ಕುಲಾಂತರಿ ಸಾಸಿವೆ

ಭಾರತ ಸರ್ಕಾರದ ಪರಿಸರ ಸಚಿವಾಲಯ (Ministry of Environment, Forest and Climate Change) ‘ಸ್ವದೇಶೀ ಕುಲಾಂತರಿ ಸಾಸಿವೆಯ ಸಂಕರಣ ತಳಿ’ಯನ್ನು ಬೆಳೆಯಲು ಅನುಮತಿ ನೀಡುವುದರೊಂದಿಗೆ ದೇಶದಲ್ಲಿ ಕುಲಾಂತರಿಗಳ ಹೊಸ ಪರ್ವವೊಂದಕ್ಕೆ ಮುನ್ನುಡಿ ಬರೆದಿದೆ. ‘ಜೆನೇಟಿಕ್ ಎಂಜಿನಿಯರಿಂಗ್ ಅಪ್ರೈಸಲ್ ಕಮಿಟಿಯ (GEAC) ಶಿಫಾರಸ್ಸಿನ ನಂತರ ನಿರ್ಬಂಧಿತ ಪ್ರದೇಶದಲ್ಲಷ್ಟೇ ಕ್ಷೇತ್ರ ಪ್ರಯೋಗಗಳ ಅಡಿಯಲ್ಲಿದ್ದ ‘ಧಾರಾ ಮಸ್ಟರ್ಡ್ ಹೈಬ್ರೀಡ್-11’ (DMH-11) ಹೆಸರಿನ ತಳಿಯನ್ನು ಬಾಹ್ಯ ಪರಿಸರಕ್ಕೆ ಬಿಡುಗೊಡೆಗೊಳಿಸುವ (environmental release) ಕಾರ್ಯಕ್ಕೆ ಸಚಿವಾಲಯ ಅಸ್ತು ಎಂದಿದೆ. ಸಾಧಕ-ಭಾದಕಗಳ ಅಧ್ಯಯನದ ನಂತರ ವಾಣಿಜ್ಯ ಬೆಳೆಯಾಗಿ ಕುಲಾಂತರಿ ಸಾಸಿವೆ ರೈತರ ಕೈ ಸೇರಿ ಕೃಷಿ ಅಂಗಳಕ್ಕಿಳಿಯಲು ಸಿದ್ಧವಾದರೆ ಬಿ.ಟಿ ಹತ್ತಿಯ ನಂತರ ಭಾರತ ಅಂಗೀಕರಿಸಿದ ಎರಡನೇ ಕುಲಾಂತರಿಯಾಗಿ ಹಾಗೂ ಆಹಾರ ಪದಾರ್ಥವಾಗಿ ಬಳಕೆಯಾಗುವ ಮೊಟ್ಟಮೊದಲ ಕುಲಾಂತರಿ ಬೆಳೆಯಾಗಿ ಹೊಮ್ಮಲಿದೆ. ಆಗಾಗ ಸುದ್ದಿ ಮಾಡುತ್ತಾ ಚರ್ಚೆಯಲ್ಲಿದ್ದ ಕುಲಾಂತರಿ ಸಾಸಿವೆ ಬಳಕೆಯ ವಿಷಯ ಇನ್ನೆರಡೇ ವರ್ಷದಲ್ಲಿ ಬಹುತೇಕ ಇತ್ಯರ್ಥವಾಗುವ ಸಾಧ್ಯತೆಯಿದೆ. ಬಿ.ಟಿ ಹತ್ತಿ ಸುದೀರ್ಘ ಎರಡು ದಶಕಗಳ ತರುವಾಯ ನಮ್ಮ ನೆಲ ಮತ್ತೆ ಕುಲಾಂತರಿಯನ್ನು ಅಪ್ಪುವಂತೆ ಭಾಸವಾಗುತ್ತಿದೆ.

