ಸಸ್ಯಗಳಲ್ಲಿಯೂ ಹಾರ್ಮೋನ್
ವಸ್ತುವೊಂದು
‘ಸಜೀವಿ’ಯಾಗುವುದು ತನ್ನೊಳಗಿನ ‘ಜೀವಕೋಶ’ಗಳ ಇರುವಿಕೆಯಿಂದ. ಸರಳವಾಗಿ ಹೇಳುವುದಾದರೆ ಜೀವಕೋಶಗಳೆಂಬ
ಇಟ್ಟಂಗಿಗಳಿಂದಲೇ ನಮ್ಮ ದೇಹವೆಂಬ ಬೃಹತ್ ಕಟ್ಟಡ ನಿರ್ಮಾಣವಾಗಿದೆ. ಪ್ರತಿ ಜೀವಕೋಶಕ್ಕೂ ಉಸಿರಾಡುವ,
ಶಕ್ತಿ ಸಂಚಯಿಸುವ, ಪ್ರಚೋದನೆಗೆ ಪ್ರತಿಕ್ರಿಯಿಸುವ ಸಾಮರ್ಥ್ಯವಿರುತ್ತದೆ. ಬ್ಯಾಕ್ಟೀರಿಯಾಗಳನ್ನು
ಪರಿಗಣಿಸಿ ನರಮಾನವನ ವರೆಗೆ ಎಲ್ಲರೂ ಜೀವಿಸುತ್ತಿರುವುದು ಇದೇ ‘ಕೋಶ’ಗಳಲ್ಲಿ ನಡೆಯುವ ಮೂಲಭೂತ ಕ್ರಿಯೆಯನ್ನು
ಆಧರಿಸಿ. ಕೋಶ-ಕೋಶ ಸೇರಿ ಅಂಗಾಂಶವಾಗಿ, ಅಂಗಾಂಶ ಸೇರಿ ಅಂಗವಾಗಿ, ಅಂಗಾಂಗ ಸೇರಿ ಶರೀರವಾದ ಬಹುಕೋಶಿ
ಸಸ್ತನಿಗಳಲ್ಲಿ, ಹಾಗೂ ಬಹುತೇಕ ಇದೇ ಮಾದರಿಯ ವ್ಯವಸ್ಥೆ ಹೊಂದಿರುವ ಸಸ್ಯಗಳ ಜೀವನ ಏಕಕೋಶಿಗಳಿಗಿಂತ
ಸಂಕೀರ್ಣವಾದದ್ದು. ಕಾರಣ, ಈ ಕೋಶಗಳ ನಡುವಿನ ಸಂಪರ್ಕ ಜಾಲದ ಅಸಾಧರಣ ಕಾರ್ಯ ವಿಧಾನ.
ಕೋಶಗಳ
ನಡುವೆ ನಡೆಯುವ ಈ ಒಡನಾಟವನ್ನು ಮೊದಲು ಅರ್ಥೈಸಿದ್ದು ಸಸ್ತನಿಗಳಲ್ಲಿ. ರಕ್ತದಲ್ಲಿ ಹರಿದಾಡುವ ಯಾವುದೋ
ಒಂದಷ್ಟು ರಾಸಾಯನಿಕ ಸಂಯುಕ್ತಗಳು ಅವುಗಳ ಬೆಳವಣಿಗೆಯನ್ನು ನಿರ್ದೇಶಿಸುತ್ತವೆ ಎಂದು ತಿಳಿದಿದ್ದು
1850 ರ ಹೊತ್ತಿಗೆ. ಇದೇ ರಾಸಾಯನಿಕ ಸಂದೇಶ ವಾಹಕಗಳನ್ನು ನಂತರದಲ್ಲಿ ‘ಪ್ರಚೋದಿಸುವ’ ಎಂಬ ಅರ್ಥವನ್ನು
ಕೊಡುವ ‘ಹಾರ್ಮೋನ್’ ಎಂಬ ಗ್ರೀಕ್ ಪದದಿಂದ ಗುರುತಿಸಲಾಯಿತು. ಮಾಹಿತಿಯ ಸರಳ ಲಭ್ಯತೆಯೊಂದಿಗೆ ಈಗ ಹಾರ್ಮೋನ್ ಗಳ ತಿಳುವಳಿಕೆ ಜನ ಸಾಮಾನ್ಯರಲ್ಲೂ ಮೂಡಿದೆ.
ವಿಜ್ಞಾನದ ಪ್ರಗತಿಯೊಂದಿಗೆ ಸಸ್ತನಿಗಳಲ್ಲದೆ ಸಸ್ಯಗಳಲ್ಲೂ ಅಂತರಕೋಶಿಯ ಸಂವಹನಕ್ಕೆ ಬೇಕಾದ ಹಾರ್ಮೋನ್
ಗಳ ಆವಿಷ್ಕಾರವಾಗಿದೆ. ನಾವು ನಮಗೆ ತಿಳಿಯದೆ ನಮ್ಮ ನಿತ್ಯ ಜೀವನದಲ್ಲಿ ಅವುಗಳನ್ನು ಬಳಸುತ್ತಿದ್ದೇವೆ
ಅಥವಾ ಅವುಗಳನ್ನು ಅವಲಂಬಿಸಿದ್ದೇವೆ
ಕೂಡಾ!.
