ಗಿಡಗಳಿರಲವ್ವ ಮನೆ ತುಂಬ - ಒಳಾಂಗಣ ಸಸ್ಯಗಳ ಬಗ್ಗೆ
ಕಾಡಿನ
ಪ್ರಾಣಿ-ಪಕ್ಷಿಗಳನ್ನು ನಾಡಿಗೆ ತಂದು, ಪಳಗಿಸಿ, ಸಾಕಿ-ಬೆಳೆಸಿ, ಅವುಗಳೊಂದಿಗೆ ಭಾವನಾತ್ಮಕ ಬಂಧ ಬೆಳೆಸುವುದು
ಮಾನವನಿಗೆ ಹೊಸದಲ್ಲ. ಯುಗ-ಯುಗಗಳಿಂದ ಮೂಲತಃ ನಮಗೆ ಸೇರದ ಎಷ್ಟೋ ಇಂತಹ ವಸ್ತು-ವಿಷಯಗಳನ್ನು ನಮ್ಮದಾಗಿಸಿದ
ಹೊಣೆ ನಮ್ಮ ಪೂರ್ವಿಕರದ್ದು. ಬಹುಶಃ ಇಂತದ್ದೆ ಹಾದಿಯಲ್ಲೆಲ್ಲೋ ಶುರುವಾದದ್ದು ಒಳಾಂಗಣ ಸಸ್ಯಗಳನ್ನು
ಪಾಲಿಸಿ ಪೋಷಿಸುವ ‘ಇಂಡೋರ್ ಗಾರ್ಡನಿಂಗ್’ನ ಹವ್ಯಾಸ.
ಇತಿಹಾಸದಲ್ಲಿ
ಈ ಹವ್ಯಾಸದ ಆರಂಭವನ್ನು ಕರಾರುವಕ್ಕಾಗಿ ಗುರುತಿಸಲಾಗದಿದ್ದರೂ ಕೆಲವೊಂದು ಘಟನೆಗಳನ್ನು ಉಲ್ಲೇಖಿಸಲಾಗುತ್ತದೆ.
ಸುಂದರ ಕೆತ್ತನೆಗಳ ಟೆರಾಕೋಟಾ, ಅಮೃತ ಶಿಲೆ, ಪಿಂಗಾಣಿಯ ಹೂಕುಂಡಗಳಲ್ಲಿ ಹಣ್ಣಿನ ಗಿಡಗಳನ್ನು, ಅಲಂಕಾರಿಕ
ಗಿಡಗಳನ್ನು ಬೆಳೆಸಿ ಅಂಗಳದಲ್ಲಿ ಒಪ್ಪಗೆ ಜೋಡಿಸುವ ಅಭ್ಯಾಸ ಪ್ರಾಚೀನ ರೋಮನ್, ಈಜಿಪ್ಟ್, ಚೀನಾಗಳಲ್ಲಿ
ರೂಢಿಯಲ್ಲಿತ್ತು. ಜಪಾನಿಯನ್ನರು, ಚೀನಿಯರಲ್ಲಿ ಪ್ರಕೃತಿಯನ್ನು ಅನುಕರಿಸಿ ನಕಲಿಸುವ ಬೋನ್ಸಾಯ್, ಪೆನ್ಸಾಯ್
ಕಲೆಗಳು ಇಂದಿಗೂ ಜಗತ್ಪ್ರಸಿದ್ಧ. ನೆಬುಕನೇಜರ್ ಎಂಬ ರಾಜನೊಬ್ಬ ತನ್ನ ಪ್ರೀತಿಯ ಮಡದಿಗಾಗಿ ಬಾಬಿಲೋನ್
(ಇಂದಿನ ಇರಾಕ್)ನ ಅರಮನೆಯಲ್ಲಿ ಖರ್ಜೂರ, ದೇವದಾರು, ಹುಲ್ಲುಗಾವಲುಳ್ಳ ತೇಲುವ ಉದ್ಯಾನವನ್ನು ನಿರ್ಮಿಸಿಸಿದ್ದನಂತೆ.
ಅಂದು-ಇಂದು
ಈ ಮೈಲಿಗಲ್ಲುಗಳಲ್ಲಿ
ಮಹತ್ತರವಾದದ್ದು ಹೊಸ ದೇಶ-ಭೂಭಾಗಗಳ ಅನ್ವೇಷಣೆ, ಹೊಸ ಸಸ್ಯ ಸಂಪತ್ತಿನ ಪರಿಚಯ, ತಳಿಗಳ ಸಂಕರಣೆ ಮತ್ತು
ಉದ್ಯಾನವನಗಳಲ್ಲಿ ತಳಿಗಳ ಪ್ರದರ್ಶನ. ಅನ್ವೇಷಕರು ತಮ್ಮ ಸಮುದ್ರ ಪ್ರಯಾಣಗಳಿಗೆ ಧನಸಹಾಯ ಮಾಡುತ್ತಿದ್ದ
ಮೊನೆಸ್ಟರಿಗಳಿಗೆ ಉಡುಗೊರೆಯಾಗಿ ಗಿಡಗಳನ್ನು ನೀಡುತ್ತಿದ್ದರಂತೆ. ಹೀಗೆಯೇ ಕೊಲಂಬಸ್ ಉತ್ತರ ಅಮೇರಿಕಾದ
ಬಹಳಷ್ಟು ಗಿಡಗಳನ್ನು ಯುರೋಪ್ ಗೆ ಪರಿಚಿಯಿಸಿದ್ದು. ತಂಪು ಕೊರೆಯುವ ಚಳಿಯ ಸಮಯದಲ್ಲಿ ಉಷ್ಣ ವಲಯದ
ಇಂತಹ ಗಿಡಗಳನ್ನು ಮನೆಯಲ್ಲಿ ಬೆಳೆಸುವುದು ಕಷ್ಟವಾದಾಗ ಕಂಡು ಹಿಡಿದ ಗಾಜಿನ ಮನೆ ಹೊಸ ಅಲೆಯೊಂದನ್ನು
ಸೃಷ್ಟಿಸಿತು. ನಂತರದ ಕೈಗಾರಿಕಾ ಕ್ರಾಂತಿ, ರಾಣಿ ವಿಕ್ಟೋರಿಯಾಳ ಕಾಲದಲ್ಲಿ ಐಷಾರಾಮಿ ಇಂಗ್ಲೀಷರಲ್ಲದೆ
ಸಾಮಾನ್ಯ ಜನರೂ ಕೂಡಾ ಒಳಾಂಗಣ ಗಿಡಗಳ ವಿನ್ಯಾಸವನ್ನು ವ್ಯಾಪಕವಾಗಿಸಿದರು. ಮನೆಯೊಳಗಡೆ ವಿವಿಧ ರೀತಿಯ
ಫರ್ನ್ (ಜರಿ ಗಿಡಗಳು), ಪಾಮ್ ಗಳನ್ನು ಬೆಳೆಸತೊಡಗಿದರು.
ನಿಧಾನಕ್ಕೆ
ನರ್ಸರಿಗಳು, ಗಿಡಗಳ ಮಾರಾಟ, ಕೊಡು-ಕೊಳ್ಳುವಿಕೆ ಪ್ರಾರಂಭವಾದವು. ತೋಟಗಾರರ ಸಂಘ, ಸಸ್ಯಪ್ರಿಯರ ದೊಡ್ಡ
ಸಮಾಜವೇ ನಿರ್ಮಾಣವಾಯಿತು. ಎರಡನೇ ವಿಶ್ವ ಯುದ್ಧದ ನಂತರ ಮಹಿಳಾ ಉದ್ಯೋಗಿಗಳ ಪ್ರವೇಶದೊಂದಿಗೆ ಕಛೇರಿಗಳಲ್ಲಿ
ಒಳಾಂಗಣ ಸಸ್ಯಗಳ ಬಳಕೆ ಪ್ರಾರಂಭವಾಯಿತು. ಸಸ್ಯಗಳ ಬೂಟಿಕ್ ಅಂಗಡಿಗಳು ಸರ್ವತ್ರವಾದವು. ಹೂವಿನ ಗಿಡಗಳಿಗಿಂತ
ಬಣ್ಣದ ಎಲೆಯ ಗಿಡಗಳ ಬಳಕೆ ಹೆಚ್ಚಾಯಿತು. ಆಕರ್ಷಣೀಯ ವಿನ್ಯಾಸದ ಸಕುಲೆಂಟ್ಸ್ ಗಳು ಪರಿಚಿತವಾದವು.
ಇಪ್ಪತ್ತೊಂದನೇ
ಶತಮಾನದಲ್ಲಿ ಈ ಎಲ್ಲಾ ಹಳೆಯ ಸಸ್ಯಗಳು ಹೊಸ ಮೆರುಗಿನೊಂದಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು.
ಪರದೇಶಗಳನ್ನು ಅಗತ್ಯಕ್ಕಿಂತ ಹೆಚ್ಚಾಗೆ ಅನುಸರಿಸುವ, ಅಭಿವೃದ್ಧಿಯ ದಾರಿಯಲ್ಲಿದ್ದ ಭಾರತದಲ್ಲಿ ಕೂಡಾ
ಇದು ಒಳಾಂಗಣ ವಿನ್ಯಾಸದ ಪರ್ವ ಕಾಲ. ಅಲಂಕಾರಿಕ ಬಳಕೆಯೊಂದಿಗೆ ‘ಗಾಳಿ ಶುದ್ಧೀಕರಣದ’ಹಣೆಪಟ್ಟಿಯೊಂದಿಗೆ
ಈ ಟ್ರೆಂಡ್ ಮತ್ತಷ್ಟು ವೇಗ ಪಡೆಯಿತು. 2020ರ ಕೋವಿಡ್ ನಂತರದಲ್ಲಂತೂ ಈ ಆಸಕ್ತಿಗೆ ಸುಗ್ಗಿಕಾಲ. ಕೋವಿಡ್
ಕಾಲದಲ್ಲಿ ಹಣ ಗಳಿಸಿದ ಕೆಲವೇ ಉದ್ದಿಮೆಗಳಲ್ಲಿ ಪಾರಾಸಿಟೆಮಾಲ್, ಮಾಸ್ಕ್, ಸಾನಿಟೈಜರ್ ನಂತರದ ಸ್ಥಾನ
ಒಳಾಂಗಣ ಸಸ್ಯಗಳ ನರ್ಸರಿಗಳೆಂದರೆ ಅತಿಶಯೋಕ್ತಿಯೇನಲ್ಲ. ಇನ್ ಸ್ಟಾಗ್ರಾಮ್ನಲ್ಲಿ #plantmom ಎನ್ನುವ
ಹ್ಯಾಶ್ ಟ್ಯಾಗ್ ಜುಲೈ 2021ರ ದಿನವೊಂದರಲ್ಲಿ 2.6 ಮಿಲಿಯ ಬಾರಿ ಬಳಕೆಯಾಯಿತಂತೆ. ಇವತ್ತು ಫೇಸ್ ಬುಕ್
ಮಾರ್ಕೆಟ್ ಪ್ಲೇಸ್ ನಲ್ಲಿ ಮನೆ ಮನೆಯಿಂದ ಒಳಾಂಗಣ ಸಸ್ಯಗಳನ್ನು ಬಿಕರಿ ಮಾಡುವ ಸಾವಿರಾರು ಮಾರಾಟಗಾರರನ್ನು ಕಾಣಬಹುದು. ದುಬಾರಿಯಾದ ಅಪರೂಪದ ಪರದೇಶದ
ವಿಲಕ್ಷಣ ಸಸ್ಯಗಳು, 20-30 ಸಾವಿರಗಳ ವರೆಗೂ ಬಿಕರಿಯಾಗುತ್ತವೆ.
