ಕೊಕೆಡಾಮಾ-ಪಾಚಿ ಚೆಂಡಿನ ಪ್ರಪಂಚ!
ಕಾಂಕ್ರೀಟ್ ಜಗತ್ತಿನ ಯಾಂತ್ರೀಕೃತ ಬದುಕು; ಆಗೊಮ್ಮೆ ಈಗೊಮ್ಮೆ ವಾರಾಂತ್ಯದ ಮೋಜು; ಅಲ್ಲಲ್ಲಿ, ಕೋಣೆಯ ಮೂಲೆಯಲ್ಲಿ, ಏಣಿ ಮೆಟ್ಟಿಲುಗಳಲ್ಲಿ, ಕಿಟಕಿ ಚೌಕಟ್ಟಿನಲ್ಲಿ, ಓದು ಮೇಜಿನ ಮೇಲೆ, ರಸ್ತೆ ಬದಿಯ ಕಂಪೌಂಡ್ ಗೋಡೆಯ ಮೇಲೆ, ಮನೆ ಛಾವಣಿಯಿಂದ ತೂಗುತ್ತಾ ಈ ಕೃತಕ ಜೀವನಕ್ಕೆ
ಚೈತನ್ಯ ತುಂಬುವ ಹೂಕುಂಡಗಳು, ಪುಟ್ಟ ಗಿಡಗಳು; ಇತಿ ನಗರವಾಸೀನಾಂ ಲಕ್ಷಣಮ್!. ಯಾವುದೋ ಕಾರಣಕ್ಕೆ ನಿಸರ್ಗದಿಂದ ದೂರವಾಗಿದ್ದಕ್ಕೆ ಈಗ ಗಿಡ ಮರಗಳಿಂದ
ಸುತ್ತುವರೆದು ತಾಜಾ ಹವಾ ಸೇವಿಸುವ ತುಡಿತ ಶಹರದ ಮಂದಿಯದು. ಕೆಲಸದ ಒತ್ತಡ ಮರೆಸಿ, ಖಿನ್ನತೆ ದೂರಗೊಳಿಸಿ, ಸೃಜನಶೀಲತೆ ಉತ್ತಮಗೊಳಿಸಿ, ಶ್ವಾಸಕೋಶಗಳನ್ನು ಸ್ವಚ್ಛಗೊಳಿಸಿ, ದೇಹ-ಮನಸ್ಸಿನ ಸ್ವಾಸ್ಥ್ಯ ಕಾಪಾಡುವ ಸಸ್ಯ ಪ್ರಪಂಚವನ್ನು ಒಳಾಂಗಣಕ್ಕೆ ಕರೆಸುತ್ತಿರುವುದು ನಗರವಾಸಿಗಳ ಇತ್ತೀಚಿನ ಟ್ರೆಂಡ್. ಅದರಲ್ಲೂ ಕೊರೋನಾ ಕಾಲದಲ್ಲಿ ಹೆಚ್ಚಿನ ಮಹತ್ವ ಪಡೆದ ಈ ಒಳಾಂಗಣ ತೋಟ,
ತಾರಸಿ ತೋಟದ ಪರಿಕಲ್ಪನೆಗಳು ಇಂದಿಗೂ ಬಹುತೇಕರ ನೆಚ್ಚಿನ ಹವ್ಯಾಸವಾಗಿದೆ.
ಗಾಳಿ ಶುದ್ಧೀಕರಿಸುವ, ನೆರಳಿಗೆ ಒಗ್ಗಿಕೊಳ್ಳುವ, ಕಮ್ಮಿ ನೀರು ಬೇಡುವ, ಚಿಕ್ಕ ಜಾಗವನ್ನು ಚಂದಾಗಿ ಅಲಂಕರಿಸುವ, ಗಡುಸಾಗಿ ಬೆಳೆವ ಸಸ್ಯಗಳಿಗೆ ಈಗ ಎಲ್ಲಿಲ್ಲದ ಬೇಡಿಕೆ. ಈ ಎಲ್ಲಾ ಮಾನದಂಡಗಳನ್ನು ಪೂರೈಸುವ ಕಳ್ಳಿ ಜಾತಿಯ ಗಿಡಗಳು, ಬೋನ್ಸಾಯ್, ಕಸಿ ಗಿಡಗಳನ್ನು ಅಂತರ್ಜಾಲದಲ್ಲಿ ಮಾರಾಟ ಮಾಡುವವರೂ ಸಾವಿರಾರು. ಹೀಗೆ ಪಟ್ಟಣವನ್ನು ಅರಣ್ಯೀಕರಿಸುತ್ತಿರುವ ತೋಟಗಾರಿಕಾ ವಿಧಾನಗಳಲ್ಲಿ ಅತ್ಯಂತ ಹಳೆಯದಾದ, ನೂತನ ಕಳೆಯೊಂದಿಗೆ ಇಂದು ಹಿಂತಿರುಗುತ್ತಿರುವ ಕಲೆ ‘ಕೊಕೆಡಾಮ’.
ಕೊಕೆಡಾಮ ಅರ್ಥಾತ್…
ಅಕ್ಷರಶಃ ಅನುವಾದಿಸುವುದಾದರೆ ಕೊಕೆಡಾಮ ಎಂದರೆ ಪಾಚಿ ಚೆಂಡು. ಪಾಚಿ ಮೆತ್ತಿದ ಮಣ್ಣಿನ ಚೆಂಡಿನಲ್ಲಿ ಗಿಡ ಬೆಳೆಸುವ ಈ ವಿಧಾನ ಹುಟ್ಟಿದ್ದು ಜಪಾನಿನಲ್ಲಿ. ಸರಳವಾಗಿ ರಚಿಸಬಹುದಾದ, ಸುಲಭವಾಗಿ ನಿರ್ವಹಿಸಬಹುದಾದ, ಆಕರ್ಷಕವಾಗಿ ಕಾಣುವ ಶತಮಾನಗಳಷ್ಟು ಹಳೆಯದಾದ ಈ ಕುಶಲ ಕಲೆಗೆ ‘ಬಡವರ ಬೋನ್ಸಾಯ್’ ಎಂಬ ಖ್ಯಾತಿಯೂ ಇದೆ. ನಮ್ಮಿಷ್ಟದ ಗಿಡದ ಬೇರನ್ನು ಪೋಷಕಾಂಶ ಭರಿತ ಮಣ್ಣಿನಲ್ಲಿ ಹುದುಗಿಸಿ, ಅಂಗೈ ಅಗಲದಷ್ಟು ಗೋಲಾಕಾರಕ್ಕೆ ತಟ್ಟಿ, ಪಾಚಿಯಿಂದ ಹೊದಿಸಿದರೆ ಕೊಕೆಡಾಮ ಸಿದ್ಧ. ಕಾಲ ಕಾಲಕ್ಕೆ ನೀರು ಸಿಂಪಡಿಸುತ್ತಾ ಇದ್ದರೆ ಅಷ್ಟೇ ಸಾಕು.