ಸಸ್ಯ
v/s ಮನುಷ್ಯ
ಮಾನವನಂತೆ
ಚಲಿಸಲಾರವು, ರಕ್ತ ಪರಿಚಲನೆ ಮಾಡಲಾರವು, ಯೋಚಿಸಲು ಮೆದುಳಿಲ್ಲ, ಆಲಿಸಲು –ಸಂವಹಿಸಲು ಇಂದ್ರಿಯಗಳಿಲ್ಲ
ಎಂಬೆಲ್ಲಾ ಕಾರಣಕ್ಕೆ ಬಹಳ ಇತ್ತೀಚಿನ ವರೆಗೆ ಸಸ್ಯಗಳು ಮನುಷ್ಯನಿಂದ ಬಹಳವೇ ವಿಭಿನ್ನವಾದ ಜೀವಿ ಎಂದು
ನಂಬಲಾಗಿತ್ತು. ಆದರೆ ಇತ್ತೀಚೆಗಿನ ವೈಜ್ಞಾನಿಕ ಸಂಶೋಧನೆಗಳು ಸಸ್ಯ-ಪ್ರಾಣಿಗಳ ನಡುವಿನ ಹೋಲಿಕೆಯನ್ನು
ಬಿಚ್ಚಿಡುತ್ತಿವೆ. ಅಲ್ಲದೇ ವಿಕಸನದ ಹಾದಿಯಲ್ಲಿ ಸಸ್ಯಗಳು ಮಾನವನಿಗಿಂತ ಒಂದು ಹೆಜ್ಜೆ ಮುಂದೆಯೇ ಇವೆ
ಎಂಬುದನ್ನು ನಿರೂಪಿಸುತ್ತಿವೆ.
ನಮ್ಮಂತೆ
ಸಸ್ಯಗಳು ಮಳೆ ಬಂದಾಗ ಕೊಡೆ ಹಿಡಿಯಲಾರುವು, ಚಳಿಯಾದಾಗ ಮೇಲಂಗಿಯನ್ನು ಹೊದೆಯಲಾರುವು ಆದರೆ ಪ್ರತಿಕೂಲ
ವಾತಾವರಣದಿಂದ ತಪ್ಪಿಸಿಕೊಳ್ಳಲು, ಅನುಕೂಲಕರ ವಾತಾವರಣವನ್ನು ಉಪಯೋಗಿಸಲು, ಸದಾ ವಾತಾವರಣದೊಂದಿಗೆ
ಹೊಂದಾಣಿಕೆ ಮಾಡಿಕೊಳ್ಳುತ್ತಲೇ ಇರುತ್ತವೆ. ನೀರು-ಪೋಷಕಾಂಶಗಳ ಬಳಕೆಗೆ, ನೆರಳು-ಬೆಳಕಿನ ಪ್ರತಿಕ್ರಿಯೆಗೆ,
ಕೀಟ-ರೋಗಗಳ ಬಾಧೆಗೆ, ವಾತಾವರಣದ ಒತ್ತಡದಿಂದ ರಕ್ಷಿಸಿಕೊಳ್ಳಲು ಸಸ್ಯಗಳು ನಮ್ಮ ಊಹೆಗೂ ಮೀರಿದ ಅತ್ಯಾಧುನಿಕ
ಸಂವೇದನೆ/ಇಂದ್ರಿಯಗಳ ವ್ಯವಸ್ಥೆಯನ್ನು ಹೊಂದಿವೆ.
ಮಾನವರಲ್ಲಿ
ಹೇಗೆ ಹಸಿವಾದಾಗ ಉಣ್ಣಲು, ಹುಲಿ ಕಂಡಾಗ ಓಡಲು, ಹರೆಯ ಬಂದಾಗ ಮೀಸೆ ಚಿಗುರಲು ಸೂಚಿಸುವ ಹಾರ್ಮೋನ್ ಗಳು ಇರುತ್ತವೆಯೋ ಸಸ್ಯಗಳಲ್ಲೂ ಹೊಸ ಎಲೆ ಚಿಗುರುವಾಗ,
ಹೂ ಅರಳುವಾಗ, ಬೀಜ ಮೊಳೆಯುವಾಗ, ಕಾಯಿ ಮಾಗುವಾಗ ಪ್ರತಿ ಬೆಳವಣಿಗೆ ಹಂತವನ್ನು ಹಾರ್ಮೋನ್ ಗಳು ನಿಯಂತ್ರಿಸುತ್ತವೆ.
ಅತ್ಯಂತ ಅಲ್ಪ ಪ್ರಮಾಣದಲ್ಲಿ ನೈಸರ್ಗಿಕವಾಗಿ ಕಂಡುಬರುವ ಈ ಹಾರ್ಮೋನ್ ಗಳು ಸಸ್ಯದ ಶಾರಿರೀಕ ಪ್ರಕ್ರಿಯೆ
ಮೇಲೆ ಮಹತ್ತರವಾದ ಪರಿಣಾಮ ಬೀರಬಲ್ಲವು.
