ಹಕ್ಕಿ ಪಿಕ್ಕಿಗಳ ಶಿಸ್ತಿನ ಸಾಲು

Why do birds fly in V shape! Discover this amazing nature engineering



ಹಕ್ಕಿ ಪಿಕ್ಕಿಗಳ ಶಿಸ್ತಿನ ಸಾಲು
ಸುನೀಲ ಆಕಾಶದಲ್ಲಿ ತಿಳಿಗೆಂಪು ಬಣ್ಣ ರಂಗೇರಿ ಸಂಧ್ಯಾ ಕಾಲದ ಸೂಚನೆಯಾಗುತ್ತಿದ್ದಂತೆ ಮನೆ ಸೇರುವ ಧಾವಂತದಲ್ಲಿ ಹಾರುವ ಹಕ್ಕಿಗಳ ಕುಟುಂಬವನ್ನು ಎಲ್ಲರೂ ಕಂಡೆ ಇರುತ್ತೀರಾ. ಅತ್ಯಂತ ಸಹಜವೇನೋ ಎಂಬಂತೆ V ವಿನ್ಯಾಸದಲ್ಲಿ ಒಬ್ಬರ ಹಿಂದೆ ಒಬ್ಬರಾಗಿ ಅಚ್ಚುಕಟ್ಟಾಗಿ ಚಲಿಸುವ ಖಗಗಳ ಈ ನಡವಳಿಕೆಯನ್ನು ಪ್ರಶ್ನಿಸಿದ್ದಿದೆಯೇ!?
V ಆಕಾರದ ಸಮಮಿತಿಯ (symmetric) ಹಾರಾಟ ಬಾತುಕೋಳಿ, ಕೊಕ್ಕರೆ ಮುಂತಾದ ಮೈಲು ದೂರ ವಲಸೆ ಹೋಗುವ ಪಕ್ಷಿಗಳಲ್ಲಿ ಕಂಡುಬರುವ ವರ್ತನೆ. ಏಕೀ ವರ್ತನೆ!? ಎಂಬ ಪ್ರಶ್ನೆಯ ಹಿಂದೆ ಬಿದ್ದ ‘ಲಂಡನ್ನ ರೋಯಲ್ ವೆಟರ್ನರಿ ಕಾಲೇಜ್ನ’ ವಿಜ್ಞಾನಿಗಳು ಕಾರಣ ಕಂಡು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಆಸ್ಟ್ರಿಯಾದಲ್ಲಿ ಸೆರೆಯಲ್ಲಿ ಸಾಕಿದ ಅಳಿವಿನಂಚಿನಲ್ಲಿರುವ ಸ್ಥಳೀಯ ‘ನೊರ್ತರ್ನ್ ಬಾಲ್ಡ್ ಇಬಿಸಿಸ್’ (northern bald ibises) ಎನ್ನುವ ಪಕ್ಷಿಗಳ ಹಿಂಡಿನ ಮೇಲೆ ಈ ಪ್ರಯೋಗವನ್ನು ಮಾಡಲಾಯಿತು. 14 ಪಕ್ಷಿಗಳನ್ನು ಒಳಗೊಂಡ ಸಮೂಹದ ಮೇಲೆ 43 ನಿಮಿಷದ ವಲಸೆಯ ಹಾರಾಟದ ಅವಧಿಯಲ್ಲಿ ಪ್ರತಿ ಪಕ್ಷಿಯ ಪ್ರತಿ ರೆಕ್ಕೆ ಬಡಿತದ ವಿನ್ಯಾಸ, ಸಮಯವನ್ನು ತುಂಬಾ ಸೂಕ್ಷ್ಮವಾಗಿ ಅತ್ಯಂತ ನಿಖರ ಜಿ.ಪಿ.ಎಸ್ ಸೆನ್ಸರ್ಸ್ ಸಹಾಯದಿಂದ ಗಮನಿಸದ ವಿಜ್ಞಾನಿಗಳಿಗೆ ಸಿಕ್ಕ ಫಲಿತಾಂಶ ಅವರ ಹುಬ್ಬೇರಿಸುವಂತೆ ಮಾಡಿತ್ತು.
