ಸಕ್ಯುಲೆಂಟ್ಸ್ - ನಗುಮೊಗದ ಸುಂದರಿಯರು

 

ಫ್ಯಾಷನ್ ನಂತೆಯೇ ದಿನ ದಿನ ಹೊಸತಾಗುವ ಮತ್ತೊಂದು ಜಗತ್ತು ಗಾರ್ಡನಿಂಗ್. ಇತ್ತೀಚೆಗೆ ಗಾಳಿ ಶುದ್ಧೀಕರಿಸುವ ಸ್ನೇಕ್ ಪ್ಲಾಂಟ್, ಪಾಮ್ಸ್, ಡ್ರೆಸಿನಾ, ಪೀಸ್ ಲಿಲ್ಲಿಯಂತಹ ವಿವಿಧ ಜಾತಿಯ ಸಸ್ಯಗಳೊಡನೆ ಒಳಾಂಗಣ ವಿನ್ಯಾಸಕ್ಕೆ ಹೊಸ ಸೇರ್ಪಡೆ ಸಕ್ಯುಲೆಂಟ್ಸ್. ರಸಭರಿತ ದಪ್ಪ ಎಲೆಯ, ವಿವಿಧ ಆಕಾರದ, ವರ್ಷದ 365 ದಿನ ಸುಂದರವಾಗಿ ಅರಳಿ ನಿಲ್ಲುವ, ವಾರಗಟ್ಟಲೇ ನೀರಿಲ್ಲದೆ ಬದುಕುವ, ಯಾವುದೇ ವಾತಾವರಣವನ್ನು ಜಯಿಸುವ, ಗಟ್ಟಿ ಜಾತಿಯ ಸಕ್ಯುಲೆಂಟ್ಸ್ ಗಳು ಈಗ ಎಲ್ಲರಿಗೂ ಅಚ್ಚುಮೆಚ್ಚು. ಕಡಿಮೆ ನೀರಿನಲ್ಲಿ ಹಸನಾಗಿ ಬೆಳೆಯುವ ಈ ಸಕ್ಯುಲೆಂಟ್ಸ್ ಗಳು, ಗಿಡಗಳ ಹುಚ್ಚಿರುವ ಪದೇ ಪದೇ ಹಳ್ಳಿಯ ಮನೆಗೆ ಪಯಣ ಬೆಳೆಸುವ ನಗರವಾಸಿಗಳಿಗೆ ಹೇಳಿ ಮಾಡಿಸಿದ ಸಸ್ಯಗಳು.

ಟೇಬಲ್ ಟಾಪ್’ನಲ್ಲಿ ರಾರಾಜಿಸುವ; ಕಾಫಿ ಮಗ್, ಐಸ್ ಕ್ರೀಮ್ ಬೌಲ್, ಪಿಂಗಾಣಿ ಕಟೋರಿ, ಚಿಕ್ಕ ಮೊಸರು ಗಡಿಗೆಗಳಲ್ಲಿ ಮುದ್ದಾಗಿ ಮಲಗುವ ಸಕ್ಯುಲೆಂಟ್ಸ್ ಗಳು ಗುಲಾಬಿ, ನೇರಳೆ, ನೀಲಿ, ಬೂದಿ, ಕೆಂಪು, ಚಾಕೋಲೇಟ್, ಬಂಗಾರದಂತಹ ವಿಶಿಷ್ಟ ಬಣ್ಣಗಳಲ್ಲಿ ಮನ ಸೆಳೆಯುತ್ತವೆ. ತಾವರೆಯಂತೆ ಒತ್ತಗೆ ಜೋಡಿಸಿದ ದಳಗಳ 'ಇಚಿವೇರಿಯಾ', ಮಣಿ ಮಣಿ ಪೋಣಿಸಿದ ಮುತ್ತಿನ ಹಾರದ ಸ್ಟ್ರಿಂಗ್ ಆಫ್ ಪರ್ಲ್, ಗೊಂಚಲು ಗೊಂಚಲು ಎಲೆಯ ಸೆಡಮ್, ಕುಬ್ಜ ಮರದಂತೆ ಕಾಣುವ ಜೇಡ್, ಥೇಟ್ ಕಲ್ಲಿನಂತೆ ಕಾಣುವ ಲಿಥೋಪ್ಸ್ ಗಳು ಒಳಾಂಗಣ, ಹೊರಾಂಗಣ ಎರಡಕ್ಕೂ ಸೂಕ್ತ.