ನಾಚಿಕೆ
ಮುಳ್ಳು ಎಲೆ ಮಡಿಸುವಾಗ, ಕಟ್ಟಿಟ್ಟ ಹೆಸರುಕಾಳು ಮೊಳಕೆಯೊಡೆದಾಗ, ಪೇಪರ್ ನಲ್ಲಿ ಸುತ್ತಿಟ್ಟ ಹಂಪಲು
ಪಪಾಯಾ ಹಣ್ಣಾಗುವಾಗ, ಕಿಟಕಿಯಲ್ಲಿಟ್ಟ ಗಿಡ ಬೆಳಕನ್ನು ಹುಡುಕಿ ಹೊರಟಾಗ, ಹಾರ್ಮೋನ್ ನ
ಮ್ಯಾಜಿಕ್ ಹಿನ್ನೆಲೆಯಲ್ಲಿ ನಡೆಯುತ್ತಿರುತ್ತದೆ. ಬಾಳೆಹಣ್ಣಿನ ಗೊನೆ ಹಣ್ಣಾಗಲು ಗುಲಾಬಿ
ಬಣ್ಣ ಹಚ್ಚುವಾಗ, ಕಟಿಂಗ್ಸ್ ಗಳು ಬೇರು ಬರಲು ರೂಟಿಂಗ್ ಪೌಡರ್ ಬಳಸುವಾಗ ಪರಿಚಯವಿಲ್ಲದೆ ನೀವು ಈ
ಹಾರ್ಮೋನ್ ಗಳನ್ನು ಬಳಸಿರುತ್ತೀರ!. ಈ ಲೇಖನದ ತುದಿಗೆ ಬಹುಶಃ ಈ ಅಜ್ಞಾತ ಹಿರೋಗಳನ್ನು ನೀವು ಕೊಂಡಾಡಬಹುದು.
ಆಕ್ಸಿನ್
ಸಸ್ಯಗಳಲ್ಲಿ
ಕಂಡು ಹಿಡಿದ ಮೊದಲ ಹಾರ್ಮೋನ್ ಆಕ್ಸಿನ್. ಡಾರ್ವಿನ್ ತನ್ನ ಮಹಾಯಾನವನ್ನು ಮುಗಿಸಿ ವಿಕಸನದ ತತ್ವಗಳನ್ನು
ಮಂಡಿಸಿ ಸಸ್ಯ ಶರೀರ ಶಾಸ್ತ್ರದ ಬಗ್ಗೆ ಒಲವು ತೋರಿಸಿದ್ದ ಘಳಿಗೆ. ಕಿಟಕಿಯಿಂದ ಇಣುಕುವ ಬೆಳಕಿನ ಕಡೆ
ಕ್ಯಾನರಿ ಹುಲ್ಲಿನ ಎಳೆ ಸಸ್ಯಗಳು ತಮ್ಮದೇ ರೀತಿಯಲ್ಲಿ ಬಾಗಿ ಚಲಿಸುತ್ತವೆ ಎಂಬುದನ್ನು ಗಮನಿಸಿದ್ದ.
ಮುಂದೆ ವಿಜ್ಞಾನಿಗಳು ಇದನ್ನು ಆಕ್ಸಿನ್ ನ ಪರಿಣಾಮವೆಂದು ಧೃಡೀಕರಿಸಿದರು. ಸಸ್ಯಗಳ ಸರ್ವತೋಮುಖ ಬೆಳವಣಿಗೆಗೆ
ಆಕ್ಸಿನ್ ಉಳಿದೆಲ್ಲಾ ಹಾರ್ಮೋನ್ ಗಳಿಗಿಂತಲೂ ಹೆಚ್ಚು ಅವಶ್ಯಕ.
- ಕೆಲವೊಮ್ಮೆ ದಾಸವಾಳ, ಸೇವಂತಿಗೆ, ಡೇರೆಯಂತಹ ಹೂ ಬಿಡುವ ಸಸ್ಯಗಳಲ್ಲಿ ತುದಿ ಚಿವುಟುವುದನ್ನು ಕೇಳಿರುತ್ತೀರಾ. ತುದಿ ಚಿವುಟದ ಸಸ್ಯಗಳು ಹೂ ಬಿಡದೆ ಉದ್ದಕ್ಕೆ ಬೆಳೆಯುವುದನ್ನೂ, ತುದಿ ಚಿವುಟಿದ ಸಸ್ಯಗಳು ಕವಲುಗಳನ್ನು ಬಿಟ್ಟು ಪೊದೆಯಾಗಿ ಬಹಳಷ್ಟು ಹೂ ಬಿಡುವುದನ್ನು ನೋಡಿರುತ್ತೀರಾ. ಇದು ಆಕ್ಸಿನ್ ನ ಮಹಿಮೆ. ಸಸ್ಯಗಳಲ್ಲಿ ಆಕ್ಸಿನ್ ಕಂಡು ಬರುವುದು ಸಸ್ಯದ ತುದಿಯ ಚಿಗುರಿನಲ್ಲಿ. ಹೆಚ್ಚಿನ ಪ್ರಮಾಣದಲ್ಲಿ ಚಿಗುರಿನಲ್ಲಿ ಕೇಂದ್ರೀಕೃತವಾದ ಆಕ್ಸಿನ್ ಬುಡದ ಕವಲುಗಳ ಬೆಳವಣಿಗೆಯನ್ನು ಕುಂಠಿಸುತ್ತದೆ, ಮತ್ತು ಹೂವಿನ ಬೆಳವಣಿಗೆಯನ್ನು ಮುಂದೂಡುತ್ತದೆ. ಹಾಗಾಗಿ ತುದಿ ಚಿವುಟುವ ಮೂಲಕ ಆಕ್ಸಿನ್ ನಿಂದ ಮುಕ್ತಿ ಪಡೆಯುವ ರೂಢಿ ಅಲಂಕಾರಿಕ ಸಸ್ಯಗಳಲ್ಲಿ ಚಾಲ್ತಿಯಲ್ಲಿದೆ.
