ಅಂತರಿಕ್ಷ ಅರಳಿತು

First time in the human history a plant was grown in space! #SpaceFlower☺




ಅಂತರಿಕ್ಷ ಅರಳಿತು
2016ರ ಜನವರಿ, “ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ”ದಿಂದ (International Space Station) ಗಗನಯಾತ್ರಿ ‘ಸ್ಕಾಟ್ ಕೆಲ್ಲಿ’ ‘ಟ್ವೀಟ್’ ಮಾಡಿದ ಜಿನ್ನಿಯಾ ಹೂಗಳ ಛಾಯಾಚಿತ್ರ ಅಂತರಿಕ್ಷ ಜೀವಶಾಸ್ತ್ರದ ಭವಿಷ್ಯದ ಗ್ರಹಿಕೆಯನ್ನೇ ಬದಲಿಸಿತ್ತು. ಬಾಹ್ಯಾಕಾಶದ ಕೃತಕ ಪರಿಸರದಲ್ಲಿ ಬೆಳೆದು ಕೊಳೆತು ಮರಣ ಶಯ್ಯೆಯಲ್ಲಿದ್ದರೂ ಆ ಗಿಡಗಳು ಜೀವದ ಕುರುಹೇ ಇಲ್ಲದ ಜಾಗದಲ್ಲಿ ಜೇವನದ ಆರಂಭಕ್ಕೆ ಸಾಕ್ಷಿಯಾಗಿದ್ದವು.
ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಭೂಮಿಯಿಂದ 408ಕಿ.ಮೀ. ಎತ್ತರದ ಕಕ್ಷೆಯಲ್ಲಿ ತಿರುಗುವ ಒಂದು ಉಪಗ್ರಹ, ಅದೆಷ್ಟು ದೊಡ್ಡದೆಂದರೆ ಭೂಮಿಯಿಂದ ಬರಿಗಣ್ಣಿನಲ್ಲಿ ಅದನ್ನು ವೀಕ್ಷಿಸಬಹುದು! ಹೆಸರೇ ಹೇಳುವಂತೆ ಇದೊಂದು ನಿಲ್ದಾಣವೆ ಸೈ! ಚಂದ್ರ, ಮಂಗಳ, ಮತ್ತು ಇತರ ಗ್ರಹ ಕಾಯಗಳನ್ನು ಭೂಮಿಯೊಂದಿಗೆ ಸಂಪರ್ಕಿಸುವ ನೆಲೆ. ಭವಿಷ್ಯದ ಅಂತರಿಕ್ಷ ಯಾನವನ್ನು ಪರಿಗಣಿಸಿ ಸ್ಥಾಪಿಸಿದ ಬೃಹತ್ ಮನೆ. ಅಂತೆಯೇ ಪ್ರಯೋಗಾಲಯವೂ ಕೂಡ.
ಸೂಕ್ಷ್ಮ ಗುರುತ್ವ (Microgravity)- ಅಂದರೆ ಎಲ್ಲವೂ ತೇಲುವ ತೂಕರಹಿತ ಪರ್ಯಾವರಣದ “ಕೆನಡಿ ಸ್ಪೇಸ್ ಸೆಂಟರ್”ನಲ್ಲಿ ಸಸ್ಯಗಳ ಬೆಳವಣಿಗೆ ವೀಕ್ಷಣೆಗಾಗಿ ತರಕಾರಿ ಬೆಳೆಯುವ ವೆಜ್ಜಿ-01 ಎಂಬ ಸೌಲಭ್ಯವನ್ನು ಮೇ 2014ರಲ್ಲಿ ಅನುಸ್ಥಾಪಿಸಲಾಯಿತು. ಮೊದಲನೆ ಹಂತದ ಪ್ರಯೋಗಾರ್ಥವಾಗಿ 33 ದಿನದಲ್ಲಿ “ಎರೋಫೋನಿಕ್ಸ್” (ಮಣ್ಣಿಲ್ಲದೆ ಬಹುತೇಕ ತುಂತುರು ನೀರು, ಗಾಳಿಯಲ್ಲಿ ಮಾಡುವ ವ್ಯವಸಾಯ) ತಂತ್ರಜ್ಞಾನ ಬಳಸಿ “ಲೆಟ್ಯೂಸ್” (lettuce) ಎಂಬ ಒಂದು ಬಗೆಯ ಸೊಪ್ಪಿನ ತರಕಾರಿ ಬೆಳೆದು ಊಟ ಮಾಡಿತ್ತು ಗಗನಯಾತ್ರಿಗಳ ತಂಡ.
2016ರಲ್ಲಿ ವೆಜ್ಜಿ-02 ಎಂಬ ಯೋಜನೆ ಅಡಿಯಲ್ಲಿ ಕೃಷಿಗಾಗಿ ಜಿನ್ನಿಯಾ ಗಿಡಗಳನ್ನು
ಆಯ್ಕೆ ಮಾಡಲಾಯಿತು. ಇದಕ್ಕೆ ಕಾರಣ ಜಿನ್ನಿಯಾ ಹೂವಿನ ಸೌಂದರ್ಯವಲ್ಲ.
 ಬದಲಾಗಿ 80 ದಿನದ ಜೀವತಾವಧಿಯಲ್ಲಿ ಜಿನ್ನಿಯಾ ಹೂಗಿಡ ಬೆಳಕು, ಮತ್ತು ಸುತ್ತಲ ಪರಿಸರಕ್ಕೆ 
ಸ್ಪಂದಿಸುವ ವರಸೆಯನ್ನು ನೋಡುವ ಹಂಬಲ.
 


