ಕುಲಾಂತರಿಗಳು

 


ಸೆಪ್ಟೆಂಬರ್ ತಿಂಗಳಿನ ಶುರುವಿನಲ್ಲಿ ಅಮೇರಿಕಾ ಹೊಸದೊಂದು ಕುಲಾಂತರಿ ತಳಿಯ ಟೊಮೇಟೊವನ್ನು ಬಳಕೆಗೆ ಅನುಮೋದಿಸುವುದರ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಭಾರತವೂ ಕೆಲ ದಿನಗಳ ಹಿಂದಷ್ಟೇ ಸ್ವದೇಶಿ ಕುಲಾಂತರಿ ಸಾಸಿವೆಯನ್ನು ಅನುಮೋದಿಸಿ ಬೆಳೆಯಲು ಅನುಮತಿ ನೀಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಬಹುಶಃ ಮುಂದಿನ ವರ್ಷದಿಂದ ಅಮೇರಿಕಾದ ಅಂಗಡಿಗಳಲ್ಲಿ ಈ ನೇರಳೆ ಟೊಮೇಟೊ ಖರೀದಿಗೆ ಲಭ್ಯವಿರುತ್ತದೆ, ಮತ್ತು ಭಾರತದಲ್ಲಿ ರೈತ ವರ್ಗಕ್ಕೆ ಧಾರಾ ಸಾಸಿವೆ ಪರಿಚಯಾವಾಗಿರುತ್ತದೆ. ಆದರೆ ಎಂದಿನಂತೆ ಸಾಮಾಜಿಕ ವಲಯದಲ್ಲಿ ಕುಲಾಂತರಿಗೆ ವಿರೋಧ ಶುರುವಾಗಿದೆ.

ಸ್ವಾಭಾವಿಕವಾಗಿ ಹರಿದುಬಂದ ಜೀನ್ ಗಳಲ್ಲಿ ಕೃತಕವಾಗಿ ಬದಲಾವಣೆ ತರುವ ‘ಜೆನೇಟಿಕ್ ಎಂಜಿನಿಯರಿಂಗ್’ ತಂತ್ರಜ್ಞಾನದ ಮೂಲಕ ಬೇರೊಂದು ಜೀವಿಯ ಜೀನ್ ಗಳನ್ನು ಅಳವಡಿಸಿದ ಸಸ್ಯಗಳನ್ನು ಕುಲಾಂತರಿ ಬೆಳೆಗಳೆಂದು ಕರೆಯಲಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ನಮಗೆ ಬೇಕಾದ ಗುಣಲಕ್ಷಣಗಳನ್ನು ಆರಿಸುತ್ತಾ ಸಾಂಪ್ರದಾಯಿಕವಾಗಿ ತಳಿ ಅಭಿವೃದ್ದಿ ಮಾಡಲು  ಬೇಕಾಗಿರುವುದು ಕನಿಷ್ಟ 15-20 ವರ್ಷಗಳ ಪರಿಶ್ರಮ. ಈ ಅವಧಿಯನ್ನು ಕಡಿತಗೊಳಿಸಲು ವಿಜ್ಞಾನಿಗಳು ಕಂಡುಕೊಂಡ ಪರ್ಯಾಯ ಹಾದಿ ಜೀನ್ ಎಂಜಿನಿಯರಿಂಗ್. ಈ ವಿಧಾನದಿಂದ ಹೊಸ ತಳಿಯೊಂದನ್ನು ಪಡೆಯಲು ಬೇಕಾಗಿರುವುದು ಐದಾರು ವರ್ಷಗಳಾದರೂ ಅಡೆತಡೆ ದಾಟಿ ಅವು ರಂಗಕ್ಕೆ ಇಳಿಯಬೇಕಾದರೆ ಇಪ್ಪತ್ತು-ಮೂವತ್ತು ವಷ ಬೇಕಾಗುವುದು ವಾಸ್ತವ.

ಕುಲಾಂತರಿಗಳು ಏಕೆ?