ಮರುಭೂಮಿಯ ಮಕ್ಕಳು

ಇಂದು ಜಗತ್ತಿನ ಮೂಲೆ ಮೂಲೆ ಆವರಿಸಿರುವ ಸಕ್ಯುಲೆಂಟ್ಸ್ ಗಳು ಮೂಲತಃ ಮರಳುಗಾಡಿನಂತಹ ಶುಷ್ಕ ಪ್ರದೇಶದವು. ಒಣ ಹವೆಯ ದಕ್ಷಿಣ ಆಫ್ರಿಕಾ ವಿಶ್ವದ ಅರ್ಧಕ್ಕೂ ಹೆಚ್ಚು ಜಾತಿಯ ಸಕ್ಯುಲೆಂಟ್ಸ್ ಗಳ ತವರು. ವಿಶ್ವದ ಅತ್ಯಂತ ದೊಡ್ಡ ಸಕ್ಯುಲೆಂಟ್, 92 ಅಡಿ ಅಗಲದ, 82 ಅಡಿ ಎತ್ತರದ ಆಫ್ರಿಕಾದ 'ಬಾವೊಬಾಬ್' ಮರ. ನಮ್ಮಲ್ಲಿ ಕಾಣುಬರುವ ಸಕ್ಯುಲೆಂಟ್ಸ್ ಗಳಾದ ಅಲೋವೆರಾ, ಕಲಾಂಚೋ, ಕಳ್ಳಿಗಳು, ಅಡೇನಿಯಮ್ ಕೂಡಾ ಅಲ್ಲಿಂದಲೇ ಪಸರಿಸಿದ ಜಾತಿಗಳು. ಬರಗಾಲವನ್ನೂ ಬೆದರಿಸಿದ ಈ ವೀರರು ಒಣ ಹವೆಗೆ ಕುತೂಹಲಕಾರಿ ರೀತಿಯಲ್ಲಿ ಒಗ್ಗಿಕೊಂಡಿದ್ದಾರೆ.

ಸಸ್ಯಗಳು ಎಲೆಗಳಲ್ಲಿರುವ ಅತಿ ಸೂಕ್ಷ್ಮ 'ಸ್ಟೋಮೆಟಾ' ರಂಧ್ರಗಳ ಮೂಲಕ ಇಂಗಾಲವನ್ನು ಒಳಗೆಳೆದುಕೊಂಡು, ಸ್ಥಿರೀಕರಿಸಿ, ದ್ಯುತಿ ಸಂಶ್ಲೇಷಣಾ ಕ್ರಿಯೆಯನ್ನು ನಡೆಸುತ್ತವೆ. ಹೀಗೆ ಇಂಗಾಲವನ್ನು ಎಳೆಯುವಾಗ ಆಮ್ಲಜನಕ ಹಾಗೂ ನೀರು ತನ್ನಾರೇ ಹೊರಹೋಗಿ ವಾತಾವರಣ ಸೇರುತ್ತವೆ. ಇಂಗಾಲದ ಆಹಾರದ ಆಸೆಯಲ್ಲಿ ಸಸ್ಯಗಳು ನೀರನ್ನು ಕಳೆದುಕೊಳ್ಳುವ ಈ ಕ್ರಿಯೆಯು ವಿಜ್ಞಾನದ ಆಕರ್ಷಕ ವಿದ್ಯಮಾನ. ಮಳೆಯೇ ಬೀಳದ ನೀರಿನ ತತ್ವಾರವಿರುವ ಮರಳುಗಾಡಿನ ಕೆಲ ಸಸ್ಯಗಳು ವಿಕಸನದ ಹಾದಿಯಲ್ಲಿ ನೀರುಳಿಸುವ ಪ್ರಯತ್ನಕ್ಕೆ ಇಳಿದಿದ್ದೇ 'ಸಕ್ಯುಲೆಂಟ್ಸ್'ಗಳ ಉಗಮಕ್ಕೆ ಕಾರಣವಾಯಿತು. ನೀರಿನ ಆವಿಯಾಗುವಿಕೆ ತಡೆಯಲು 'ಸ್ಟೋಮೆಟಾ' ರಂಧ್ರಗಳನ್ನು ಹಗಲಿಡಿ ಮುಚ್ಚಿಟ್ಟು ರಾತ್ರಿ ಹೊತ್ತಲ್ಲಿ ತಂಪು ವಾತಾವರಣವಿದ್ದಾಗ ಮಾತ್ರ ತೆರೆಯುವುದು; ಎಲೆ ಕಾಂಡಗಳಲ್ಲಿ ನೀರಿನ ಸಂಗ್ರಹ; ಚೂಪು ಮುಳ್ಳಿನಂತ ಎಲೆಗಳು; ಎಲೆಗಳ ಮೇಲೆ ಬೂದಿಯ ಹೊದಿಕೆ; ಹೀಗೆ ಒಣ ಪ್ರದೇಶಕ್ಕೆ ಒಗ್ಗಿಕೊಳ್ಳಲು ಇವು ಅನುಸರಿಸಿದ ರೂಪಾಂತರ ಹಲವಾರು.