ಜಿನ್ನಿಯಾ ಬೀಜ ಬಿತ್ತಿದ ದಿಂಬಿನ ತರಹದ ಮೆತ್ತನೆಯ ಪೆಟ್ಟಿಗೆಯು ಅಂತಾರಾಷ್ಟ್ರೀಯ
ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. ದಿನದ 10 ಘಂಟೆ ಎಲ್.ಈ.ಡಿ.ಗಳು ಕೆಂಪು, ನೀಲಿ, ಮತ್ತು ಹಸಿರು
ಬೆಳಕನ್ನು ಸೂಸಿದರೆ, 14ಘಂಟೆ ಬೆಳಕಿಲ್ಲದ ಸ್ಥಿತಿಯನ್ನು ಒದಗಿಸಲಾಗಿತ್ತು. ಆದರೆ ಮೊಳಕೆ ಒಡೆದು
2 ವಾರದಲ್ಲಿಯೆ ಗಿಡದಲ್ಲಿನ ಒಳಒತ್ತಡದ ಕಾರಣ ಎಲೆಯ ಅಂಚಿನಲ್ಲಿ ನೀರು ಒಸರತೊಡಗಿತ್ತು
(ಈ ವಿದ್ಯಮಾನಕ್ಕೆ guttation ಎಂದು ಕರೆಯಲಾಗುತ್ತದೆ). ಅಲ್ಲದೆ ಎಲೆಗಳ ತೀವ್ರ ಬಾಗುವಿಕೆ
ಸುರಿಳಿಯಾಗುವಿಕೆಯೂ ಕಂಡುಬಂತು (ಇದಕ್ಕೆ epinasty ಎನ್ನುವುದಾಗಿ ಕರೆಯುತ್ತಾರೆ). ಗಿಡದ
ಬೇರಿನಲ್ಲಿ ಉಂಟಾದ ಅತಿಯಾದ ನೀರಿನ ಪ್ರಮಾಣ ಮತ್ತು ಪರಿಸರದ ಅಧಿಕ ತೇವಾಂಶದ ಒತ್ತಡವೆ
ಇದಕ್ಕೆ ಕಾರಣ ಎಂಬುದಾಗಿ ಗುರುತಿಸಲಾಯಿತು.





ತೇವಾಂಶ ಹೆಚ್ಚಾಗಿ ರೋಗಗಳ ಆಹ್ವಾನವಾಯಿತು. ಇದನ್ನರಿತ ಕೆಲ್ಲಿ, ಕೊಳೆತ ಎಲೆಗಳನ್ನು ಕಿತ್ತು ಆ ಎಲೆಗಳನ್ನು ಮತ್ತಷ್ಟು ಅಭ್ಯಾಸಕ್ಕಾಗಿ -80c ಶೀತಲ ಕೋಣೆಯಲ್ಲಿ ಘನೀಕರಿಸಿ ಭೂಮಿಗೆ ಕಳಿಸಿಕೊಟ್ಟ. ಅಷ್ಟರಲ್ಲಾಗಲೆ 3 ಗಿಡಗಳು ಸತ್ತಿದ್ದವು. ವೆಜ್ಜಿ -02 ವ್ಯವಸ್ಥೆಯಲ್ಲಿ ಫ್ಯಾನ್ ನ ವೇಗ ಹೆಚ್ಚಿಸಿ ನೀರಿನ ಅಂಶ ಕಡಿಮೆ ಮಾಡಿ ಉಳಿದೆರಡು ಗಿಡಗಳನ್ನು ಉಳಿಸುವಲ್ಲಿ ಕೆಲ್ಲಿ ಯಶಸ್ವಿಯಾಗಿದ್ದ.