ಕೊಕೆಡಾಮದ ಪರಿಕಲ್ಪನೆ
ಜಪಾನಿನಲ್ಲಿ ವಾಬಿ-ಸಾಬಿ ಎಂಬ ಕಲ್ಪನೆಯೊಂದಿದೆ. ಪ್ರಕೃತಿ ಪರಿಪೂರ್ಣವಲ್ಲ, ಆದರೆ ಪ್ರಕೃತಿಯ ಅಪೂರ್ಣತೆಯಲ್ಲಿಯೂ ಸೌಂದರ್ಯವಿದೆ. ಕಳೆಗುಂದಿ ಮಸುಕಾದರೂ , ಅಲ್ಲಲ್ಲಿ ತೂತಾದರೂ ಅಜ್ಜಿಯಿಂದ ಪಡೆದ ಸೀರೆ ಭಾವನಾತ್ಮಕವಾಗಿ ಸುಂದರ. ಬಣ್ಣಹೀನವಾಗಿ ಮರದಿಂದ ಉದುರುತ್ತಿರುವ ಹಣ್ಣೆಲೆ ನೋಡಲು ಸುಂದರವಲ್ಲದಿದ್ದರೂ ಅದು ಸವೆಸಿದ ಬಾಳ ದಾರಿ ಗೌರವಯುತ. ಹೀಗೆ ಅಪೂರ್ಣವಾದ ಪ್ರಕೃತಿಯಲ್ಲಿ ಕಾಣುವ ಅಸಮ, ಸಾಧಾರಣ, ಕಡೆಗಣಿಸಲಾದ, ಸ್ವಾರಸ್ಯವಿಲ್ಲದ, ಅಶಾಶ್ವತ, ಆದರೆ ಸುಂದರವಾದ ಕ್ಷಣಗಳಿಗೆ ವಾಬಿ-ಸಾಬಿ ಎಂದು ಜಪಾನಿಯನ್ನರು ಕರೆಯುತ್ತಾರೆ. ಅಪೂರ್ಣವಾದ ಆದರೆ ಸುಂದರವಾದ ಕೊಕೆಡಾಮ ಕೂಡಾ ಜಪಾನಿಯನ್ನರ ವಾಬಿ-ಸಾಬಿ ಜೀವನ ಶೈಲಿಯ ಪರಿಕಲ್ಪನೆ. ಅಲ್ಪ ಸಮಯದಲ್ಲಿ, ಅತ್ಯಂತ ಕನಿಷ್ಠ ವಸ್ತು ಉಪಯೋಗಿಸಿ ಯಾವುದೇ ಕೃತಕ ಅಂಶಗಳ ಛಾಯೆಯೂ ಇಲ್ಲದೇ ಆಕರ್ಷಕವಾಗಿ ಕಾಣುವ ಕೊಕೆಡಾಮ ಮನಕೋರೈಸುವ ಕಲೆಯಾಗಿ ಇಂದು ತೋಟಗಾರರನ್ನು ಕಾಡುತ್ತಿದೆ.
ಕೊಕೆಡಾಮ ರಚಿಸುವ
ಬಗೆ
ಒಳ್ಳೆಯ ಹವ್ಯಾಸದೊಡನೆ ಮನೋರಂಜಕವಾಗಿ ಕಾಣುವ ಕೊಕೆಡಾಮ ರಚನೆ ಸವಾಲಿನ ಕೆಲಸವೂ ಹೌದು. ಜನಪ್ರಿಯ ಒಳಾಂಗಣ ಸಸ್ಯಗಳಾದ ಮನೀ ಪ್ಲಾಂಟ್, ಫಿಲೊಡೆಂಡ್ರೋನ್, ಪೀಸ್ ಲಿಲ್ಲಿ, ಲಕ್ಕಿ ಬಾಂಬೂ, ವಿವಿಧ ಬಗೆಯ ಜರೀಗಿಡಗಳು (ಫರ್ನ್ಸ) ಇವೆಲ್ಲವೂ ಕೊಕೆಡಾಮಕ್ಕೆ ಸೂಕ್ತವಾದ ಗಿಡಗಳು. ಹೂಕುಂಡಗಳಿಗೆ ಸಾಮಾನ್ಯವಾಗಿ ಉಪಯೋಗಿಸುವ ಮಣ್ಣು-ಗೊಬ್ಬರದ ಮಿಶ್ರಣವೇ ಸಮ್ಮತ. ನಮ್ಮಿಷ್ಟದ ಗಿಡವನ್ನು ಮೊದಲು