ಪ್ರಯೋಗ ಶಾಲೆಯ ಇಲಿಗಳು

An article about lab rats!




ಪ್ರಯೋಗ ಶಾಲೆಯ ಇಲಿಗಳು
ಮಾನವನ ಕುತೂಹಲತೆ ಎಲ್ಲೆ ಮೀರಿದ್ದು. ತನ್ನ ದೇಹದ ರಚನೆ ಮತ್ತು ಅದು ಕೈಗೊಳ್ಳುವ ಕಾರ್ಯದ ಬಗ್ಗೆಯೂ ಆತ ಅತ್ಯಂತ ಆಸಕ್ತ. ಹೀಗೆ ಕುತೂಹಲ ತಣಿಸಿಕೊಳ್ಳಲು, ಔಷಧಿ, ರಾಸಾಯನಿಕ, ಕೃತಕ ಪರಿಸರವೊಂದು ತನ್ನ ದೇಹದ ಮೇಲೆ ಮನದ ಮೇಲೆ ಬೀರುವ ಪರಿಣಾಮ ನೋಡಬೇಕೆಂದಾಗ ಸಹಜವಾಗಿ ತನ್ನಂತೆ ಇರುವ ಪ್ರಾಣಿಗಳೆಡೆಗೆ ತಿರುಗುತ್ತಾನೆ.
ಆದರೆ ಇತ್ತೀಚೆಗೆ ಇಂತಹ ಪ್ರಯೋಗಗಳು ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ಕೆಂಗಣ್ಣಿಗೆ ಗುರಿಯಾಗಿವೆ. ವಿಜ್ಞಾನಿಗಳು ಪ್ರಾಣಿಗಳನ್ನು ಗೂಡಲ್ಲಿ ಕಟ್ಟಿ ಹಾಕಿ, ವಿಷ ಕೊಟ್ಟು, ರಾಸಾಯನಿಕಗಳನ್ನು ಚುಚ್ಚಿ, ದೇಹ ಕತ್ತರಿಸಿ ತಮ್ಮ ಪ್ರಯೋಗದ ಅನುಕೂಲಕ್ಕೆ ತಕ್ಕಂತೆ ನಿರ್ದಯಿಯಾಗಿ ವರ್ತಿಸುತ್ತಾರೆ ಎಂಬ ದೂರು “ಪೇಟಾ” (PETA-People for Ethical Treatment of Animals) ದಂತಹ ಸಂಸ್ಥೆಗಳದು.
ಪ್ರಯೋಗಾಲಯದಲ್ಲಿ ಮಾನವನ ದೇಹ ರಚನೆ ಹೋಲುವ ಪ್ರಾಣಿಗಳ ಬಳಕೆ 16ನೇ ಶತಮಾನದಿಂದಲೇ ಚಾಲ್ತಿಯಲ್ಲಿತ್ತು. ಹಣ್ಣು ನೊಣ, ಮೊಲ, ಹಲ್ಲಿ, ಕಪ್ಪೆ, 95%ಕ್ಕಿಂತ ಹೆಚ್ಚಿನ ಸಂದರ್ಭದಲ್ಲಿ ಇಲಿಗಳೇ (mice and rats) ‘ಬಲಿ ಕಾ ಬಕ್ರಾ’ಗಳು. ವಂಶವಾಹಿಗಳ ಅಧ್ಯಯನ, ಮನಃ ಶಾಸ್ತ್ರ ಅಧ್ಯಯನ, ವೈದ್ಯಕೀಯ ವಿಜ್ಞಾನದಲ್ಲಿ ಮುಖ್ಯವಾಗಿ ಕ್ಯಾನ್ಸರ್ ಸಂಶೋಧನೆಯಲ್ಲಿ ಇಲಿಗಳನ್ನು ಬಳಸಲಾಗುತ್ತದೆ. ಪ್ರಯೋಗ ಶಾಲೆಗಳಲ್ಲಿ ಪ್ರಾಣಿಗಳ ಬಳಕೆಗೆ ಪ್ರತಿ ದೇಶದಲ್ಲೂ ನಿರ್ಬಂಧನೆಯಿದೆ. ಕಾನೂನಾತ್ಮಕವಾಗಿ ಅನುಮತಿ ತೆಗೆದುಕೊಳ್ಳುವುದು ಅವಶ್ಯಕ.