- ಕಂಟಿಗ್ಸ್ ಗಳಿಗೆ ಬೇರು ಬರಿಸಲು ಹಚ್ಚುವ ‘ರೂಟಿಂಗ್ ಪೌಡರ್’ನಲ್ಲಿರುವೂದೂ ಕೂಡ ಆಕ್ಸಿನ್. ಆಕ್ಸಿನ್ ಗಳು ಗಾಯವಾದಂತಹ ಜಾಗದಲ್ಲಿ ನಾರಿನಂತ ಹುಸಿ ಬೇರುಗಳ ಬೆಳವಣಿಗೆಯನ್ನು ಉತ್ತೇಜಿಸುತ್ತವೆ. ಇದೇ ತತ್ವವನ್ನು ಅನುಸರಿಸಿ ಕಂಟಿಗ್ಸ್ ಗಳಲ್ಲಿ ವೇಗವಾಗಿ ಬೇರು ತರಿಸಲು ಸಿಂಥೆಟಿಕ್ ರೂಪದ ಆಕ್ಸಿನ್ / ರೂಟಿಂಗ್ ಪೌಡರ್ ಬಳಸಲಾಗುತ್ತದೆ.
- ಯಾವತ್ತಾದರೂ ಬೇರುಗಳೇಕೆ ಕೆಳಮುಖವಾಗಿ ಬೆಳೆಯುತ್ತವೆ ಮತ್ತು ಚಿಗುರುಗಳೇಕೆ ಮೇಲ್ಮುಖವಾಗಿ ಬೆಳೆಯುತ್ತವೆ ಎಂದು ಪ್ರಶ್ನಿಸಿಕೊಂಡಿದ್ದೀರಾ!. ಇದು ಕೂಡಾ ಆಕ್ಸಿನ್ ಗಳ ನಿಯಂತ್ರಣದಿಂದ
- ಗಿಡಗಳ ಬಾಗುವಿಕೆ, ಸೂರ್ಯನ ಕಡೆಗಿನ ಚಲನೆಯನ್ನು ನಿರ್ವಹಿಸುವುದು ಕೂಡಾ ಆಕ್ಸಿನ್.
- ಕತ್ತಿ ತಾಗಿಯೋ, ಇನ್ಯಾವುದೋ ಹರಿತವಾದ ವಸ್ತು ತಾಗಿಯೋ ಗಿಡಗಳಿಗೆ ಗಾಯವಾದಾಗ ನೆರವಿಗೆ ಧಾವಿಸುವುದು ಆಕ್ಸಿನ್. ಗಾಯದ ಜಾಗದಲ್ಲಿ ಕ್ಷಿಪ್ರವಾಗಿ ಕೋಶಗಳನ್ನು ವಿಭಜಿಸಿ ತೇಪೆ ಹಚ್ಚಿದ ರೀತಿಯಲ್ಲಿ ಗಾಯವನ್ನು ಮಾಯವಾಗಿಸಿವುದು ಆಕ್ಸಿನ್ ನ ಕೆಲಸ. ‘ಕಸಿ’ ಕಟ್ಡಿದಾಗ ಉಂಟಾದ ಗಾಯವನ್ನೂ ಗುಣವಾಗಿಸುವುದು ಆಕ್ಸಿನ್
ಜಿಬ್ಬರೆಲಿನ್
ಜಪಾನಿನಲ್ಲಿ
19ನೇ ಶತಮಾನದ ಅಂತ್ಯಕ್ಕೆ ಭತ್ತದ ಬೆಳೆಯಲ್ಲಿ ವಿಚಿತ್ರವಾದ ರೋಗವೊಂದು ಕಾಣಿಸಿಕೊಂಡಿತ್ತು. ಭತ್ತದ
ಸಸಿಗಳು ದುರ್ಬಲವಾಗಿ ಹುಚ್ಚು ಹುಚ್ಚಾಗಿ ಸಪೂರ ಕಡ್ಡಿಯಂತೆ ತೆನೆ ಮೂಡದೆ ಬಂಜರಾಗಿ ಬೆಳೆಯುತೊಡಗಿದ್ದವು.
