ಚಿಪ್ಪಿನೊಳಗಡೆ ಮುತ್ತು ಮಲಗಿದೆ!

Pearl formation in an oyster explained:


ಚಿಪ್ಪಿನೊಳಗಡೆ ಮುತ್ತು ಮಲಗಿದೆ!
ಅದೆಷ್ಟೋ ವರ್ಷಗಳಿಂದ ಸಾಹಿತಿಗಳ ಸಲ್ಲುಗಳಿಗೆ ಪ್ರೇರಣೆಯಾಗಿ, ಹೈದರಾಬಾದ್ನ ಗಲ್ಲಿ ಗಲ್ಲಿಗಳಲ್ಲಿ ಮಾರಾಟವಾಗಿ, ಹೆಣ್ಮಕ್ಕಳ ಕೊರಳು ಕಿವಿಯಲ್ಲಿ ಓಲಾಡಿ, ತನಗ್ಯಾರು ಸರಿಸಾಟಿ!? ಎಂಬ ಕೊಬ್ಬಿನಲ್ಲಿ ಮೈಮರೆತಿರುವ ನಿಸರ್ಗದ ಬೆರಗು ಮುತ್ತು!! ಬಂಗಾರ ಬೆಳ್ಳಿ ವಜ್ರಗಳು ವಸುಂಧರೆಯ ಗರ್ಭದಲ್ಲಿ ಸಿಕ್ಕರೆ, ಕಡಲಾಳದಲ್ಲಿ ಅಪರೂಪಕ್ಕೆ ಸಿಗುವ ಮುತ್ತಿಗೆ ಎಷ್ಟು ಬೆಲೆ ತೆತ್ತರು ಸಾಲದು. ವಾಸ್ತವಕ್ಕಿಂತ ಹೆಚ್ಚು ಕಟ್ಟುಕತೆಗಳಲ್ಲೆ ಪ್ರಸಿದ್ಧವಾದ ಮುತ್ತು ಮತ್ಸಕನ್ನೆಯ ಕಣ್ಣೀರು, ಸ್ವಾತಿ ಮಳೆ ಹನಿಯು ಚಿಪ್ಪಿನಲ್ಲಿ ಬಚ್ಚಿಕೊಂಡು ಮುತ್ತಾಗುತ್ತೆ ಅನ್ನುವಂತಹ ಭ್ರಮೆಗಳು ನಮ್ಮಲ್ಲಿ ಆವರಿಸಿರುವುದು ಸಹಜ.
ಮುತ್ತು ಪ್ರಾಣಿಜನ್ಯವಾಗಿದ್ದು ಬಸವನ ಹುಳುಗಳ ವರ್ಗಕ್ಕೆ ಸೇರಿದ ಮೃದ್ವಂಗಿಗಳಾದ ಸಿಪ್ಪಿಚಿಪ್ಪು (pearl oysters) ಮತ್ತು ಬಳಚುಗಳಲ್ಲಿ (mussel) ಮೂಡುವ ಪದಾರ್ಥ. ಸಿಹಿನೀರು ಮತ್ತು ಉಪ್ಪಿನ ಸಮುದ್ರದ ಆಳದಲ್ಲಿ ಸೂಕ್ಷ್ಮ ಜೀವಿಗಳಾದ ಸಸ್ಯ ಪ್ಲಾಂಕ್ಟಾನ್ ಮತ್ತು ಏಕಕೋಶ ಪಾಚಿಗಳನ್ನು ತಿಂದು ಬದುಕುವ ಇವು ಸರಾಸರಿ 6 ವರ್ಷ ಬದುಕುತ್ತವೆ. ನೀರಿನ ಉಷ್ಣತೆ ಮತ್ತು ಲವಣತೆಯನ್ನು ಆದರಿಸಿ ಸಿಪ್ಪಿಗಳು ಗಂಡು ಹೆಣ್ಣಾಗಿ ಪರಿವರ್ತನೆ ಆಗುತ್ತವೆ. ಬಹಳಷ್ಟು ಸಿಪ್ಪಿಗಳು ಮುತ್ತನ್ನು ತಯಾರಿಸಿದರೂ ಪಿಂಟಡಾ(Pinctada radiata) ಜಾತಿಯು ಅತ್ಯಂತ ಮಹತ್ವದ್ದು.
