್ನು ನೆಟ್ಟವರಾರೋ, ನೀರೆರದವರಾರೋ, ಸಾಕಿ ಸಲಹುವರಾರೋ!

ಯಾರ ಹಂಗಿಲ್ಲದೆ ಬೆಳೆಯುತ್ತಾ ಸಾಗುವ ಸಂದು-ಗೊಂದಿನ ಈ ಜೀವನ ಇಂದು ‘ಕ್ರಿವೈಸ್ ಗಾರ್ಡನ್’ಎಂಬ ಸುಂದರ ಪ್ರಕಾರಕ್ಕೆ ಪ್ರೇರೇಪಣೆಯಾಗಿದೆ. ಈ ಗಾರ್ಡನಿಂಗ್ ಕಲೆಯನ್ನು ಜನಪ್ರಿಯಗೊಳಿಸಿದ್ದು ಪ್ರಸಿದ್ಧ ‘ಬೊಹೇಮಿಯಾ’ ಶೈಲಿಗೆ ತವರಾದ ‘ಜೆಕ್ ಗಣರಾಜ್ಯ’. ಯುರೋಪಿನ ಒಣ ಶೀತ ಪ್ರದೇಶದ ಎತ್ತರದ ‘ಆಲ್ಪೈನ್’ ಪರ್ವತ ಶ್ರೇಣಿಯ ಬಂಡೆಗಳಲ್ಲಿ ಬೆಳೆಯುವ ಸಸ್ಯವರ್ಗಗಳಿಂದ ಪ್ರೇರೇಪಿತವಾದ ಈ ಗಾರ್ಡನ್ ಪ್ರಕಾರ 1970ರಲ್ಲೇ ಪ್ರಚಾರದಲ್ಲಿತ್ತು.

ಕಲ್ಲು-ಮಣ್ಣಲ್ಲೂ ಜೀವ ತುಂಬುವ ನಿಸರ್ಗದ ಮಾಯೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ‘ಕ್ರಿವೈಸ್ ಗಾರ್ಡನ್’ನ ವಿಶಿಷ್ಟತೆ. ಸುಲಭವಾಗಿ ನಿರ್ಮಿಸಲು ಸಾಧ್ಯವಾದ ಈ ಪ್ರಕಾರಕ್ಕೆ ಮುಖ್ಯವಾಗಿ ಬೇಕಾಗಿರುವುದು ಚಪ್ಪಟೆ ಕಲ್ಲುಗಳು, ಮರಳು, ಜಲ್ಲಿ. ಮಣ್ಣು ಅಗೆದು, ಕಂದರ ತೋಡಿ, ವಿವಿಧ ಸ್ತರದಲ್ಲಿ ಮಣ್ಣು ದಿಬ್ಬಗಳನ್ನು ಮಾಡಿ, ಚಪ್ಪಡಿ ಕಲ್ಲನ್ನು ಮಣ್ಣಿನಲ್ಲಿ ಬಿಗಿಯಾಗಿ ಊರಿ, ಕಲ್ಲುಗಳ ನಡುವೆ ಮಣ್ಣು-ಮರಳನ್ನು ಹಿಸುಕಿ ತುಂಬಿ, ಕೃತಕವಾದ ಕಲ್ಲು ಬೆಟ್ಟವನ್ನು ಮೊದಲು ನಿರ್ಮಿಸಲಾಗುತ್ತದೆ. ನಂತರದಲ್ಲಿ ಅಂದ ಚಂದದ ವಿವಿಧ ಜಾತಿಯ ಚಿಕ್ಕ ಗಿಡಗಳನ್ನು ನೆಡಲಾಗುತ್ತದೆ.

ಕ್ರಿವೈಸ್ ಗಾರ್ಡನ್ ನಲ್ಲಿ ಗಿಡಗಳ ಆಯ್ಕೆ ಮಹತ್ವದ್ದು. ಬೆಟ್ಟಗಳಲ್ಲಿ ನೈಸರ್ಗಿಕವಾಗಿ ಬಂಡೆಗಳು ಒಂದಕ್ಕೊಂದು ತಾಗಿ ನಿಂತು ನಿರ್ಮಾಣವಾದ ಕಂದರಗಳಲ್ಲಿ ಬೆಳೆಯುವ ಗಿಡಗಳನ್ನೇ ಆರಿಸುವುದು ಒಳ್ಳೆಯದು. ಪ್ರಖರ ಬಿಸಿಲಿಗೆ ಒಗ್ಗಿಕೊಳ್ಳುವ, ನೀರಿನ ಅವಶ್ಯಕತೆ ಕಡಿಮೆ ಇರುವ, ಬೆಟ್ಟ-ಗುಡ್ಡಗಳಲ್ಲಿ ಬೆಳೆಯುವ ಕಳ್ಳಿ, ಲಿಲ್ಲಿ, ಪಾಮ್ಸ್, ಬ್ರೊಮೇಲಿಯಾ,  ಸೆಡಮ್, ಮತ್ತು ಇತರೆ ಸಕ್ಯುಲೆಂಟ್ ಗಳು ಹೆಚ್ಚು ಸೂಕ್ತ.

ಈ ಗಾರ್ಡನಿಂಗ್ ಪ್ರಕಾರ ಕೇವಲ ಯುರೋಪ್ ನಲ್ಲಲ್ಲದೇ ವಿಶ್ವದ ಎಲ್ಲ ಭಾಗಗಳಲ್ಲೂ ಪ್ರಚಲಿತವಾಗಿದೆ. ಚಳಿಗಾಲದಲ್ಲಿ ಬೆಚ್ಚಗಿರುವ, ಬೇಸಿಗೆಯಲ್ಲಿ ತಂಪನ್ನು ಕಾಪಾಡಿಕೊಳ್ಳುವ ಚಪ್ಪಡಿ ಕಲ್ಲುಗಳು, ಮಳೆಗಾಲದಲ್ಲಿ ನೀರು ಇಳಿದು ಹೋಗುವಂತೆ ಜೋಡಿಸಿಲಾಗಿರುವ ಕಾರಣ ಎಲ್ಲಾ ಕಾಲಕ್ಕೂ ಸೂಕ್ತ. ನೀರಿನ ಅಭಾವದ ಸಮಸ್ಯೆಯಿದ್ದಲ್ಲಂತು ಒಳ್ಳೆಯ ಆಯ್ಕೆ. ಕಾಳಜಿಯೂ ಸುಲಭ. ಗಾರ್ಡನ್ ನ ಒಂದು ಮೂಲೆಯಲ್ಲಿ, ಅಥವಾ ಕೇಂದ್ರ ಬಿಂದುವಾಗಿ ಇದನ್ನು ಅಳವಡಿಸಬಹುದು. ಬೋನ್ಸಾಯ್ ಟ್ರೇ ನಲ್ಲಿಯೂ ಕಲ್ಲು ಜೋಡಿಸಿ ಮಿನಿಯೇಚರ್ ಕ್ರಿವೈಸ್ ಗಾರ್ಡನ್ ಮಾಡಬಹುದು. ವರಟು ಕಲ್ಲುಗಳ ನಡುವೆ ಮುದ್ದಾದ ಪುಟ್ಟ ಸಸ್ಯವೊಂದು ನಲಿದಾಡಿದರೆ ಏನು ಚಂದ. ಕಲ್ಲರಳಿ ಹೂವಾಗಿ ಅಂದರೆ ಇದೇ ಇರಬಹುದೇನೋ!.

                                                

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