ಕುಲಾಂತರಿ ಬೆಳೆಗಳು

‘ಜೆನೇಟಿಕ್ ಎಂಜಿನಿಯರಿಂಗ್’ ಎಂಬ ತಂತ್ರಜ್ಞಾನದ ವಿಧಾನದಿಂದ ಸಸ್ಯಗಳಲ್ಲಿ ಬೇರೆ ಜೀವಿಯಿಂದ (ಇತರೇ ಜಾತಿ ಸಸ್ಯಗಳು, ಬ್ಯಾಕ್ಟೀರಿಯಾ ಮುಂತಾದವುಗಳಿಂದ ) ಎರವಲು ಪಡೆದ ಅನುವಂಶಿಕ ಧಾತು ಅಥವಾ ಜೀನ್ ಅನ್ನು ಸೇರ್ಪಡೆ ಮಾಡಲು ಸಾಧ್ಯವಿದೆ. ಸಾಮಾನ್ಯವಾಗಿ ವಾಣಿಜ್ಯವಾಗಿ ಬೆಳೆಯುವ ತರಕಾರಿ-ಧಾನ್ಯದ ಬೆಳೆಗಳಲ್ಲಿ ಹವಾಮಾನ ಬದಲಾವಣೆಗೆ ಪ್ರತಿರೋಧ ಒಡ್ಡಲು, ಕೀಟ ರೋಗ ಕಳೆನಾಶಕಗಳ ನಿರೋಧಕತೆ, ಪೋಷಕಾಂಶಗಳ ಪುಷ್ಟೀಕರಣದಂತಹ ಉಪಯುಕ್ತಕಾರಿ ಗುಣಗಳನ್ನು ವರ್ಧಿಸಲು ಈ ವಿಧಾನವನ್ನು ಅನುಸರಿಸಲಾಗುತ್ತದೆ. ಹೀಗೆ ಪ್ರಯೋಗಾಲಯಗಳಲ್ಲಿ ಅತ್ಯಂತ ಮುತುವರ್ಜಿಯಿಂದ ಸುರಕ್ಷಿತವಾಗಿ ನಡೆಯುವ ಜೀನ್ ಎಂಜಿನಿರಿಂಗ್ ಮೂಲಕ ಅಭಿವೃದ್ಧಿ ಪಡಿಸಲಾದ ಬೆಳೆಗಳಿಗೆ Genetically Modified Crops ಅಥವಾ ಕುಲಾಂತರಿಗಳು ಎಂದು ಕರೆಯಲಾಗುತ್ತದೆ. ಪ್ರಥಮ ಕುಲಾಂತರಿ ಅಮೇರಿಕಾದಲ್ಲಿ 1994ರಲ್ಲಿ ಬಿಡುಗಡೆಯಾದ ಫ್ಲೇವರ್ ಸೇವರ್ ಟೊಮೇಟೋ.