ಆರೈಕೆ

ಮಣ್ಣು-ನೀರು-ಬೆಳಕಿನ ಸರಿಯಾದ ವ್ಯವಸ್ಥೆಯಾದಲ್ಲಿ ಹೆಚ್ಚೇನು ನಿರ್ವಹಣೆ ಬೇಡದ ಈ ಸಸ್ಯಗಳ ಆರೈಕೆ ಸುಲಭ. ಎಲೆಗಳಲ್ಲೇ ನೀರನ್ನು ಸಂಗ್ರಹಿಸುವ ಈ ಕಲಾವಿದರಿಗೆ ನೀರೇ ಶತ್ರು! ನೀರು ಹೆಚ್ಚಾದರೆ ಕೊಳೆಯುವ, ನೀರು ಕಮ್ಮಿಯಾದರೆ ಸುಕ್ಕಾಗಿ ಸಾಯುವ 'ಸಕ್ಯುಲೆಂಟ್ಸ್'ಗಳಲ್ಲಿ ನೀರಿನ ನಿರ್ವಹಣೆ ಅತ್ಯಂತ ಮಹತ್ವದ್ದು. ಬೇರೆಲ್ಲಾ ಸಸ್ಯಗಳಂತೆ ಮನಸೋ ಇಚ್ಛೆ ನೀರು ಹೊಯ್ದರೆ ಗಿಡಗಳ ಸಾವು ಗ್ಯಾರಂಟಿ. ಹಾಗಾಗಿ ಸಕ್ಯುಲೆಂಟ್ಸ್ ಗಳನ್ನು ಬೆಚ್ಚಗೆ ಉಳಿದ ಸಸ್ಯಗಳಿಂದ ದೂರವಿರಿಸಿ ಕಾಳಜಿ ಮಾಡುವುದು ಒಳ್ಳೆಯದು.

