ಶ್ರೀನಗರದ ಟುಲಿಪ್ ತೋಟದಲ್ಲಿ…
ಬೇಸಿಗೆ ಬಂತು, ಬಿಸಿಲ ತಂತು, ತನು ತಂಪು ಬಯಸಿತು. ಕೋವಿಡ್ ಮಾರಿ ಸದ್ಯ ಶಾಂತವಾಗಿದೆ. ಮಾರ್ಚ ಎಂಡ್ ತಲೆ ಬಿಸಿ ಮುಗಿದಿದೆ. ಪ್ರವಾಸಕ್ಕೊಂದು ನೆವ! ಇದೇ ಸರಿಯಾದ ಸಮಯವೆಂದು ಹಿಲ್ ಸ್ಟೇಷನ್ ಕಡೆ ಮುಖ ಮಾಡುವುದು ನಮ್ಮಂತಹ ಎಲ್ಲಾ ಪ್ರವಾಸಿಗರ ಕಥೆ. ಬೇಸಿಗೆಯ ಝಳ ತಪ್ಪಿಸಿಕೊಳ್ಳಲು ಊಟಿ, ಶಿಮ್ಲಾ, ಕುಲು-ಮನಾಲಿ, ಲೇಹ್-ಲಡಾಖ್ ಗಳಂತಹ ಸ್ಥಳಗಳಿಗೆ ಪ್ರವಾಸ ಹೊರಡುವುದು ಸಾಮಾನ್ಯ. ಈ ಪಟ್ಟಿಯಲ್ಲಿ ಮೊದಲ ಸ್ಥಾನ ಬಹುಶಃ ಭೂಲೋಕದ ಸ್ವರ್ಗ ‘ಕಾಶ್ಮೀರ’ದ್ದು.
ಬಿರುಸಾದ ಚಳಿಗಾಲ ಮುಗಿದು ವಸಂತ ಕಾಲ ಶುರುವಾಗುವ
ಹೊತ್ತಿನಲ್ಲಿ ಕಾಶ್ಮೀರ ಹೂವುಗಳಿಂದ ನಗುತ್ತಿರುತ್ತದೆ ಎಂದು ನಾವು ಬಲ್ಲವರಿಂದ ಕೇಳಿದ್ದೆವು. ತೋಟಗಾರಿಕಾ
ಪದವೀಧರ ದಂಪತಿಯಾದ ನಮಗೆ ಹಿಮಾಚ್ಛಾದಿತ ಕಾಶ್ಮೀರಕ್ಕಿಂತ ಹೂಗಳಿಂದ ಅಲಂಕೃತವಾದ ಕಾಶ್ಮೀರವನ್ನು, ಅದಕ್ಕಿಂತ
ಹೆಚ್ಚಾಗಿ ಶ್ರೀನಗರದ ‘ಟುಲಿಪ್ ಫೆಸ್ಟಿವಲ್’
ನೋಡುವ ಬಯಕೆಯಿತ್ತು. ಗೂಗಲ್ ಬಾಬಾನ ಸಹಾಯದಿಂದ ಪ್ಲಾನಿಂಗ್ ಕೂಡಾ ಆಗಿತ್ತು. ಪ್ರತಿ ವರ್ಷದಂತೆ ಟುಲಿಪ್
ಹಬ್ಬ ಏಪ್ರಿಲ್ ತಿಂಗಳಲ್ಲಿ ಶುರುವಾಗುವ ಮಾಹಿತಿಯೊಂದಿಗೆ ನಮ್ಮ ಪ್ರವಾಸವನ್ನು ಏಪ್ರಿಲ್ ನಲ್ಲಿ ಯೋಜಿಸಿದ್ಧೆವು.
ಆ ದಿನಕ್ಕಾಗಿ ಎದುರು ನೋಡುತ್ತಿದ್ದ ನಮಗೆ ಮಾರ್ಚ ೨೩ರಂದು ಟುಲಿಪ್ ತೋಟ ಪ್ರವಾಸಿಗರ ಪ್ರವೇಶಕ್ಕೆ
ಮುಕ್ತವಾಗಿದೆ ಎಂದು ಮಾಧ್ಯಮಗಳ ಮೂಲಕ ತಿಳಿದು ಪುಳಕವಾಗಿತ್ತು.