ವಿಶ್ವದಲ್ಲೆಡೆ ಕೃಷಿ ಭೂಮಿ ಇಳಿಕೆಯಾಗುತ್ತಿದೆ. ಏರುತ್ತಿರುವ ಜನಸಂಖ್ಯೆಯಿಂದಾಗಿ ಆಹಾರ ಉತ್ಪಾದನೆ-ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಇರುವಷ್ಟೇ ಜಾಗದಲ್ಲಿ ಹೆಚ್ಚಿನ ಇಳುವರಿ ಪಡೆಯುವುದು ಮುಖ್ಯವಾಗಿದೆ. ಆದರೆ ಕೀಟ-ರೋಗಗಳ ಭಾದೆ, ಹವಾಮಾನ ಬದಲಾವಣೆಯಂತಹ ಸಮಸ್ಯೆಗಳು ಕೃಷಿಯನ್ನು ಹೈರಾಣಾಗಿಸಿವೆ. ಹಾಗಾಗಿ ಕೃಷಿ ಉತ್ತಮಗೊಳಿಸುವ ದೃಷ್ಟಿಯಿಂದ, ಕೀಟ-ರೋಗ ನಿರೋಧಕ, ಕಳೆನಾಶಕ ನಿರೋಧಕ ಕುಲಾಂತರಿಗಳನ್ನು ವಿಶ್ವದಾದ್ಯಂತ ಬೆಳೆಯಲಾಗುತ್ತಿದೆ. ಇವುಗಳಲ್ಲಿ ಪ್ರಮುಖವಾದದ್ದು ಕಳೆನಾಶಕ ನಿರೋಧಕ ಸೋಯಾಬೀನ್ ಮತ್ತು ಮೆಕ್ಕೆಜೋಳ, ಕಾಯಿಕೊರಕ ನಿರೋಧಕ ಹತ್ತಿ ಮತ್ತು ಅಧಿಕ ಎಣ್ಣೆಯಂಶವುಳ್ಳ ಕೆನೋಲಾ. ಆಹಾರದ ಪೌಷ್ಟಿಕತೆ ವೃದ್ಧಿಸುವ ಸಲುವಾಗಿ, ಗ್ರಾಹಕರಿಗೆ ಉಪಯೋಗವಾಗುವ ದೃಷ್ಟಿಯಲ್ಲಿ ರೂಪಿಸಿದ ಕುಲಾಂತರಿಗಳು ಅಪರೂಪ. ಅಂತವುಗಳಲ್ಲಿ ವಿಟಮಿನ್ ಎ ಅಧಿಕ ಪ್ರಮಾಣದಲ್ಲಿರುವ ‘ಗೋಲ್ಡನ್ ರೈಸ್’ ಮಾತ್ರ ಸಾಗುವಳಿಯಲ್ಲಿದೆ.

ಕಳೆದೆರಡು ವರ್ಷದಲ್ಲಿ 26 ದೇಶಗಳು 190ಮಿಲಿಯಹೆಕ್ಟೇರ್ ಜಾಗದಲ್ಲಿ ವಿವಿಧ ಕುಲಾಂತರಿ ಬೆಳೆಗಳನ್ನು ಬೆಳೆಯುತ್ತಿವೆ. ತೀರಾ ಇತ್ತೀಚೆಗೆ ಕೀನ್ಯಾ ದೇಶವು ಕುಲಾಂತರಿಗಳ ಮೇಲಿನ ನಿಷೇಧವನ್ನು ಹಿಂಪಡೆದಿದೆ, ಬಾಂಗ್ಲಾ-ಫಿಲಿಫೈನ್ಸ್ ಗಳು ಗೋಲ್ಡನ್ ರೈಸ್ ಬೆಳೆಯನ್ನು ಸ್ವಾಗತಿಸಿವೆ, ಇಥಿಯೋಪಿಯಾ ಕುಲಾಂತರಿ ಬಟಾಟೆಯ ಕ್ಷೇತ್ರ ಪ್ರಯೋಗಗಳಿಗೆ ಅಸ್ತು ಎಂದಿದೆ. ಈ ಸುದ್ದಿ ಓದುವ ಹೊತ್ತಿನಲ್ಲಿ ಬಹುಶಃ ಆಹಾರ ಕೊರತೆ, ಅಪೌಷ್ಟಿಕತೆ ಸಮಸ್ಯೆ, ಕೃಷಿ ಉತ್ಪನ್ನಗಳ ಬೆಲೆ ಏರಿಕೆ ಮುಂತಾದ ಸಮಸ್ಯೆ ಎದುರಿಸುತ್ತಿರುವ ಹಲವಾರು ದೇಶಗಳು ಕುಲಾಂತರಿಗಳನ್ನು ಸ್ವಾಗತಿಸಿರುತ್ತವೆ.