ಯಾವುದಾದರು ಪರಜೀವಿ (parasite), ಸಣ್ಣ ಹರಳು, ಮರಳಿನ ಕಣ, ಅಥವಾ ಶತ್ರುಗಳೊಂದಿಗಿನ ಹೋರಾಟದ ಸಮಯದಲ್ಲಿ ಆಕಸ್ಮಿಕವಾಗಿ ಕಪ್ಪೆಚಿಪ್ಪಿನೊಳಗೆ ಪ್ರವೇಶಿಸಿದ ಹೂರವಸ್ತುವಿನ ಕಾರಣದಿಂದ ಸಿಪ್ಪಿಯ ದೇಹದಲ್ಲಿ ನಡೆಯುವ ಜೈವಿಕ ಕ್ರಿಯೆಯ ಫಲಿತಾಂಶ ಮುತ್ತು. ಹೀಗೆ ಬಾಹ್ಯ ವಸ್ತುವೊಂದು ಚಿಪ್ಪಿನೊಳಗಿನ ಮೃದು ಪದರಕ್ಕೆ ಗಾಯ ಮಾಡಿದಾಗ ಆಗುವ ತುರಿಕೆಯನ್ನು ತಪ್ಪಿಸಿಕೊಳ್ಳಲು ಆ ಬಾಹ್ಯ ವಸ್ತುವಿನ ಸುತ್ತ “ಕಾಲ್ಶಿಯಂ ಕಾರ್ಬೊನೇಟ್” (calcium carbonate) ಮತ್ತು ಕೊಂಚಿಯಲಿನ್ (conchiolin) ಎನ್ನುವ ರಾಸಾಯನಿಕಗಳು ಸಿಪ್ಪಿಯ ಪದರದಿಂದ ಒಸರುತ್ತವೆ.ಈ ರಾಸಾಯನಿಕಗಳು ಮೇಲಿಂದ ಮೇಲೆ ಒತ್ತಟ್ಟಾಗಿ ಕೂರುತ್ತ “ನ್ಯಾಕ್ರೆ” (nacre) ಎಂಬ ಹೊಳಪಿನ ಗಟ್ಟಿಯ ಕಣವಾಗುತ್ತವೆ. ಕಾಲ್ಶಿಯಂ ಕಾರ್ಬೊನೇಟ್ನ ಹರಳು ರೂಪವಾದ ಅರ್ಗೊನೈಟ್ (argonite) ಶೇಖರವಾಗುತ್ತಿದ್ದಂತೆ ಮುತ್ತು ರಚನೆಯಾಗುತ್ತದೆ. ಹೀಗೆ ಹೊರ ಪದಾರ್ಥದ ಮೇಲೆ ಚಿಪ್ಪಿನ ಪದರವನ್ನು ಹರಡುತ್ತಾ ಸಿಪ್ಪಿಯು ಆ ಪದಾರ್ಥವನ್ನು ತನ್ನ ದೇಹದಿಂದ ಮುತ್ತಿನ ರೂಪದಲ್ಲಿ ಹೊರಹಾಕುತ್ತದೆ.ಹೇಗಿದೆ ಕಪ್ಪೆ ಚಿಪ್ಪುಗಳ ಸ್ವಯಂ ರಕ್ಷಣೆಯ ಅದ್ಭುತ ತಂತ್ರ!
ವಿಪರ್ಯಾಸವೆಂದರೆ ನೈಸರ್ಗಿಕವಾಗಿ 2.5 ಟನ್ ಸಿಪ್ಪಿ ಚಿಪ್ಪುಗಳನ್ನು ಕೊಯ್ಲು ಮಾಡಿದರೆ ಕೇವಲ 3 ರಿಂದ 4 ವ್ಯಾಪಾರಕ್ಕೆ ಯೋಗ್ಯವಾದ ಮುತ್ತುಗಳು ಸಿಗುತ್ತವೆ. ಈಗಂತೂ ಕಪ್ಪೆಚಿಪ್ಪುಗಳ ಕೃಷಿಯೂ ದೊಡ್ಡ ವ್ಯಾಪಾರವಾಗಿ ಬೆಳೆದಿದ್ದು ಕೃತಕವಾಗಿ ಸಾಕಿದ ಚಿಪ್ಪನೂಳಗಡೆ ಬಾಹ್ಯ ವಸ್ತುವನ್ನು ತುರುಕಿ ಬೇಕಾದ ಬಣ್ಣ ಆಕೃತಿಯ ಮುತ್ತನ್ನು ಪಡೆದು ಲಕ್ಷ ಕೋಟಿ ಸಂಪಾದಿಸುವ ಉದ್ದಿಮೆಯಾಗಿದೆ. ಸೋ...ಪಾರ್ಟಿಯಲ್ಲಿ 'ನನ್ನ ಬಳಿ ಇರುವುದು ನ್ಯಾಚುರಲ್ ಮುತ್ತಿನ ನೆಕ್ಕ್ಲಸ್' ಎಂದು ಬೀಗುವ ಹೆಂಗಸರಿಗೆ ಕೊನೆ ಮಾತು, ಇಂದು ಪ್ರಪಂಚದಲ್ಲಿ ಸಿಗುವ 99ಕ್ಕಿಂತ ಹೆಚ್ಚು ಪ್ರತಿಶತ ಮುತ್ತು ಕೃತಕವಾಗಿ ಬೆಳೆಸಿದ್ದು!(cultured pearls).
ಸೀಮಾ ಹೆಗಡೆ, ಕಬ್ಬೆ
(ಮಾಹಿತಿ ಸೆಲೆ: ವಿಕಿಪೀಡಿಯಾ)

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