ಗೋವು, ನಾವು ಮತ್ತು ‘ಗ್ಲೋಬಲ್ ವಾರ್ಮಿಂಗ್’

Here is an article about dairy farming and its impact on global warming. Moral of the article is to reduce consumption of beef! because this meat industry is what contributing greatly to methane and other green house gas emissions according to FAO!



ಗೋವು, ನಾವು ಮತ್ತು ‘ಗ್ಲೋಬಲ್ ವಾರ್ಮಿಂಗ್’
ಕೆಲ ತಿಂಗಳ ಹಿಂದೆ ರಾಜ್ಯದ 'ಸೋ ಕಾಲ್ಡ್' ಬುದ್ಧಿ ಜೀವಿಗಳು ಪತ್ರಿಕಾ ಗೋಷ್ಠಿ ಕರೆದು ಗೋ ಮಾಂಸ ತಿಂದು ಏನೋ ಸಾಧನೆ ಮಾಡಿದವರಂತೆ ಬೀಗಿದರು. ಇನ್ನೊಂದೆಡೆ ಗೋ ಸಂರಕ್ಷಣೆಯ ಭಾಷಣಗಳು ಕೇಳಿ ಬಂದವು. ಇಷ್ಟೆಲ್ಲ ಮಾತು ಕಥೆಗಳ ನಡುವೆ ಸದ್ದಿಲ್ಲದೆ ವಿಜ್ಞಾನಿಗಳು ಸುಸ್ಥಿರ ಹೈನುಗಾರಿಕೆಯ (sustainable dairy farming) ಅವಶ್ಯಕತೆಯನ್ನು ಪಟ್ಟಿ ಮಾಡುತ್ತಿದ್ದರು. ಕಾರಣ ಗೋವಿಗೂ ಜಾಗತಿಕ ಭೂ ತಾಪಮಾನ ಏರಿಕೆಗೂ ಇರುವ ಸಂಬಂಧ!
ಪ್ರಸ್ತುತ ಜಗತ್ತು ಎದುರಿಸುತ್ತಿರುವ ಅತ್ಯಂತ ಮಹತ್ವದ ಸಮಸ್ಯೆ ಹವಾಮಾನ ಬದಲಾವಣೆ ಮತ್ತು ಜಾಗತಿಕ ತಾಪಮಾನ ಏರಿಕೆ. ಸುಲಭ ಶಬ್ದಗಳಲ್ಲಿ ಹೇಳುವುದಾದರೆ ಭೂಮಿಯ ಸರಾಸರಿ ಉಷ್ಣತೆಯಲ್ಲಿ ಏರಿಕೆ. ಜ್ವರ ಬಂದಾಗ ದೇಹದ ತಾಪಮಾನ ಏರಿದಂತೆ ಭೂಮಿಯಲ್ಲಿನ ಹಸಿರುಮನೆ ಅನಿಲಗಳು(green house gases) ಸೂರ್ಯ ವಿಕಿರಣ ಶಾಖವನ್ನು ಹಿಡಿದಿಟ್ಟು ಭೂಮಿಯ ಒಟ್ಟಾರೆ ಉಷ್ಣತೆಯನ್ನು ಹೆಚ್ಚಿಸುತ್ತವೆ. ಕ್ಲೋರೊ ಫ್ಲೋರೋ ಕಾರ್ಬನ್ , ಇಂಗಾಲದ ಡೈ ಆಕ್ಸೈಡ್, ನೀರಾವಿ, ಮೀಥೇನ್, ನೈಟ್ರಸ್ ಆಕ್ಸೈಡ್ಗಳನ್ನು ಹಸಿರುಮನೆ ಅನಿಲಗಳೆಂದು ಹೆಸರಿಸುತ್ತೇವೆ.
ಹಸಿರುಮನೆ ಪರಿಣಾಮಕ್ಕೂ ನೀವು ತಿನ್ನುವ ಆಹಾರಕ್ಕೂ ಏನು ತಾಳ ಮೇಳ?! ನಮ್ಮ ಹೊಟ್ಟೆ, ನಮ್ಮ ಊಟ, ನಮ್ಮಿಷ್ಟ, ಸರಿ! ಆದರೆ ಎಂದಾದರೂ ಅದರ ಜಾಗತಿಕ ಪರಿಣಾಮದ ಕುರಿತು ಎಂದಾದರೂ ಆಲೋಚಿಸಿದ್ದೀರಾ!? ಅಂತಹ ಪರಿಸ್ಥಿತಿಯೊಂದು ಸಧ್ಯದಲ್ಲೇ ಎದುರಾಗಬಹುದು.