ಸೌಂದರ್ಯ-ಆರೋಗ್ಯ
ಮೂಲತಃ ನಿರ್ವಾತ ಪ್ರದೇಶದಲ್ಲಿ ಸ್ಥಿತವಾದ, ಬಾಹ್ಯಾಕಾಶ ನಿಲ್ದಾಣಗಳಂತಹ
ಗಾಳಿ ಚಲನೆಯಿಲ್ಲದ ತೀರಾ ಮುಚ್ಚಿದ ಜಾಗದಲ್ಲಿ ಕೆಲ ಒಳಾಂಗಣ ಸಸ್ಯಗಳು ಗಾಳಿಯ ಕಲುಷಿತಗಳನ್ನು ತೊಡೆದು
ಹಾಕುತ್ತವೆ ಎಂದು 1989ರಲ್ಲಿ ನಾಸಾ ನಡೆಸಿದ ಅಧ್ಯಯನದಲ್ಲಿ ಕಂಡುಬಂದಿತ್ತು. ‘ಬೆಂಜೀ಼ನ್’, ‘ಜೈ಼ಲಿನ್’,
‘ಟಾಲಿನ್’, ‘ಫಾರ್ಮ ಲಿನ್’ಗಳಂತಹ ಭಾಷ್ಪರೂಪದ ರಾಸಾಯನಿಕಗಳನ್ನು ಎಲೆಗಳಲ್ಲಿ ಹೀರಿ ಹಿಡಿದುಕೊಂಡು,
ನಂತರ ತನ್ನ ಕಿಣ್ವಗಳ ವ್ಯವಸ್ಥೆ ಮೂಲಕ ನಾಶ ಪಡಿಸುವ ಕೆಲ ಒಳಾಂಗಣ ಸಸ್ಯಗಳು ಮಾಲಿನ್ಯಕಾರಕ ಗಾಳಿಯನ್ನು
ಶುದ್ಧೀಕರಿಸಬಲ್ಲವು ಎಂದು ಈ ಅಧ್ಯಯನದಲ್ಲಿ ನಿರೂಪಿಸಲಾಗಿತ್ತು. ಆದರೆ ಇದು ಭದ್ರವಾಗಿ ಬಿಗಿಯಾಗಿ
ಮುಚ್ಚಿದ ಕೊಠಡಿಯಲ್ಲಿ ನಡೆಸಿದ ಪ್ರಯೋಗಗಳು. ಗಾಳಿಯ ಚಲನೆಯಿರುವ ಸಾಮಾನ್ಯ ಮನೆ, ಕಟ್ಟಡಗಳಲ್ಲಿ ಅನ್ವಯವಾಗಬೇಕಾದರೆ ಪ್ರತಿ ನೂರು ಚದರ ಮೀಟರ್ ಗೆ ಹತ್ತರಿಂದ-ಸಾವಿರ ಗಿಡಗಳನ್ನು ಇಟ್ಟರೆ ಮಾತ್ರ ಸಾಧ್ಯವೆಂಬ
ಸಮೀಕ್ಷೆಯಾಗಿದೆ. ಕೆಲ ಸಸ್ಯಗಳು ಗಾಳಿಯನ್ನೂ ಗಾಳಿಸುವುದಂತೂ
ನಿಜ, ಆದರೆ ಸಹಜ ಪರಿಸರದಲ್ಲಿ ಎಷ್ಟರ ಮಟ್ಟಿಗೆ ಫಲಕಾರಿ ಎಂಬ ಆಧಾರಗಳು ಲಭ್ಯವಿಲ್ಲ.
ನಾಸಾದ
ಈ ಅಧ್ಯಯನದ ನಂತರ ಜನ ಮಳ್ಳೋ ಜಾತ್ರೆ ಮಳ್ಳೋ ಎಂಬ ರೀತಿಯಲ್ಲಿ ಪ್ರಪಂಚದಾದ್ಯಂತ ಒಳಾಂಗಣ ಸಸ್ಯಗಳಿಗೆ
ಬೇಡಿಕೆ ಹೆಚ್ಚಾಯಿತು. ಏನೇ ಆಗಲಿ, ಮನಸ್ಸಿಗೆ ಮುದ ನೀಡುವ, ಕೈಗಳಿಗೆ ಕೆಲಸ ಕೊಡುವ, ಗಾರ್ಡನಿಂಗ್
ಯಾವತ್ತಿಗೂ ಒಳ್ಳೆಯ ಚಟವೇ. ಒಳಾಂಗಣ ಗಿಡಗಳು ನೋಡಲಷ್ಟೇ ಚಂದವಲ್ಲ. ಹಲವಾರು ಮಾನಸಿಕ, ದೈಹಿಕ ಆರೋಗ್ಯವನ್ನು
ಸುಧಾರಿಸುತ್ತವೆ. ಏಕಾಗ್ರತೆ, ಸೃಜನಶೀಲತೆ, ಕಾರ್ಯ ಕಾರಿತ್ವವನ್ನು ಹೆಚ್ಚಿಸಿ ,ಮನ: ಸ್ಥತಿಯನ್ನು
ತಿಳಿಗೊಳಿಸಲು ಸಹಕಾರಿ. ಸೂಕ್ಷ್ಮವಾದ ಒಂದು ಆರೋಗ್ಯಕರ ಹವಾಮಾನವನ್ನು ತಮ್ಮ ಸುತ್ತ ಸೃಷ್ಟಿಸಿ ನಮ್ಮ
ಒಳಾಂಗಣ ಪರಿಸರವನ್ನು ಹದಗೊಳಿಸುತ್ತವೆ. ಭಾಷ್ಪೀಕರಣದ ಮೂಲಕ ತೇವಾಂಶ, ತಾಪಮಾನವನ್ನು ಸಮತೋಲನ ಮಾಡುತ್ತವೆ.
ಹಾಗಾಗಿ
ಬರಿ ಸೌಂದರ್ಯಕ್ಕಲ್ಲದೆ ಆರೋಗ್ಯಕ್ಕೂ ಉಪಕಾರಿಯಾದ ಒಳಾಂಗಣ ಸಸ್ಯಗಳ ಬಳಕೆ ಹೇಗೆ, ಆಯ್ಕೆ ಆರೈಕೆ ಹೇಗೆ,
ನೀರು-ಬೆಳಕಿಗೆ ಅನುಗುಣವಾಗಿ ಯಾವ ಸ್ಥಳಕ್ಕೆ ಯಾವ ಸಸ್ಯ ಸೂಕ್ತ, ಎಂಬ ಬಗ್ಗೆ ಸಂಕ್ಷಿಪ್ತವಾದ ಪರಿಚಯ
ನೀಡುವುದು ಈ ಲೇಖನದ ಉದ್ಧೇಶ.
ಒಳಾಂಗಣ
ಸಸ್ಯಗಳು, ಹೇಗೆ-ಏನು?
ಪಟ್ಟಣದ
ಅಪಾರ್ಟಮೆಂಟಿನ ಚಿಕ್ಕ ಮನೆ. ದೇವರ ಪೂಜೆಗೆ ಒಂದೆರಡಾದರೂ ‘ಹೂ’ ಕೊಯ್ಯಲು ಎಂದು ದಾಸವಾಳ ತಂದು ಬಾಲ್ಕನಿಯಲ್ಲಿರಿಸಿದ್ದಾಗಿದೆ.
ನರ್ಸರಿಯಲ್ಲಿ ಚೋಟುದ್ದ ಗಿಡ ಚಂದ ಚಂದದ ಮೂರು ನಾಲ್ಕು ಹೂ ಬಿಟ್ಟು ನಲಿಯುತ್ತಿತ್ತು. ಈಗ ಒಂದೇ ಒಂದು
ಹೂ ಕಾಣದೆ ತಿಂಗಳಾಯಿತು. ಮೋಸವಾಯಿತು, ಎಲ್ಲಾ ನರ್ಸರಿಯವರ ಟ್ರಿಕ್ಕು, ಎಂದು ಎಷ್ಟೋ ಸಲ ದೂರಿದ್ದಿದೆ.
ಆದರೆ ಇದರಲ್ಲಿ ನಿಜವಾದ ತಪ್ಪು ನಮ್ಮದು. ಹೊರಾಂಗಣದಲ್ಲಿ ಬೆಳೆಯುವ ಎಲ್ಲಾ ಸಸ್ಯವನ್ನು ಒಳಾಂಗಣದಲ್ಲಿ
ಬೆಳೆಸಲು ಸಾಧ್ಯವಿಲ್ಲ. ಕಾರಣ ಗಾಳಿ-ಬೆಳಕು , ನೀರು-ತೇವಾಂಶ, ಬೇರು-ಬುಡದ ಬೆಳವಣಿಗೆಯ ವ್ಯತ್ಯಾಸ.
ದಿನದ ಎಂಟು-ಹತ್ತು ತಾಸು ಬೆಳಕು ಬೇಡುವ, ಗೊಬ್ಬರ-ನೀರು ಬಯಸುವ ದಾಸವಾಳಗಳು ಟೇರೆಸಿನಲ್ಲಿ ಬೆಳೆಯಬಹುದೇ
ಹೊರತು ಬಾಲ್ಕನಿ, ಒಳಾಂಗಣದಲ್ಲಲ್ಲ.
ಮನೆಯ ಒಳ,
ಕೋಣೆ, ಕಿಟಕಿಯಿಂದ ನುಸುಳುವ ಬೆಳಕು, ನೆರಳು-ಕತ್ತಲೆಯನ್ನು ಸಹಿಸುವ ಗಟ್ಟಿಗಿತ್ತಿಯರಿಗೆ ಒಳಾಂಗಣ
ಗಿಡಗಳೆಂದು ನಾಮಕರಣ ಮಾಡಲಾಗಿದೆ. ಸಸ್ಯಗಳಲ್ಲಿ ಹೊರಾಂಗಣ-ಒಳಾಂಗಣ ಎಂಬ ಬೇಧ ಭಾವವಿಲ್ಲ. ಅದೇನಿದ್ದರೂ
ಬೆಳಕಿನ ಲಭ್ಯತೆಯ ಅಡಿಯಲ್ಲಿ ಗಿಡಗಳ ಬೆಳವಣಿಗೆ ಗಮನಿಸಿ ನಾವು ಮಾಡಿಕೊಂಡ ವರ್ಗೀಕರಣ.