ಹೆಚ್ಚೇನೂ ಆಳಕ್ಕೆ ಇಳಿಯದೆ ಮಣ್ಣಿನ ಮೇಲಿನ ಪದರದಲ್ಲಿಯೇ ಉಳಿಯುವ ಬೇರುಗಳನ್ನು ಹೊಂದಿರುವ ಸಸ್ಯವಾದ್ದರಿಂದ 2-3 ಇಂಚಿನ ಚಿಕ್ಕ ಸಿರಾಮಿಕ್, ಟೆರಾಕೋಟಾ, ಪ್ಲಾಸ್ಟಿಕ್, ಪಾಟ್ ಗಳೇ ಸರಿ. ಹೆಚ್ಚು ನೀರು ಹೀರದ, ನೀರು ಬಸಿದು ಹೋಗುವ, ಸಲ್ಪವೇ ಮಣ್ಣು - ಹೆಚ್ಚು ಮರಳಿನ ‘ಕಡಿ’ಯುಕ್ತ ಪಾಟ್ ಮಿಶ್ರಣ ಒಳ್ಳೆಯದು. ಸಕ್ಯುಲೆಂಟ್ಸ್ ಗಳಿಗಾಗಿಯೇ ಲಭ್ಯವಿರುವ ವಿಶೇಷ ಮಿಶ್ರಣವನ್ನು ಬಳಸಬಹುದು. ವಾತಾವರಣದ ಹಾಗೂ ಪಾಟ್ ಮಿಶ್ರಣದ ತೇವಾಂಶಕ್ಕನುಗುಣವಾಗಿ ಬೇಸಿಗೆಯಲ್ಲಿ ಮೂರು ದಿನಕ್ಕೊಮ್ಮೆ, ಹೆಚ್ಚು ಮಳೆಗಾಲದಲ್ಲಿ ಎರಡು ವಾರಕ್ಕೊಮ್ಮೆ ನೀರುಣಿಸಿದರೆ ಸಾಕು. ನೀರುಣಿಸುವ ಅಂತರದಲ್ಲಿ ಪಾಟ್ ಮಿಶ್ರಣದ ನೀರೆಲ್ಲಾ ಆರಿ ಪೂರ್ತಿ ‍ಒಣಗಿರಬೇಕು. ಹೊರಾಂಗಣದ ಪ್ರಖರ ಬಿಸಿಲು, ಒಳಾಂಗಣದ ಮಂದ ಬೆಳಕಾದರೂ ಅಡ್ಡಿಯಿಲ್ಲ, ಆದರೆ ದಿನದ ಒಂದು ವೇಳೆಯಾದರೂ ಸೂರ್ಯನ ಕಿರಣಗಳ ಭೇಟಿ ಅಗತ್ಯ. ಕೀಟ-ರೋಗಗಳ ಬಾಧೆ ಯಾವುದೇ ಇಲ್ಲವಾದರೂ ರಸ ಹೀರುವ ಕೀಟಗಳು ಕಂಡುಬಂದಲ್ಲಿ ಬೇವಿನ ಎಣ್ಣೆಯನ್ನು ಉಪಯೋಗಿಸಬಹುದು.

ಉಡುಗೊರೆ ನೀಡಿ

ಸಕ್ಯುಲೆಂಟ್ಸ್ ಗಳ ಪ್ರಸರಣ ಅತ್ಯಂತ ಸುಲಭದ, ಖುಷಿ ಕೊಡುವ ಚಟುವಟಿಕೆ. ಬೆಳೆದ ಒಂದೇ ಒಂದು ಎಲೆಯನ್ನು ತಾಯಿಯಿಂದ ಗಾಯವಾಗದಂತೆ ಬೇರ್ಪಡಿಸಿ, ತೇವವಾದ ‘ಕೋಕೋಪೀಟ್’ ಮಿಶ್ರಣದ ಮೇಲಿಟ್ಟರೆ ಸಾಕು. ತಿಂಗಳೊಳಗೆ ಎಲೆಯ ತುದಿಯಿಂದ ಮರಿಗಳು ಹುಟ್ಟಿರುತ್ತವೆ. ಒಂದು ಗಿಡದಿಂದ ದೊಡ್ಡ ಸಂತಾನವೊಂದನ್ನೇ ಸೃಷ್ಟಿಸಬಹುದು.

ಇಷ್ಟೆಲ್ಲಾ ಚಂದದ ಗುಣಗಳಿರುವ ಸಕ್ಯುಲೆಂಟ್ಸ್ ಗಳು ಸಂಗ್ರಹ ಯೋಗ್ಯವಾದ ಸಸ್ಯಗಳು. ಗಿಡ ಒಂದೆರಡನ್ನು ಸಾಯಿಸದೆ ಉತ್ತಮ ಗಾರ್ಡನರ್ ಹುಟ್ಟುವುದು ಸಾಧ್ಯವಿಲ್ಲವಂತೆ. ಸಕ್ಯುಲೆಂಟ್ಸ್ ಗಳ ಲೋಕಕ್ಕೆ ಹೊಸದಾಗಿ ಪರಿಚಯವಾದಾಗ ಆರೈಕೆಯ ವ್ಯತ್ಯಾಸದಿಂದಾಗಿ ಗಿಡಗಳು ಸಾಯುವುದು ಸಾಮಾನ್ಯ. ಆದರೂ ಈ ಚಂದವನ್ನು ಒಮ್ಮೆ ಕೊಂಡು ನಿಮ್ಮೂರಿನ ಹವಾಗುಣಕ್ಕೆ ತಕ್ಕುದಾದ ಆರೈಕೆ ಕಂಡುಕೊಳ್ಳಿ. ವಿಶೇಷ ದಿನದಂದು ಉಡುಗೊರೆ ನೀಡಿ.





Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