FAO(Food and Agriculture Organisation) ಆಹಾರ, ಮತ್ತು ಕೃಷಿ ಸಂಬಂಧಿಸಿದ ಒಂದು ಅಂತರಾಷ್ಟ್ರೀಯ ಸಂಸ್ಥೆ. ಇದೆ ಸಂಸ್ಥೆ ಕೆಲ ವರ್ಷದ ಹಿಂದೆ ವರದಿಯೊಂದನ್ನು ಬಿಡುಗಡೆ ಮಾಡಿತ್ತು. ಆ ವರದಿಯ ಪ್ರಕಾರ ಹೈನುಗಾರಿಕೆ ಜಾಗತಿಕ ಮಟ್ಟದಲ್ಲಿ 4% ಹಸಿರುಮನೆ ಅನಿಲಗಳ ಬಿಡುಗಡೆಗೆ ಕಾರಣವಂತೆ. ಈ ನಾಲ್ಕು ಪ್ರತಿಶತ ಭಾಗದಲ್ಲಿ ಜಾಗತಿಕ ಹಸಿರುಮನೆ ಪರಿಣಾಮಕ್ಕೆ ಗೋವಿನ ಹಾಲು ಉತ್ಪಾದನೆ ಉದ್ಯಮ 24% , ಗೋಮಾಂಸದ ಉದ್ದಿಮೆ 71% ಕೊಡುಗೆ ನೀಡಿದರೆ ಇನ್ನುಳಿದ 5% ಪಾಲು  ಕುದುರೆ, ಕುರಿ, ಮೇಕೆ ಮುಂತಾದ ಜಾನುವಾರುಗಳದು.
ಇದಕ್ಕೆ ಕಾರಣ ಅವುಗಳ ಜೀರ್ಣಾಂಗ ವ್ಯವಸ್ಥೆ. ಪಚನ ವ್ಯವಸ್ಥೆಯಲ್ಲಿ ಮನುಷ್ಯ ಮತ್ತು ಇತರೆ ಸಸ್ತನಿಗಳ ಹೊಟ್ಟೆಯಲ್ಲಿ 3 ವಿಭಾಗಗಳನ್ನು ಕಾಣಬಹುದು. ಆದರೆ ಆಕಳು, ಎಮ್ಮೆ, ಕುರಿ ಮುಂತಾದ ಆಹಾರ ಮೆಲಕು ಹಾಕುವ ಪ್ರಾಣಿಗಳ (regurgitating, ruminant) ಹೊಟ್ಟೆಯಲ್ಲಿ ಒಂದು ಹೆಚ್ಚಿನ ವಿಭಾಗವಿದ್ದು ಆ ವಿಭಾಗದಲ್ಲಿ ವಾಸಿಸುವ ಮಿಥನೋ ಬ್ಯಾಕ್ಟರ್ ಎಂಬ ಸೂಕ್ಷ್ಮ ಜೀವಿಗಳು ತಿಂದ ಆಹಾರವನ್ನು ಮೀಥೇನ್ ಅನಿಲವಾಗಿ ಪರಿವರ್ತಿಸುತ್ತವೆ. ಹೊಟ್ಟೆಯಲ್ಲಿ ಉತ್ಪಾದನೆ ಆದ ಮೀಥೇನ್, ತೇಗುಗಳ ಮೂಲಕ ಮತ್ತು ಸಗಣಿಯ ಮೂಲಕ ಪ್ರಾಣಿಗಳ ದೇಹದಿಂದ ಹೊರ ಹೋಗುತ್ತವೆ.
ಆಕಳೊಂದು ದಿನಕ್ಕೆ ಸರಾಸರಿ 200 ಲೀಟರ್ ಮೀಥೇನ್ ಅನ್ನು ಹೊರಹಾಕುತ್ತದೆ. ಹೈನುಗಳಿಂದ ಉತ್ಪಾದನೆ ಆಗುವ ಒಟ್ಟಾರೆ ಅನಿಲದಲ್ಲಿ 52 ಭಾಗ ಮೀಥೇನ್ ಆದರೆ 27 ಭಾಗ ನೈಟ್ರಸ್ ಆಕ್ಸೈಡ್ ಎಂಬ ಮತ್ತೊಂದು ಅಪಾಯಕಾರಿ ಅನಿಲ. ಮೀಥೇನ್ ಇಂಗಾಲದ ಡೈ ಆಕ್ಸೈಡ್ ಗಿಂತ 100ಪಟ್ಟು ಹೆಚ್ಚು ಶಾಖವನ್ನು ಹಿಡಿದಿಟ್ಟರೆ ಅದರಪ್ಪ ನೈಟ್ರಸ್ ಆಕ್ಸೈಡ್ 300 ಪಟ್ಟಿಗಿಂತ ಹೆಚ್ಚು ಉಷ್ಣವನ್ನು ಭೂಮಿಯ ವಾತಾವರಣದ ಒಳಗೆ ಕಟ್ಟಿಹಾಕುತ್ತದೆ.
ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಎಂದಿಗೂ ಇದ್ದೇ ಇದೆ. ಇಂದು ಭಾರತ ಒಟ್ಟಾರೆ ಹಾಲಿನ ಪದಾರ್ಥಗಳ ಉತ್ಪಾದನೆಯಲ್ಲಿ ಪ್ರಥಮ ಸ್ಥಾನದಲ್ಲಿದ್ದರೆ, ಅಮೇರಿಕಾ ಗೋವಿನ ಹಾಲಿನ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದೆ.ಅತ್ಯಂತ ಹೆಚ್ಚಿನ ಹಾಲಿನ ಉತ್ಪಾದನೆಗಳ (ಹಾಲು, ಚೀಸ್, ಯೋಗರ್ಟ್) ಸೇವನೆಯಲ್ಲಿಯೂ ಅಮೇರಿಕಾ ಎಲ್ಲರಿಗಿಂತ ಮುಂದೆ. ದುರಾದ್ರಷ್ಟವಶಾತ್ ಹಾಲಿನ ಉದ್ದಿಮೆಯಿಂದ ಉಂಟಾಗುವ ಪರಿಸರ ಹಾನಿಯಲ್ಲೂ ಕೂಡ! ಸಣ್ಣದೊಂದು ಉದಾಹರಣೆ, 1 ಕೆಜಿ ಚೀಸ್ ಉತ್ಪಾದನೆಯಲ್ಲಿ 13.5 ಕೆಜಿ ಇಂಗಾಲದ ಡೈ ಆಕ್ಸೈಡ್ ವಾತಾವರಣ ಪ್ರವೇಶಿಸುತ್ತದೆ. ಒಬ್ಬ ಅಮೇರಿಕನ್ ಸರಾಸರಿ ವರ್ಷ ಒಂದರಲ್ಲಿ 68ಕೆ.ಜಿ ಚೀಸ್ ಅನ್ನು ಸೇವಿಸುತ್ತಾನೆ. ಅಂದರೆ ಒಬ್ಬ ವ್ಯಕ್ತಿಯ ಕೊಡುಗೆ 882 ಕೆಜಿ ಇಂಗಾಲ ಡೈ ಆಕ್ಸೈಡ್! ಅಂದರೆ ಕಾರ್ ಒಂದರಲ್ಲಿ  ಸುಮಾರು 300 ಮೈಲು  ಪ್ರಯಾಣಿಸಿದಷ್ಟು ಮಾಲಿನ್ಯ!
ಹಳೆ ಕಾಲದಲ್ಲಿ ಹೊಲದಲ್ಲೆ ಬೆಳೆದ ಮೇವನ್ನು ತಿನ್ನಿಸಿ  ಸ್ಥಳೀಯ ತಳಿಯ ಗೋವುಗಳನ್ನು ಸಾಕಿ ಸಗಣಿಯಿಂದ ಗೊಬ್ಬರ ಮಾಡುತ್ತಿದ್ದ ಸುಸ್ಥಿರ ಹೈನುಗಾರಿಕೆ ಇಂದಿಲ್ಲ. ಇಂದು ಹೈನುಗಾರಿಕೆ ಒಂದು ಉದ್ದಿಮೆ. ವಿಜ್ಞಾನಿಗಳ ಪ್ರಕಾರ ಈ ಆಧುನಿಕತೆಯೇ ಸಮಸ್ಯೆಗಳ ಮೂಲ. ಹೈನುಗಳ ಆಹಾರ ವ್ಯವಸ್ಥೆಯ ಬದಲಾವಣೆ ಮತ್ತು ಸಗಣಿ ಗೊಬ್ಬರದ ನಿರ್ವಹಣೆಯಿಂದ ಈ ಸಮಸ್ಯೆಗೆ ಉತ್ತರ ಸಿಗಬಹುದೆನೋ!
ಹೀಗೆ, ಜಾಗತಿಕ ತಾಪಮಾನ ಏರಿಕೆಯಲ್ಲಿ ಮೊದಲನೇ ದೋಷಿ ಪಳೆಯುಳಿಕೆ ಇಂಧನಗಳಾದರೆ ಎರಡನೇ ಅಪರಾಧಿ ಕೃಷಿ ಮತ್ತು ಹೈನುಗಾರಿಕೆ ಎಂಬ ಎಚ್ಚರಿಕೆಯನ್ನು FAO ಈಗಾಗಲೇ ನೀಡಿಯಾಗಿದೆ.ಬಹುಶಃ ಕಡಿಮೆ ಮಾಂಸ ಸೇವನೆಯಿಂದ ನಿಶ್ಚಿತವಾಗಿಯೂ ಹಸಿರುಮನೆ ಪರಿಣಾಮಕ್ಕೆ ನಿಮ್ಮ ಕೊಡುಗೆಯನ್ನು ಕಡಿತಗೊಳಿಸಬಹುದು. ಸಸ್ಯಾಹಾರಿಗಳಾಗುವುದು ಆರೋಗ್ಯಕ್ಕೂ ಒಳ್ಳೆಯದು, ನಮ್ಮ ಹಸಿರು ಗ್ರಹ ಭೂಮಿಗೂ. ಯೋಚಿಸಿ!
-ಸೀಮಾ ಹೆಗಡೆ
(ಮಾಹಿತಿ ಸೆಲೆ- FAOGreenhouse Gas Emissions from the Dairy Sector-A Life Cycle Assessment ವರದಿ)

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