ಹವಾಮಾನ ವೈಪರೀತ್ಯಕ್ಕೆ ಕಾಂತಾರದಲ್ಲಿ ಪರಿಹಾರ!
‘ಕಾಂತಾರ-
ಅಪರೂಪದ ಶಬ್ಧವೊಂದು ಇಂದು ಭಾಷೆ ಮೀರಿ ಬೆಳೆದಿದೆ. ಹಲವು ನಿಗೂಢವುಳ್ಳ ಅರಣ್ಯದ ಸುತ್ತ ನಡೆಯುವ ಕಥೆ
ಕಾಡು-ನಾಡು ಬೆಸೆಯುವ ಧಾರ್ಮಿಕ ಕೊಂಡಿಯ ಬಗ್ಗೆ ವಿಶೇಷ ರೀತಿಯಲ್ಲಿ ನಿರೂಪಿಸುತ್ತಾ ಹಿರಿಯ ಜನರ ಆಚರಣೆ
ನಾವಂದುಕೊಂಡಿರುವಷ್ಟು ಮೂಢವಲ್ಲ, ಬದಲಿಗೆ ಬಲವಾದ ಹಿನ್ನೆಲೆಯಿರುವ, ಆಳವಾದ ಅರ್ಥವಿರುವ, ವಿಜ್ಞಾನಕ್ಕೆ
ನಿಲುಕದ ಸಂಗತಿ ಎಂಬುದನ್ನು ತೆರೆದಿಟ್ಟಿದೆ.
ಸಿನೆಮಾ
ನೋಡಿ ತಿಂಗಳಾದರೂ ಕಾಂತಾರದ ಗುಂಗು ಬಿಟ್ಟಿಲ್ಲ. ಬಹುಶಃ ಪ್ರದರ್ಶನ ಮುಗಿದ ಮೇಲೆ ಪ್ರತಿಯೊಬ್ಬರು ತಮ್ಮೂರಿನ
ಸಂಪದ್ಭರಿತ ಸಂಸ್ಕೃತಿಯನ್ನು, ದೈವದ ನೆನಪನ್ನು ಮಾಡಿಕೊಂಡಿರಲು ಸಾಕು! ನನಗೂ ಅರೆಕ್ಷಣ ನಮ್ಮೂರಿನ
ಮಾರಿಯಮ್ಮನ ಜಾತ್ರೆ; ಬೇಡರ ವೇಷ; ವರ್ಷಕ್ಕೊಮ್ಮೆ ಕುರಿ-ಕೋಳಿ ಕೊಟ್ಟು ತೃಪ್ತಿ ಪಡಿಸುವ ಭೂತಪ್ಪ,
ಹುಲಿಯಪ್ಪ, ಚೌಡಮ್ಮ, ಬರಮ ದೇವರು, ಜಟಕಾ, ಮಾಸ್ತಿಗಳ ಪೂಜೆ; ದೇವರ ಹೆಸರಲ್ಲಿ ಕಾಪಾಡುವ ನಾಗಬನ, ದೇವರ
ಕಾಡು; ಎಲ್ಲಾ ಕಣ್ಣಮುಂದೆ ಹಾದುಹೋದವು. ಜೊತೆಗೆ ಪಶು-ಪಕ್ಷಿ, ಗಿಡ-ಮರ, ನೆಲ-ಜಲ, ಬೆಟ್ಟ-ಗುಡ್ಡ,
ಕಲ್ಲು-ಮಣ್ಣಿಗೂ ಪೂಜೆ ಮಾಡುವ ನಮ್ಮ ಸಂಸ್ಕೃತಿಯ ಮೂಲ ಉದ್ದೇಶಗಳು ಅಚ್ಚರಿಯನೆಸಿದವು.
