ಊಸರವಳ್ಳಿಯ ಬಣ್ಣ ಬಯಲು

The reason for color changing nature of chameleon discovered:



ಊಸರವಳ್ಳಿಯ ಬಣ್ಣ ಬಯಲು
360° ಸ್ವತಂತ್ರವಾಗಿ ಚಲಿಸುವ ಕಣ್ಣು, ಕ್ರಿಮಿ ಕೀಟ ಕಂಡಾಗ ಕ್ಷಿಪಣಿಯಂತೆ ರಪ್ಪನೆ ಹೊರಚಾಚುವ ಅಂಟು ನಾಲಿಗೆ, ಮರದ ಕೊಂಬೆಗೆ ಸುರಳಿ ಸುತ್ತಿದ ತುದಿ ಬಾಲ, ಮುಂದಿನ ಹೆಜ್ಜೆ ಇಡಲೋ ಬೇಡವೋ ಎಂಬ ಅನುಮಾನದ ಚಾಲ! ಎಲ್ಲಕ್ಕಿಂತ ಹೆಚ್ಚಾಗಿ ಬಣ್ಣ ಬದಲಿಸುವ ‘ಕು’ಖ್ಯಾತಿ!! ಹಲ್ಲಿಗಳ ಜಾತಿಗೆ ಅಪವಾದ ಎನಿಸಿದ ಈ ಪ್ರಾಣಿ ವಿಸ್ಮಯ 'ಊಸರವಳ್ಳಿ'. ಆಫ್ರಿಕಾ, ಮಡಗಾಸ್ಕರ್, ಉತ್ತರ ಯುರೋಪ್, ಉತ್ತರ ಏಶಿಯಾದ ಮಳೆಕಾಡಿನಿಂದ ಮರುಭೂಮಿಯ ವರೆಗೆ ವ್ಯಾಪಕವಾಗಿ ಕಂಡು ಬರುವ ಉರಗ ಕುಟುಂಬದ ಇವು ಫ್ಲೋರಿಡಾ, ಹವಾಯಿ ದೇಶಗಳಲ್ಲಿ ಸಾಕುಪ್ರಾಣಿ.  
ಕ್ರಿಸ್ತ ಹುಟ್ಟುವ ಪೂರ್ವದಲ್ಲೇ ಜೀವಶಾಸ್ತ್ರ ಪಿತಾಮಹ ಅರಿಸ್ಟಾಟಲ್ನ ‘ಹಿಸ್ಟೋರಿಯ ಅನಿಮ್ಯುಲಮ್’ ಪುಸ್ತಕದಲ್ಲಿ “ಅತ್ಯಂತ ಬೇಗನೆ ಭಯಗೊಳ್ಳುವ ಜೀವಿ” ಎಂದು ಕರೆಸಿಕೊಂಡರೂ ಜನರ ಬಾಯಿಗೆ ಸಿಕ್ಕಿ ಹೆಸರು ಕೆಡಿಸಿಕೊಂಡಿದ್ದು ಎಲ್ಲಿಯೂ ದಾಖಲಾಗಿಲ್ಲ!
 ಬಹಳ ಹಿಂದೆಯೇ ಗೋಸುಂಬೆಯ ಈ ನಟನೆಯ ಸ್ವಭಾವ ವಿಜ್ಞಾನಿಗಳ ಗಮನ ಸೆಳೆದಿತ್ತು. ತನ್ನ ಸುತ್ತಲಿನ ಪರಿಸರಕ್ಕೆ ಹೊಂದಿಕೊಂಡು ಪರಭಕ್ಷಕರಿಂದ ತಪ್ಪಿಸಿಕೊಳ್ಳಲು ಈ ಕಪಟ ವೇಷದ ತಂತ್ರ (ಈ ನಡವಳಿಕೆಯನ್ನು camouflage ಎಂಬುದಾಗಿ ಕರೆಯಲಾಗುತ್ತದೆ) ಎಂಬ ವಾದ ಈಗ ಸುಳ್ಳಾಗಿದೆ. ಊಸರವಳ್ಳಿಯ ಶರೀರದಲ್ಲಿ ವರ್ಣ ದ್ರವ್ಯಗಳಿದ್ದು (pigments) ಅವುಗಳ ಚೆದುರುವಿಕೆಯಿಂದ ಬಣ್ಣ ಬದಲಾಗುತ್ತದೆ ಎಂಬ ಸಂಶೋಧನೆ ಈಗ ಕೇವಲ ಕಟ್ಟುಕತೆ.