ಕನಸುಗಳ ಹೊತ್ತು ಕಾಶ್ಮೀರದ ರಾಜಧಾನಿ ಶ್ರೀನಗರಕ್ಕೆ
ಬಂದು ಇಳಿದಿದ್ದೆವು. ಮೊಬೈಲ್ ‘ನೋ ಸಿಗ್ನಲ್’
ತೋರುತ್ತಿತ್ತು. ಕಾರಣ ಕಾಶ್ಮೀರದಲ್ಲಿ ಚಲಾವಣೆಯಾಗದ ನಮ್ಮ ‘ಪ್ರೀ ಪೇಯ್ಡ್ ಸಿಮ್’. ವಿಮಾನ ನಿಲ್ದಾಣದಿಂದ
ಹೊರಬರುತ್ತಿದ್ದಂತೆ ನಿಧಾನವಾಗಿ ‘ಕಾಶ್ ಮೋ(ಮೀ)ರ್’
ದ ವಾಸ್ತವತೆ ಬಯಲಾಗಿತ್ತು. ಚೌಕಾಸಿ ಮಾಡದಿದ್ದರೆ ಕಿಸೆ ಹಗುರಾಗುವ ಖಚಿತತೆ ಕಂಡಿತು. ದುಪ್ಪಟ್ಟು
ದುಡ್ಡು ಕೊಟ್ಟು ಟ್ಯಾಕ್ಸಿಯೊಂದನ್ನು ಬಾಡಿಗೆಗೆ ಕೊಂಡು ಮೊದಲೇ ನಿಗದಿ ಪಡಿಸಿದ್ದ ಹೋಟೆಲ್ ಗೆ ಹೊರಟೆವು,
ಎಲ್ಲಾ ಬಿಟ್ಟು ಯಾವೂರಿಗೆ ಬಂದೆವೋ ಎಂಬ ದುಗುಡದೊಂದಿಗೆ!
ಮೊದಲೆರಡು ದಿನದ ಶ್ರೀನಗರದ ವಾಸ್ತವ್ಯವೇಕೋ
ನಮಗೆ ಒಗ್ಗಲಿಲ್ಲ. ಮಲೆನಾಡಿನ ಪ್ರಶಾಂತ ವಾತಾವರಣದಲ್ಲಿದ್ದ ನಮಗೆ, ಗಿಜಿಗಿಜಿ ಗುಡುವ, ಪ್ರವಾಸಿಗರಿಂದ
ಕಿಕ್ಕಿರಿದ ಕಲುಷಿತವಾದ ಶ್ರೀನಗರ ರುಚಿಸಲಿಲ್ಲ. ಜೊತೆಗೆ ಹೆಜ್ಜೆ ಹೆಜ್ಜೆಗೂ ದುಡ್ಡು ಸುಲಿಯುವ ಜನರಿಂದ
ಮನ ನೊಂದಿತ್ತು. ಹಿಮ ಕರಗಿ ಬೋಳು ಗುಡ್ಡವಾಗುವ ಸನಿಹದಲ್ಲಿದ್ದ ಗುಲ್ಮಾರ್ಗ, ಸೋನ್ ಮಾರ್ಗ ಗಳು ನೀರಸವೆನಿಸಿದ್ದವು. ಹಸಿರು ಹುಲ್ಲುಗಾವಲಿನ ಪಹಲ್ಗಾಮ್ ಕ್ಕಿಂತ
ನಮ್ಮ ಕೊಡಗು, ಚಿಕ್ಕಮಗಳೂರೇ ಇನ್ನಷ್ಟು ಸುಂದರ ಎನಿಸಿತು. ಜೊತೆಗೆ ೨೬-೨೭ಲಿ ಸೆಲ್ಷಿಯಸ್ ಇದ್ದ ದಿನದ
ತಾಪಮಾನ ನಮ್ಮನ್ನು ಸುಸ್ತಾಗಿಸಿತ್ತು.