ಭತ್ತದ ಇಳುವರಿ ತೀವ್ರವಾಗಿ ಕುಸಿದಿತ್ತು. ಸಸ್ಯ ರೋಗ ಶಾಸ್ತ್ರಜ್ಞರು ‘ಜಿಬ್ಬರೆಲ್ಲಾ’ ಎಂಬ ಶಿಲೀಂಧ್ರ
ಈ ರೋಗಕ್ಕೆ ಕಾರಣ ಎಂಬುದನ್ನು ಪತ್ತೆ ಹಚ್ಚಿದರು. ನಂತರದ ದಿನಗಳಲ್ಲಿ ಇದೇ ‘ಜಿಬ್ಬರೆಲ್ಲಾ’ದಿಂದ ಸಸ್ಯಗಳ
ಕಾಂಡದ ಬೆಳವಣಿಗೆ ಮೇಲೆ ಪರಿಣಾಮ ಬೀರುವ ಜಿಬ್ಬರೆಲಿನ್ ಹಾರ್ಮೋನ್ ಅನ್ನು ಪ್ರತ್ಯೇಕಿಸಲಾಯಿತು.
- ಸಸಿಗಳ ಕಾಂಡ ನೀಳವಾಗಿ ಎತ್ತರೆತ್ತರಕ್ಕೆ ಬೆಳೆಯುವಂತೆ ಜಿಬ್ಬರೆಲಿನ್ ಪ್ರೇರೇಪಿಸುತ್ತದೆ. ಗೆಣ್ಣುಗಳ ನಡುವಿನ ಅಂತರವನ್ನ ಹೆಚ್ಚಿಸಿ ಗಿಡಗಳ ಉದ್ದುದ್ದ ಬೆಳವಣಿಗೆಗೆ ಕಾರಣವಾಗುತ್ತದೆ. ಅಂದರೆ ಸಸ್ಯಗಳಲ್ಲಿ ತಯಾರಾಗುವ ಜಿಬ್ಬರೆಲಿನ್ ಪ್ರಮಾಣವನ್ನು ತಗ್ಗಿಸಿದರೆ ಗೆಣ್ಣುಗಳ ಅಂತರ ಕಡಿಮೆಗೊಳಿಸಬಹುದು, ಮತ್ತು ಎತ್ತರವನ್ನು ಕುಂಠಿಸಬಹುದು. ಇದೇ ತರ್ಕವನ್ನು ಅನುಸರಿಸಿ ಹಲವಾರು ಅಲಂಕಾರಿಕ ಸಸ್ಯಗಳಲ್ಲಿ ಇಂದು ಕುಬ್ಜ ಜಾತಿಯ ಉತ್ಪಾದನೆ ಸಾಧ್ಯವಾಗಿದೆ.
- ಹೆಚ್ಚು ಸಾಂದ್ರವಾಗಿ ಒತ್ತಟವಾಗಿ ಮಾವು ಬೆಳೆಯುವ ತೋಪಿನಲ್ಲಿ ಹೆಚ್ಚಿನ ಬಾರಿ ಗಿಡದ ಕುಬ್ಜ ಗಾತ್ರವನ್ನು ನಿವಹಿಸಲು, ಮತ್ತು ಹೂ ಬಿಡಲು ಜಿಬ್ಬರೆಲಿನ್ ನ ಕಾರ್ಯವನ್ನು ವಿರೋಧಿಸುವ (ಪ್ಯಾಕ್ಲೋಬ್ಯುಟ್ರಝಾಲ್) ರಾಸಾಯನಿಕಗಳನ್ನು ವಾಣಿಜ್ಯಿಕವಾಗಿ ಬಳಸಲಾಗುತ್ತದೆ. ಗುಲಾಬಿ, ಲಿಲ್ಲಿ ಮುಂತಾದ ಹಲವಾರು ಅಲಂಕಾರಿಕ ಸಸ್ಯಗಳಲ್ಲೂ ಈ ರೂಢಿ ಆಚರಣೆಯಲ್ಲಿದೆ.
- ದ್ರಾಕ್ಷಿತೋಟದಲ್ಲಿ ಹಣ್ಣುಗಳ ಗಾತ್ರವನ್ನು ಹಿಗ್ಗಿಸಲು ಜಿಬ್ಬರೆಲಿನ್ ಸಿಂಪಡಿಸುವುದು ಸಾಮಾನ್ಯ
- ಬೀಜವೊಂದು ಮೊಳಕೆಯೊಡೆದು ಒಂದೆರೆಡು ಎಲೆ ಮೂಡಲು ಬೇಕಾದ ಕನಿಷ್ಟ ಪ್ರಮಾಣದ ಪೋಷಕಾಂಶಗಳು, ಕಿಣ್ವಗಳು ಸುಪ್ತಸ್ಥಿತಿಯಲ್ಲಿ ಬೀಜದಲ್ಲಿ ಅಡಗಿರುತ್ತವೆ. ಅನುಕೂಲಕರ ವಾತಾವರಣದಲ್ಲಿ ಈ ಕಿಣ್ವಗಳನ್ನು ಜಾಗ್ರತವಾಗುವಂತೆ ಸಂದೇಶಿಸುವುದು ಜಿಬ್ಬರೆಲಿನ್. ಭತ್ತದ ನಾಟಿಯ ಮುನ್ನ ಬೀಜವನ್ನು ನೀರಲ್ಲಿ ನೆನೆಹಾಕಿದಾಗ ಮೊಳಕೆ ಬಂದಿದ್ದರೆ ಇದೇ ಜಿಬ್ಬರೆಲಿನ್ ಅನ್ನು ಸ್ಮರಿಸಿ.