V ಸ್ಥಿತಿಯಲ್ಲಿ ತಮ್ಮನ್ನು ತಾವು ಒಪ್ಪಗೂಳಿಸುವ ಮೂಲಕ ಪಕ್ಷಿಗಳು ಮಹಾ ವಲಸೆಯ ಸಂದರ್ಭದಲ್ಲಿ ಆಗುವ ಶಕ್ತಿ ವ್ಯಯವನ್ನು ಕಡಿಮೆಗೊಳಿಸಿಕೊಳ್ಳುತ್ತವೆ. ಹೀಗೆ ಪ್ರಾಣಿವರ್ಗ ನಾವಂದುಕೊಂಡಿದ್ದಕ್ಕಿಂತ  ವಿಶಿಷ್ಟ ಮತ್ತು ಸಂಕೀರ್ಣ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ವಿಜ್ಞಾನಿಗಳು. ವಾಯುಬಲ ವಿಜ್ಞಾನದ () ಪ್ರಕಾರ ಪ್ರತಿ ಪಕ್ಷಿಯು ತನ್ನ ಮುಂದಿರುವ ಪಕ್ಷಿಯ ರೆಕ್ಕೆ ಬಡಿತಕ್ಕೆ ಅನುಗುಣವಾಗಿ ತನ್ನ ರೆಕ್ಕೆ ಬಡಿತವನ್ನು ಬದಲಿಸುವುದರ ಮೂಲಕ ಶಕ್ತಿಯನ್ನು ಕಾಪಿಟ್ಟುಕೊಳ್ಳುತ್ತವೆ. ಶಕ್ತಿ ಉಳಿಕೆಯ ಈ ತಂತ್ರ ಪಕ್ಷಿಗಳ ಸಹಯೋಗ ಸಹಕಾರದ ಫಲ.
ಸೂಕ್ಷ್ಮವಾಗಿ ಗಮನಿಸಿದರೆ ಪ್ರತಿ ಪಕ್ಷಿಯು ತನ್ನ ಮುಂದಿರುವ ಪಕ್ಷಿಗಿಂತ 45° ಕೋನದಲ್ಲಿ ಮತ್ತು ಸಲ್ಪ ಎತ್ತರದಲ್ಲಿದ್ದು 1.2 ಮೀಟರ್ ಅಂತರ ಕಾಯ್ದುಕೊಳ್ಳುತ್ತವೆ. ವಲಸೆಯ ಸಮಯದಲ್ಲಿ ಅತ್ಯಂತ ಮುಂದಿರುವ ನಾಯಕ ಪಕ್ಷಿಯ ಹಿಂದ್ ಹಿಂದೆ ಇತರರು V ವಿನ್ಯಾಸವನ್ನು ಅನುಸರಿಸುತ್ತ ಸಾಗುತ್ತವೆ.
ಗಾಳಿ ಯಾವಾಗಲೂ ಹೆಚ್ಚಿನ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶದತ್ತ ಹರಿಯುವುದು ಎಲ್ಲರಿಗೂ ತಿಳಿದ ವಿಷಯ. ಇದೆ ಗಾಳಿಯ ಒತ್ತಡದ ವ್ಯತ್ಯಾಸದ ಕಾರಣ ಆಕಾಶದಲ್ಲಿ ಪಕ್ಷಿ ಅಲ್ಲದೆ ವಿಮಾನಗಳು ತೇಲುತ್ತ ಏರುತ್ತ ಏರುತ್ತ ಸಾಗುತ್ತವೆ. ಪಕ್ಷಿ ರೆಕ್ಕೆಯನ್ನು ಕೆಳಗೆ ಬಡಿದಾಗ ಕೆಳಭಾಗದಲ್ಲಿ ಒತ್ತಡ ಹೆಚ್ಚಾಗುತ್ತದೆ. ಒತ್ತಡ ಸರಿಗೂಳಿಸುವ ನೆಪದಲ್ಲಿ ರೆಕ್ಕೆಯ ಅಂಚಿನಲ್ಲಿನ ಗಾಳಿ ರೆಕ್ಕೆಯ ಮೇಲಕ್ಕೆ ತಪ್ಪಿಸಿಕೊಳ್ಳುತ್ತವೆ. ಹೀಗೆ ರೆಕ್ಕೆಯ ತುದಿಯಲ್ಲಿ ಪಾರಾಗುವ ಗಾಳಿ ಆವರ್ತ ಅಥವಾ ಸುಳಿಯೊಂದನ್ನು (vortex) ಸೃಷ್ಟಿಸುತ್ತವೆ. ಕೆಳಗಿನಿಂದ ಮೇಲೇರುವ ಗಾಳಿಯ ಚಲನೆಗೆ ಅಪ್ ವಾಷ್ (up wash) ಎಂದು ಕರೆಯಲಾಗುತ್ತದೆ. ಇದೇ ಸುಳಿ ಹಂತ ಹಂತವಾಗಿ ಚಲಿಸುತ್ತ V ವಿನ್ಯಾಸದ ಪಥದಲ್ಲಿ ಸಾಗುತ್ತ ಹಿಂದಿರುವ ಪಕ್ಷಿಯನ್ನು ತಲುಪುತ್ತದೆ. ಬುದ್ದಿವಂತ ಹಿಂಬಾಲಕ ಪಕ್ಷಿ ಅಪ್ ವಾಷ್ ನ ಲಾಭ ದಿಂದ ತುಂಬಾ ಸುಲಭವಾಗಿ ಕಡಿಮೆ ಶಕ್ತಿ ಬಳಸಿ ರೆಕ್ಕೆ ಬಡಿಯುತ್ತವೆ. ಆದ್ದರಿಂದ ನಾಯಕ ಹಕ್ಕಿಯೊಂದು ಹೆಚ್ಚಿನ ಶ್ರಮ ವಹಿಸಿ ರೆಕ್ಕೆ ಬಡಿದರೆ ಸಾಕು, V ವಿನ್ಯಾಸದ ಹಿಂಬಾಲಕ ಹಕ್ಕಿಗಳೆಲ್ಲ 10 ರಿಂದ 20% ಶಕ್ತಿ ವ್ಯಯನ್ನು ತಗ್ಗಿಸುತ್ತವೆ. ದೂರ ವಲಸೆಯ ಸಮಯದಲ್ಲಿ ನಾಯಕನ ಸ್ಥಾನವು ಹಿಂಬಾಲಕರ ನಡುವೆ ಬದಲಾಗುತ್ತಿರುತ್ತದೆ ಕೂಡ. ಹಿಂಡಿನ ಪ್ರತಿ ಪಕ್ಷಿ 35% ಅವಧಿಯನ್ನು ನಾಯಕನಾಗಿ ಕಳೆಯುತ್ತವೆ.
ಇಲ್ಲೊಂದು ಸಮಸ್ಯೆಯಿದೆ.ಆವರ್ತದ ಅಪ್ ವಾಷ್ನ ವಿರುದ್ದ ದಿಕ್ಕಿನಲ್ಲಿ ಹರಿಯುವ ಗಾಳಿ ಡೌನ್ ವಾಷ್ (downwash) ಅನ್ನೂ ಸೃಷ್ಟಿಸುತ್ತದೆ. ಆದರೆ ಡೌನ್ ವಾಷ್ ಪಕ್ಷಿಗಳಿಗೆ ಕೆಟ್ಟದ್ದು, ಡೌನ್ ವಾಷ್ ರೆಕ್ಕೆಯ ಮೇಲ್ಭಾಗದಲ್ಲಿ ಒತ್ತಡ ಹೆಚ್ಚಿಸಿ ಅವುಗಳ ಶಕ್ತಿ ಬಳಕೆಯನ್ನು ಹೆಚ್ಚಿಸುತ್ತವೆ. ಡೌನ್ ವಾಷ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಹಿಂಬಾಲಕ ಪಕ್ಷಿ ತನ್ನ ಮುಂದಿನ ಪಕ್ಷಿಗಿಂತ ಸಲ್ಪ ಎತ್ತರದಲ್ಲಿ ಸಂಚರಿಸುತ್ತವೆ.
V ವಿನ್ಯಾಸದ ಮತ್ತೊಂದು ಪ್ರಯೋಜನವೆಂದರೆ ಪ್ರತಿ ಪಕ್ಷಿಯು ತನ್ನ ಮುಂದಿರುವ ಪಥವನ್ನು ಸ್ಪಷ್ಟವಾಗಿ ನೋಡಬಲ್ಲವು. ಹಾಗೆಯೇ ಅಪಘಾತಗಳನ್ನು ಇಲ್ಲವಾಗಿಸಬಲ್ಲವು.