ನೇರಳೆ ಟೊಮೇಟೊ

ನೀಲಿ ಹೂಗಳು, ಬ್ಲೂ ಬೆರಿ, ಕಪ್ಪು ದ್ರಾಕ್ಷಿ, ಬದನೆಕಾಯಿಗಳಲ್ಲಿ ನೇರಳೆ ಬಣ್ಣವನ್ನು ಉಂಟುಮಾಡುವುದು ‘ಆ್ಯಂಥೋಸೈನಿನ್’ ಎಂಬ ಹರಿತ್ತು. ಸ್ನಾಪ್ ಡ್ರಾಗನ್ ಹೂಗಳಿಂದ ಪಡೆದ ಆ್ಯಂಥೋಸೈನಿನ್ ಹರಿತ್ತನ್ನು ವ್ಯಕ್ತಪಡಿಸುವ ಜೀನ್ ಅನ್ನು ಕೆಂಪು ಟೊಮೇಟೊದಲ್ಲಿ ಅಳವಡಿಸುವುದರ ಮೂಲಕ ನೇರಳೆ ಟೊಮೇಟೊವನ್ನು ಅಭಿವೃದ್ಧಿ ಪಡಿಸಿದ್ದು ಬ್ರಿಟೀಷ್ ವಿಜ್ಞಾನಿ ಪ್ರೊ.ಕ್ಯಾಥೀ ಮಾರ್ಟಿನ್ ಸಂಗಡಿಗರು. 2009ರಲ್ಲಿಯೇ ಬಿಡುಗಡೆಯಾಗಬೇಕಿದ್ದ ನೇರಳೆ ಟೊಮೇಟೊ, ಕುಲಾಂತರಿಗಳಿಗೆ ಮಣೆ ಹಾಕದ ಯುರೋಪ್ ನಲ್ಲಿ ನಪಾಸಾಯಿತು, ಅಷ್ಟಾಗಿ ಕಠಿಣ ಕಾನೂನಿರದ ಅಮೇರಿಕಾದಲ್ಲಿ ಪಾಸಾಯಿತು. ದಿನಬಳಕೆಯ ಟೊಮೇಟೊ ಹೀಗೆ ಆ್ಯಂಟಿ ಆಕ್ಸಿಡೆಂಟ್ಸ್ ಗಳ ಆಗರವಾಗಿ ಆರೋಗ್ಯ ಸುಧಾರಿಸುವ ಮಹತ್ವದ ಅಂಶವಾಗುತ್ತದೆ ಎಂಬ ಆಕಾಂಕ್ಷೆ ಪ್ರೊ. ಮಾರ್ಟಿನ್ ಅವರದ್ದು.

ಧಾರಾ ಸಾಸಿವೆ

2002ರಲ್ಲಿ ಮೊನ್ಸೆಂಟೋ ಕಂಪನಿ ಭಾರತ ಸರ್ಕಾರದ ಒಪ್ಪಿಗೆ ಮೇರೆಗೆ ಬಿಡುಗಡೆಗೊಳಿಸಿದ ಕಾಯಿಕೊರಕ ನಿರೋಧಕ Btಹತ್ತಿ ಕೀಟನಾಶಕಗಳ ಬಳಕೆಯನ್ನು ತೀವ್ರವಾಗಿ ಕಡಿತಗೊಳಿಸಿತ್ತು. ಕೀಟ ಭಾದೆಯಿಂದ ಬೆಳೆ ಹಾನಿಯ ದಾರಿಯಲ್ಲಿದ್ದ ಭಾರತ ಕೆಲವೇ ವರ್ಷಗಳಲ್ಲಿ ಹತ್ತಿ ಉತ್ಪಾದನೆಯ ದೈತ್ಯನಾಗಿ ಹೊರಹೊಮ್ಮಿತು. ಇಂದಿಗೂ ಭಾರತದಲ್ಲಿ ಹತ್ತಿ ಬೆಳೆಯುವ 95% ಭಾಗ ಕುಲಾಂತರಿಯ ಕೊಡುಗೆ. ಬಿ.ಟಿ. ಹತ್ತಿ ಬಿಡುಗಡೆಯ ಎರಡು ದಶಕಗಳ ನಂತರ ಮತ್ತೆ ಕುಲಾಂತರಿಯೊಂದು ಭಾರತದ ಕೃಷಿ ಅಂಗಳವನ್ನು ಪ್ರವೇಶಿಸುತ್ತಿದೆ.