ವಿಶ್ವದಲ್ಲಿ ಕುಲಾಂತರಿ ಬೆಳೆಗಳ ಸ್ಥಿತಿ ಗತಿ

ವಿಶ್ವದಲ್ಲಿ ಕುಲಾಂತರಿಗಳನ್ನು ಬಳಸುವ ಬಗ್ಗೆ ಪ್ರತಿ ದೇಶದ್ದೂ ತನ್ನದೇ ಆದ ಕಾನೂನಿದೆ. ಕುಲಾಂತರಿಗಳನ್ನು ವ್ಯಾಖ್ಯಾನಿಸುವ ಬಗ್ಗೆ ದ್ವಂದ್ವಗಳಿವೆ. ಈ ಎಲ್ಲಾ ಗೊಂದಲಗಳ ಮಧ್ಯೆ ಸದ್ಯಕ್ಕೆ ಭಾರತವೂ ಒಳಗೊಂಡಂತೆ ಪ್ರಮುಖವಾಗಿ 26 ದೇಶಗಳು 190ಮಿಲಿಯ ಹೆಕ್ಟೇರ್ ಪ್ರದೇಶ (ಕರ್ನಾಟಕದ ಹತ್ತು ಪಟ್ಟಿನಷ್ಟು ದೊಡ್ಡದಾದ ಜಾಗ)ದಲ್ಲಿ ಕುಲಾಂತರಿಗಳನ್ನು ಬೆಳೆಯುತ್ತಿವೆ. ಹೆಚ್ಚಿನ ಪಾಲು (50%) ಕುಲಾಂತರಿ ಸೋಯಾಬೀನ್ ಬೆಳೆಯದ್ದು. ಉಳಿದದ್ದು ಮೆಕ್ಕೆಜೋಳ, ಹತ್ತಿ, ಕೆನೋಲಾ, ಮತ್ತು ಸಣ್ಣಪ್ರಮಾಣದಲ್ಲಿ ಅಲ್ಲಲ್ಲಿ ಭತ್ತ, ಸಮ್ಮರ್ ಸ್ಕ್ವಾಷ್, ಬಟಾಟೆ, ಬೀಟ್ರೂಟ್, ಪಪ್ಪಾಯಾ ಬೆಳೆಗಳದ್ದು. ಅಭಿವೃದ್ಧಿ ಹೊಂದಿದ ದೇಶಗಳ ಪೈಕಿ ಕುಲಾಂತರಿ ಬೆಳೆಯುವಲ್ಲಿಯೂ ವಿಶ್ವದ ದೊಡ್ಡಣ್ಣ ಅಮೇರಿಕಾ. ನಂತರದ ಸ್ಥಾನ ಕೆನಡಾ, ಆಸ್ಟ್ರೇಲಿಯಾ, ಸ್ಪೇನ್ ದೇಶಗಳದ್ದು. ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಪೈಕಿ ಬ್ರೇಜಿಲ್, ಅರ್ಜೆಂಟೀನಾಗಳ ನಂತರದ ಸ್ಥಾನ ಭಾರತದ್ದು. ಆಫ್ರಿಕಾದಲ್ಲೂ ತಕ್ಕ ಮಟ್ಟಿಗೆ ಬೆಳೆಯಲಾಗುತ್ತಿದೆ. ರಷ್ಯ ಮತ್ತು ಯುರೋಪ್ (ಸ್ಪೇನ್, ಪೋಚುಗಲ್ ಹೊರತುಪಡಿಸಿ) ಇಲ್ಲಿಯ ವರೆಗೆ ಯಾವುದೇ ಕುಲಾಂತರಿಗಳ ಬೆಳೆಗೆಳಿಗೆ ಪರವಾನಗಿ ನೀಡಿಲ್ಲ.

ಭಾರತದಲ್ಲಿ ಕುಲಾಂತರಿಗಳು

2002ರಲ್ಲಿ ಕುಲಾಂತರಿ ಬಿ.ಟಿ ಹತ್ತಿಗೆ ಸರ್ಕಾರ ಒಪ್ಪಿಗೆ ನೀಡಿದ್ದು ಈಗ ಇತಿಹಾಸ. ಹಿಂದೊಮ್ಮೆ ಹತ್ತಿ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದ ಭಾರತ ಹಣ್ಣುಕೊರಕ ಹುಳದ ಬಾಧೆಗೆ ತುತ್ತಾಗಿ ನಷ್ಟದ ಹಾದಿ ಹಿಡಿದಿತ್ತು. ಈ ಸಮಸ್ಯೆ ನಿವಾರಣೆಗೆ Bacillus thuringiensis ಬ್ಯಾಕ್ಟೀರಿಯಾದಿಂದ ಪಡೆದ ಹಣ್ಣುಕೊರಕಗಳಿಗೆ ಪ್ರತಿರೋಧ ಒಡ್ಡುವ ‘Cry  ಪ್ರೋಟಿನ್’ ವ್ಯಕ್ತಪಡಿಸುವ ಜೀನ್ ಅನ್ನು ಹತ್ತಿಯಲ್ಲಿ ಅಳವಡಿಸಲಾಗಿತ್ತು. Btಹತ್ತಿ ಬೆಳೆ ಶುರುವಾದ ಮೇಲೆ ಹತ್ತಿಯಲ್ಲಿ ಕೀಟನಾಶಕಗಳ ಬಳಕೆ ಭಾರೀ ಪ್ರಮಾಣದಲ್ಲಿ ತಗ್ಗಿದೆ. ಭಾರತ ಮತ್ತೊಮ್ಮೆ ಹತ್ತಿಯ ದೈತ್ಯನಾಗಿ ಹೊರಹೊಮ್ಮಿದೆ.