ಹೀಗೆ ಕಡಿಮೆ ಶಕ್ತಿ ಬಳಸಿ ಹೆಚ್ಚು ದೂರ ಸಾಗುವ ಪಕ್ಷಿಗಳು ತಮ್ಮ ಮಹಾ ವಲಸೆಯ ಸಂಭ್ರಮವನ್ನು ಅನುಭವಿಸುತ್ತವೆ. “ಆರ್ಕ್ಟಿಕ್ ಟರ್ನ್”ನಂತಹ ಪಕ್ಷಿಗಳು ಮೈಲು ಗಟ್ಟಲೆ ಹಾರಾಟ ನಡೆಸಿತ್ತವೆ. ಅವು ತಮ್ಮ 25 ವರ್ಷದ ಜೀವಿತಾವಧಿಯಲ್ಲಿ ಭೂಮಿಯಿಂದ ಚಂದ್ರನ ನಡುವಿನ ಅಂತರವನ್ನು 3 ಬಾರಿ ಕ್ರಮಿಸಿದಷ್ಟು ದೂರ ಸಂಚರಿಸುತ್ತವೆ.
ಪಕ್ಷಿಗಳಿಂದ ಪ್ರೇರಣೆ ಪಡೆದ ಮಿಲಿಟರಿ ವಾಹನಗಳು V ಆಕಾರದಲ್ಲಿ ಚಲಿಸುವ ಚಂದವನ್ನು ನೋಡೇ ಇರುತ್ತೀರಾ. ಹಾಗೆಯೇ ವಿಮಾನ ಹಾರಾಟದ ಪ್ರದರ್ಶನ ಸಂದರ್ಭದಲ್ಲಿಯೂ ಇದೆ ತಂತ್ರ ಅನ್ವಯಿಸಿ ಇಂಧನ ಬಳಕೆಯನ್ನು ತಗ್ಗಿಸುವ ವ್ಯವಸ್ಥಿತ ಉಪಾಯವಿದೆ. ಹೇಗಿದೆ ನಿಸರ್ಗ ಪಾಠದ ರೋಚಕತೆ!
-ಸೀಮಾ ಹೆಗಡೆ, ಕಬ್ಬೆ
(ಮಾಹಿತಿ ಸೆಲೆ: ನೇಚರ್ ನಿಯತಕಾಲಿಕೆ , ಬಿ.ಬಿ.ಸಿ. ನ್ಯೂಸ್)



Comments

Popular posts from this blog

ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು

About me

ಭಾರತದ ಸ್ವಂತದ ಕ್ರಿಸ್ಪರ್ ಭತ್ತ