ಒಳಾಂಗಣದ
ವಾತಾವರಣದಲ್ಲಿ ಒಗ್ಗಿಕೊಳ್ಳಲು ಕೆಲ ಸಸ್ಯಗಳು ವಿಶಿಷ್ಟ ರೀತಿಯಲ್ಲಿ ವಿಕಸಿತವಾಗುತ್ತವೆ. ಆದ್ದರಿಣದ
ಹೊರಾಂಗಣದ ಸಸ್ಯಗಳಿಗಿಂತ ಇವು ಸಲ್ಪ ಭಿನ್ನ. ಉದಾಹರಣೆ ನೀರಿನ ಆವಿಯಾಗುವಿಕೆ ತಡೆಯಲು ದಪ್ಪ ಎಲೆಗಳು,
ಮುಳ್ಳು, ಎಲೆಗಳ ಮೇಲೆ ‘ಕ್ಯುಟಿಕಲ್’ನಂತಹ ಗಟ್ಟಿಯ ಹೊರಪದರ, ಬೆಳಕನ್ನು ಪ್ರತಿಫಲಿಸುವ ಮಿರುಗುವ ಎಲೆ,
ನೀರನ್ನು ಸಂಗ್ರಹಿಸುವ ರಸಭರಿತ ಎಲೆ-ಕಾಂಡ ಮುಂತಾದವು.
ಹೆಚ್ಚಾಗಿ
ವಿದೇಶದಿಂದ ಪರಿಚಿತವಾದ ಕ್ಯಾಕ್ಟಾಯ್-ಸಕ್ಯುಲೆಂಟ್ಸ್, ಮನಿ ಪ್ಲಾಂಟ್, ಸ್ಪೈಡರ್ ಪ್ಲಾಂಟ್, ಹೆಡೆರಾ,
ಮೊನಸ್ಟೆರಾ, ವಿಚಿತ್ರ ಆಂಗ್ಲ ಹೆಸರುಗಳುಳ್ಳ ನೂರಾರು ಒಳಾಂಗಣ ಸಸ್ಯಗಳು ಇಂದು ನಮ್ಮದೇ ಎಂಬಷ್ಟು ಆಪ್ತವಾಗಿವೆ.
ಹಲವು ಆಕಾರ, ಬಣ್ಣ, ಗಾತ್ರ, ರಚನೆಯಲ್ಲಿ ನಮ್ಮ ರುಚಿಗೆ ತಕ್ಕಂತೆ ಎಲ್ಲಾ ರೀತಿಯ ಜಾಗಗಳಲ್ಲೂ ಸ್ಥಾಪಿಸಲು
ಯೋಗ್ಯವಾದ ಅಲಂಕಾರಿಕ ಸಸ್ಯಗಳ ದೊಡ್ಡ ಪ್ರಪಂಚವೇ ಇದೆ.
ಈ ಸಸ್ಯ ಸಾಗರದಲ್ಲಿ ನಮಗೆ ಬೇಕಾದ್ದನ್ನು
ಆಯ್ಕೆ ಮಾಡುವಾಗ ಕೆಳಗಿನ ಗುಣಗಳನ್ನು ಹೊಂದಿರುವುದನ್ನು ಪರಿಶೀಲಿಸುವುದು ಒಳಿತು.
- ಅತ್ಯಂತ ಕಡಿಮೆ ಕಾಳಜಿ
- ಧೃಡವಾದ, ಗಡುಸಾದ ಬೆಳೆವಣಿಗೆ
- ಕಡಿಮೆ ನೀರಿನ ಅವಶ್ಯಕತೆ ಮತ್ತು ಬರ ಸಹಿಷ್ಣುತೆ
- ಮೇಲೆ ಹೇಳಿದ ದಪ್ಪ ಎಲೆ, ಅಥವಾ ಪಾಪಾಸುಕಳ್ಳಿ ಜಾತಿ
- ಕೀಟ-ರೋಗ ನಿರೋಧಕತೆ
- ನಿಧಾನವಾದ ಬೆಳವಣಿಗೆ
ಪುಷ್ಪಕರಂಡ
ಸಸ್ಯಗಳ ಆಯ್ಕೆಯಾದ ನಂತರದ ಹೆಜ್ಜೆ ಅದಕ್ಕೆ ಸೂಕ್ತವಾದ ಪುಷ್ಪಕರಂಡ/ಹೂಕುಂಡ (ಪಾಟ್/ಕಂಟೇನರ್) ನದ್ದು. ಸಸ್ಯ ಲೋಕದಷ್ಟೇ ವೈವಿಧ್ಯಯತೆ ಇಂದು ಹೂಕುಂಡಗಳಲ್ಲೂ ಲಭ್ಯವಿದೆ.
ಟೆರಾಕೋಟಾ, ಪ್ಲಾಸ್ಟಿಕ್, ಸಿರಾಮಿಕ್, ಕಾಂಕ್ರೀಟ್, ಮಣ್ಣಿನ ಯಾವುದೇ ಹೂಕುಂಡನ್ನೂ ಒಳಾಂಗಣ ಸಸ್ಯಗಳಿಗೆ
ಆರಿಸಿಕೊಳ್ಳಬಹುದು. ಚಂದದ ಉಬ್ಬು ತಗ್ಗು ಚಿತ್ರವುಳ್ಳ ತಾಮ್ರದ ಪಾತ್ರೆ, ಮ್ಯಾಕ್ರೇಮ್ ಹ್ಯಾಂಗರ್,
ಟಿನ್ ಕ್ಯಾನ್, ಸೆಣಬಿನ ಜೂಟ್ ಬ್ಯಾಗ್ ಆಕರ್ಷಕ ಕಲಂಕಾರಿ ವಿನ್ಯಾಸದ ಚೀಲಗಳನ್ನು ಪಾಟ್ ಗಳನ್ನಿಡಲು
ಅಲಂಕಾರಿಕವಾದ ಕಂಟೇನರ್ ಆಗಿ ಉಪಯೋಗಿಸಬಹುದು.,
ಗಿಡಗಳ ಎತ್ತರ, ಬೇರಿನ ಬೆಳವಣಿಗೆ ಆಧರಿಸಿ ಹೂಕುಂಡವನ್ನು ಆರಿಸಬೇಕು. ನಾಲ್ಕು
ಇಂಚಿನ ಗಿಡಕ್ಕೆ ಆರು ಇಂಚಿನ ಹೂಕುಂಡ, ಹೀಗೆ ಒಂದು-ಎರಡು ಇಂಚಾದರೂ ಬೇರಿನ ಉಸಿರಾಟದ ಜಾಗ ಅವಶ್ಯಕ.
ಹೂಕುಂಡ ಆರಿಸಬೇಕಾದಾಗ ಗಮನಿಸಬೇಕಾದ ಮತ್ತೊಂದು ಮಹತ್ವದ ಅಂಶ ನೀರು ಬಸಿದು ಹೋಗುವಂತೆ ಕುಂಡದ ತಳದಲ್ಲಿ
ಮಾಡಲಾದ ರಂಧ್ರ. ಒಂದು ದೊಡ್ಡ ರಂಧ್ರಕ್ಕಿಂತ ಹಲವಾರು ಚಿಕ್ಕ ಚಿಕ್ಕ ರಂಧ್ರಗಳು ಒಳ್ಳೆಯದು. ಕೆಲ ಕುಂಡಗಳಿಗೆ
ರಂಧ್ರಗಳೇ ಇರುವುದಿಲ್ಲ. ಅಂತಹ ಕುಂಡಗಳನ್ನು ಕೇವಲ ಕಂಟೇನರ್ ಆಗಿ ಅಥವಾ ರಂಧ್ರಗಳನ್ನು ಕೊರೆದು ಬಳಸಿದರೆ
ಒಳಿತು. ಕುಂಡಗಳನ್ನು ಮಣ್ಣಿನ ಮಿಶ್ರಣದಿಂದ ತುಂಬುವ ಮೊದಲು ರಂಧ್ರವನ್ನು ಮತ್ತು ಕೆಳಗಿನ ಒಂದು ಪದರವನ್ನು
ಕಲ್ಲುಗಳಿಂದ ಮುಚ್ಚಬೇಕು, ನೀರು ಬಸಿದು ಹೋಗಲು ಇದು ಸಹಾಯಕ. ಕುಂಡದಿಂದ ಬಳಿದ ಹೆಚ್ಚು ನೀರನ್ನು ಸಂಗ್ರಹಿಸಲು
‘ಸಾಸರ್’/ತಟ್ಟೆ ಉಪಯುಕ್ತ.
ಬೆಳಕಿನಾಟ
ಕೆಲವರಿಗೆ
ಸುಡು ಬಿಸಿಲಿದ್ದರೂ ಸಮುದ್ರ ತೀರ ಇಷ್ಟವಾದರೆ ಇನ್ನೂ ಕೆಲವರಿಗೆ ತಂಪಾದ ಮರದ ನೆರಳೇ ಚಂದ. ಸಸ್ಯಗಳೂ
ನಮ್ಮಂತೇ ‘ಮೂಡಿಗಳು. ಡೇ ಲಿಲ್ಲಿಯಂತ ಸಸ್ಯಗಳಿಗೆ ಬಿಸಿಲು ಪ್ರೀತಿಯಾದರೆ ಬಾಲ್ಸಮ್ ಗಳಿಗೆ ನರಳು ಪ್ರೀತಿ.
ಸಸ್ಯಗಳ ಈ ಆದ್ಯತೆಯ ಕಾರಣ ಸೂರ್ಯನ ಕಿರಣಗಳನ್ನು ಅತಿಯಾಗಿ ಪ್ರೀತಿಸುವ ದಿನದ ಎಂಟರಿಂದ ಹತ್ತು ತಾಸು
ಪ್ರಕಾಶದ ಅವಶ್ಯಕತೆಯಿರುವ ದಾಸವಾಳಗಳನ್ನು ಮನೆಯೂಳಗೆ ಬೆಳೆಸುವುದು ಅಸಾಧ್ಯ. ಹಾಗೆಯೇ ತೇವಾಂಶದ, ನೆರಳನ್ನು
ಬಯಸುವ ಪೆಪರೋಮಿಯಾಗಳನ್ನು ಬಟಾ ಬಯಲ ಬಿಸಿಲಿನಲ್ಲಿ ಬೆಳೆಸುವುದು ಅಶಕ್ಯ. ಆದ್ದರಿಂದ ಒಳಾಂಗಣ ಸಸ್ಯಗಳ ಆಯ್ಕೆಯಲ್ಲಿ ಕೊಠಡಿಯೊಳಗಣ ಬೆಳಕಿನ
ಲಭ್ಯತೆ ಮಹತ್ತರವಾದದ್ದು.