ಸೈಟೋಕೈನಿನ್
ಸೈಟೋಕೈನಿನ್
ಮುನ್ನೆಲೆಗೆ ಬಂದಿದ್ದು ಸಸ್ಯಗಳಲ್ಲಿ ‘ಅಂಗಾಂಶ ಕೃಷಿ’ಯ (ಟಿಶ್ಯು ಕಲ್ಚರ್) ಸಾಧ್ಯತೆಯ ಬಗ್ಗೆ ಅನ್ವೇಷಣೆಯಾದಾಗ.
ಪ್ರಯೋಗಾಲಯದ ಕೃತಕ ವಾತಾವರಣದಲ್ಲಿ, ಎಲೆ/ಗೆಣ್ಣು/ಮೃದು ಕಾಂಡ/ ಚಿಗುರು ಕುಡಿ, ಹೀಗೆ ಬರಿಯ ಅಂಗಾಂಶದಿಂದ
ಇಡೀ ಸಸ್ಯವನ್ನು ಪಡೆಯುವ ‘ಅಂಗಾಂಶ ಕೃಷಿ’ಯಲ್ಲಿ ಜೀವಕೋಶಗಳ ಗುಂಪು ವಿಭಜಿಸಿ ವೃದ್ಧಿಸಿ ಚಿಗುರು ಮತ್ತು
ಬೇರಾಗಿ ರೂಪಾಂತರ ಆಗುವ ಆಶ್ಚಯಕರ ವಿದ್ಯಮಾನವನ್ನು ವಿಜ್ಞಾನಿಗಳು ಗಮನಿಸಿದ್ದರು. ಈ ರೀತಿ ಹೇಳ ಹೆಸರಿಲ್ಲದ
ಕೋಶಗಳ ಗುಂಪು ಹೇಗಪ್ಪಾ ವಿವಿಧ ಅಂಗಾಂಗಳಾಗಿ ರೂಪ ಪಡೆಯುತ್ತವೆ ಎಂದು ಸಂಶೋಧನೆ ಕೈಗೊಂಡಾಗ ಗೊತ್ತಾಗಿದ್ದು
ಸೈಟೋಕೈನಿನ್ ನ ಚಮತ್ಕಾರ.
- ಇಂದಿಗೂ ಕೂಡಾ ಅಂಗಾಂಶ ಕೃಷಿಯಲ್ಲಿ ಆಕ್ಸಿನ್ ಒಡನೆ ಸೈಟೋಕೈನಿನ್ ವ್ಯಾಪಕವಾಗಿ ಬಳಕೆಯಲ್ಲಿದೆ
- ನೈಸರ್ಗಿಕವಾಗಿಯೂ ಸಸ್ಯಗಳಲ್ಲಿ ಜೀವಕೋಶಗಳ ವಿಭಜನೆಯನ್ನು ಸೈಟೋಕೈನಿನ್ ನಿಯಂತ್ರಿಸುತ್ತದೆ.
- ಸೈಟೋಕೈನಿನ್ ಸಸ್ಯಗಳಲ್ಲಿ ವೃದ್ಧಾಪ್ಯವನ್ನು ಮುಂದೂಡುವ ಗುಣಗಳನ್ನು ಹೊಂದಿವೆ. ಎಲೆಗಳ ಹಸಿರನ್ನು ಅವು ಕಾಪಿಟ್ಟುಕೊಳ್ಳುತ್ತವೆ.