ಇಲಿಗಳು ಮೊದಲಿಂದಲೂ ಸಹಜವಾಗಿ ತಮ್ಮ ಮೈ ಬಣ್ಣ ಮತ್ತು ಚುರುಕು ಬುದ್ಧಿಯಿಂದ ಮನುಷ್ಯರ ಆಕರ್ಷಣೆಯಾಗಿದ್ದವು. ಮಸಾಚುಸೆಟ್ ನ ಅಬ್ಬೀ ಎಂಬಾಕೆಗೆ ಇಲಿಗಳನ್ನು ಸಾಕುವ ಹುಚ್ಚು. ತನ್ನ ಮುದ್ದಿನ ಇಲಿಯೊಂದಕ್ಕೆ ಗಡ್ಡೆ ಆದ ಸಮಯದಲ್ಲಿ ಕ್ಲಾರೆನ್ಸ ಎಂಬ ವಿಜ್ಞಾನಿಯೂಬ್ಬರ ಬಳಿಗೆ ಒಯ್ದಾಗ ಇಲಿಗಳನ್ನು ಸಂಶೋಧನೆಯಲ್ಲಿ ಬಳಕೆ ಮಾಡುವ ಕಲ್ಪನೆ ಅವರಲ್ಲಿ ಮೂಡಿತು. ಹೀಗೆ 20-21 ಶತಮಾನದಲ್ಲಿ ಬಹಳಷ್ಟು ಸಂಶೋಧನೆಗಳಿಗೆ ಇಲಿಗಳು ಮಾದರಿಯಾದವು.
ಪ್ರಯೋಗ ಶಾಲೆಯ ಉಪಯೋಗಕ್ಕಾಗಿಯೇ ಕೃತಕವಾಗಿ ಈ ಇಲಿಗಳ ವಂಶಾಭಿವೃದ್ಧಿ ಮಾಡಲಾಗುತ್ತದೆ. ಆದ್ದರಿಂದ ಅವು ಒಂದೇ ತಳಿಯದ್ದಾಗಿರುತ್ತವೆ (genetically identical). ಇಲಿಗಳು ಚಿಕ್ಕ ದೇಹ ಹೊಂದಿರುವ ಸಸ್ತನಿಗಳಾಗಿದ್ದು ಅವುಗಳ ನಿರ್ವಹಣೆ ಸುಲಭ ಮತ್ತು ಪರಿಸರಕ್ಕೆ ಅವು ಬಹು ಬೇಗ ಹೊಂದಿಕೊಳ್ಳುತ್ತವೆ. ಅತ್ಯಂತ ವೇಗವಾಗಿ ಸಂತಾನೋತ್ಪತ್ತಿ ಮಾಡುವ ಇಲಿಗಳು 2-3 ವರ್ಷದ ಜೀವಿತಾವಧಿ ಹೊಂದಿರುತ್ತವೆ. ಆದ್ದರಿಂದ ಸಲ್ಪ ವರ್ಷದ ಸಮಯದಲ್ಲಿ ಹೆಚ್ಚಿನ ಪೀಳಿಗೆಯನ್ನು ಪಡೆಯಬಹುದು. ಸೌಮ್ಯ ಸ್ವಭಾವದ ಇವು ಜೈವಿಕವಾಗಿ, ಮಾನಸಿಕವಾಗಿ ಮಾನವನನ್ನು ಹೋಲುತ್ತವೆ ಮತ್ತು ಕೆಲ ಮಾನವ ರೋಗಗಳ ಲಕ್ಷಣಗಳು ಇಲಿಗಳಲ್ಲೂ ಕಂಡುಬರುತ್ತವೆ. ದಶಕಗಳ ಪ್ರಯೋಗಗಳ ನಂತರ ವಿಜ್ಞಾನಿಗಳು ಮಾನವ ಮತ್ತು ಇಲಿಗಳ ಸಾಮ್ಯತೆಯನ್ನು ಚೆನ್ನಾಗಿ ಅರಿತಿರುವುದರಿಂದ ಕಾನ್ಸರ್ ಅಂತಹ ರೋಗಗಳ ಅಧ್ಯಯನಕ್ಕೆ ಅವುಗಳನ್ನು ಬಳಸಲಾಗುತ್ತಿದೆ.