ಅಷ್ಟಾಗಿಯೂ
ನಮ್ಮ ಪೂರ್ವಜರು ನಿಸರ್ಗ ಆರಾಧಕರಾಗಬೇಕಾದ ಅವಶ್ಯಕತೆಯೇನಿತ್ತು!? ಈ ಆಚರಣೆಗಳನ್ನು ಮುಂದಿನ ಜನಾಂಗಕ್ಕೆ
ಬಳುವಳಿ ಕೊಡುವ ಅಗತ್ಯವಾದರೂ ಏನಿತ್ತು!? ಇಂದು ಉಂಟಾಗುತ್ತಿರುವ ಹವಾಮಾನ ವೈಪರಿತ್ಯ, ಪರಿಸರ ಹಾನಿ,
ಪ್ರಕೃತಿ ವಿಕೋಪ, ಜೀವವೈವಿಧ್ಯತೆಯ ನಾಶದಂತಹ ಗಂಭೀರ ಸಮಸ್ಯೆಗಳನ್ನು ನೋಡಿದಾಗ ಈ ಆಚರಣೆಗಳ ಪ್ರಸ್ತುತತೆ
ತಿಳಿಯುತ್ತದೆ.
ಮಾನವನ ವಿಕಸನ
ನಿಸರ್ಗದ ಕೊಡುಗೆ. ಇಂದಿಗೂ ನಮ್ಮೆಲ್ಲಾ ಅಗತ್ಯಗಳನ್ನು ಪೂರೈಸುತ್ತಿರುವುದು ಇದೇ ನಿಸರ್ಗ. ನೈಸರ್ಗಿಕ
ಸಂಪನ್ಮೂಲವನ್ನೆ ಅವಲಂಬಿಸಿ ನಿಸರ್ಗದಿಂದಲೇ ಸಕಲವನ್ನೂ ಪಡೆಯುವ ನಮ್ಮ ಜೀವನ ಧನ್ಯವಾಗುವುದು ನಿಸರ್ಗಕ್ಕೆ
ಆಭಾರಿಯಾಗಿದ್ದರೆ ಮಾತ್ರ ಸಾಧ್ಯ. ಹಾಗಾಗಿ ನಮ್ಮನ್ನು ಪೊರೆಯುವ ಪ್ರಕೃತಿಗೆ ದೇವರ ಸ್ಥಾನ ನೀಡಿ ಪೂಜನೀಯ
ಭಾವದಿಂದ ನೋಡುವ ದೃಷ್ಟಿ ಬೆಳೆದು ಬಂದಿರಬಹುದು. ಇದಕ್ಕಿಂತಲೂ ಹೆಚ್ಚಾಗಿ ಹೊಟ್ಟೆಪಾಡಿಗಾಗಿ ನಡೆಸಿದ
ತೀವ್ರ ಪ್ರಮಾಣದ ಬೇಟೆಯಿಂದಾಗಿ ಕ್ಷೀಣಿಸಿದ ಪ್ರಾಣಿ ಸಂತತಿ ಮತ್ತು ವ್ಯಾಪಕ ಕೃಷಿಯಿಂದಾದ ಅರಣ್ಯ ನಾಶದ
ಅಡ್ಡ ಪರಿಣಾಮಗಳನ್ನು ಮನಗೊಂಡ ನಮ್ಮ ಪೂರ್ವಜರು ನಿಸರ್ಗಕ್ಕೆ ದೈವದ ನಂಟನ್ನು ಅಂಟಿಸಿರಲು ಸಾಕು. ಇದರಿಂದ
ಇಂದಿಗೂ ಗ್ರಾಮೀಣ ಭಾಗದಲ್ಲಿ ನಿಸರ್ಗದ ದುರುಪಯೋಗವೆಂದರೆ ದೇವರು, ಧರ್ಮಕ್ಕೆ ಮಾಡುವ ಅಪಚಾರ ಎಂಬ ಭಕ್ತಿ-ಭಾವ
ಹುಟ್ಟಿರಬಹುದು ಮತ್ತು ಅಕ್ಷರತೆಯ ಹೆಸರಲ್ಲಿ ಈ ನಂಬಿಕೆಗಳ ಸೂಕ್ಷ್ಮತೆಗಳನ್ನು ನಾವು ಕಳೆದುಕೊಂಡಿರಲೂಬಹುದು.