ನಾವು ಬಂದ ಬಹು ಮಹತ್ವದ ಉದ್ಧೇಶವಾದ ಟುಲಿಪ್
ಗಾರ್ಡನ್ನ ವೀಕ್ಷಣೆ ನಮ್ಮ ಕಾಶ್ಮೀರ್ ‘ಬಕೆಟ್ ಲಿಸ್ಟ್’ ನ ತುದಿಯಲ್ಲಿತ್ತು. ಅಲ್ಲಿನ ಸ್ಥಳಿಯರಿಗೆ
ಟುಲಿಪ್ ಗಾರ್ಡನ್ ಅಷ್ಟೇನು ಆಸಕ್ತಿದಾಯಕ ವಿಷಯವಾಗಿರಲಿಲ್ಲ. ‘ವಹಾ ಕುಚ್ ಭಿ ನಹಿ, ಸಿರ್ಫ ಫೂಲ್ ಹೋತಾ
ಹೈ’ ಎಂದು ನಮ್ಮನ್ನು ನಿರುತ್ಸಾಹಗೊಳಿಸಿದ್ದರು.
ಜಮ್ಮು-ಕಾಶ್ಮೀರ ಸರ್ಕಾರಿ ಆಟ್ ಎಂಪೋರಿಯಮ್, ಶಂಕರಾಚಾರ್ಯ
ಮಂದಿರ, ಪರಿ ಮಹಲ್, ಮೊಘಲ್ಲರ ಉದ್ಯಾನವನ ಮುಂತಾದ ಶ್ರೀನಗರದ ಸ್ಥಳೀಯ ತಾಣಗಳನ್ನು ತಿರುಗಿಸಿ ಆಟೋವಾಲಾ
ನಮ್ಮನ್ನು ಟುಲಿಪ್ ಗಾರ್ಡನ್ ಗೆ ತಂದಿಳಿಸಿದ್ದ. ಟಿಕೇಟ್ ಕೊಂಡು ಒಳ ಹೋಗುತ್ತಿದ್ದಂತೆ ಗಂಟು ಹಾಕಿಕೊಂಡಿದ್ದ
ಮುಖ ಅರಳಿತ್ತು. ಏಷ್ಯಾದಲ್ಲೇ ಅತ್ಯಂತ ದೊಡ್ಡದಾದ ಟುಲಿಪ್ ತೋಟಕ್ಕೆ ನಮ್ಮ ಪಾದಾರ್ಪಣೆಯಾಗಿತ್ತು!
ಕಾಶ್ಮೀರ ಕಣಿವೆಯ ಅದ್ಭುತ
ಬಣ್ಣದ ಲೋಕ!
ಭವ್ಯವಾದ ಜಬರವಾನ್ ಪರ್ವತ ಶ್ರೇಣಿಯ ಹಿನ್ನೆಲೆಯಲ್ಲಿ
ಕಣ್ಣು ಹಾಯಿಸಿದಷ್ಟೂ ದೂರ ಬಣ್ಣ ಬಣ್ಣದ ಹೂವಿನ ಹಾಸು. ಪಾರ್ಟಿಗಳ ಡೆಕೊರೇಷನ್ ನಲ್ಲಷ್ಟೇ ನೋಡಿದ ವಿರಳಾತಿವಿರಳವಾದ
ಟುಲಿಪ್ ಹೂವನ್ನು ಕಣ್ಣೆದುರೇ ನೋಡಿ ಮನಸ್ಸು ಮುದಗೊಂಡಿತ್ತು. ಕೆಂಪು, ಕೇಸರಿ, ಹಳದಿ, ನೇರಳೆ, ಗುಲಾಬಿ,
ಬಿಳಿ, - ಲೆಕ್ಕ ಮಾಡಿ ಪೂರೈಸಲಾಗದಷ್ಟು ಬಣ್ಣಗಳೂ ತಳಿಗಳೂ ಅಲ್ಲಿದ್ದವು. ತಕ್ಷಣವೇ ವಿಡಿಯೋ ಕರೆ ಮಾಡಿ
ಮನೆ ಮಂದಿಗೆಲ್ಲಾ ಈ ಸೌಂದರ‍್ಯದ ಬಣ್ಣನೆ ಮಾಡಿಯಾಯಿತು. ಸಂಜೆಯ ತಂಪಾದ ಗಾಳಿ, ಕಾರಂಜಿಯ ಚಿಲುಮೆ,
ವಿಶ್ರಮಿಸಲು ವಿಲ್ಲೋ ಮರದ ನೆರಳು, ಕಣ್ಣಿಗೆ ತಂಪಾದ ಹೂಗಳ ಬಳಗ, ಇದರೊಟ್ಟಿಗೆ ನಮ್ಮ ಯೋಜನೆ ಸಾರ್ಥಕವಾಗಿತ್ತು.