ಮೈನೆ ದೇಶದ 'ಜಾಕ್ಸನ್ ಲ್ಯಾಬೋರೆಟರಿ' ಸದ್ಯಕ್ಕೆ ಪ್ರಪಂಚದ ಅತ್ಯಂತ ದೊಡ್ಡ ಇಲಿಗಳ ಉತ್ಪಾದನಾ ಸಂಸ್ಥೆಯಾಗಿದ್ದು ವರ್ಷವೊಂದಕ್ಕೆ 3ಮಿಲಿಯನ್(30 ಲಕ್ಷ) ಇಲಿಗಳನ್ನು ಪ್ರಪಂಚದಾದ್ಯಂತ ಸರಬರಾಜು ಮಾಡುತ್ತಿದೆ.ಈ ಲ್ಯಾಬ್ ಜಗತ್ತಿನ 8000ಕ್ಕೂ ಹೆಚ್ಚು ತಳಿಯ ಇಲಿಗಳ ಜನ್ಮಸ್ಥಾನ ಕೂಡ.
ಅಮೇರಿಕಾದ ‘ಪರಿಸರ ಸಂರಕ್ಷಣಾ ಏಜೆನ್ಸಿ’ ಪ್ರಯೋಗಾಲಯದಲ್ಲಿ ಪ್ರಾಣಿಗಳ ಬಳಕೆ ಮೇಲೆ ನಿಗಾ ಇಡುವ ಸಂಸ್ಥೆ. ವರದಿಯೊಂದರ ಪ್ರಕಾರ 2016ರಲ್ಲಿ ಅಮೇರಿಕಾದಲ್ಲಿ 7000 ಪ್ರಾಣಿಗಳು ಒಳಗೊಂಡ ಕೆಲವೇ ಡಜನ್ ಪರೀಕ್ಷೆಗಳು ದಾಖಲಾಗಿದ್ದಾರೆ 2017ರಲ್ಲಿ ಸಂಖ್ಯೆಗೂ ಮೀರಿ ಆಶ್ಚರ್ಯಕರವಾಗಿ 75000 ಇಲಿ ಮತ್ತು ಉಳಿದ ಕಶೇರುಕಗಳ ಒಳಗೊಂಡ 300ಕ್ಕಿಂತ ಹೆಚ್ಚು ಪರೀಕ್ಷೆಗಳ ಅನುಮತಿಯ ಕೋರಿಕೆ ದಾಖಲಾಗಿತ್ತು . ಬರಿಯ ಯು.ಎಸ್ ಒಂದರಲ್ಲಿ 100ಮಿಲಿಯ ಪ್ರಾಣಿಗಳನ್ನು ಜೀವಶಾಸ್ತ್ರದ ಪಾಠಕ್ಕೆ, ವೈದ್ಯಕೀಯ ಕಾರಣಕ್ಕೆ, ಸೌಂದರ್ಯ ವರ್ಧಕ, ಇತರೆ ರಾಸಾಯನಿಕಗಳ ಪರೀಕ್ಷೆಗೆ ಗುರಿ ಮಾಡಲಾಗುತ್ತಿದೆ.