ನಮ್ಮ ಕಣ್ಣಿಗೆ
ಕಾಣುವ ಸೂರ್ಯನ ಬೆಳಕಲ್ಲಿ ಹಲವು ತರಂಗಗಳ (ವೇವಲೆಂಥ್/wavelength) ಕಿರಣಗಳು ಸಮ್ಮಿಳಿತವಾಗಿರುತ್ತದೆ.
ಇದಕ್ಕೆ ಬೆಳಕಿನ ತೀಕ್ಷ್ಣತೆ (Intensity) ಎನ್ನಲಾಗುತ್ತದೆ. ಕಡಿಮೆ ತರಂಗಾಂತರದ ‘ನೇರಳೆಯಿಂದ ಹೆಚ್ಚು
ತರಂಗಾಂತರದ ‘ಕೆಂಪು’ ನಮ್ಮ ದೃಷ್ಟಿಗೆ ಬಿಳಿಯ ಬಣ್ಣದಲ್ಲಿ ಗೋಚರಿಸುತ್ತವೆ. ಇನ್ನೂ ಕಡಿಮೆ ತರಂಗಾಂತರದ
ಅತಿನೇರಳೆ/ ಅಲ್ಟ್ರಾವೈಲೆಟ್ (ಯು.ವಿ ಕಿರಣ/ultraviolet), ಇನ್ನೂ ಹೆಚ್ಚಿನ ಅವಗೆಂಪು (ಇನಫ್ರಾರೆಡ್
ಕಿರಣ/infrared), ಬೆಳಕಿನಲ್ಲಿ ಹಾಜರಿದ್ದರೂ ನಮ್ಮ ಕಣ್ಣಿಗೆ ಗೋಚರಿಸುವುದಿಲ್ಲ. ಓಝೋನ್ ಪದರಗಳಲ್ಲಿ
ಹಾದು ಬಂದ ಹೊರಾಂಗಣದ ಬಿಸಿಲ ಬೆಳಕಲ್ಲಿ ಈ ಎಲ್ಲಾ ತರಂಗಾಂತರಗಳ ಕಿರಣಗಳು ಇರುತ್ತವೆ. ಹೊರಾಂಗಣ ಸಸ್ಯಗಳು
ಈ ಬೆಳಕಿಗೆ ಒಗ್ಗಿಕೊಂಡೊರುತ್ತವೆ. ಆದರೆ ಇಂತಹ ತೀಕ್ಷ್ಣ ಬೆಳಕನ್ನು ತಾಳಿಕೊಳ್ಳುವ ಸಾಮರ್ಥ್ಯ ಒಳಾಂಗಣ
ಸಸ್ಯಗಳಿಗಿರುವುದಿಲ್ಲ.
ಎಲ್ಲಾ
ಸಸ್ಯಗಳಿಗೂ ದ್ಯುತಿ ಸಂಶ್ಲೇಷಣಾ ಕ್ರಿಯೆಗೆ ಬೆಳಕಿನ ಕಿರಣ ಬೇಕೇ ಬೇಕು. ವಾತಾವರಣದ ಇಂಗಾಲ ಬಳಸಿ ತಮ್ಮ
ಆಹಾರವನ್ನು ತಾವೇ ತಯಾರಿಸಿಕೊಳ್ಳಲು ದ್ಯುತಿ ಸಂಶ್ಲೇಷಣೆಗೆ ಬೇಕಾಗಿರುದು ನೀಲಿಯಿಂದ ಕೆಂಪು ತರಂಗಾಂತರದ,
ನಮ್ಮ ಕಣ್ಣಿಗೆ ಕಾಣುವ, 400 ರಿಂದ 700 ನ್ಯಾನೋ ಮೀಟರ್ ಆಚೆ ಇಚೆಯ ವೇವಲೆಂಥ್ ನ ಕಿರಣಗಳು. ಈ ಶ್ರೇಣಿಗೆ
ವೈಜ್ಞಾನಿಕವಾಗಿ Photosynthetically Active Radiation ಎನ್ನಲಾಗುತ್ತದೆ. ಇದನ್ನು ಬೆಳಕಿನ ಗುಣಮಟ್ಟ
(Quality) ಎಂದು ಕರೆಯಲಾಗುತ್ತದೆ.
ಸ್ಥೂಲವಾಗಿ
ಹೇಳಬೇಕಾದರೆ ಸಸ್ಯಗಳು ಇಡೀ ದಿನದ ಬೆಳಕು, ತಾಪಮಾನವನ್ನು ಸಂಗ್ರಹಿಸಿ ತಮ್ಮ ಬೆಳವಣಿಗೆಯನ್ನು ಸಂತಾನೋತ್ಪತ್ತಿ
ಕಡೆಗೆ ನಿದೇಶಿಸುತ್ತವೆ. ಇದಕ್ಕೆ Photo Period ಎನ್ನಲಾಗುತ್ತದೆ. ಹಾಗಾಗಿ ಹೆಚ್ಚಾಗಿ ಹೂ ಬಿಡುವ,
ಹಣ್ಣು ಕೊಡುವ ಸಸ್ಯಗಳಿಗೆ ಇಡೀ ದಿನದ ಬೆಳಕು ಬೇಕೇ ಬೇಕು. ಒಳಾಂಗಣದ ಬಣ್ಣದ ಎಲೆಯ ‘ಫೋಲಿಯೆಜ್’ ಸಸ್ಯಗಳು
ತಮ್ಮೆಲ್ಲಾ ಶಕ್ತಿಯನ್ನು ಚಂದದ ಎಲೆಗಳ ಬೆಳವಣಿಗೆಗೇ ಬಳಸುವುದರಿಂದ ಬೆಳಕನ್ನು ಸಂಗ್ರಹಿಸುವ ಆದ್ಯತೆ
ಕಡಿಮೆಯೆಂದೇ ಹೇಳಬಹುದು. ಆದ್ದರಿಂದ ಒಳಾಂಗಣ ಸಸ್ಯಗಳಿಗೆ ಮಂದ ಬೆಳಕು, ನೆರಳು, ದಿನದ ಕೆಲವೇ ಹೊತ್ತಿನ
ಬೆಳಕು ಬೆಳವಣಿಗೆಗೆ ಸಾಕಾಗಬಹುದು.
ಭೂಮಿಯ
ಚಲನೆಯ ಕಾರಣ ಸೂರ್ಯ ಪೂರ್ವದಲ್ಲಿ ಹುಟ್ಟಿ ಪಶ್ಚಿಮದಲ್ಲಿ ಮುಳುಗುತ್ತಾನೆಂದು ಭಾವಿಸಲಾಗಿದೆ. ಹಾಗಾಗಿ
ಕೋಣೆಯೊಂದಲ್ಲಿ ಪೂರ್ವಕ್ಕೆ ಮುಖ ಮಾಡಿರುವ ಕಿಟಕಿಗಳಲ್ಲಿ ಬೆಳಗಿನ ಆಹ್ಲಾದಕರ ಬೆಳಕು, ಪಶ್ಚಿಮಕ್ಕೆ
ಮುಖ ಮಾಡಿರುವ ಕಿಟಕಿಗಳಲ್ಲಿ ಮಧ್ಯಾಹ್ನದ ಬಿರುಸು ಬೆಳಕು ಬೀಳುತ್ತದೆ. ಉತ್ತರಕ್ಕೆ ಮುಖಮಾಡಿರುವ ಕಿಟಕಿಗಳಲ್ಲಿ
ದಿನದ ಯಾವ ಹೊತ್ತಿನಲ್ಲೂ ನೇರ ಬೆಳಕು ಹಾಯದ ಕಾರಣ ತಂಪಾದ ನೆರಳಿನ ಜಾಗವಾಗಿರುತ್ತದೆ. ದಕ್ಷಿಣಕ್ಕೆ
ಮುಖ ಮಾಡಿರುವ ಕಿಟಕಿಗಳಿರುವ ಕೋಣೆಯಲ್ಲಿ ಸುಮಾರಾಗಿ ದಿನವಿಡೀ ಬೆಳಕಿರುವುದನ್ನು ಗಮನಿಸಬಹುದು. ಜಾಗದಿಂದ
ಜಾಗಕ್ಕೆ, ಕಾಲದಿಂದ ಕಾಲಕ್ಕೆ, ಬೆಳಕಿನ ಈ ಮಾರ್ಗ
ಬದಲಾವಣೆಯನ್ನು ಲಕ್ಷಿಸಿ ಸಸ್ಯಗಳನ್ನಿಡಲು ಸರಿಯಾದ ಜಾಗವನ್ನು ನಾವೇ ತೀರ್ಮಾನಿಸಬೇಕು. ಬೆಳಕಿನ ಕೊರತೆಯಾದಾಗ
ಪ್ರಕಾಶದ ದಿಕ್ಕಿನೆಡೆಗೆ ಸಸ್ಯಗಳು ಚಲಿಸುವುದನ್ನೂ ಗಮನಿಸಬಹುದು (Phototropism).
ಹೀಗೆ ಬೆಳಕಿನ
ತೀಕ್ಷ್ಣತೆ, ಅವಧಿ, ಪ್ರಕಾಶಮಾನತೆ, ಗುಣಮಟ್ಟ, ದಿಕ್ಕು ಇವೆಲ್ಲವೂ ಒಳಾಂಗಣದ ಸಸ್ಯಗಳ ಆಯ್ಕೆಯಲ್ಲಿ,
ಅವುಗಳನನ್ನು ಯಾವ ಸ್ಥಳದಲ್ಲಿಡಬೇಕೆನ್ನುವದನ್ನು ನಿರ್ಧರಿಸುತ್ತವೆ.