ಈ ಕುಲಾಂತರಿ ಸಂಕರಣ ತಳಿ ‘ಧಾರಾ ಮಸ್ಟ ರ್ಡ್ ಹೈಬ್ರೀಡ್-11’ ಅನ್ನು 2002ರಲ್ಲೇ ಅಭಿವೃದ್ಧಿ ಪಡಿಸಿದ್ದು ದೆಹಲಿ ವಿಶ್ವವಿದ್ಯಾಲಯದ ಡಾ.ದೀಪಕ್ ಪೆಂಟಾಲ್ ಮತ್ತು ಸಹೋದ್ಯೋಗಿಗಳು. ಭಾರತದಲ್ಲಿ ಕುಲಾಂತರಿಗಳ ಬಳಕೆ ನಿಯಂತ್ರಿಸುವ ‘ಜೆನೇಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮೀಟಿ’ 2017ರಲ್ಲೇ ಕುಲಾಂತರಿ ಸಾಸಿವೆಯನ್ನು ಅನುಮೋದಿಸಿತ್ತು. ಆದರೆ ಪರಿಸರ ಸಚಿವಾಲಯ ಸಾರ್ವಜನಿಕ ವಿರೋಧದ ಹಿನ್ನೆಲೆ ಯೋಜನೆಯನ್ನು ಮುಂದೂಡಿತ್ತು.

ಭಾರತ ಕಳೆದ ವರ್ಷ ಖಾದ್ಯ ತೈಲ ಆಮದು ಮಾಡಲು ಭರಿಸಿದ ವೆಚ್ಚ ಒಂದು ಲಕ್ಷ ಕೋಟಿ. ನಾವು ಬಳಸುತ್ತಿರುವ 60% ಖಾದ್ಯ ತೈಲ ಕೆನಡಾ, ಅಮೇರಿಕಾಗಳಿಂದ ಪೂರೈಕೆಯಾದ ಕುಲಾಂತರಿಗಳದ್ದೇ ಆಗಿವೆ!. ಭಾರತದಲ್ಲಿ ಸಾಸಿವೆಯ ಇಳುವರಿಯೂ ತೀವ್ರವಾಗಿ ಕುಂಠಿತವಾಗಿದೆ. ಹಾಗಾಗಿ ಹೆಚ್ಚು ಇಳುವರಿಯ ಬೆಳೆ ಉತ್ಪಾದನೆ ದೃಷ್ಟಿಯಿಂದ ಭಾರತ ಸ್ವತಃ ರೂಪಿಸಿದ ಕುಲಾಂತರಿ ಸಾಸಿವೆ ಸಂಕರಣ ತಳಿಗೆ ಇಂದು ಬಿಡುಗಡೆಯ ಯೋಗ ಬಂದಿದೆ. ಆದಾಗ್ಯೂ ಇದು ನಾಲ್ಕು ವರ್ಷಗಳ ಅವಧಿಗೆ ಬಾಹ್ಯ ಪರಿಸರದಲ್ಲಿ ಕ್ಷೇತ್ರ ಪ್ರಯೋಗಗಳಿಗೆ ನೀಡಿದ ಒಪ್ಪಿಗೆ. ನಂತರ ಜೇನು ಹುಳು ಹಾಗೂ ಪರಿಸರದ ಮೇಲೆ ಬೀರುವ ಪರಿಣಾಮ ಅಭ್ಯಸಿಸಿ ವಾಣಿಜ್ಯ ಬೆಳೆಗೆ ಅನುಮತಿ ನೀಡಲಾಗುವುದು.

ಮುಗಿಯದ ವಾದ-ವಿವಾದ

ಒಂದೆಡೆ ಆಹಾರ ಸಮಸ್ಯೆಗಳಿಗೆ ಕುಲಾಂತರಿಗಳ ಮೂಲಕ ವೈಜ್ಞಾನಿಕವಾಗಿ ಉತ್ತರ ಹುಡುಕುವತ್ತ ವಿಜ್ಞಾನಿಗಳು; ಇನ್ನೊಂದೆಡೆ ಕುಲಾಂತರಿಗಳು ಆರೋಗ್ಯಕ್ಕೆ ಮಾರಕ, ಬೆಳೆಯ ವೈವಿಧ್ಯತೆಗೆ ಕಂಟಕ, ನಿಸರ್ಗಕ್ಕೆ ಆಪತ್ತು ಎಂಬ ಪರಿಸರವಾದಿಗಳು. ಹೊಸದೊಂದು ತಂತ್ರಜ್ಞಾನವನ್ನು ಒಪ್ಪಿಕೊಳ್ಳುವುದು ಸುಲಭವಲ್ಲ. ಹೊಸ ತಂತ್ರಜ್ಞಾನದ ಬಳಕೆಯ ಒಳಿತು-ಕೆಡುಕುಗಳು ಬಳಸದೇ ತಿಳಿಯುವುದಿಲ್ಲ. ಬಹುಶಃ ಕುಲಾಂತರಿಗಳು ಇದೇ ಅಂತ್ಯವಿಲ್ಲದ ತಕಕ್ಕೆ ತೆರೆದುಕೊಂಡಿವೆ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