ಕುಲಾಂತರಿಗಳ ಬಳಕೆಗೆ ಅತ್ಯಂತ ಕಠಿಣ ಶಾಸನನಿರುವ ವಿಶ್ವದ ಕೆಲವೇ ರಾಷ್ಟ್ರಗಳಲ್ಲಿ ಭಾರತವೂ ಒಂದು. 1986ರ ಪರಿಸರ ಕಾಯ್ದೆ ಅಡಿಯಲ್ಲಿ ಈ ನಿಯಮಗಳನ್ನು ರೂಪಿಸಲಾಗಿದೆ. ನಮ್ಮ ದೇಶದಲ್ಲಿ ಕುಲಾಂತರಿಗಳನ್ನು ಅಭಿವೃದ್ಧಿ ಪಡಿಸಿದ ವಿಜ್ಞಾನಿಗಳು ಮೊದಲು ಸಂಪರ್ಕಿಸುವುದು GEACಯನ್ನು. ತನ್ನ ಸುರಕ್ಷತಾ ನಿಯಮಗಳ ಅನುಸಾರ ಪರಿಶೀಲಿಸಿದ ನಂತರ GEACಯಿಂದ ಅಜಿ ಸಚಿವಾಲಯಕ್ಕೆ ಶಿಫಾರಸ್ಸಾಗುತ್ತದೆ. ಸಚಿವಾಲಯದ ಒಪ್ಪಿಗೆಯ ನಂತರ ಕುಲಾಂತರಿಗಳ ಬೀಜ ರೈತರ ಕೈ ಸೇರುತ್ತದೆ. ಹತ್ತಿಯ ನಂತರ 2010ರಲ್ಲಿ ಬಿ.ಟಿ ಬದನೆಗೆ GEAC ಒಪ್ಪಿಗೆ ನೀಡಿತ್ತು. ಆದರೆ ಸಚಿವಾಲಯ ಸಾರ್ವಜನಿಕ ಹಿತಾಸಕ್ತಿ ಮೇರೆಗೆ ತಿರಸ್ಕರಿಸಿತ್ತು. ಆದಾಗ್ಯೂ ದೇಶದಲ್ಲೆಡೆ ಅಲ್ಲಲ್ಲಿ ಕಣ್ತಪ್ಪಿ ಬಿಟಿ ಬದನೆಯ ಬೆಳೆ ಸಾಗುತ್ತಿದೆ.

ಧಾರಾ ಸಾಸಿವೆ DMH-11

ಇಂದು ಚರ್ಚೆಯಲ್ಲಿರುವ ಕುಲಾಂತರಿ ಸಾಸಿವೆ ದೆಹಲಿ ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದ ದೀಪಕ್ ಪೆಂಟಾಲ್ ಅವರ ದಶಕಗಳ ಪ್ರಯತ್ನ. ಪ್ರಯೋಗಳಿಗಾಗಿ ಇಲ್ಲಿಯ ವರೆಗೆ ಖಚಾಗಿದ್ದು 70 ಕೋಟಿ. 2002ರಲ್ಲೇ ಈ ತಳಿಯನ್ನು ಅಭಿವೃದ್ದಿ ಪಡಿಸಲಾಗತ್ತು. 2017ರಲ್ಲಿ GEAC ಕೂಡಾ ಅನುಮೋದಿಸಿತ್ತು. ಆದರೆ ಸಾರ್ವಜನಿಕರ ವಿರೋಧದ ಹಿನ್ನೆಲೆಯಲ್ಲಿ ಸಚಿವಾಲಯ ತನ್ನ ನಿರ್ಧಾರವನ್ನು ಮುಂದೂಡಿತ್ತು. ಸದ್ಯಕ್ಕೆ ಹೊರ ಪರಿಸರಕ್ಕೆ ಬಿಡುಗಡೆಗೆ ಅನುಮತಿ ನೀಡಲಾಗಿದ್ದೂ ಪರಾಗಸ್ಪರ್ಷ ಮಾಡುವ ಜೇನು ನೊಣ ಹಾಗು ಇತರೆ ಪ್ರಯೋಜನಕಾರಿ ಕೀಟಗಳ ಮೇಲೆ ಮತ್ತು ಮಣ್ಣಿನಲ್ಲಿರುವ ಸೂಕ್ಷ್ಮಾಣು ಜೀವಿಗಳ ಮೇಲೆ ಪರಿಣಾಮ ಅಭ್ಯಸಿಸಿ ಎರಡು ವರ್ಷಗಳಲ್ಲಿ ರೈತಾಪಿ ವರ್ಗಕ್ಕೆ ಪರಿಚಯಿಸಲಾಗುತ್ತದೆ.

