ಕಿಂಗ್ ಆಫ್ ಫ್ರುಟ್ಸ್- ಹಣ್ಣುಗಳ ನಾ(ತ)ಥ
Ever came across this fruit Durian!? Here is the article about world's smelliest stinkiest fruit.
ಕಿಂಗ್ ಆಫ್ ಫ್ರುಟ್ಸ್- ಹಣ್ಣುಗಳ ನಾ(ತ)ಥ
ಸುಮಾರು 15 ದಿನಗಳ ಹಿಂದೆ ‘ಆಸ್ಟ್ರೇಲಿಯಾ’ದ ‘ಮೆಲ್ಬೌರ್ನ್ ವಿಶ್ವವಿದ್ಯಾಲ’ಯದಲ್ಲಿ
ತುರ್ತು ಪರಿಸ್ಥಿತಿಯೊಂದು ಉಂಟಾಗಿ ಪೋಲಿಸರು 500ಕ್ಕೂ ಹೆಚ್ಚು ಶಿಕ್ಷಕ ವಿದ್ಯಾರ್ಥಿಗಳನ್ನು ಕಾಲೇಜ್
ಆವರಣದಿಂದ ಸ್ಥಳಾಂತರಿಸಬೇಕಾಯಿತು. ಕಾರಣ-ಅಚಾನಕ್ಕಾಗಿ ಆ ಜಾಗದಲ್ಲಿ ಉದ್ಭವಿಸಿದ ದುರ್ನಾತ. ಯಾವುದೋ
ವಿಷಕಾರಿ ರಾಸಾಯನಿಕ ವಸ್ತು ದುರ್ವಾಸನೆಗೆ ಕಾರಣ ಎಂದು ಶಂಕಿಸಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮೂಲ
ಹುಡುಕುತ್ತಾ ಹೊರಟಾಗ ಸಿಕ್ಕಿದ್ದು ಕಾಲೇಜ್ ನ ಲೈಬ್ರರಿಯ ಕಪಾಟಿನಲ್ಲಿ ಕೊಳೆಯುತ್ತಿದ್ದ "ದುರಿಯನ್ ಹಣ್ಣು".
ಬರಿಯ ಹಣ್ಣೊoದರ ಕೊಳೆತ ವಾಸನೆಗೆ ಇಷ್ಟೆಲ್ಲ ರಾದ್ಧಾಂತವೆ! ಎಂಬ
ಪ್ರಶ್ನೆಗೆ ಉತ್ತರ ಬೇಕಾದರೆ ನೀವೊಮ್ಮೆ ಈ ಹಣ್ಣನ್ನು ಆಘ್ರಾಣಿಸಿಯೇ ನೋಡಬೇಕೇನೊ, ಆದರೆ ಅದರ ಗಬ್ಬು
ವಾಸನೆ ನಿಮ್ಮನ್ನು ಗಜ ದೂರದಿಂದಲೇ ಓಡಿಸಿದರೂ ಆಶ್ಚರ್ಯವಿಲ್ಲ.
ಆಗ್ನೇಯ ಏಷ್ಯಾದ ಅತ್ಯಂತ (ಕು)ಪ್ರಸಿದ್ಧ ಹಣ್ಣು ದುರಿಯನ್. ಉಷ್ಣ
ವಲಯದ ಈ ಫಲಕ್ಕೆ 'ಹಣ್ಣುಗಳ ರಾಜ' ಎಂಬ ಬಿರುದೂ ಇದೆ. 30ಕ್ಕೂ ಹೆಚ್ಚು ಜಾತಿಗಳಲ್ಲಿ ದುರಿಯೊ ಝಿಬೆತಿನುಸ್
(Durio zibethinus) ವ್ಯವಸಾಯಕ್ಕೆ ತಕ್ಕುದಾದದ್ದು.