ಸಸ್ಯಗಳನ್ನಿರಿಸಲು
ಕಿಟಕಿಗಳು ಪ್ರಶಸ್ಥ ಸ್ಥಳ. ಉತ್ತರದ ಕಿಟಕಿಗಳ ಬಳಿ ನೆರಳು ಬಯಸುವ ಜರಿ ಗಿಡಗಳು, ಪೀಸ್ ಲಿಲಿಗಳು,
ದಕ್ಷಿಣಕ್ಕೆ ಬೆಳಕನ್ನು ಬಯಸುವ ಕಳ್ಳಿ-ಸಕ್ಯುಲೆಂಟ್ಸ್ ಗಳು, ಪೂರ್ವಕ್ಕೆ ಬೆಳಗಿನ ಬೆಳಕನ್ನು ಇಷ್ಟಪಡುವ
ಪೈಲಿಯಾದಂತ ಗಿಡಗಳು, ಮತ್ತು ಪಶ್ಚಿಮಕ್ಕೆ ಮಧ್ಯಾಹ್ನದ ಬಿರುಬಿಸಲನ್ನು ತಾಳಿಕೊಳ್ಳುವ ಫಿಟ್ಟೋನಿಯಾದಂತ
ಗಿಡಗಳನ್ನು ಇರಿಸಬಹುದು. ಬೆಳಕನ್ನು ಆಧರಿಸಿ ಕಿಟಕಿಗಳಷ್ಟೇ ಅಲ್ಲ, ಮೇಜು, ಕಪಾಟು, ಬುಕ್ ರ‍್ಯಾಕ್,
ಅಡುಗೆ ಕೋಣೆ, ಸ್ನಾನಗೃಹ, ಮಲಗುವ ಕೋಣೆ ಹೀಗೆ ಎಲ್ಲಾ ಭಾಗದಲ್ಲೂ ಸಸ್ಯಗಳನ್ನು ಇಡಬಹುದು. ಹೆಚ್ಚು
ತೇವಾಂಶ ಸಂಗ್ರಹವಾಗುವ ಅಡುಗೆ ಕೋಣೆ, ಸ್ನಾನಗೃಹದಲ್ಲಿ ‘ತಿಲ್ಲಾಂಡ್ಸಿಯಾ’; ಮಲಗು ಕೋಣೆಯಲ್ಲಿ ರಾತ್ರಿ
ಸಮಯವೂ ಇಂಗಾಲದ ಡೈ ಆಕ್ಸೈಡ್ ಸ್ಥೀತೀಕರಿಸುವ (ವೈಜ್ಞಾನಿಕವಾಗಿ CAM plants) ಸಸ್ಯಗಳನ್ನು ಇರಿಸುವುದು
ಒಳ್ಳೆಯದು.
ಕೃತಕ ಬೆಳಕಿನಲ್ಲೂ
ಆಫ್ರಿಕನ್ ವೈಲೆಟ್, ಮನಿ ಪ್ಲಾಂಟ್ನಂತಹ ಕೆಲ ಸಸ್ಯಗಳು ಚೆನ್ನಾಗಿ ಬೆಳೆಯುತ್ತವೆ. ಆದರೆ ದಿನ ಬಳಕೆಯ
ಹೆಚ್ಚು ಶಾಖ ಉತ್ಪಾದಿಸುವ ಲೈಟ್ ಬಲ್ಬ್ ಗಳು ಅಷ್ಟಾಗಿ ಯೋಗ್ಯವಲ್ಲ. ಗಿಡಗಳ ಬೆಳವಣಿಗೆಗೆಂದೇ ‘ಫ್ಲೊರೋಸೆಂಟ್’ದೀಪಗಳು
ಲಭ್ಯವಿದೆ. ಏನೇ ಆದರೂ ಈ ದೀಪದ ಮೂಲಗಳು ಸೂರ್ಯನ ಬೆಳಕಿಗೆ ಪರ್ಯಾಯವಾಗಲು ಸಾಧ್ಯವೇ ಇಲ್ಲ.
ಜಲ-ಜನಕ
ಸಸ್ಯಗಳನ್ನು
ಆಯ್ಕೆ ಮಾಡಿ ಸರಿಯಾದ ಜಾಗದಲ್ಲಿ ಜೋಡಿಸಿದ ಮೇಲೆ ಅತ್ಯಂತ ಮಹತ್ವದ ಮುಂದಿನ ನಿಲ್ದಾಣವನ್ನು ತಲುಪುತ್ತೇವೆ. ಇದು ಸಾವು-ಬದುಕಿನ ನಿಲ್ದಾಣ. ಹೆಚ್ಚಿನ ಬಾರಿ ನಮ್ಮ ಗಿಡಗಳ
ಸಾವಿಗೆ ನಾವೇ ಕಾರಣರಾಗುವ ‘ನೀರೆರೆಯುವ’ ಹಂತ. ಸಸ್ಯಗಳನ್ನು ಕೊಂಡು ತಂದ ದಿನ ಮಾತೃ ಹೃದಯವೆಲ್ಲಾ
ಜಾಗೃತವಾಗಿ ಮೈ ಮರೆತು ದಿನವೂ ನೀರುಣಿಸಿದೆಂದರೆ ಸಸ್ಯಗಳ ಸಾವು ಕಟ್ಟಿಟ್ಟ ಬುತ್ತಿ. ಹಾಗೆಯೇ ಆಲಸಿಯಾಗಿ
ಅಲಕ್ಷ್ಯಿಸಿದರೂ ಸಾವು ಖಚಿತ. ಸಸ್ಯಗಳ ಆದ್ಯತೆಯನುಸಾರ ನೀರುಣಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು.
ಅತ್ಯುತ್ಸಾಹಿ
ಆರಂಭಿಗರು ಸೋಲುವುದೇ ನೀರಿನ ಸಮರ್ಪಕ ಬಳಕೆಯಲ್ಲಿ. ನೀರುಣಿಸುವ ರೀತಿ, ಅಂತರ, ಎರಡೂ ಮಹತ್ವದ್ದು.
ಸಕ್ಯುಲೆಂಟ್ಸ್ ನಂತ ಕೆಲ ಸಸ್ಯಗಳಿಗೆ ಆಗಾಗ ಸಲ್ಪವೇ ನೀರು ಸಾಕಾದರೆ ಕೆಲಾಥಿಯಾದಂತ ಕೆಲ ಸಸ್ಯಗಳಿಗೆ
ಯಾವಾಗಲೂ ಹಸಿಯಾಗಿರುವ ಮಣ್ಣು ಅವಶ್ಯಕ. ತಾಳೆಯ (ಪಾಮ್ಸ್) ಜಾತಿಗಳಿಗೆ ನಿಯಮಿತ ಕ್ರಮಬದ್ಧವಾಗಿ ನೀರುಣಿಸಬೇಕು.
ಸಾಮಾನ್ಯವಾಗಿ ಮನೆಯಲ್ಲಿ ಫ್ಯಾನ್, ಏರ್ ಕಂಡೀಷನರ್ ಬಳಸಲಾಗುವುದರಿಂದ ಗಾಳಿಯಲ್ಲಿ ತೇವಾಂಶ ತಗ್ಗಿರುತ್ತದೆ.
ಹೆಚ್ಚಿನ ಒಳಾಂಗಣ ಸಸ್ಯಗಳು ಉಷ್ಣವಲಯದಾದ್ದರಿಂದ ತೇವಾಂಶ ಬೇಕು. ಸ್ಪ್ರೇ ಬಾಟಲ್ ನಿಂದ ಗಿಡದ ಎಲೆಗಳ
ಮೇಲೆ ತುಂತುರು ಹನಿ ನೀರನ್ನು ಸಿಂಪಡಿಸಬಹುದು (ಸಕ್ಯುಲೆಂಟ್ಸ್ ಗಳಿಗೆ ಬೇಡ). ಒಳಾಂಗಣದಲ್ಲಿ ತಾಪಮಾನ
ಹೆಚ್ಚಿರದ ಕಾರಣ ನೀರು ಆವಿಯಾಗುವ ಸಂದರ್ಭವೂ ಕನಿಷ್ಟ. ಹಾಗಾಗಿ ಬೇಸಿಗೆಯಲ್ಲಿ ನಾಲ್ಕೈದು ದಿನಕ್ಕೊಮ್ಮೆ,
ಮಳೆಗಾಲದಲ್ಲಿ ವಾರಕ್ಕೊಮ್ಮೆ ಮಣ್ಣಿನ ತೇವಾಂಶ, ಸಸ್ಯದ ಜಾತಿ ಅನುಸರಿಸಿ ನೀರು ಹಾಕಬಹುದು. ಯಾವತ್ತೂ
ನೀರನ್ನು ಹನಿಸಬೇಕೆ ಹೊರತು ಪ್ರವಹಿಸಬಾರದು.
ಗಿಡಗಳು
ಮೂಲತಃ ಉಗಮವಾದ, ಅವುಗಳ ನೈಜ ವಾಸಸ್ಥಾನದ ಅರಿವು ಇಲ್ಲಿ ಮುಖ್ಯ. ಉದಾಹರಣೆಗೆ ಒಣ ಹವೆಯ ಮರುಭೂಮಿಯಂತ
ಪ್ರದೇಶದಲ್ಲಿ ಉಗಮವಾದ ಕಳ್ಳಿಗಳನ್ನು ಕಡಿಮೆ ತೇವಾಂಶವಿರುವ ಪ್ರಕಾಶಮಾನವಾದ ಬೆಳಕಿರುವ ಜಾಗದಲ್ಲಿಟ್ಟು,
ಕಡಿಮೆ ನೀರನ್ನು ಹಾಕಿ ಪೋಷಿಸುವುದು ಮತ್ತು ಉಷ್ಣವಲಯದ ಆರ್ಕಿಡ್ ಗಳನ್ನು ಹೆಚ್ಚು ತೇವಾಂಶದಲ್ಲಿ ಪೋಷಿಸುವುದು
ಸೂಕ್ತ.
ಅಗತ್ಯಕ್ಕಿಂತ
ಹೆಚ್ಚಿನ ನೀರು ಸಸ್ಯದ ಕೊಳೆತಕ್ಕೆ ಕಾರಣವಾದರೆ ಕಡಿಮೆ ನೀರು ಗಿಡಗಳನ್ನು ಒಣಗಿಸಿ ಸಾಯಿಸುತ್ತದೆ.
ಎಲೆಗಳು ಒಣಗಿ ಜೋತು ಬೀಳದಂತೆ ಎಚ್ಚರ ವಹಿಸಬೇಕು. ಕೆಲ ಸಸ್ಯಗಳು ಈ ಪರೀಕ್ಷೆಯನ್ನು ದಾಟಿ ನೀರಿನ ಮರುಪೂರಣವಾದಾಗ
ಮೊದಲಿನ ಚೈತನ್ಯ ಹೊಂದುತ್ತವೆ. ಕೆಲ ಸಸ್ಯಗಳು ಸತ್ತೇಹೋಗುತ್ತವೆ. ನಿಂತ ನೀರು ಬೇರಿನ ಕೊಳೆತಕ್ಕೆ
ಕಾರಣವಾಗುತ್ತದೆ. ಹಾಗಾಗಿ ಕುಂಡದ ಕೆಳಗಿನ ಸಾಸರ್/ತಟ್ಟೆಯಲ್ಲಿ ಬಹಳ ಹೊತ್ತು ನೀರು ನಿಲ್ಲದಂತೆ ಲಕ್ಷ್ಯ
ವಹಿಸಬೇಕು.