ಭಾರತದ ಖಾದ್ಯ ತೈಲ ಉತ್ಪಾದನೆ ವಾರ್ಷಿಕ 9 ಮಿಲಿಯ ಟನ್. ಬಳಕೆಗೆ ಹೋಲಿಸಿದರೆ ಈ ಉತ್ಪಾದನೆ ಅರ್ಧದಷ್ಟೂ ಸಾಲ. 55-60% ಖಾದ್ಯ ತೈಲ ಪೂರೈಕೆ ಆಮದಿನ ಮೇಲೆ ನಿಂತಿದೆ. 2020-21ರಲ್ಲಿ ಭಾರತ ಒಂದು ಲಕ್ಷ ಕೋಟಿ ವೆಚ್ಚದ 13ಮಿಲಯ ಟನ್ ಖಾದ್ಯ ತೈಲವನ್ನು ಆಮದು ಮಾಡಿಕೊಂಡಿದೆ. ಹೀಗೆ ಆಮದು ಮಾಡಿಕೊಂಡ, ಇಂದು ನಾವು ಸೇವಿಸುತ್ತಿರುವ ಸೋಯಾ ಎಣ್ಣೆ, ಕೆನೋಲಾ ಎಣ್ಣೆಗಳು ಕುಲಾಂತರಿಗಳ ಉತ್ಪಾದನೆ ಎನ್ನುವುದು ವಿಪರ್ಯಾಸ!.

ರಾಜಸ್ಥಾನ, ಪಂಜಾಬ್, ಹರಿಯಾಣಾ, ಮಧ್ಯ ಪ್ರದೇಶದಲ್ಲಿ 7 ಮಿಲಿಯ ಹೆಕ್ಟೇರ್ ಗೂ ಅಧಿಕ ಜಾಗದಲ್ಲಿ ಸಾಸಿವೆ ಬೆಳೆಯಲಾಗುತ್ತದೆ. ಪ್ರತಿ ಹೆಕ್ಟೇರ್ ಸರಾಸರಿ ಉತ್ಪಾದನೆ ಜಾಗತಿಕವಾಗಿ 2ಟನ್ ಇದ್ದರೆ ನಮ್ಮಲ್ಲಿ 1.2ಟನ್ ಮಾತ್ರ.  ಆದ್ದರಿಂದ ಹೆಚ್ಚು ಇಳುವರಿ ನೀಡುವ ಹೈಬ್ರೀಡ್ ಗಳು ಆಶಾಕಿರಣವಾಗಬಹುದೆಂಬ ಭರವಸೆ ಕೃಷಿ ವಿಜ್ಞಾನಿಗಳ ಬಳಗದ್ದು.

ಅನುವಂಶಿಕವಾಗಿ ವಿಭಿನ್ನವಾದ ಎರಡು ತಳಿಗಳನ್ನು ‘ಕ್ರಾಸಿಂಗ್’ಮಾಡುವ ಮೂಲಕ ಸಂಕರಣ ತಳಿಯನ್ನು (hybrid) ಪಡೆಯಲಾಗುತ್ತದೆ. ಎರಡೂ ತಳಿಗಳ ಉಪಯುಯಕ್ತ ಗುಣಗಳು ಅನುವಂಶಿಕವಾಗಿ ಹರಿದು ಬರುವ ಜೊತೆಗೆ ಹೆಚ್ಚಿನ ಇಳುವರಿ ಹೈಬ್ರೀಡ್ ಗಳ ಹಿರಿಮೆ. ಆದರೆ ದ್ವಿಲಿಂಗಿಯಾಗಿರುವ, ಸ್ವ-ಪರಾಗಸ್ಪರ್ಷ ಕ್ರಿಯೆ (self pollination)ಗೆ ಒಳಗಾಗುವ ಸಾಸಿವೆಗಳಲ್ಲಿ ಸಂಕರಣ ಮಾಡಿ ಮಿಶ್ರತಳಿಗಳನ್ನು, ‘ಹೈಬ್ರೀಡ್’ಗಳನ್ನು ಪಡೆಯುವುದು ಕಷ್ಟ ಸಾಧ್ಯ.