ಥೈಲ್ಯಾಂಡ್, ಇಂಡೋನೇಷ್ಯಾ, ಮಲೇಷ್ಯಾ ಸಿಂಗಾಪುರ್ ನ ಪ್ರೀತಿ ಪಾತ್ರ ಹಣ್ಣು, ನೋಡಲು ಹಲಸಿನಂತೆ ಮುಳ್ಳು
ದೇಹ, ಬಂಗಾರ ಬಣ್ಣ. ಒಂದು ಕಲ್ಲಂಗಡಿ ಅಷ್ಟು ದೊಡ್ಡ ಒಂದು ಕೆ.ಜಿ ತೂಗುವ ಹಣ್ಣಿಗೆ 36 ಡಾಲರ್
(2,450 ರೂ.) ಬೆಲೆ.ತನ್ನದೇ ಆದ್ ಫ್ಯಾನ್ ಕ್ಲಬ್ ಹೊಂದಿರುವ ಈ ಹಣ್ಣು ತನ್ನ ಕೆಟ್ಟ ವಾಸನೆಗೆ ಹೆಸರುವಾಸಿ.
ಕೆಲವರು ಹಣ್ಣಿನ ವಾಸನೆಯನ್ನು ನಾಲ್ಕು ದಿನ ಹಾಕಿದ ಕಾಲು ಚೀಲ, ಮಳೆಗಾಲದ ಚರಂಡಿ, ಕೊಳೆತ ಉಳ್ಳಾಗಡ್ಡೆ,
ಮುನ್ಸಿಪಾಲ್ಟಿಯ ಕಸದ ತೊಟ್ಟಿಯ ವಾಸನೆಗೆ ಹೋಲಿಸಿದರೆ ಮತ್ತು ಕೆಲ ದುರಿಯನ್ ಪ್ರೇಮಿಗಳು ಹುರಿದ ಬಾದಾಮಿ,
ಕಸ್ಟರ್ಡ್ ನ 'ಸು'ವಾಸೆನೆಗೆ ಹೋಲಿಸುತ್ತಾರೆ.ಕೆಲ ಪ್ರದೇಶಗಳಲ್ಲಿ ಹಣ್ಣಿನ ಆಹಿತಕರ ವಾಸೆನೆ ಕಾರಣದಿಂದ
ಸಾರ್ವಜನಿಕ ಪ್ರದೇಶದಲ್ಲಿ ಧೂಮಪಾನ ನಿಷೇದಿಸಿದಂತೆ ದುರಿಯನ್ ಹಣ್ಣನ್ನು ಸೇವಿಸುವುದರ ನಿಷೇಧವೂ ಇದೆ.
ಸಿಂಗಾಪುರ್ ಮಲೇಷ್ಯಾ ದೇಶದಲ್ಲಿ ಬಂಗಾರದ ಬೆಳೆಯಾದ ದುರಿಯನ್ ಗೆ ಮಿಲಿಯನ್ ಡಾಲರ್ ಆದಾಯದ ವ್ಯವಹಾರವೂ
ಇದೆ. ಆಗ್ನೇಯ ಏಷ್ಯಾದ ಈ ವಾಣಿಜ್ಯ ಬೆಳೆ ವಿದೇಶಕ್ಕೂ ರಫ್ತಾಗುತ್ತವೆ.
ದುರಿಯನ್ - ಹತ್ತಿ, ಬೆಂಡೆ, ದಾಸವಾಳ ಗಿಡಗಳ ಕುಟುಂಬ ‘ಮಾಲ್ವೇಸೆ’ಯ
(malvaceae) ವಂಶಸ್ಥ. ವಾಸನೆಯೇ ಬೀರದ ಹತ್ತಿ, ಬೆಂಡೆ, ವಂಶಕ್ಕೆ ಸೇರಿದರೂ ದುರಿಯನ್ ಮಾತ್ರ ದುರ್ವಾಸನೆ
ಏಕೆ ಎಂಬ ಪ್ರಶ್ನೆಯ ಉತ್ತರ ದುರಿಯನ್ ಹಣ್ಣಿನ ವಂಶವಾಹಿಯ ಅಭ್ಯಾಸ ಮಾಡಿದಾಗ ಕಂಡುಬಂತು. ದುರಿಯನ್
ಹಣ್ಣಲ್ಲಿ 46,000 ವಂಶವಾಹಿ(gene)-ಅಂದರೆ ಸುಮಾರು ಮನುಷ್ಯರಿಗಿಂತ ಎರಡು ಪಟ್ಟು ಹೆಚ್ಚು ವಂಶವಾಹಿಗಳಿವೆ.