ಬೇರು ಸಮೇತ ಬೇರ್ಪಡಿಸಬೇಕು, ನಂತರ ಬೇರನ್ನು ಮೊದಲೇ ತಯಾರಿಸಿದ ಹಸಿಯಾದ ಮಣ್ಣಿನ ಮಿಶ್ರಣದೊಂದಿಗೆ ಮುಚ್ಚಬೇಕು. ಈ ಮಣ್ಣಿನ ಚೆಂಡನ್ನು ಗೋಲಾಕಾರವಾಗಿಸಿ ಹಸುರು ಪಾಚಿ/ಹಾವಸೆಯಿಂದ ಮೆತ್ತಬೇಕು. ಪಾಚಿ ಸಿಕ್ಕದಿದ್ದಲ್ಲಿ ಪೀಟ್/ತೆಂಗಿನ ನಾರಿನಿಂದಲೂ ಸುತ್ತಬಹುದು. ಹೀಗೆ ಮೆತ್ತಿದ ಪಾಚಿ ಕಳಚದಂತೆ ಸೆಣುಬಿನ ದಾರದಿಂದ ಭದ್ರಪಡಿಸಿದರೆ ಕೊಕೆಡಾಮ ಪ್ರದರ್ಶನೆಗೆ ಸಿದ್ಧ. ಹೀಗೆ ತಯಾರಿಸಿದ ಕೊಕೆಡಾಮಗಳನ್ನು ಮೇಜಿನ ಮೇಲೆ ಕಂಟೇನರ್/ ಕುಂಡಗಳಲ್ಲಿ, ಬರಿದೇ ಕುಂಡವಿಲ್ಲದೇ ಮನೆಯ ಛಾವಣಿಯ ಕೊಂಡಿಗೆ ನೇತು ಹಾಕಿ, ಮರದ/ಬಿದಿರನ ಅಂಡೆಗಳಲ್ಲಿ, ನಮ್ಮ ಕಲ್ಪನಾ ಲಹರಿಯಲ್ಲಿ ಬೇಕಾದ ಹಾಗೆ ಪ್ರದರ್ಶಿಸಬಹುದು. ಮಣ್ಣಿನ ತೇವಾಂಶಕ್ಕೆ ತಕ್ಕಾಗಿ ನೀರು ಸಿಂಪಡಿಸಿದರೆ ನಮ್ಮ ಕರ್ತವ್ಯ ಸಂಪನ್ನ. ಕೊಕೆಡಾಮ ರಚಿಸುವ ಬಗ್ಗೆ ಹಲವಾರು ವಿಡಿಯೋಗಳು ಯುಟ್ಯೂಬ್ ನಲ್ಲಿ ಲಭ್ಯವಿದೆ.
ಹಸಿರಲ್ಲವೆ ಉಸಿರು!
ಸಲ್ಪವೂ ಕೃತಕತೆಯಲ್ಲದೆ ನಿಸರ್ಗದ ಅಂಶಗಳನ್ನು ಒಳಗೊಂಡು ನೈಜವಾಗಿ ಕಾಣುವ ಕೊಕೆಡಾಮ ಮಾನವನನ್ನು ಪ್ರಕೃತಿಗೆ ಸನಿಹವಾಗಿಸುತ್ತದೆ. ಪಾಚಿ ಹಸಿರು ಮತ್ತು ತಾಜಾ ಆಮ್ಲಜನಕದ ಗುರುತಾಗಿ ಫಲವತ್ತತೆಯ ಪ್ರತೀಕವಾಗುತ್ತದೆ. ನಿಜವಾದ ಕಾಡನ್ನೇ ಹೋಲುವ ಮಾನವ ನಿರ್ಮಿತ ಕಾಡೊಂದು ಸಾಕಾರವಾಗುತ್ತದೆ. ನಿರ್ಮಲ ಪ್ರಶಾಂತ ವಾತಾವರಣವೊಂದು ಮನಸ್ಸನ್ನು ಶಾಂತಗೊಳಿಸುತ್ತದೆ. ಹೀಗೆ ಹಲವಾರು ಅನುಕೂಲಗಳ ಕೊಕೆಡಾಮವನ್ನೂ ನೀವೂ ಮಾಡಿ ನೋಡಿ. ಹಸಿರನ್ನೇ ಉಸಿರಾಗಿಸಿ.

Comments
Post a Comment