ಒಂದು ವೇಳೆ ಹೂವಿನಲ್ಲಿ ಬಂಜೆಯಾದ ಪರಾಗ ಉತ್ಪಾದನೆಯಾದರೆ ಸ್ವಯಂ ಪರಾಗಸ್ಪರ್ಷ ಫಲ ಕೊಡದ ಸಂದರ್ಭ ಉಂಟಾದರೆ, ಸಂಕರಣ ಕ್ರಿಯೆ ಸಾಧ್ಯವಾಗುತ್ತದೆ. ಆದರೆ ನೈಸರ್ಗಿಕವಾಗಿ ಇದು ಅಸಾಧ್ಯ. ಆದ್ದರಿಂದ ಬೆಳೆ ವಿಜ್ಞಾನಿಗಳು ಸಾಸಿವೆಗಳಲ್ಲಿ ಸಂಕರಣ ತಳಿಗಳನ್ನು (hybrid varieties) ಪಡೆಯಲು ‘ಜೆನೇಟಿಕ್ ಎಂಜಿನಿಯರಿಂಗ್’ಮೊರೆ ಹೋಗುವುದು ಅನಿವಾರ್ಯ.

ಧಾರಾ ಹೈಬ್ರೀಡ್ 11 ‘ವರುಣಾ’ಮತ್ತು ‘ಅರ‍್ಲಿ ಹೀರಾ-2’ ತಳಿಗಳ ಸಂಕರಣ. ಮಣ್ಣಿನಲ್ಲಿ, ವಿಶೇಷವಾಗಿ ಸಸ್ಯಗಳ ಬೇರಿನ ಸುತ್ತ ಕಂಡು ಬರುವ Bacillus amyloliquefaciens ಎಂಬ ಬ್ಯಾಕ್ಟೀರಿಯಾದಿಂದ ಪಡೆದ ಮೂರು ಜೀನ್ ಗಳನ್ನು ಧಾರಾದಲ್ಲಿ ಅಳವಡಿಸಲಾಗಿದೆ. ವರುಣಾ ತಳಿಯಲ್ಲಿ ತಾತ್ಕಾಲಿಕವಾಗಿ ಬಂಜೆ ಪರಾಗ ಉತ್ಪಾದಿಸುವಂತೆ ‘ಬಾರನೆಸ್’(Barnase) ಜೀನ್ ಅನ್ನು ಬಳಸಲಾಗಿದೆ. ಈ ಬಾರನೆಸ್ ನ ಪ್ರತಿರೂಪ ‘ಬಾರ್ ಸ್ಟಾರ್’ (Barstar). ವರುಣಾದ ತಾತ್ಕಾಲಿಕ ಬಂಜೆತನವನ್ನು ಹೋಗಲಾಡಿಸಿ ಫಲವತ್ತತೆ ಮರುಪೂರಣ ಮಾಡಲು  ಬಾರ್ ಸ್ಟಾರ್’ ಜೀನ್ ಅನ್ನು ಸೇರಿಸಿದ ಹೀರಾವನ್ನು ಬಳಸಲಾಗುತ್ತದೆ. ಹೀಗೆ ಇವೆರಡರ ಸಂಕರಣ ಧಾರಾ, ಎರಡೂ ಜೀನ್ ಅನ್ನು ಪಡೆಯುವುದರ ಮೂಲಕ ಫಲವತ್ತ ಹೈಬ್ರಿಡ್ ಬೀಜವನ್ನು ಉತ್ಪಾದಿಸುವಂತೆ ಮಾಡಲಾಗಿದೆ. ಗ್ಲುಫೋಸಿನೆಟ್ ಎಂಬ ಕಳೆನಾಶಕಕ್ಕೆ ನಿರೋಧಕತೆ ವ್ಯಕ್ತಪಡಿಸುವ ‘ಬಾರ್(Bar) ಎಂಬ ಇನ್ನೊಂದು ಜೀನ್ ಅನ್ನು ಅಳವಡಿಸಲಾಗಿದೆ. ಈ ಮೂರು ಜೀನ್ ಗಳು ಹೈಬ್ರೀಡ್ ಬೀಜ ಉತ್ಪಾದನೆಗೆ ಅತ್ಯಂತ ಪ್ರಯೋಜನಕಾರಿಯಾಗಲಿವೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್ (Indian Council of Agricultural Research-ICAR) ಕುಲಾಂತರಿ ಸಾಸಿವೆಯ ಕ್ಷೇತ್ರ ಪ್ರಯೋಗಗಳ ಹೊಣೆ ಹೊತ್ತಿತ್ತು. ಮೂರು ವರ್ಷಗಳ ಕಾಲ ದೇಶದ ವಿವಿಧ ಹವಾಮಾನದ ಎಂಟು ವಲಯಗಳಲ್ಲಿ ನಡೆಸಿದ ಕ್ಷೇತ್ರ ಪ್ರಯೋಗಗಳ ಪ್ರಕಾರ ಧಾರಾ ಹೈಬ್ರೀಡ್ ವರುಣಾಗಿಂತಲೂ 28% ಹೆಚ್ಚಿನ ಇಳುವರಿ, ಸ್ಥಳೀಯ ತಳಿಗಳಿಗಿಂತ 37% ಹೆಚ್ಚಿನ ಇಳುವರಿ ದಾಖಲಿಸಿದೆ.