‘ಇಲ್ಲೇನು, ಹೆಚ್ಚೆಂದರೆ ಮುಕ್ಕಾಲು ಘಂಟೆ ಸಮಯ ಕಳೆಯುವರು,’ ಎಂದ ಊಹಿಸಿದ್ದ ಆಟೋವಾಲಾಗೆ ನಾವು ಎರಡು
ತಾಸಿನ ಸಮಯದ ನಂತರ ಹೋಗಿದ್ದು ಆಶ್ಚರ್ಯಕರವಾಗಿ ಕಂಡಿತ್ತು.
‘ಇಂದಿರಾ ಗಾಂಧೀ ಮೆಮೋರಿಯಲ್
ಟುಲಿಪ್ ಗಾರ್ಡನ್’
ಮುಂಚೆ ‘ಶಿರಾಜ್ ಭಾಗ್’ಎಂದು ಕರೆಯಲ್ಪಡುತ್ತಿದ್ದ ‘ಇಂದಿರಾ ಗಾಂಧೀ
ಮೆಮೋರಿಯಲ್ ಟುಲಿಪ್ ಗಾರ್ಡನ್’ಅನ್ನು
೨೦೦೮ರಲ್ಲಿ ಪ್ರಾರಂಭಿಸಿದ್ದು ಅಂದಿನ ಜಮ್ಮು ಕಾಶ್ಮೀರದ ಪ್ರಧಾನಿ ಗುಲಾಂ ನಬಿ ಆಜಾದ್. ಕಾಶ್ಮೀರದ
ಚಳಿಗಾಲದ ಪ್ರವಾಸೋದ್ಯಮವನ್ನು ವಸಂತ ಋತುವಿಗೂ ವಿಸ್ತರಿಸುವ ಯೋಜನೆ ಇದಾಗಿತ್ತು. ಅಂದಿನಿಂದ ಪ್ರತಿ
ವರ್ಷವೂ ಒಂದು ತಿಂಗಳ ಟುಲಿಪ್ ಹಬ್ಬವನ್ನು ಇಲ್ಲಿ ಲಕ್ಷಗಟ್ಟಲೆ ಪ್ರವಾಸಿಗರೊಡನೆ ಆಚರಿಸಲಾಗುತ್ತಿದೆ.
ಕೋವಿಡ್ ಆರ್ಭಟ ತಗ್ಗಿದ ೨ ವರ್ಷಗಳ ನಂತರ ಗಾರ್ಡನ್
ಅನ್ನು ೨೩ ಮಾರ್ಚ ಅಂದು ತೆರೆಯಲಾಗಿತ್ತು. ೩೫ ಹೆಕ್ಟೇರ್
ವಿಸ್ತಾರವಾದ ಬಯಲಿನಲ್ಲಿ ಬಣ್ಣ ಬಣ್ಣದ ೧೫ ಲಕ್ಷಕ್ಕೂ ಮಿಕ್ಕ ಹೂಗಳು, ೬೮ ತಳಿಗಳಿಂದ ನಳನಳಿಸುತ್ತಿದ್ದ
ಟುಲಿಪ್ ಗಳು ಒಂದು ತಿಂಗಳ ತಮ್ಮ ಚಂದದ ಜೀವನವನ್ನು ಮುಗಿಸಿ ಏಪ್ರಿಲ್ ೧೮ರಂದು ಪ್ರವಾಸಿಗರಿಗೆ ವಿದಾಯ
ಹೇಳಿದವು. ಈ ಬಾರಿಯಂತೂ ನಿರೀಕ್ಷೆಗೂ ಮೀರಿ, ಕಳೆದ ಹತ್ತು ವರ್ಷಗಳ ದಾಖಲೆ ಮುರಿದು, ಮೂರೂವರೆ ಲಕ್ಷ
ಪ್ರವಾಸಿಗರ ಭೇಟಿಗೆ ಟುಲಿಪ್ ಗಾರ್ಡನ್ ಸಾಕ್ಷಿಯಾಗಿತ್ತು.