ಹೀಗೆ ನಿಸರ್ಗ-ದೈವ-ಮಾನವನ ಅದ್ಭುತ ಸಾಮರಸ್ಯ ನಿಜಕ್ಕೂ ಒಂದು ದಂತಕಥೆಯೇ ಸರಿ!.
ಗ್ರಾಮೀಣ
ಭಾಗದಲ್ಲಿ ಶಾಲೆ ಕಾಲೇಜುಗಳಲ್ಲಿ ಕಲಿಸಲಾಗದ ಜೀವನ ಮೌಲ್ಯಗಳನ್ನು ಧರ್ಮ-ದೇವರು ಮಠ-ಮಂದಿರಗಳು ಕಲಿಸುತ್ತವೆ.
ಪರಿಸರ ಜಾಗೃತಿ ಮೂಡಿಸುವಲ್ಲಿ ಧಾರ್ಮಿಕ ಆಚರಣೆಗಳು ಮಹತ್ವದ ಪಾತ್ರ ವಹಿಸುತ್ತವೆ. ಹೀಗೆ ಸಾರ್ವಜನಿಕರ
ಧಾರ್ಮಿಕ ಭಾವನೆಗಳಿಗೆ ಸ್ಪಂದಿಸುತ್ತಾ ಅವರೊಟ್ಟಿಗೆ ಸಕಾರ ಕೆಲಸ ಮಾಡುವ ‘ಸೋಶಿಯಲ್ ಫಾರೆಸ್ಟ್ರಿ’
ಪರಿಕಲ್ಪನೆಗಳು ನಮ್ಮ ಪಶ್ಚಿಮ ಘಟ್ಟಗಳಲ್ಲಿ ಪ್ರಚಲಿತದಲ್ಲಿವೆ. ಧಾರ್ಮಿಕ ನೆಲಗಟ್ಟಿನಲ್ಲೂ ವಿಶೇಷ
ರೀತಿಯ ಬದಲಾವಣೆಗಳಿಗೆ ನಾವು ಸಾಕ್ಷಿಯಾಗಿದ್ದೇವೆ. ಹಸಿರು ಸ್ವಾಮೀಜಿಯೆಂದೆ ಪ್ರಸಿದ್ಧವಾದ ಸ್ವಣವಲ್ಲೀ
ಶ್ರೀಗಳೊಟ್ಟಿಗೆ ನಮ್ಮಂತಹ ಶಿಷ್ಯ ವರ್ಗ ನೆಲ ಜಲದ ಉಳಿವಿಗಾಗಿ ಕೈಜೋಡಿಸಿದ ಹೋರಾಟ ಇದಕ್ಕೆ ಮಾದರಿ.
ಚಿಕ್ಕ ಬದಲಾವಣೆಗಳಿಂದ ಮಾತ್ರ ದೊಡ್ಡ ಮಟ್ಟದ ಪರಿಣಾಮಗಳನ್ನು ಕಾಣಬಹುದು. ನಮ್ಮೂರಿನ ಕಾಡುಗಳನ್ನು
ಸಂರಕ್ಷಿಸಿದರೆ ಮಾತ್ರ ಬಹುಶಃ COP-27 (ನವೆಂಬರ್ 6 ರಿಂದ 20 ರ ವರೆಗೆ ಈಜಿಪ್ಟ್ ನಲ್ಲಿ ನಡೆದ ಹವಾಮಾನ
ಬದಲಾವಣೆ ಕುರಿತಾದ ಜಾಗತಿಕ ಸಮ್ಮೇಳನ) ಅಂತಹ ಸಂಘಟನೆಗೆ ಶಕ್ತಿ ತುಂಬಬಹುದು.

Comments
Post a Comment