ಜಲ=ಅಮೃತ, elixir of life!
Here is an article about water purification systems, exclusively on RO,UV and UF systems trending today
ಜಲ=ಅಮೃತ, elixir of life!
ಟಿವಿಯಲ್ಲಿ RO,UV,UF
ಫಿಲ್ಟರ್, ಡಬಲ್
ಫಿಲ್ಟರ್ ತಂತ್ರಜ್ಞಾನ, 99.9% ರೋಗಾಣುಗಳನ್ನು ಸಾಯಿಸುತ್ತೆ, 100% ಶುದ್ಧ ನೀರು ಎಂದೆಲ್ಲ 'ನೀಲಿ' ಬಣ್ಣದ ಬಟ್ಟೆ ತೊಟ್ಟು ನಟಿಮಣಿಯರು ‘ವಾಟರ್
ಪುರಿಫೈರ್’ನ ಪ್ರಚಾರ ಮಾಡಿದಾಗ 'ಅಸಲಿಯತ್ತೇನು?!' ಎಂಬ ಪ್ರಶ್ನೆ ಹುಟ್ಟಿತ್ತು. ಉತ್ತರದ ಜಾಡು ಹಿಡಿದಾಗ
ಕಂಡಿದ್ದು ಇದು,
ಹಳೆ ಕಾಲದಲ್ಲಿ ಸಾಮಾನ್ಯವಾಗಿಯೇ ನೈಸರ್ಗಿಕವಾಗಿ
ದೊಡ್ಡ ಕಲ್ಲು, ಮರಳಿನ ಕಣಗಳ ನಡುವೆ ಸೋಸಿ ಹರಿದು ಬರುತ್ತಿದ್ದ ನೀರು ಕುಡಿಯಲು ಯೋಗ್ಯವಾಗಿ ಶುದ್ಧವಾಗಿಯೇ
ಇರುತ್ತಿತ್ತು. ನಾವೀಗ ಮಾಡಿದ ಜಲ ಮಾಲಿನ್ಯದ ಪ್ರಾಯಶ್ಚಿತ ಎಂಬಂತೆ
ಜಲವನ್ನು ಶೋಧಿಸುವ ತಂತ್ರಜ್ಞಾನಗಳ ಸಂಶೋಧನೆಯಾಯಿತು.
ನೀರಿನ ಶೋಧನೆ ಎಂದರೆ ನೀರಲ್ಲಿರುವ ಬೇಡದ ರಾಸಾಯನಿಕಗಳು, ಅಗತ್ಯಕ್ಕಿಂತ
ಹೆಚ್ಚಿನ ಲವಣಾ0ಶ , ಭಾರವಾದ ಲೋಹಗಳು (ಅರ್ಸೆನಿಕ್, ಪಾದರಸ, ಲೆಡ್) ಜೈವಿಕ ಕಶ್ಮಲಗಳು (ವೈರಸ್, ಬ್ಯಾಕ್ಟೀರಿಯಾ,
ರೋಗಾಣುಗಳು) ಕಲ್ಲು, ಮರಳು ಮಣ್ಣು ಮುಂತಾದ ವಸ್ತುಗಳನ್ನು ತೆಗೆದು ನೀರನ್ನು ಸ್ವಚ್ಛವಾಗಿಸಿ ಕುಡಿಯಲು
ಯೋಗ್ಯವಾಗಿಸುವ ಕ್ರಿಯೆ.ಸೋಸುವಿಕೆ(filtration), ಸಂಚಯ ಗೊಳಿಸುವಿಕೆ (sedimentation) ಭಟ್ಟಿ
ಇಳಿಸುವಿಕೆ (distillation) ಇತರೆ ವಿಧಾನಗಳಿದ್ದು ಈಗ ಚಾಲ್ತಿಯಲ್ಲಿರುವ RO,UV,UF ನ ಮಾಹಿತಿ ಇಲ್ಲಿದೆ.