ಏರ್ ಪ್ಲಾಂಟ್
(ತಿಲಾಂಡ್ಸಿಯಾ) ಗಳನ್ನು ತಿಂಗಳಿಗೊಮ್ಮೆ ನೀರಿನಲ್ಲಿ ಅದ್ದಿ ತೆಗೆಯುವುದು; ಕಡಿಮೆ ನೀರು ಬಯಸುವ ಚಿಕ್ಕ
ಗಾತ್ರದ ಕಳ್ಳಿ ಜಾತಿಯ ಗಿಡಗಳಿಗೆ ಅಪರೂಪಕ್ಕೆ ಸ್ಕ್ವೀಝ್ ಬಾಟಲ್ ಗಳಿಂದ; ಹೆಚ್ಚು ನೀರನ್ನು ಬಯಸುವ
ಗಿಡಗಳಿಗೆ ಕ್ಯಾನ್ ನಿಂದ ಮೆಲುವಾಗಿ ನೀರನ್ನು ಹರಿಸುವುದನ್ನು ಅಭ್ಯಸಿಸಬಹುದು.
ಪೋಷಕಾಂಶಗಳು
ಒಳಾಂಗಣ
ಸಸ್ಯಗಳನ್ನು ಸೀಮಿತ ಜಾಗದಲ್ಲಿ ಬೆಳೆಸುವುದರಿಂದ ಅವುಗಳ ಪೋಷಕಾಂಶಗಳ ಅವಶ್ಯಕತೆಯನ್ನು ನಾವೇ ಪೂರೈಸಬೇಕಾಗುತ್ತದೆ.
ನರ್ಸರಿಯಿಂದ ತಂದ ಕೆಲ ದಿನ ಕುಂಡದಲ್ಲಿನ ಮಣ್ಣಿನ ಮಿಶ್ರಣದಲ್ಲಿರುವ ಪೋಷಕಾಂಶಗಳ ಪೂರೈಕೆಯಿಂದ ಗಿಡಗಳು
ಖುಷಿಯಾಗಿದ್ದಂತೆ ಕಾಣಬಹುದು. ನಂತರ ನಿಧಾನಕ್ಕೆ ಹಳದಿ ಬಣ್ಣಕ್ಕೆ ತಿರುಗಿದ ಎಲೆ, ನಿರೀಕ್ಷೆಗಿಂತ
ಕಡಿಮೆ ಬೆಳವಣಿಗೆ, ಹೂ ಬಿಡದೇ ಇರುವುದು ಇಂತಹ ಲಕ್ಷಗಳ ಮೇಲೆ ಪೋಷಕಾಂಶಗಳ ಕೊರತೆಯನ್ನು ಊಹಿಸಬಹುದು.
ಕಾರ್ಬನ್
(ಇಂಗಾಲ), ಹೈಡ್ರೋಜನ್ (ಜಲಜನಕ), ಆಕ್ಸಿಜನ್ (ಆಮ್ಲಜನಕ) ಈ ಮೂರು ಮೂಲ ಧಾತುಗಳು ನೀರು, ಗಾಳಿಯಲ್ಲಿ ಲಭ್ಯ. ಉಳಿದಂತೆ ಗಿಡಗಳ
ಆರೋಗ್ಯಕರ ಬೆಳವಣಿಗೆಗೆ ಬೇಕೇ ಬೇಕಾದ ಪೋಷಕಾಂಶಗಳು ‘ನೈಟ್ರೋಜನ್’(ಸಾರಜನಕ), ‘ಫಾಸ್ಫರಸ್’ (ರಂಜಕ)
ಹಾಗೂ ‘ಪೊಟ್ಯಾಷ್’. ಸಾರಜನಕ-ಗಿಡದ ಹಸಿರಿನ ಬೆಳವಣಿಗೆ; ರಂಜಕ-ಮೊಗ್ಗು, ಹೂವಿನ ಬೆಳವಣಿಗೆ; ಪೊಟ್ಯಾಷ್
ಬೇರಿನ ಬೆಳವಣಿಗೆ, ರೋಗ ನಿರೋಧಕ ಶಕ್ತಿಯ ವೃದ್ಧಿಗೆ ಅನುಕೂಲಕರ. ಒಳಾಂಗಣದ ಹೂ ಬಿಡುವ ಆಫ್ರಿಕನ್ ವೈಲೆಟ್,
ಸೇವಂತಿಗೆ ಗಳಿಗೆ ಫಾಸ್ಫರಸ್ ಹೆಚ್ಚಿರುವ (DAP, SSPಯಂತ ), ಬಣ್ಣದ ಎಲೆಯ ಫೋಲಿಯೆಜ್ ಸಸ್ಯಗಳಿಗೆ
ನೈಟ್ರೋಜನ್ ಹೆಚ್ಚಿರುವ (ಯೂರಿಯಾದಂತ) ಗೊಬ್ಬರ ಬಳಸಬಹುದು. ಬಳಕೆಗೆ ಉಚಿತ ಸಮಯ ಬೇಸಿಗೆ. ನಾಲ್ಕಾರು
ತಿಂಗಳಿಗೊಮ್ಮೆ ಈ ಎಲ್ಲಾ ಧಾತುಗಳು, ಜೊತೆಗೆ ಖನಿಜಾಂಶ, ಲವಣಾಂಶ ಪೂರೈಸುವ 19:19:19 ಅಥವಾ Bio20ಯಂತಹ
ಗೊಬ್ಬರವನ್ನು ಬಳಸಬಹುದು. ಗಿಡದ ಬುಡಕ್ಕೆ ಹಾಕುವ, ನೀರಿನಲ್ಲಿ ಕರಡಿ ಹೊಯ್ಯುವ/ಸಿಂಪಡಿಸುವ, NPK
ಒಳಗೊಂಡ ಹಲವಾರು ಕಂಪೆನಿಯ ಹಲವಾರು ಸಂಯೋಜನೆಯ ಗೊಬ್ಬರಗಳು ಮಾರ್ಕೆಟ್ ನಲ್ಲಿ ಲಭ್ಯವಿದೆ. ಆಯ್ಕೆ ನಿಮಗೆ
ಬಿಟ್ಟಿದ್ದು. ಪ್ರತಿ ಗಿಡಕ್ಕೆ ನೀಡಬೇಕಾದ ಪ್ರಮಾಣವನ್ನು ಲೇಬಲ್ ಮೇಲೆ ನಮೂದಿಸಿರಲಾಗುತ್ತದೆ. ಗೊಬ್ಬರ
ನೀಡುವ ಮೊದಲು ಗಿಡಗಳಿಗೆ ನೀರುಣಿಸುದನ್ನು ಮರೆಯಬೇಡಿ. ಅತಿಯಾದ ಸಾಂದ್ರತೆ ಹೆಚ್ಚಿರುವ ಗೊಬ್ಬರ ಎಲೆಗಳನ್ನು
ಸುಡಬಹುದು.
ಪೋಷಕಾಂಶಗಳ
ದೃಷ್ಟಿಯಿಂದ ಒಳಾಂಗಣ ಸಸ್ಯಗಳಿಗೆ ಬಳಸುವ ಮಣ್ಣಿನ ಮಿಶ್ರಣ ಸಲ್ಪ ಭಿನ್ನವಾದದ್ದು. ಮಣ್ಣಿನ ಜೊತೆ ಕ್ರಿಮಿರಹಿತ
ಕೊಟ್ಟಿಗೆ ಗೊಬ್ಬರ, ಎರೆಗೊಬ್ಬರ, ಕೊಕೋಪೀಟ್, ಪರ್ಲೈಟ್, ನಂತಹ ಹಗುರವಾದ ಬೇರೆ ಆಧಾರಗಳನ್ನು ಸೇರಿಸಬೇಕು.
ಎರಡು ಭಾಗ ಮಣ್ಣು, ಒಂದು ಭಾಗ ಮರಳು, ಒಂದು ಭಾಗ ಕಳಿತ ಕೊಟ್ಟಿಗೆ/ಎರೆಹುಳು ಗೊಬ್ಬರ ಅತ್ಯಂತ ಒಳ್ಳೆಯ
ಸುಲಭವಾಗಿ ತಯಾರಿಸಲಾಗುವ ಕುಂಡದ ಮಿಶ್ರಣ. ಮರಳು ನೀರು ಬಸಿಯುವಿಕೆಗೆ ಸಹಾಯ ಮಾಡಿದರೆ ಗೊಬ್ಬರ ಪೋಷಕಾಂಶಗಳ
ಪೂರೈಕೆಗೆ ಒಳ್ಳೆಯದು, ಕೋಕೋಪೀಟ್ ಪರ್ಲೈಟ್ ಹೆಚ್ಚು ದಿನಗಳ ವರೆಗೆ ನೀರನ್ನು ಹಿಡಿದಿಡುವ ಸಾಮರ್ಥ್ಯ
ಹೊಂದಿವೆ. ಮರಳಿನ ಕಡಿಯನ್ನು ಹೆಚ್ಚಿಸಿ ಈ ಮಿಶ್ರಣವನ್ನು ಸಕ್ಯುಲೆಂಟ್ಸಗಳಿಗೂ ಬಳಸಬಹುದು. ಇದಕ್ಕಿಂತಲೂ
ಸಕ್ಯುಲೆಂಟ್ಸಗಳಿಗೆಂದೇ ಲಭ್ಯವಿರುವ ಮಿಶ್ರಣ ಬಳಸಿದರೆ ಒಳ್ಳೆಯದು. ಪೋಷಕಾಂಶಗಳನ್ನು ಮರುಪೂರಣಗೊಳಿಸಲು
ವರ್ಷಕ್ಕೊಮ್ಮೆ ರಿಪಾಟಿಂಗ್ ಮಾಡುವುದು ಒಳಿತು.
ಕೀಟ-ರೋಗ
ಬಾಧೆ
ನಮ್ಮಂತೇ
ಗಿಡಗಳಿಗೂ ವೈರಸ್, ಫಂಗಸ್, ಹೇನು-ತಿಗಣೆಗಳ ಕಾಟವಿದೆ. ಹೆಚ್ಚು ನೀರು ನಿಲ್ಲುವ ಹಸಿ ಮಣ್ಣಿನಲ್ಲಿ
ಬೇರು ಕೊಳೆಯುವ ರೋಗ ಸಾಮಾನ್ಯ. ಈ ರೋಗಕಾರಕ ಶಿಲೀಂಧ್ರಗಳ ವಾಸಸ್ಥಾನ ಮಣ್ಣು. ಸಸ್ಯಗಳ ಬುಡಕ್ಕೆ ಅಥವಾ
ಬೇರುಗಳಿಗೆ ಆದ ಗಾಯದ ಮೂಲಕ ಒಳ ಸೇರಿ ರೋಗವನ್ನು ಉಂಟುಮಾಡುತ್ತವೆ. ಹಾಗಾಗಿ ವರ್ಷಕ್ಕೊಮ್ಮೆ ರಿಪಾಟಿಂಗ್
ನಂತರ ಶಿಲೀಂಧ್ರ ನಾಶಕದ (ಉದಾ: ಡೈಥೇನ್ M45 ಅಥವಾ ಕಾರ್ಬಂಡೇಜಿಯಮ್) ದ್ರಾವಣವನ್ನು ಉಣಿಸಬಹುದು.