ಟುಲಿಪ್ ಹೂಗಳ ಬಗ್ಗೆ ಇನ್ನಷ್ಟು..
ಮಧ್ಯ ಏಷಿಯಾದಲ್ಲಿ ಉಗಮವಾದ ಟುಲಿಪ್ ಸಸ್ಯಗಳನ್ನು
ಉಳಿಸಿ ಬೆಳೆಸಿದ್ದು ಟರ್ಕಿ,
ಪರ್ಷಿಯಾ ದೇಶಗಳು. ೧೫ ನೇ ಶತಮಾನದ
ಓಟ್ಟೋಮನ್ ಸಾಮ್ರಾಜ್ಯದಲ್ಲಿ ಪ್ರಾಮುಖ್ಯತೆ ಪಡೆದಿದ್ದ ಟುಲಿಪ್ ಗಳು ಸುಲ್ತಾನರ ‘ಪೇಟ’ದಲ್ಲಿ ಜಾಗ ಗಳಿಸಿದ್ದವು. ಪರ್ಷಿಯನ್ ಭಾಷೆಯಲ್ಲಿ
‘ಪೇಟ’ಕ್ಕೆ ‘ಟುಲಿಪ್’ ಎಂಬ ಪದವಿದೆ. ನಿಧಾನವಾಗಿ ಟುಲಿಪ್ ಬೆಳೆ ಯುರೋಪ್ ದೇಶಗಳಿಗೂ ವಿಸ್ತರಿಸಿತು.
ಇಂದು ಡಚ್ಚರೇ ಟುಲಿಪ್ ಹೂಗಳ ಬೆಳೆ, ವ್ಯಾಪಾರದಲ್ಲಿ
ಮೊದಲಿಗರು.
ಟುಲಿಪ್ ಹೂಗಳು ಜೀವ ತಾಳುವುದು ವಸಂತ ಋತುವಿನಲ್ಲಿ,
ಮಣ್ಣೊಳಗಿನ ಗಡ್ಡೆಗಳಿಂದ. ಸುದೀರ್ಘ ಶೀತವನ್ನು ಅನುಸರಿಸಿ ಬರುವ ತಂಪಾದ ವಸಂತದ ವಾತಾವರಣ ಇವುಗಳ ಬೆಳವಣಿಗೆಗೆ
ಅತಿ ಅಗತ್ಯ. ಗಂಟೆಯಾಕಾರದ ಈ ಹೂಗಳ ಜೀವಿತಾವಧಿ ಮೂರರಿಂದ ನಾಲ್ಕು ವಾರಗಳು ಮಾತ್ರ. ಹೂ ಮತ್ತು ಎಲೆಗಳು
ಪೂರ್ತಿ ಬಾಡಿದ ನಂತರ ಗಡ್ಡೆಗಳನ್ನು ಕಿತ್ತು ಸ್ವಚ್ಛಗೊಳಿಸಿ ನೆರಳಲ್ಲಿ ಸಂಗ್ರಹಿಸಿಡಲಾಗುತ್ತದೆ.
ಇದೇ ಗಡ್ಡೆಗಳನ್ನು ನವೆಂಬರ್ ನ ಚಳಿಯ ಶುರುವಾತಿನಲ್ಲಿ ಮತ್ತೆ ಮಣ್ಣಿನ ಮಡಿಯಲ್ಲಿ ಬಚ್ಚಿಡಲಾಗುತ್ತದೆ.