ಹೀಗೆ, ನಿಸರ್ಗ ವಂಚಿತ ಕೃತಕ ವಾತಾವರಣದಲ್ಲಿ 1996ರಲ್ಲಿ ರಷ್ಯಾದ 'ಮೀರ್' ಬಾಹ್ಯಾಕಾಶ ನಿಲ್ದಾಣದಲ್ಲಿ ಗೋಧಿ ಬೆಳೆಯ ನಂತರ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ 2014ರಲ್ಲಿ ಲೆಟ್ಯೂಸ್ ಬೆಳೆದು ಈಗ ಹೂವೊಂದರ ಜೊತೆ 2016ರ ಹೊಸ ವರ್ಷ ಆಚರಿಸಲಾಗಿತ್ತು.
ಜಿನ್ನಿಯಾ ಬೀಜ ಮೊಳಕೆ ಒಡೆಯುವುದು, ಹೂವಿನ ಪರಾಗ ಯಾತ್ರಿಗಳ ಆರೋಗ್ಯದ ಮೇಲೆ ಬೀರುವ ಪರಿಣಾಮ, ಬಣ್ಣದ ಹೂವುಗಳನ್ನು ಬೆಳೆಸುವುದರಿಂದ ಸಸ್ಯಗಳನ್ನು ಕಾಳಜಿ ಮಾಡಿದಾಗಿನ ಯಾತ್ರಿಗಳ ಮನಸ್ಥಿತಿಯ ಅಧ್ಯಯನ ಈ ಮಿಶನ್ ನ ಮುಖ್ಯ ಉದ್ದೇಶವಾಗಿತ್ತು. ನಿಸರ್ಗದೊಟ್ಟಿನ ಮಾನವರ ಆ ಭಾವನಾತ್ಮಕ ಒಡನಾಟವನ್ನು ಮುಂದುವರೆಸುವುದೂ ಕೂಡ.
ಕೊನೆಯಲ್ಲಿ ಹೂವಿನ ಬೀಜ ಸಂಗ್ರಹಿಸಿ ಅದನ್ನು ಒಣಗಿಸಿ ಮೊಳಕೆ ಪರೀಕ್ಷೆಗೆ ಭೂಮಿಗೆ ಕಳುಹಿಸಿಕೊಡಲಾಗಿದೆ.ಅಂತೆಯೇ ಕೆಲ ಹೂಗಳನ್ನು -80c ಶೀತಲ ಕೋಣೆಯಲ್ಲಿ ಘನೀಕರಿಸಿ, ಕೆಲ ಹೂಗಳನ್ನು ಪುಸ್ತಕದ ಹಾಳೆಗಳ ನಡುವೆ ಒತ್ತಿ ರಕ್ಷಿಸಿ ಸೂಕ್ಷ್ಮಾಣು ಜೀವಿಗಳ ಮೂಲ್ಯಮಾಪನಕ್ಕಾಗಿ ಮರಳಿ ಮನೆಗೆ ಕಳಿಸಲಾಗಿದೆ.
2018 ರಲ್ಲಿ ವೆಜ್ಜಿ-03 ಯೋಜನೆ ಅಡಿಯಲ್ಲಿ ಟೊಮೇಟೊ ಮತ್ತು ಚೈನೀಸ್ ಕ್ಯಾಬೇಜ್ ತರಕಾರಿಯನ್ನು ಬೆಳೆಯುವುದು ಕೆನಡಿ ಸ್ಪೇಸ್ ಸೆಂಟರ್ ನ ಆಶಯ.
-ಸೀಮಾ ಹೆಗಡೆ

(ಮಾಹಿತಿ ಸೆಲೆ: ಕೆನಡಿ ಸ್ಪೇಸ್ ಸೆಂಟರ್ ನ ‘ಸ್ಪೇಸ್ ರಿಪೋರ್ಟ್’ ನಿಯತಕಾಲಿಕೆ)



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