ಕೆಲವೊಮ್ಮೆ ಎಲೆ ಚುಕ್ಕೆಯಂತ ಶಿಲೀಂಧ್ರ ರೋಗವು ಕಾಡಬಹುದು. ಇದಕ್ಕೂ ಸಲಹೆ-ಸೂಚನೆ ಮೇರೆಗೆ ಶಿಲೀಂಧ್ರ
ನಾಶಕ ಸಿಂಪಡಿಸಬಹುದು. ಬೆಕ್ಕು, ನಾಯಿಯಂತ ಸಾಕು ಪ್ರಾಣಿ, ಚಿಕ್ಕ ಮಕ್ಕಳಿರುವಲ್ಲಿ ಇಂತಹ ರಾಸಾಯನಿಕಗಳನ್ನು
ಬಳಸುವಲ್ಲಿ ಜಾಗೃತೆ.
ಕಪ್ಪು
ಬಣ್ಣದ ಎಫಿಡ್ಸ್, ಬಿಳಿಯ ಹತ್ತಿ ಚೂರಂತೆ ಕಾಣುವ ಮಿಲಿಬಗ್, ಎಲೆ ಮುಟ್ಟಿದರೆ ಹಾರುವ ಬಿಳಿಯ ವೈಟ್
ಫ್ಲೈಸ್, ಎಲೆಗಳಿಗೆ ಕಜ್ಜಿಯಂತೆ ಅಂಟಿಕೊಂಡಿರುವ ಸ್ಕೇಲ್ಸ್, ಎಲೆಯ ಅಡಿಯಲ್ಲಿ ಮರೆಯಾಗಿ ಕೂರುವ ಥ್ರಿಪ್ಸ್,
ಮುಂತಾದ ಕೀಟಗಳು ಸಸ್ಯಗಳನ್ನು ಭಾದಿಸಬಹುದು. ಸಸ್ಯದ ಎಲೆ, ಕಾಂಡದ ರಸ ಹೀರುವ ಜೀವ ಹಿಂಡುವ ಈ ಚಿಕ್ಕ
ಕೀಟಗಳು ಕೆಲವೇ ದಿನದಲ್ಲಿ ನೋಡ ನೋಡುತ್ತಾ ಗಿಡಗಳನ್ನು ಸಾಯಿಸುತ್ತವೆ. ಕರಿಯ ಮಸಿ ಬಳಿದಂತ ಎಲೆಗಳನ್ನು
ಕಾಂಡಗಳನ್ನು ಉಂಟು ಮಾಡುತ್ತವೆ. ಇವುಗಳನ್ನು ಕಂಡಲ್ಲಿ ಕಿತ್ತು ಹೊಸಕಿ ಹಾಕುವುದು ಉತ್ತಮ ಉಪಾಯ. ಸೋಪ್
ನೀರುನ್ನು ಸಿಂಪಡಿಸಬಹುದು. ನಿಯಂತ್ರಣವಾಗದಲ್ಲಿ ‘ಬೇವಿನ ಎಣ್ಣೆ’ಯ ಬಳಕೆ ಸೂಕ್ತ.
ನೋಟ-ಮಾಟ
ನಮ್ಮ ಕೋಣೆಯ-ಮನೆಯ
ಒಳಾಂಗಣ ವಿನ್ಯಾಸಕ್ಕೆ ತಕ್ಕಂತೆ ಸಸ್ಯಗಳ, ಕಂಟೇನರ್ ಗಳ ಆಯ್ಕೆ ನಮ್ಮ ಸೃಜನಶೀಲತೆ, ಜಾಣ್ಮೆಗೆ ಬಿಟ್ಟಿದ್ದು.
ಸರಳವಾಗಿ ಕಿಟಕಿಯಂಚಿಗೆ, ಪಾಟ್ ನಲ್ಲಿ ಚಿಕ್ಕದಾದ ಒಂದೇ ಸಕ್ಯುಲೆಂಟ್ ಗಿಡವನ್ನು; ಮೇಜಿನ ಮೇಲೆ ಒಂದೇ
ಸುಂದರ ಬೋನ್ಸಾಯ್ ಇಡಬಹದು. ಅಥವಾ ಶೋ ಕೇಸ್ ರ‍್ಯಾಕ್ ಪೂರ್ತಿ ಗಿಡಗಳನ್ನು ತುಂಬಿಸಬಹುದು. ಸಸ್ಯಗಳೂ
ಮನುಷ್ಯರಂತೆ ಸಂಘ ಜೀವಿಗಳು. ಏಕಾಂಗಿಯಾಗಿರುವದುಕ್ಕಿಂತಲೂ ಗುಂಪು ಗುಂಪಾಗಿದ್ದರೆ ಅವುಗಳ ಖುಷಿಯೇ
ಬೇರೆ. ಥರ ಥರದ ಪ್ಲಾಂಟ್ ಸ್ಟಾಂಡ್, ಪಾಟ್, ಹ್ಯಾಗರ್ ಗಳಂತೂ ಬೇಕಷ್ಟಿವೆ. ಫಿಲೊಡೆಂಡ್ರಾನ್ ನಂತಹ
ಗಿಡಗಳಿಗೆ ಆಧಾರವಾಗಿ ಮೋಸ್ ಪೋಲ್ ಗಳನ್ನು ಬಳಸಬಹದು.
ವಿವಿಧ
ಗಾತ್ರದ, ಆಕಾರದ ಸಸ್ಯಗಳನ್ನು ಬೆಸ ಸಂಖ್ಯೆಯಲ್ಲಿ ಬೇರೆ ಬೇರೆ ಪಾಟ್ ಗಳಲ್ಲಿ ‘ರಾಂಡಮ್’ಆಗಿ ಜೋಡಿಸಬಹುದು.
ಖಾಲಿ ಬಿಳಿ ಗೋಡೆಯ ಮುಂದೆ ‘ಸ್ಟೇಟ್ ಮೆಂಟ್ ಪ್ಲಾಂಟ್’ ಆಗಿ ಬೃಹತ್ ಹೆಲಿಕೋನಿಯಾ; ಪುಸ್ತಕದ ಕಪಾಟಿನಲ್ಲಿ
ಬಳುಕುವ ಬಳ್ಳಿಯ ಪೋಥೋಸ್, ಫಿಲೊಡೆಂಡ್ರಾನ್, ಸ್ಟ್ರಿಂಗ್ ಆಫ್ ಹಾರ್ಟ್; ಟಿವಿಯ ಪಕ್ಕ ಬೃಹತ್ ಫಿಡಲ್
ಫಿಗ್; ಹಸಿರು ವನಕ್ಕೆ ರಂಗು ಬಳಿಯಲು ಬಣ್ಣದ ಎಲೆಯ ಕೆಲಾಥಿಯಾ, ಕೆಲಾಡಿಯಮ್; ಕೊಕೆಡಾಮಾ, ಟೆರೆರಿಯಮ್
ಗಳನ್ನು ಪ್ರದರ್ಶಿಸಬಹುದು. ಪಾಟ್ ನ ಕಂಠವನ್ನು ಬಿಳಿ ಅಥವಾ ಬಣ್ಣ ಬಣ್ಣದ ಕಲ್ಲಿನಿಂದ ಅಲಂಕರಿಸಬಹುದು.
ಅಲ್ಲಿರುವುದು
ನಮ್ಮನೆ
ರಜೆ ಬಂದರೆ
ಹಳ್ಳಿ ಕಡೆ ಮುಖ ಮಾಡುವ ಬಹಳಷ್ಟು ಪಟ್ಟಣಿಗರಿದ್ದಾರೆ. ಊರಿಗೆ ಹೊರಟರೆ ಅವರಿಗೆ ಗಿಡದ್ದೇ ಚಿಂತೆ.
ಎಷ್ಟೋ ಜನ ಇದೇ ಸಲುವಾಗಿ ಆಸಕ್ತಿಯಿದ್ದರೂ ಗಿಡ ಬೆಳೆಸುವ ಗೋಜಿಗೆ ಹೋಗುವುದಿಲ್ಲ. ಈ ಸಮಸ್ಯೆಗೆ ಇಂದಿನ
ಜಮಾನಾದಲ್ಲಿ ಕೆಲವು ಪರಿಹಾರಗಳಿವೆ.
- ಕಡಿಮೆ ನೀರು ಸಾಕಾಗುವ ಸಕ್ಯುಲೆಂಟ್, ತಿಂಗಳಿಗೊಮ್ಮೆ ನೀರುಣಿಸಿದರೆ ಸಾಕಾಗುವ ಏರ್ ಪ್ಲಾಂಟ್, ನೀರಿನಲ್ಲೇ ಬೆಳೆಯುವ ಪೈಲಿಯಾ, ಲಕ್ಕಿ ಬಾಂಬೂ, ಸಿಂಗೋನಿಯಮ್, ಪೋಥೋಸ್, ಸ್ನೇಕ್ ಪ್ಲಾಂಟ್ ಗಳ ಆಯ್ಕೆ
- ತಾನಾಗೇ ನೀರುಣಿಸುವ ‘ಸೆಲ್ಫ್ ವಾಟರಿಂಗ್’ಪಾಟ್ ಗಳ ಬಳಕೆ
- ನಿಧಾನಕ್ಕೆ ನೀರುಣಿಸುವ ‘ವಾಟರಿಂಗ್ ಗ್ಲೋಬ್’ಗಳ ಬಳಕೆ
- ತಿರುಗಾಟಕ್ಕೆ ಹೋಗುವ ಮೊದಲು ಕಿಟಕಿಯಂಚಿನ ಗಿಡಗಳನ್ನು ತಂಪಾದ ಜಾಗದಲ್ಲಿರುಸುವುದು
- ತೇವ ಕಾಪಾಡಲು ಕಲ್ಲು/ ಕೊಕೋಪಿಟ್ ನಿಂದ ಗಿಡದ ಕಂಠವನ್ನು ಮುಚ್ಚುವುದು
- ಪ್ಲಾಸ್ಟಿಕ್ ಬಾಟಲ್ ನಲ್ಲಿ ಸಣ್ಣ ಹಲವಾರು ತೂತು ಮಾಡಿ ಮಣ್ಣಿನಲ್ಲಿ ಹುದುಗಿಸಿಡುವುದು
ಮುಂತಾದ ಉಪಾಯಗಳನ್ನು ಅನುಸರಿಸಬಹದು.