ನಾಲ್ಕು ತಿಂಗಳ ತಂಪನ್ನು ತಿಂದು ಮಾರ್ಚ ತಿಂಗಳ ಶುರುವಾತಿನಲ್ಲಿ ಎಲೆಗಳು ಮೊಳೆಯುತ್ತವೆ ಮತ್ತು ಏಪ್ರಿಲ್
ನಲ್ಲಿ ಗಾರ್ಡನ್ ಹೂಗಳಿಂದ ಸಜ್ಜಾಗುತ್ತದೆ.
ವಸಂತದ ತೇರು
ಕಾಶ್ಮೀರದ ಕಣಿವೆಯಲ್ಲಿ ವಸಂತದ ತೇರೆಳೆಯಲು
ಬರೀ ಟುಲಿಪ್ ಗಳಲ್ಲದೆ ಉಳಿದ ಗಿಡಮರಗಳು ಕಾಯುತ್ತಿರುತ್ತವೆ.
ಸೇಬು, ಬಾದಾಮಿ, ಪಿಯರ್, ಚೆರಿ, ಅಕ್ರೂಟ್ ಮರಗಳಲ್ಲದೆ ಪ್ಯಾನ್ಸಿ, ಪೆಟುನಿಯಾ, ನೆಮೆಸಿಯಾ, ಡೆಫೊಡಿಲ್
ಮುಂತಾದ ಗಿಡಗಳು ಹೂ ಬಿಟ್ಟು ನುಲಿಯುತ್ತಿರುತ್ತವೆ. ಆದ್ದರಿಂದ ಸಸ್ಯ ಪ್ರೇಮಿಗಳಿಗೆ ಕಾಶ್ಮೀರದ ಸಸ್ಯಸಂಪತ್ತಿನ
ಪರಿಚಯಕ್ಕೆ ಏಪ್ರಿಲ್ ಬಹಳ ಸೂಕ್ತ ಕಾಲ. ಇದಕ್ಕೆ ಪುರಾವೆ ಹೂಗಳ ಚಿತ್ರದಿಂದ ತುಂಬಿದ್ದ ನಮ್ಮ ಫೋನ್
ಗ್ಯಾಲರಿ.
ಹವಾಮಾನ ಬದಲಾವಣೆ- ನಿಜ?!
ಪ್ರತಿ ವರುಷವೂ ಶ್ರೀನಗರದಲ್ಲಿ ಟುಲಿಪ್ ಫೆಸ್ಟಿವಲ್ ನಡೆಯುವ ಕಾಲ ಏಪ್ರಿಲ್ ತಿಂಗಳು. ಆದರೆ ಈ ಬಾರಿ ಹೂಗಳು ಅವಧಿಗಿಂತ ಬೇಗ ಅರಳಿದ್ದೂ, ಮಾರ್ಚ ಕೊನೆಯ ವಾರದಲ್ಲೇ ಟುಲಿಪ್ ತೋಟವನ್ನು ಉದ್ಘಾಟಿಸಲಾಗಿತ್ತು. ದಿನದ ತಾಪಮಾನ ಹೆಚ್ಚಾದ ಕಾರಣ ಟುಲಿಪ್ ಗಳು ಬೇಗ ಬಾಡಿದ್ದೂ, ಏಪ್ರಿಲ್ ತಿಂಗಳ ಮಧ್ಯೆ ಗಾರ್ಡನ್ ಮುಚ್ಚುವ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದರಿಂದ ಬಹಳಷ್ಟು ಪ್ರವಾಸಿಗರ ಯೋಜನೆ ಬುಡ ಮೇಲಾಗಿದೆ. ಇದೇ ಮೊದಲ ಬಾರಿಗೆ ಕಾಶ್ಮೀರದ ಸ್ಥಳೀಯರೂ ಕೂಡಾ ಜೂನ್ ನಲ್ಲಿ ಕಾಣಬೇಕಿದ್ದ ಬೇಸಿಗೆಯ ಝಳವನ್ನು ಮಾರ್ಚ ತಿಂಗಳಲ್ಲಿಯೇ ಅನುಭವಿಸುತ್ತಿದ್ದಾರೆ. ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಗಳ ಬಿಸಿ ಹಿಮದ ತವರಿಗೂ ತಟ್ಟಿದೆ.


Comments
Post a Comment