ಎಷ್ಟೇ ಆದರೂ ಮಾನವ ಮತ್ತು ಇತರೆ ಪ್ರಾಣಿಗಳ ಚಯಾಪಚಯ ಕ್ರಿಯೆ(metabolism), ಅತ್ಯಂತ ಸೂಕ್ಷವಾಗಿ ಗಮನಿಸಿದಾಗ ಅಂಗಾಂಶಗಳ ವ್ಯತ್ಯಾಸ (cellular difference) ಇದ್ದೆ ಇದೆ. ಹಾಗೂ ಪ್ರಯೋಗಶಾಲೆಯ ಪ್ರನಾಳದಲ್ಲಿ ನಡೆಯುವ ಕ್ರಿಯೆಗೂ ಮಾನವನ ನಿತ್ಯ ಬದುಕಿನ ಕ್ರಿಯೆಗಳಿಗೂ ತಾಳೆ ಹಾಕಿ ಔಷಧಿಯೊಂದರ ಪರಿಣಾಮವನ್ನು ಅರಿಯುವುದು ಕಷ್ಟ ಎನ್ನುವುದು ಕೆಲ ವಿಜ್ಞಾನಿಗಳ ಅಂಬೋಣ. ಇತ್ತೀಚೆಗೆ ಪ್ರತಿಷ್ಠಿತ ಬ್ರಿಟಿಷ್ ಮೆಡಿಕಲ್ ಜರ್ನಲ್ ಪ್ರಕಾರ ಪ್ರಾಣಿಗಳ ಮೇಲಿನ ಈ ಪ್ರಯೋಗಗಳು ಅಪ್ರಯೋಜಕವಾಗಿದ್ದು ಪ್ರಾಣಿಗಳಲ್ಲಿ ಪರಿಣಾಮಕಾರಿಯಾದ 10 ರಲ್ಲಿ 9 ಡ್ರಗ್ಸ್ ಗಳು ಮಾನವನಲ್ಲಿ ಯಾವುದೇ ಧನಾತ್ಮಕ ಫಲಿತಾಂಶ ನೀಡಿಲ್ಲವಂತೆ. ಹೀಗೆ ಮಾನವನ ದೇಹದ ಅಧ್ಯಯನಕ್ಕೆ ಪ್ರಾಣಿಗಳ ಬಳಕೆ ವಾಸ್ತವವಾಗಿ ಎಷ್ಟು ಸರಿ ಎಂಬುದು ಕೆಲ ವಿಜ್ಞಾನಿಗಳ ಪ್ರಶ್ನೆ. ಪಾಪದ ಮೂಕ ಪ್ರಾಣಿಗಳ ಮಾರಣ ಹೋಮ ನಡೆಯುತ್ತಿದೆ ಎಂಬುದು ಪ್ರಾಣಿ ಸಂರಕ್ಷಣಾ ಸಂಸ್ಥೆಗಳ ದೂರಾದರೆ, ನಾಯಿ ನರಿ ಕಚ್ಚಿ ಕೋಟ್ಯಾಂತರ ಪ್ರಾಣಿಗಳು ಸಾಯುತ್ತಿರುವಾಗ ನಮ್ಮ  ಜ್ಞಾನ ವೃಧ್ಧಿಗೆ ನಾವೇ ಹುಟ್ಟಿಸಿದ ಪ್ರಾಣಿಗಳ ಬಳಕೆಗೆ ವಿರೋಧವೇಕೆ ಎಂಬುದು ವಿಜ್ಞಾನಿಗಳ ಅಳಲು.
ಸೀಮಾ ಹೆಗಡೆ
(ಮಾಹಿತಿ ಸೆಲೆ- ವಿಕಿಪೀಡಿಯಾ, ಸೈನ್ಸ್ ನಿಯತಕಾಲಿಕೆ)


Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