ಪರ

ಕುಲಾಂತರಿ ಬಿ.ಟಿ ಹತ್ತಿಯ ಪರಿಚಯದ ನಂತರ ಭಾರತ ಹತ್ತಿ ಬೆಳೆಯಲ್ಲಿ ಅಭೂತಪೂರ್ವ ಯಶಸ್ಸು ಕಂಡಿದೆ, ಹತ್ತಿ ರಫ್ತಿನಲ್ಲಿ ಮೊದಲಿಗವಾಗಿದೆ; ಹತ್ತಿ ಬೆಳೆಯುವ 95% ಕೃಷಿ ಪ್ರದೇಶ ಕುಲಾಂತರಿ ಆಕ್ರಮಿಸಿಕೊಂಡಿದೆ ಎಂಬುದೇ ಇದಕ್ಕೆ ಪುರಾವೆ; 20 ವರ್ಷಗಳಿಂದ ಬೆಳೆಯುತ್ತಿರುವ ಬೆಳೆಯಿಂದ ಪರಿಸರಕ್ಕೆ, ಆರೋಗ್ಯಕ್ಕೆ ಈ ವರೆಗೆ ಯಾವುದೇ ಹಾನಿಯಾಗಿಲ್ಲ; ಕುಲಾಂತರಿಗಳ ಬಗೆಗಿನ ಭಯ, ಆತಂಕ ಹೆಚ್ಚಿನ ಬಾರಿ ಆಧಾರರಹಿತವಾದದ್ದು ಎಂಬುದು ಹೆಚ್ಚಿನ ವಿಜ್ಞಾನಿಗಳ ವಾದ. ಕೃಷಿ ಭೂಮಿ ಇಳಿಕೆ, ಆಹಾರ ಕೊರತೆ, ಅಪೌಷ್ಟಿಕತೆ, ಬೆಲೆ ಏರಿಕೆ, ನೈಸರ್ಗಿಕ ಸಂಪನ್ಮೂಲಗಳ ನಷ್ಟ, ಹವಾಮಾನ ಬದಲಾವಣೆಯಂತಹ ಸರಣಿ ಸಮಸ್ಯೆಗಳಿಗೆ ವಿಜ್ಞಾನ ಉತ್ತರವಾಗಿದೆ; ಕುಲಾಂತರಿ ಸಾಸಿವೆ ಸ್ವದೇಶಿಯಾಗಿರುವುದರಿಂದ ಭಾರತದ ಆತ್ಮನಿರ್ಭರತೆಯ ಆಶಯವೂ ಈಡೇರಿದೆ; ರೈತರಿಗೆ-ವಿಜ್ಞಾನಿಗಳಿಗೆ ಕುಲಾಂತರಿಗಳು ವರದಾನ ಎಂಬುದು ‘ಪರ’ವಾದ.