RO ಎಂದರೆ ರಿವರ್ಸ್ ಆಸ್ಮೋಸಿಸ್ (reverse osmosis). ಒಣ ದ್ರಾಕ್ಷಿಯನ್ನು ನೀರಲ್ಲಿಟ್ಟು ಸಲ್ಪ ಹೊತ್ತಲ್ಲೆ ನೀರು
ಹೀರಿ ಡುಮ್ಮಾಗಿರುವದನ್ನು ನೋಡಿರುತ್ತಿರಾ! ಹೀಗೆ ನೀರು 'ಪೊರೆ'(membrane)ಯೊಂದರ ಮೂಲಕ ಹೆಚ್ಚು ಸಾಂದ್ರತೆಯ (ನೀರಿನ ಪ್ರಮಾಣ ಹೆಚ್ಚಿರುವ)
ಪ್ರದೇಶದಿಂದ ಕಡಿಮೆ ಸಾಂದ್ರತೆ ಪ್ರದೇಶಕ್ಕೆ (ನೀರಿನಂಶ ಕಡಿಮೆ ಇರುವಲ್ಲಿ) ಚಲಿಸುವ ಪ್ರಕ್ರಿಯೆಗೆ
ಅವಸರಣ(osmosis) ಎಂದು
ಕರೆಯುತ್ತಾರೆ. ಇದೇ ಪ್ರಕ್ರಿಯೆ ತಿರುಗಾ ಮುರುಗಾ ಆದರೆ, ನೀರು ಕಡಿಮೆ ಸಾಂದ್ರತೆಯಿಂದ ಹೆಚ್ಚಿನ ಸಾಂದ್ರತೆಗೆ
(ಹೆಚ್ಚು ನೀರಿನ ಪ್ರಮಾಣದಿಂದ ಕಡಿಮೆ ನೀರಿರುವೆಡೆ) ಚಲಿಸಿದರೆ ಅದನ್ನು ಪ್ರತಿಲೋಮ ಅವಸರಣ (reverse osmosis) ಎಂದು ಕರೆಯಲಾಗುತ್ತದೆ. ಅವಸರಣ ಕ್ರಿಯೆ ನೈಸರ್ಗಿಕವಾದರೆ
ಪ್ರತಿಲೋಮ ಅವಸರಣೆ ಕ್ರಿಯೆಗೆ ಹೊರಗಿನಿಂದ ಹೇರುವ ಬಾಹ್ಯ ಒತ್ತಡದ ಅವಶ್ಯಕತೆ ಇದೆ. RO ಫಿಲ್ಟರ್
ಪ್ರತಿಲೋಮ ಅವಸರಣೆಯ ಕ್ರಿಯೆ ಆಧರಿಸಿ RO ಪೊರೆಯ ಮೂಲಕ ನೀರನ್ನು ಶುದ್ಧ ಗೊಳಿಸುತ್ತದೆ.
RO
ಪೊರೆ ಸೂಕ್ಷ್ಮ ರಂಧ್ರಗಳುಳ್ಳ ಜರಡಿಯಂತೆ. ಪ್ರತಿ ರಂಧ್ರ 0.0005 ಮೈಕ್ರೋನ್ (1
ಮೈಕ್ರೋನ್ ಎಂದರೆ 1 ಮೀಟರ್ ನ 1000000 ನೇ ಒಂದು
ಭಾಗ) ನಷ್ಟು ಸೂಕ್ಷ್ಮವಾಗಿದ್ದು ನೀರನ್ನು ಮಾತ್ರ ತನ್ನ ಪೊರೆಯ ರಂಧ್ರಗಳ ಮೂಲಕ ಹಾಯಲು ಬಿಟ್ಟು ನೀರಿಗಿಂತ
ದೊಡ್ಡ ಕಣಗಳಾದ ಲವಣ (0.0007 ಮೈಕ್ರೋನ್), ರೋಗಾಣುಗಳು (0.2-0.4 ಮೈಕ್ರೋನ್), ಕೀಟನಾಶಕ
(0.001 ಮೈಕ್ರೋನ್) ಗಳನ್ನು ಪೊರೆಯ ಮೂಲಕ ಚಲಿಸಲು ಬಿಡದು. ಹೀಗೆ ಸೂಸುವಿಕೆಗೆ ಒಳಗಾದ ನೀರಲ್ಲಿ
50% ನೀರು ಪೊರೆಯ ಮೂಲಕ ಶುದ್ಧವಾಗಿ ಹೊರಕ್ಕೆ ಬಂದರೆ ಇನ್ನುಳಿದ 50% ಕಲುಷಿತ ವಸ್ತುಗಳನ್ನು ಹೊಂದಿದ
ಕೆಟ್ಟ ನೀರು ವಿಸರ್ಜಿತವಾಗುತ್ತದೆ.