65 ಮಿಲಿಯ ವರ್ಷ ಪರಂಪರೆ ಹೊಂದಿದ್ದೂ ಚಾಕಲೇಟ್ ತಯಾರಿಸುವ ಕೋಕೋ ಗಿಡದ ಅತ್ಯಂತ ಹತ್ತಿರದ ಸಂಬಂಧಿ.
MGL ಎಂಬ ವಂಶವಾಹಿಯೊಂದು ಹತ್ತಿ, ಕೋಕೋಗಳಿಗಿಂತ
ದುರಿಯನ್ ನಲ್ಲಿ 4 ಪಟ್ಟು ಹೆಚ್ಚಿನ ಸಂಖ್ಯೆಯಲ್ಲಿದ್ದು ವಂಶವಾಹಿಗಳ ನಕಲಿಯಾಗುವಿಕೆಯಿಂದ ಗಂಧಕದ
(sulphur) ಸಂಕೀರ್ಣ ರಾಸಾಯನಿಕ ವಸ್ತುಗಳ ಉತ್ಪಾದನೆ ಹೆಚ್ಚಾಗಿ ಹಣ್ಣುಗಳು ಬಲವಾದ ಕಟು ದುರ್ವಾಸನೆ
ಸೂಸುತ್ತವೆ. ಈ ವಂಶವಾಹಿಗಳು ಎಲೆ,ಕಾಂಡ, ಬೇರಿನಲ್ಲಿ
ವ್ಯಕ್ತವಾಗದೆ ಬರಿ ಹಣ್ಣಿನಲ್ಲಿ ಕಂಡುಬರುತ್ತವೆ, ಅದರಲ್ಲೂ ಕಳಿತ ಹಣ್ಣುಗಳಲ್ಲಿ ಹೆಚ್ಚಿನ
ಪ್ರಮಾಣದಲ್ಲಿ.
ವಿಕಸನ ವಾದದ ಪ್ರಕಾರ ಹೀಗೆ ತನ್ನ ನಾರು ವಾಸನೆಯ ಕಾರಣದಿಂದ ದುರಿಯನ್
ಪ್ರಾಣಿಗಳ ಆಕರ್ಷಣೆ ಮಾಡುತ್ತವೆ. ಒರಾಂಗುಟಾನ್
ಗಳಿಗಂತು ತುಂಬಾ ಪ್ರೀತಿಯ ಆಹಾರ ದುರಿಯನ್. ಅಳಿಲುಗಳು, ಹಂದಿ, ಆನೆಗಳು ಅಲ್ಲದೆ ಮಾಂಸಾಹಾರಿ ಹುಲಿಗಳಿಗೂ
ಇಷ್ಟವಾದ ತಿಂಡಿ. ಮುಳ್ಳು ದೇಹದ ಕಾರಣ ಚಿಕ್ಕ ಪ್ರಾಣಿಗಳಿಗೆ ಇಷ್ಟವಿಲ್ಲದ ಈ ಹಣ್ಣನ್ನು ದೊಡ್ಡ ಪ್ರಾಣಿಗಳು
ತಿಂದು ದೂರ ದೂರದ ಪ್ರದೇಶಗಳಿಗೆ ಬೀಜಗಳ ಪ್ರಸಾರ ಮಾಡುತ್ತವೆ.
ವಂಶವಾಹಿಗಳ ಅಧ್ಯಯನ ನಡೆಸಿ ವಿಜ್ಞಾನಿಗಳೇನೂ ಸುಮ್ಮನೆ ಕುಂತಿಲ್ಲ.
ದುರಿಯನ್ ನ ಕೆಟ್ಟ ವಾಸನೆಯೊಂದನ್ನು ಕಡಿತಗೊಳಿಸಿದರೆ ಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತದೆ ಎಂಬ ವಿಶ್ವಾಸ
ಇರುವ ಅವರು ವಾಸನೆ ರಹಿತ ದುರಿಯನ್ ತಳಿಗಳ ಅಭಿವೃದ್ಧಿಗೆ ಅಣಿಯಾಗಿದ್ದರೆ.
-ಸೀಮಾ ಹೆಗಡೆ
(ಮಾಹಿತಿ
ಸೆಲೆ- ಬಿ.ಬಿ.ಸಿ ನ್ಯೂಸ್)

Comments
Post a Comment