ವಿರೋಧ

ಕುಲಾಂತರಿಗಳಲ್ಲಿ ಬೇರೊಂದು ಜೀವಿಯ ಜೀನ್ ಅಳವಡಿಸಲಾಗುತ್ತದೆ, ಹಾಗಾಗಿ ಇದು ನಿಸರ್ಗಕ್ಕೆ ವಿರುದ್ಧವಾದ ಕ್ರಿಯೆ; ನೈಸರ್ಗಿಕವಾಗಿ ಕಂಡುಬರುವ ತಳಿಗಳೊಡನೆ ಇತರೆ ಸಂಕರಗಳು ಹುಟ್ಟಿ ಜೀವ ವೈವಿಧ್ಯತೆಗೆ ಧಕ್ಕೆಯಾಗಬಹುದು, ಸ್ಥಳೀಯ ನಾಟಿ ತಳಿಗಳ ನಷ್ಟವಾಗಬಹುದು; ಆಹಾರವಾಗಿ ಬಳಸಿದಾಗ ಅಲರ್ಜಿಯಂತ  ಕಾಯಿಲೆಗಳನ್ನು ಬರಮಾಡಿಕೊಳ್ಳುವ ಬಗ್ಗೆ ಆತಂಕ;  ಅತಿಯಾದ ಕಳೆನಾಶಕಗಳ ಬಳಕೆ ಕಾರಣ super weedಗಳು ಜನಿಸಬಹುದು; ವಿಪರೀತ ಕಳೆನಾಶಕಗಳ ಬಳಕೆ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರಬಬಹುದೆಂದು; ಕಳೆ ನಿಮೂಲನೆಗೆ ಸದ್ಯಕ್ಕೆ ಕೂಲಿಗಳನ್ನು ಅವಲಂಬಿಸಿಸಲಾಗಿದೆ, ಈಗ ಕೂಲಿಗಳ ಉದ್ಯೋಗ ಕಸಿಯುವ ಸಾಧ್ಯತೆಯಿದೆ; ತಳಿ ಹೈಬ್ರೀಡ್ ಆದ್ದರಿಂದ ಪ್ರತಿ ಬಾರಿ ಬೀಜಗಳ ಖರೀದಿ ಅನಿವಾರ್ಯ‍; ಬಿ.ಟಿ ಹತ್ತಿಯ ಬೀಜಗಳನ್ನು ಮೊನ್ಸೆಟೋ ಕಂಪನೆಯಿಂದಲೇ ಪಡೆಯಬೇಕಾಗಿರುವಂತೆ ಇದು ಕಾರ್ಪೋರೇಟ್ ಕಂಪೆನಿಗಳ ಏಕಸ್ವಾಮ್ಯತೆಗೆ ದಾರಿ ಮಾಡಿಕೊಡುತ್ತದೆ ಎಂಬ ವಿರೋಧದ ಕೂಗು ಕೇಳಿಬರುತ್ತಿದೆ.

ಹಗ್ಗ ಜಗ್ಗಾಟ

ಸಮಾಜ ನಿಧಾನವಾಗಿ  ಜೈವಿಕ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದೆ. ಇದೇ ಜೀನ್ ಎಡಿಟಿಂಗ್ ವಿಧಾನವಾದ CRISPR/Cas9ಗೆ 2020 ರಲ್ಲಿ ನೊಬೆಲ್ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಕೋವಿಡ್ ಲಸಿಕೆಗಳು ತಂತ್ರಜ್ಞಾನದಲ್ಲಿ ನಂಬಿಕೆ ಹುಟ್ಟಿಸಿವೆ. ಎಲ್ಲಾ ಆತಂಕಗಳನ್ನು ಬದಿಗಿಟ್ಟು ಕುಲಾಂತರಿಗಳ ಅನಿವಾರ್ಯ‍ತೆ ಅರಿತು ಒಪ್ಪಿಕೊಳ್ಳುವ ದಿನ ಬಂದರೂ ಸುಳ್ಳಲ್ಲ. ಆದರೆ ಸದ್ಯಕ್ಕೆ ಕುಲಾಂತರಿಗಳ ಬಗೆಗಿನ ಚರ್ಚೆ ಬಹುಶಃ ಅಂತ್ಯವಿಲ್ಲದ್ದು.  









Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