ಹಾಗಾದರೆ ಊಸರವಳ್ಳಿಯ ಈ ವರ್ಣವ್ಯತ್ಯಾಸಕ್ಕೆ ಕಾರಣವೇನು ಎಂದು ಹುಡುಕುತ್ತಾ ಹೊರಟ ಜೆನೆವಾ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಸಿಕ್ಕ ಫಲಿತಾಂಶ ಆಶ್ಚರ್ಯಕರ. ಮಡಗಾಸ್ಕರ್ನ ಪ್ಯಾಂಥರ್ ಊಸರವಳ್ಳಿಯ (Furcifer pardalis) ಮೇಲೆ ನಡೆಸಿದ ಪ್ರಯೋಗ, ಇದೆಲ್ಲವೂ ಊಸರವಳ್ಳಿಯ ಶರೀರದ ರಚನಾತ್ಮಕ ಮಾರ್ಪಾಡು, ಇದೊಂದು ಬೆಳಕಿನ ಆಟ, ಎಲ್ಲವೂ ಗೋಸುಂಬೆಯ ಮನಸ್ಥಿತಿಯ ಮೇಲೆ ಅವಲಂಬಿತ!! ಎಂದಾಗ ಇಡೀ ವಿಶ್ವ ಮೂಗ ಮೇಲೆ ಬೆರಳಿಟ್ಟಿತು.
ಗೋಸುಂಬೆಯ ದೇಹದ ರಚನೆಯೇ ಒಂದು ವಿಸ್ಮಯ! ಅದರ ಚರ್ಮ ವಿಶೇಷ ತರಹದ ಬೆಳಕನ್ನು ಪ್ರತಿಫಲಿಸಬಲ್ಲ ದ್ರವ್ಯ ಹೊಂದಿದ  ಜೀವಕೋಶಗಳಿಂದ ಮಾಡಲ್ಪಟ್ಟಿದೆ. ಈ ಜೀವಕೋಶಗಳು ಎರಡು ಪದರಗಳಲ್ಲಿ ಜೋಡಿಕೆಯಾಗಿದ್ದು ಬೆಳಕಿನ ಆಟಕ್ಕೆ ರಂಗಸ್ಥಳವಾಗಿವೆ. ಈ ಜೀವಕೋಶಗಳಲ್ಲಿ ಅತ್ಯಂತ ಸೂಕ್ಷ್ಮ ವಾದ ಸ್ಫಟಿಕಗಳಿದ್ದು (nano crystals) ಈ ಸ್ಫಟಿಕಗಳ ಆಕಾರ, ಗಾತ್ರ, ಹಾಗು ದೂರ ನಿರ್ಧರಿಸಿ ಸೂರ್ಯ ರಶ್ಮಿ ಪ್ರತಿಫಲಿಸುವ ಕಾರಣದಿಂದ ವರ್ಣ ವ್ಯತ್ಯಾಸ ಉಂಟಾಗುತ್ತದೆ.