RO ಪೊರೆ ತಲುಪುವ ಮೊದಲು ನೀರು ‘ಸೆಡಿಮೆಂಟ್’ ಫಿಲ್ಟರ್ ಎಂಬ ದೊಡ್ಡ
ರಂಧ್ರ ಉಳ್ಳ ಜರಡಿಯಲ್ಲಿ ಹಾದು ಹೋಗಿ ಮಣ್ಣು ಮರಳು ಮುಂತಾದ ದೊಡ್ಡ ಕಣಗಳನ್ನು ಕಳೆದು ಕೊಳ್ಳುತ್ತದೆ.
ನಂತರ ಕ್ಲೋರಿನ್ ನಂತಹ ರಾಸಾಯನಿಕಗಳು ಆಕ್ಟಿವೇಟೆಡ್ ಇಂಗಾಲದಲ್ಲಿ ಹೀರಲ್ಪಡುತ್ತವೆ. (activated
carbon- ಅತ್ಯಂತ ಸೂಕ್ಷ್ಮ ರಂಧ್ರ ಉಳ್ಳ ಇಂಗಾಲದ ಒಂದು
ರೀತಿಯ ಅಸ್ಫಟಿಕ ಘನ ರೂಪ). ನಿರ್ಲವಣೀಕರಣ (desalination)- ನೀರಿನಲ್ಲಿನ
ಉಪ್ಪನ್ನು ಬೇರ್ಪಡಿಸುವ ಕ್ರಿಯೆಯಲ್ಲಿಯೂ ರಿವೆರ್ಸ್ ಒಸ್ಮೋಸಿಸ್ ನ ಆಧಾರವಿದೆ.
ಹೀಗೆ ನೀರು 3-4 ಹಂತದಲ್ಲಿ
ಶುದ್ಧವಾಗಿ RO ಮೂಲಕ ಹಾದು ಹೋಗಿ ಕೊನೆಗೆ UV ಫಿಲ್ಟರ್
ತಲುಪುತ್ತದೆ. ಜಾಹೀರಾತಿನಲ್ಲಿ ವಾಟರ್ ಪುರಿಫೈರ್ ತೋರಿಸುವಾಗ ನೀಲಿ ಬೆಳಕನ್ನು ಕಂಡಿರುತ್ತೀರ! ಅದೇ
UV (ultraviolet) ಫಿಲ್ಟರ್. ಬಲ್ಬ್ ಒಂದರಿಂದ ಹೊರಸೂಸುವ ಅತಿ ನೇರಳೆ ಕಿರಣಗಳು ರೋಗ ಉಂಟು
ಮಾಡುವ ಕ್ರಿಮಿಗಳ ವಂಶವಾಹಿಗಳನ್ನು ಕೆಡಿಸಿ ಅವು ವಂಶಾಭಿವೃದ್ಧಿ ಮಾಡದಂತೆ ತಡೆದು ಅವ್ಗಳನ್ನು ಕೊಲ್ಲುತ್ತವೆ.
