ಕ್ರಿವೈಸ್ ಗಾರ್ಡನಿಂಗ್
ಅದೊಂದು ಮಹಾನಗರಿ; ಕಾಂಕ್ರೀಟ್ ಕಾಲುದಾರಿ-ಡಾಂಬರು ರಸ್ತೆ; ಮಣ್ಣಿನ ಕುರುಹೂ ಇರದ ಕಲ್ಲು ಹಾದಿಯ ಸಂದಿಯಲ್ಲೊಂದು ಕಳೆ ಗಿಡ; ಚಿಕ್ಕ ಹಳದಿ ಹೂ ಬಿಟ್ಟು ಯಾರ ಕಾಲ ತುಳಿತಕ್ಕೆ ಸಾಯುವೆನೋ ಎಂದು ಎದುರು ನೋಡುತ್ತಿರುತ್ತದೆ. ಪೇಟೆಯ ಹಳೆಯ ಮಣ್ಣಿನ ಗೋಡೆಯ ಮನೆಯ ಬಿರುಕಿನಲ್ಲಿ ಅಶ್ವತ್ಥಗಿಡವೊಂದು ಎರಡೆಲೆ ಬಿಟ್ಟು ಇಣುಕುತ್ತಿರುತ್ತದೆ. ಇವುಗಳನ್ನು ನೆಟ್ಟವರಾರೋ, ನೀರೆರದವರಾರೋ, ಸಾಕಿ ಸಲಹುವರಾರೋ! ಯಾರ ಹಂಗಿಲ್ಲದೆ ಬೆಳೆಯುತ್ತಾ ಸಾಗುವ ಸಂದು-ಗೊಂದಿನ ಈ ಜೀವನ ಇಂದು ‘ಕ್ರಿವೈಸ್ ಗಾರ್ಡನ್’ಎಂಬ ಸುಂದರ ಪ್ರಕಾರಕ್ಕೆ ಪ್ರೇರೇಪಣೆಯಾಗಿದೆ. ಈ ಗಾರ್ಡನಿಂಗ್ ಕಲೆಯನ್ನು ಜನಪ್ರಿಯಗೊಳಿಸಿದ್ದು ಪ್ರಸಿದ್ಧ ‘ಬೊಹೇಮಿಯಾ’ ಶೈಲಿಗೆ ತವರಾದ ‘ಜೆಕ್ ಗಣರಾಜ್ಯ’. ಯುರೋಪಿನ ಒಣ ಶೀತ ಪ್ರದೇಶದ ಎತ್ತರದ ‘ಆಲ್ಪೈನ್’ ಪರ್ವತ ಶ್ರೇಣಿಯ ಬಂಡೆಗಳಲ್ಲಿ ಬೆಳೆಯುವ ಸಸ್ಯವರ್ಗಗಳಿಂದ ಪ್ರೇರೇಪಿತವಾದ ಈ ಗಾರ್ಡನ್ ಪ್ರಕಾರ 1970ರಲ್ಲೇ ಪ್ರಚಾರದಲ್ಲಿತ್ತು. ಕಲ್ಲು-ಮಣ್ಣಲ್ಲೂ ಜೀವ ತುಂಬುವ ನಿಸರ್ಗದ ಮಾಯೆಯನ್ನು ಕೃತಕವಾಗಿ ಮರುಸೃಷ್ಟಿಸುವುದು ‘ಕ್ರಿವೈಸ್ ಗಾರ್ಡನ್’ನ ವಿಶಿಷ್ಟತೆ. ಸುಲಭವಾಗಿ ನಿರ್ಮಿಸಲು ಸಾಧ್ಯವಾದ ಈ ಪ್ರಕಾರಕ್ಕೆ ಮುಖ್ಯವಾಗಿ ಬೇಕಾಗಿರುವುದು ಚಪ್ಪಟೆ ಕಲ್ಲುಗಳು, ಮರಳು, ಜಲ್ಲಿ. ಮಣ್ಣು ಅಗೆದು, ಕಂದರ ತೋಡಿ, ವಿವಿಧ ಸ್ತರದಲ್ಲಿ ಮಣ್ಣು ದಿಬ್ಬಗಳನ್ನು ಮಾಡಿ, ಚಪ್ಪಡಿ ಕಲ್ಲನ್ನು ಮಣ್ಣಿನಲ್ಲಿ ಬಿಗಿಯಾಗಿ ಊರಿ, ಕಲ್ಲುಗಳ ನಡುವೆ ಮಣ್ಣು-ಮರಳನ್ನು ಹಿ...