ಟ್ರಾಫಿಕ್ ಸಿಗ್ನಲ್ ಚಾಲಕರಿಗೆ ನಿರ್ದೇಶನ ಮಾಡುವಂತೆ ಊಸರವಳ್ಳಿಯ ಮೈ ಬಣ್ಣ ಅದು ತನ್ನ ಜಾತಿಯ ಇತರರಿಗೆ ಸಂಪರ್ಕ ಮಾಡುವ ರೀತಿ! ಗೋಸುಂಬೆಯ ಮನಸ್ಥಿತಿ ಖುಷಿಯಾಗಿದ್ದಾಗ ಸ್ಫಟಿಕಗಳು ಹತ್ತಿರವಿದ್ದು ನೀಲಿ ಬಣ್ಣದ ಪ್ರತಿಫಲನದ ಕಾರಣ ಹಸಿರು ಹಾಗು ಇತರೆ ತಿಳಿ ಬಣ್ಣಗಳು ಕಂಡರೆ, ಸಿಟ್ಟಾಗಿದ್ದಾಗ ಅಥವಾ ಉದ್ರೇಕಗೊಂಡಾಗ ದೂರವಾಗುವ ಸ್ಫಟಿಕಗಳ ಕಾರಣ ಕೆಂಪಿನಂತ ಘಾಡ ಬಣ್ಣಗಳ ದರ್ಶನ ಲಭ್ಯ!
ಇಷ್ಟೇ ಅಲ್ಲ, ಈ ಸ್ಫಟಿಕಗಳ ಜೀವಕೋಶದ ಪದರಗಳ ಕೆಳಗೆ ಮತ್ತೊಂದು ಪದರವಿದ್ದು ಅದು ಅತಿಗೆಂಪು (infrared) ಕಿರಣಗಳನ್ನು ಪ್ರತಿಫಲಿಸುವುದರ ಮೂಲಕ ದೇಹದ ಉಷ್ಣತೆಯ ನಿಯಂತ್ರಣದ ಕಾರ್ಯ ಮಾಡುತ್ತವೆ. ಕಡಿಮೆ ಉಷ್ಣತೆಯ ಸಮಯದಲ್ಲಿ ಕಪ್ಪು ಬಣ್ಣದ ದೇಹಕ್ಕೆ ತಿರುಗುವ ಊಸರವಳ್ಳಿ ಬೆಳಕನ್ನು ಹೀರುವ ಮೂಲಕ ದೇಹವನ್ನು ಬೆಚ್ಚಗಿರಿಸಲು ಪ್ರಯತ್ನಿಸುತ್ತವೆ. ವೈರಿಯ ಸೂಚನೆ ಸಿಕ್ಕಾಗ ಘಾಡ ಬಣ್ಣಕೆ ತಿರುಗಿದ ದೇಹ, ಸಂಗಾತಿಯ ಸುಳುಹು ಕಂಡಾಗ ತಿಳಿಯಾಗುತ್ತದೆ.
ಹೇಳಿ ಕೇಳಿ ಚುನಾವಣೆಯ ಸಮಯ, ರಣರಂಗದ ಕಿತ್ತಾಟದಲ್ಲಿ ಊಸರವಳ್ಳಿಗೆ ಭಾರಿ ಬೇಡಿಕೆ. ಹೊಲಸು ಬಾಯಿಗೆ ಸಿಕ್ಕಿ ಹೀನಾಯವಾಗಿ ನಿಂದನೆಗೆ ಒಳಗಾಗುವ ಪಾಪದ ಪ್ರಾಣಿಗಳಲ್ಲಿ ಊಸರವಳ್ಳಿಯ ನೋವು ಕಂಡಿದ್ದು ವಿಜ್ಞಾನಿಗಳಿಗೆ ಮಾತ್ರ ಅನ್ನಿಸ್ತದೆ.

ಫೋಟೊ ಮೆಟ್ರಿಕ್ ವೀಡಿಯೋಗ್ರಾಫಿಯಂತಹ ಅತ್ಯಂತ ಮುಂದುವರೆದ ತಂತ್ರಜ್ಞಾನದ ಸಹಾಯದಿಂದ ಊಸರವಳ್ಳಿಯ ಬಂಡವಾಳ ಬಯಲು ಮಾಡಿದ ವಿಜ್ಞಾನಿಗಳಿಗೆ ಒಂದು ಸಲಾಂ. ಈಗ ಇದರ ಮುಂದುವರೆದ ಭಾಗವಾಗಿ ಬಣ್ಣ ಬದಲಿಸುವ  ಕೃತಕ ಚರ್ಮದ ಸಂಶೋಧನೆಯಲ್ಲಿ ಅವರು ಬ್ಯುಸಿ.

Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