ಅಬ್ಸಿಸಿಕ್ ಆ್ಯಸಿಡ್
ಸಸ್ಯಗಳಲ್ಲಿ
ಹಾರ್ಮೋನ್ ಗಳ ಆವಿಷ್ಕಾರ ಹೀಗೆ ಸಾಗುತ್ತಿದ್ದಂತೆ ಚಿಗುರುಗಳ ಬೆಳವಣಿಗೆಯನ್ನು ಪ್ರತಿರೋಧಿಸುವ ಆಕ್ಸಿನ್
ನ ಕಾರ್ಯಕ್ಕೆ ಅಡ್ಡಿಯಾಗುವ ವಿಚಿತ್ರ ಅಂಶವೊಂದು ವಿಜ್ಞಾನಿಗಳ ಗಮನ ಸೆಳೆಯಿತು. ಮುಂದೆ ಈ ಅಂಶವನ್ನು
ಮುಪ್ಪು ಆವರಿಸಿದ ವಯಸ್ಸಾದ ಎಲೆಗಳಿಂದ ಹಾಗು ಪೂರ್ತಿ ಬಲಿತ ಹಣ್ಣುಗಳಿಂದ ಪ್ರತ್ಯೇಕಿಸಲಾಯಿತು. ಹಣ್ಣಾದ
ಎಲೆಗಳು ಉದುರುವುದಕ್ಕೆ ಅಥವಾ ಬಲಿತ ಹಣ್ಣುಗಳು ಕಳಚಿ ಬೀಳುವುದಕ್ಕೆ ಆಂಗ್ಲ ಭಾಷೆಯಲ್ಲಿ ‘ಅಬ್ಸಿಷನ್’
ಎನ್ನುತ್ತಾರೆ. ಹೀಗೆ ಉದುರುವಿಕೆಯನ್ನು/ ಅಬ್ಸಿಷನ್ ಅನ್ನು ಪ್ರೇರೇಪಿಸುವ ಹಾರ್ಮೋನ್ ಗೆ ‘ಅಬ್ಸಿಸಿಕ್
ಆ್ಯಸಿಡ್’ ಎಂದು ನಾಮಕರಣ ಮಾಡಲಾಯಿತು.
- ಮೊಳಕೆಯೊಡೆಯಲು ಬೇಕಾದ ಕಿಣ್ವಗಳನ್ನು ಸುಪ್ತಾವಸ್ಥೆಯಲ್ಲಿ ಇರಿಸಿ ಜಿಬ್ಬರೆಲಿನ್ ನ ಕಾರ್ಯವನ್ನು ವಿರೋಧಿಸುವ ಕೆಲಸ ಮಾಡುವುದು ಅಬ್ಸಿಸಿಕ್ ಆ್ಯಸಿಡ್. ಹಾಗಾಗಿ ದಾಸ್ತಾನಿನಲ್ಲಿ, ಕಂಟೇನರ್ ನಲ್ಲಿ ಶೇಖರಿಸಿಟ್ಟ ಧಾನ್ಯಗಳು ಮೊಳಕೆ ಒಡೆಯುವುದಿಲ್ಲವಾದಕ್ಕೆ ಅಬ್ಸಿಸಿಕ್ ಆ್ಯಸಿಡ್ ಗೆ ಧನ್ಯವಾದಗಳು.
- ಸಸ್ಯಗಳಲ್ಲಿ ನೀರಿನ ಒತ್ತಡವನ್ನು ನಿರ್ವಹಿಸುವುದು ಅಬ್ಸಿಸಿಕ್ ಆ್ಯಸಿಡ್. ಎಲೆಗಳಲ್ಲಿ ನೀರನ್ನು ಭಾಷ್ಪೀಕರಿಸುವ ‘ಸ್ಟೊಮೆಟಾ’ ರಂಧ್ರಗಳನ್ನು ಮುಚ್ಚಿ ಹೆಚ್ಚಿನ ನೀರಿನ ನಷ್ಟವನ್ನು ತಡೆಯಲು ಅಬ್ಸಿಸಿಕ್ ಆ್ಯಸಿಡ್ ನೆರವಾಗುತ್ತದೆ.
ಎಥೆಲಿನ್
ಎಥೆಲಿನ್
ಆವಿಷ್ಕಾರ ಉಳಿದೆಲ್ಲಾ ಹಾರ್ಮೋನ್ ಗಳಿಗಿಂತ ಕುತೂಹಲಕಾರಿಯಾಗಿದ್ದು. ದೇಶ ವಿದೇಶಕ್ಕೆ ಹಡಗಿನಲ್ಲಿ
ಹಣ್ಣು ಹಂಪಲು ರವಾನೆಯಾಗುತ್ತಿದ್ದ ಕಾಲವದು. ಸಾಗಾಣೆ ಅವಧಿಯಲ್ಲಿ ಕಳಿತ ಹಣ್ಣುಗಳು ಇನ್ನೂ ಬಲಿಯದ
ಕಾಯಿಯನ್ನು ಹಣ್ಣಾಗಿಸುತ್ತವೆ ಎಂದು ವ್ಯಾಪಾರಸ್ಥರು ತಿಳಿದಿದ್ದರು. ಸಮುದ್ರಯಾನದ ಮೂಲಕ ‘ಕ್ಯುಬಾ’ದಿಂದ
ಹೊರಟ ಬಾಳೆ ಹಣ್ಣು ‘ನ್ಯೂಯಾರ್ಕ್’ ಸೇರುವ ಹೊತ್ತಿಗೆ ಅತಿಯಾಗಿ ಕಳಿತು ಮಾರಾಟ ಮಾಡಲಾಗದ ಸ್ಥಿತಿಗೆ
ತಲುಪುತ್ತಿದ್ದವು. ಮಾಗಿದ ಹಣ್ಣುಗಳಿಂದ ಗಾಳಿಗೆ ಬಿಡುಗಡೆಯಾದ ಅನಿಲ ರೂಪದ ಯಾವುದೋ ರಾಸಾಯನಿಕ ಇದಕ್ಕೆ
ಕಾರಣ ಎಂಬ ವರದಿಗಳಾದವು. ಹೀಗೆ ಕಾಯಿಯನ್ನು ಹಣ್ಣಾಗಿಸುವ ಅನಿಲ ರೂಪದ ಎಥೆಲಿನ್ ನ ಅನ್ವೇಷಣೆಯಾಯಿತು.