ನೀರು ರೋಗಾಣು ಮುಕ್ತ, ಸುರಕ್ಷಿತ, ಪರಿಶುದ್ಧವಾಗಿದ್ದೇನೋ ಹೌದು. ಆದರೆ ರುಚಿ! ನೀರಲ್ಲಿ ಅವಶ್ಯವಾದ
ಕರಗಿದ ಲವಣಗಳು ನಾಪತ್ತೆ! ಅದಕ್ಕಾಗಿ ಪುರಿಫೈರ್ ಕಂಪನಿಗಳು ಹೊಸ ತಂತ್ರಜ್ಞಾನ ಒಂದನ್ನು ಅಳವಡಿಸಿದ್ದಾರೆ.
ಅದೇ TDS ಕಂಟ್ರೋಲರ್. TDS (total
dissolved salts) ಅಂದರೆ ಒಟ್ಟಾರೆ ಕರಗಿದ ಲವಣಂಶ.
ಈ ಚಿಕ್ಕ ಯಂತ್ರ ನೀರನ್ನು ಸೋಸುವಿಕೆಯ ಸಮಯದಲ್ಲಿ ಕಳೆದ ಲವಣಗಳನ್ನು ಮತ್ತೆ ಕೂಡಿಸುವ ಕಾರಣ ನೀರಿನ
ರುಚಿಯನ್ನು ಹೆಚ್ಚಿಸುತ್ತವೆ.
ROಗಿಂತಲೂ
ಸೂಕ್ಷ್ಮ ರಂಧ್ರವುಳ್ಳ ನಾನೋ ಫಿಲ್ಟರ್ (ಒಂದು ನಾನೋ ಅಂದರೆ 1 ಮೀಟರ್ ನ 1000000000 ನೇ ಒಂದು ಭಾಗ)
ಗಳನ್ನು ಬಳಸುವ ಪುರಿಫೈರ್ ಗಳಿಗೆ UF (ultra filter) ಅಲ್ಟ್ರಾ
ಫಿಲ್ಟರ್ ಎಂದು ಕರೆಯಲಾಗುತ್ತೆ. . ಅಲ್ಟ್ರಾ ಫಿಲ್ಟ್ರೆಷನ್ ಬಳಸಿ ತಯಾರಿಸಿದ ಅತ್ಯಂತ ಕಡಿಮೆ ವೆಚ್ಚದ
ಲೈಫ್ ಸ್ಟ್ರಾ (life
straw) ಎಂಬ ಚಿಕ್ಕ ಗೇಣುದ್ದದ ಶೋಧಕ ಪ್ರಪಂಚದ ಬಡವರ ಕಣ್ಮಣಿಯಾಗಿದೆ.ವಿದ್ಯುತ್
ಶಕ್ತಿ ಬಳಸದೆ ಬೇಕಾದಲ್ಲಿ ಒಯ್ಯಬಹುದಾದ ಈ ಪುಟ್ಟ ವಸ್ತು 4000 ಲೀಟರ್ ನೀರು ಶುದ್ಧ ಮಾಡುವ ಆಯುಷ್ಯ
ಹೊಂದಿದೆ. ಎಷ್ಟೋ ನಿಸರ್ಗ ವಿಪತ್ತಿನ ಸಮಯದಲ್ಲಿ ಬಡ ಜನರ ಜೀವ ಉಳಿಸಿದೆ. RO UV UF ಫಿಲ್ಟರ್ ಗಳು ದೊಡ್ಡವರ ಶೋಕಿ, ನಮ್ಮಂತ ಬಡವರಿಗೆ
ರಾಸಾಯನಿಕಗಳಿಂದ ಕೂಡಿದ ಕಲುಷಿತ ಕ್ಲೋರಿನ್ ನೀರೇ ಗತಿ ಎಂಬ ಯೋಚನೆಯಲ್ಲಿದ್ದರೆ ಇದನ್ನೂಮ್ಮೆ ಕೊಂಡು
ನೋಡಿ.
-
ಸೀಮಾ ಹೆಗಡೆ
(ಮಾಹಿತಿ ಸೆಲೆ- achawater.com,
wikipedia)

Comments
Post a Comment