ಕೆಲ
ಜರೂರಿ ಸಲಹೆಗಳು
- ಈ ಎಲ್ಲಾ ಮಾಹಿತಿಗಳು ಅನುಸರಿಸಲೇಬೇಕಾದ ನಿಯಮಗಳಲ್ಲ. ಮಾರ್ಗದಶನಕ್ಕೆ ಮಾತ್ರ. ನಿಮ್ಮ ಜಾಗ, ಕಾಲಕ್ಕೆ, ಸಮಯಕ್ಕೆ, ಅಭ್ಯಾಸಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲೇಬೇಕು
- ಆರಂಭಿಕರಾಗಿದ್ದಲ್ಲಿ ಸಲೀಸಾಗಿ, ಕಾಳಜಿಯಿಲ್ಲದೆ ಬೆಳೆಯುವ ಸಸ್ಯಗಳನ್ನು ಆರಿಸುವುದು ಜಾಣತನ
- ಕೊಳೆತ, ಒಣಗಿದ, ರೋಗಿಷ್ಠ ಎಲೆಗಳನ್ನು ಆಗಾಗ ತೆಗೆಯಬೇಕು. ಪಾಟ್ ನ ಕೆಳಗಿರುವ ಸಾಸರ್ ನಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಇಲ್ಲವಾದಲ್ಲಿ ಸೊಳ್ಳೆ ಕಾಟದ ಬಗ್ಗೆ ಮರುಗಬೇಕಾಗಬಹುದು
- ಹಾಲು, ಎಳನೀರು, ಸಕ್ಕರೆ ನೀರು, ಚಾ ಸೋಸಿದ ನೀರು ಇವೆಲ್ಲವನ್ನೂ ಬಳಸಬಹುದು, ಆದರೆ ಅತಿಯಾಗದಂತೆ ನೋಡಿಕೊಳ್ಳಬೇಖು. ಅತಿಯಾದರೆ ಅಮೃತವೂ ವಿಷ.
- ಗಿಡಗಳು ಎಷ್ಟೇ ಆದರೂ ಜೀವಿಗಳು, ಕನಿಷ್ಟವಾದ ಕಾಳಜಿ ಬೇಕೇ ಬೇಕು
- ಗಿಡಗಳ ಒಳ್ಳೆಯ ಬೆಳವಣಿಗೆಗೆ ನೀರು, ಬೆಳಕು ಇತ್ಯಾದಿ ಅಂಶಗಳನ್ನು ಗಮನದಲ್ಲಿರಿಸಿ
- ನರ್ಸರಿಗಳಿಗೆ ಭೇಟಿಯಿತ್ತಾಗ ಹೂಬಿಟ್ಟ ಗಿಡಕ್ಕೆ ಮಾರು ಹೋಗಿ ಒಳಾಂಗಣದಲ್ಲಿಡಲು ಖರೀದಿಸಿ ತಂದು ಬಿಡಬೇಡಿ
- ಯಾವತ್ತೂ ಗಿಡಗಳು ಅಸಹಜ ಗುಣಗಳನ್ನು ಪ್ರದಶಿಸಿದಾಗ ಮೊದಲು ನೀರು-ಬೆಳಕಿನ ಪೂರೈಕೆ ಸರಿ ಇದೆಯೇ ಎಂದು ನೋಡಬೇಕು, ನಂತರ ಪೋಷಕಾಂಶಗಳ ಕೊರತೆ, ನಂತರ ಕೀಟ-ರೊಗಗಳ ಪರೀಕ್ಷೆ. ಹಳದಿ ಎಲೆ ಕಂಡೊಡನೆ ರೋಗ ಬಂತೆಂದು ಕೀಟ ನಾಶಕ-ಶಿಲೀಂಧ್ರನಾಶಕಗಳ ಬಳಕೆ ತಪ್ಪು.
- ದುಬಾರಿ ಸಸ್ಯಗಳನ್ನು ಕೊಂಡು ತಂದೇ ಬೆಳೆಸಬೇಕಿಲ್ಲ. ‘ಕಟಿಂಗ್ಸ್‘ಗಳಿಂದ ಸುಲಭವಾಗಿ ಬೆಳೆವ ಮನಿ ಪ್ಲಾಂಟ್, ಟ್ರಡೆಸ್ಕಾಂನ್ಶಿಯಾ, ಮೊನಸ್ಟೆರಾಗಳನ್ನು ಸ್ನೇಹಿತರಿಂದ ಪಡೆದು ಬೆಳೆಸಬಹುದು
- ಸಾಮಾನ್ಯವಾಗಿ ಚಳಿಗಾಲ ಗಿಡಗಳಿಗೆ ಆರಾಮದ ಕಾಲ. ಚಳಿಗಾಲದಲ್ಲಿ ರಿಪಾಟಿಂಗ್, ಮರಿಗಳನ್ನು ತಾಯಿಯಿಂದ ಬೇಪಡಿಸುವುದು, ಗೊಬ್ಬರ ನೀಡುವುದನ್ನು ಮಾಡದಿದ್ದರೆ ಒಳಿತು
- ಕೆಲ ಒಳಾಂಗಣ ಸಸ್ಯಗಳು ಹೊರಾಂಗಣದಲ್ಲಿಯೂ, ಕೆಲ ಹೊರಾಂಗಣ ಸಸ್ಯಗಳು ಒಳಾಂಗಣದಲ್ಲಿಯೂ ಬೆಳೆಸಬಹುದು. ಇದರತ್ತ ಸ್ವಂತ ಪ್ರಯೋಗ ಅನುಭವ ಅಗತ್ಯ
- ಹೆಸರೇ ಸೂಚಿಸುವಂತೆ ‘ನರ್ಸರಿ’ಗಳು ಸಸ್ಯಗಳನ್ನು ಪೋಷಿಸುವ ಕೇಂದ್ರಗಳು. ಅಲ್ಲಿ ಸಸ್ಯಕ್ಕೆ ಬೇಕಾದ ಸಂರಕ್ಷಿತ ವಾತಾವರಣವನ್ನು ಸೃಷ್ಟಿಸಿ ನೀರು ಗೊಬ್ಬರ ನೀಡಿ ಕಾಳಜಿಯಿಂದ ಬೆಳೆಸಲಾಗುತ್ತದೆ. ಆದ್ದರಿಂದ ನರ್ಸರಿಯಿಂದ ತಂದೊಡನೆ ಸಸ್ಯಗಳಿಗೆ ಹೊಸ ವಾತಾವರಣಕ್ಕೆ ಒಗ್ಗಿಕೊಳ್ಳಲು ಸಮಯ ಬೇಕು. ಈ ಸಮಯದಲ್ಲಿ ನಮ್ಮ ಕಾಳಜಿಯಿದ್ದರೂ ಗಿಡ ಸಾಯಬಹುದು. ಇದಕ್ಕಾಗಿ ಬೇಸರ ಪಡುವುದು ಬೇಡ.
- ಅತಿಯಾದ ಆರೈಕೆ, ನಿಲಕ್ಷ್ಯ, ಎರಡೂ ಗಿಡಗಳಿಗೆ ಮಾರಕ
- ನಿಮ್ಮ ಮನೆ ನಿಮಗಾಗಿ ವಿನ್ಯಾಸವಾದದ್ದು. ಸಸ್ಯಗಳಿಗಳಲ್ಲ. ಹಾಗಾಗಿ ಅವುಗಳ ನೋವು ನಲಿವುಗಳನ್ನು ನೀವೆ ಆಲಿಸಬೇಕು
ಎಲ್ಲಾರೂ
ಮಾಡುವುದು ಇನ್ಸ್ಟಾಗಾಗಿ
ಎಷ್ಟೋ
ಜನ ಸಾಮಾಜಿಕ ಜಾಲತಾಣದ ಪೋಸ್ಟ್ ಗಳಿಂದ ಪ್ರೇರಿತರಾಗಿ ಒಳಾಂಗಣ ವಿನ್ಯಾಸವನ್ನು ಸ್ವಂತದ ಸಂತೋಷಕ್ಕಾಗಿ,
ಹವ್ಯಾಸಕ್ಕಾಗಿ ಶುರುಮಾಡಿದ್ದಿದೆ. ತಾಳ್ಮೆ, ಕಲಿಕೆ, ಪ್ರಯೋಗಗಳಿಂದ ನೀವೂ ಕೂಡಾ ಒಳಾಂಗಣದಲ್ಲಿ ಸಸ್ಯಗಳನ್ನು
ಬೆಳೆಸಿ ಈ ಟ್ರೆಂಡ್ ನ ಭಾಗವಾಗಬಹುದು. ತಾಜಾ ಗಾಳಿಯ ಅನುಭವವನ್ನ ಪಡೆಯಬಹುದು. ಕಿಟಕಿ, ಮೇಜು, ಕಪಾಟು,
ಗೋಡೆ, ತಾರಸಿ, ಮನೆಯ ಛಾವಣಿ, ಕೋಣೆಯ ಚಿಕ್ಕ ಮೂಲೆ, ಬಾಲ್ಕನಿ, ಎಲ್ಲವನ್ನೂ ಪೈರಿನ ಪಚ್ಚೆಯಾಗಿಸಬಹುದು.
ಮನೆ-ಮನೆ ಬದಲಾಯಿಸುವಾಗ ಈ ಹಸಿರ ಲೋಕವನ್ನು ಒಡನೆಯೇ ಒಯ್ಯಬಹುದು.
ಒಮ್ಮೆ
ಹತ್ತಿದ ಈ ಗಿಡದ ಹುಚ್ಚು ಸುಲಭವಾಗಿ ಬಿಡುವುದಿಲ್ಲ. ಹೋದ ಹೋದಲ್ಲಿ ಗಿಡಗಳನ್ನು ಗುರುತು ಹಿಡಿದು ಮಾತನಾಡಿಸಿ,
ಹೊಸ ಗಿಡವಾದರೆ ಅಯ್ಯೋ ನನ್ನಲ್ಲಿ ಇಲ್ಲವೇ ಎಂದು ಸಂಗ್ರಹದಲ್ಲಿಯೇ ಮುಳುಗಿಹೋಗುವುದಂತೂ ಪಕ್ಕಾ. ಕೆಲವೇ
ದಿನದಲ್ಲಿ ‘ಜಂಗಲ್’ ಒಂದರ ಅನಾವರಣವಾದರೂ ಆಶ್ಚಯವಿಲ್ಲ. ಇಂಚಿಂಚು ಜಾಗಕ್ಕೂ ಲಕ್ಷಗಟ್ಟಲೇ ಬೆಲೆಯುಳ್ಳ
ಶಹರದ ಮನೆಯಲ್ಲಿ ಹೀಗೊಂದು ಹಸಿರುವನವನ್ನು ಕಟ್ಟುವಾಗ, ಪ್ರತಿ ಗಿಡವನ್ನು ದುಬಾರಿ ದುಡ್ಡು ತೆತ್ತು
ಕೊಂಡಾಗ ಆ ಜೀವಗಳ ಕಾಳಜಿ ಬಗ್ಗೆಯೂ ಗಮನ ಹರಿಸುವುದು ಅನಿವಾರ್ಯವೂ ಹೌದು ಅವಶ್ಯಕವೂ ಹೌದು. ಈ ಪಯಣದಲ್ಲಿ
ಯಶ ನಿಮ್ಮದಾಗಲಿ.


Comments
Post a Comment