- ಇಂದಿಗೂ ಕೂಡಾ ಕಾಯಿ ಮಾಗಿಸುವ ಕ್ರಿಯೆಯನ್ನು ವೇಗವಾಗಿಸಲು ಎಥೆಲಿನ್ ನ ಬಳಕೆ ಮಾಡಲಾಗುತ್ತದೆ. ಬಾಳೆ ಹಣ್ಣಿನ ಗೊನೆಗೆ ಹಚ್ಚುವ ಗುಲಾಬಿ ದ್ರಾವಣ ಇದೇ ಎಥೆಲಿನ್.
- ಅಬ್ಸಿಸಿಕ್ ಆ್ಯಸಿಡ್ ನಂತೆ ಎಲೆ, ಹೂವು, ಹಣ್ಣಿನ ವೃದ್ಧಾಪ್ಯದೆಡೆಗಿನ ಬೆಳವಣಿಗೆಯನ್ನು ಎಥೆಲಿನ್ ನಿರ್ವಹಿಸುತ್ತದೆ.
ಇವೆಲ್ಲವನ್ನೂ
ಒಳಗೊಂಡಂತೆ ತೀರಾ ಇತ್ತೀಚೆಗೆ ಸಸ್ಯಗಳಲ್ಲಿ ರೋಗ ನಿರೋಧಕತೆಗೆ ನೆರವಾಗುವ ‘ಬ್ರಾಸಿನೊಸ್ಟಿರೊಯಡ್ಸ್’,
‘ಸಲಿಸಿಲಿಕ್ ಆ್ಯಸಿಡ್’ ಮುಂತಾದ ಹಾರ್ಮೋನ್ ಗಳನ್ನು ಕಂಡುಹಿಡಿಯಲಾಗಿದೆ. ವಿವಿಧ ಬೆಳವಣಿಗೆ ಹಂತದಲ್ಲಿ
ಜೀವಕೋಶಗಳ ನಡುವೆ ನಡೆಯುವ ಸಂವಹನದ ಕೊಂಡಿಯನ್ನು ಗುರುತಿಸುವ ಈ ಸಂಶೋಧನೆ ನಿರಂತರವಾಗಿ ನಡೆಯುತ್ತಲೇ
ಇದೆ.
ಉಳಿದಂತೆ
ಹೀಗೆ
ಮನುಷ್ಯರಲ್ಲಿರುವಂತೆ ಸಸ್ಯಗಳಲ್ಲಿಯೂ ಕೂಡಾ ಹಾಮೋನ್ಗಳು ನೋಟ-ನಡೆಯನ್ನು ನಿರ್ಧರಿಸುವಲ್ಲಿ ಪ್ರಮುಖ
ಪಾತ್ರ ವಹಿಸುತ್ತವೆ. ನೀವು ಹಿತ್ತಲ ತೋಟ ಮಾಡುತ್ತಿದ್ದರೆ ಅಥವಾ ಒಳಾಂಗಣ ಸಸ್ಯಗಳನ್ನು ಬೆಳೆಸುತ್ತಿದ್ದರೆ
ಬಹುಶಃ ಈ ವಿದ್ಯಮಾನಗಳನ್ನು ಗಮನಿಸಿರುತ್ತಿರಾ. ಸ್ವತಃ ಕೃಷಿಕರಾಗಿದ್ದಲ್ಲಿ ಸಿಂಥೆಟಿಕ್ ಹಾರ್ಮೋನ್
ಗಳ ಬಳಕೆಯನ್ನೂ ಮಾಡಿರುತ್ತೀರಾ. ಒಟ್ಟಿನಲ್ಲಿ ಸಸ್ಯಗಳ ಪಾಲನೆ-ಪೋಷಣೆಯಲ್ಲಿ ತೊಡಗಿದ್ದಲ್ಲಿ ಅವುಗಳ
‘ಮೂಡ್ ಸ್ವಿಂಗ್’ ಅರಿಯುವತ್ತ ಹಾರ್ಮೋನ್ ಗಳ ಈ ಜ್ಞಾನ ಪ್ರಯೋಜನವಾಗಬಹುದು.
ಅಂದ ಹಾಗೆ ಆಕ್ಸಿನ್ ಅನ್ನು ರಾಸಾಯನಿಕದ ರೂಪದಲ್ಲಿ
ಮೊದಲು ಪ್ರತ್ಯೇಕಿಸಿದ್ದು ಗರ್ಭಿಣಿ ಮಹಿಳೆಯ ಮೂತ್ರದಿಂದ. ಸಸ್ಯ-ಮನುಷ್ಯನ ಬಾಂಧವ್ಯ ಎಂತದ್ದೋ! ಬಗೆಹರಿಯದ
ರಹಸ್ಯವೇ ಸೈ.




Comments
Post a Comment