ಕಲಾಭೂಮಿಯ ಅಡಿಕೆ ಕಲಾಕೃತಿಗಳು
ಓಡಿಶಾ ಪ್ರವಾಸದ ಸಮಯ. ಭುವನೇಶ್ವರದ ಸುತ್ತಮುತ್ತ ನಾವಂದುಕೊಂಡ ಪ್ರವಾಸಿ ತಾಣಗಳನ್ನೆಲ್ಲಾ ನೋಡಿಯಾಗಿತ್ತು. ಮಾಡಹಾಗಲದ ಹೊಸ ತಳಿಗಳನ್ನು ಕಾಣಬೇಕೆಂದು ಚೆಸ್ (ಸೆಂಟ್ರಲ್ ಹಾರ್ಟಿಕಲ್ಚರ್ & ಎಕ್ಸ್‌ಪರಿಮೆಂಟ್ ಸ್ಟೇಶನ್) ಭುವನೇಶ್ವರಕ್ಕೆ ಭೇಟಿ ಕೊಟ್ಟು ಮುಂದೆ ‘ಪುರಿ’ಗೆ ಹೊರಡುವುದಿತ್ತು. ಅಲ್ಲೊಬ್ಬರು ಕರ್ನಾಟಕದವರೇ ನಮ್ಮ ಪ್ಲಾನ್ ಎಲ್ಲಾ ಕೇಳಿತಿಳಿದು “ಮ್ಯುಸಿಯಮ್‌ಗೆ ಹೋಗಿದ್ರಾ!?” ಎಂದರು. ʼಸಮಯವಿದ್ದರೆ ಹೋಗೋಣʼ ಎಂದುಕೊಂಡಿದ್ದ ವಸ್ತುಸಂಗ್ರಹಾಲಯಗಳನ್ನು ಅವರು ನೋಡಲೇಬೇಕೆಂದು ಒತ್ತಾಯಿಸಿದಾಗ ಅದಾಗಲೇ ಮಧ್ಯಾಹ್ನವಾಗಿತ್ತು. ಪುರಿಗೆ ರಾತ್ರಿ ಪಯಣಿಸಿದರಾಯಿತೆಂದು ಊಟ ಮಾಡಿ ʼಸ್ಟೇಟ್ ಟ್ರೈಬಲ್ ಮ್ಯೂಸಿಯಮ್ʼ ಹೊಕ್ಕಿದೆವು. ನಮ್ಮ ದೇಶದಲ್ಲೇ ಅತ್ಯಂತ ಹೆಚ್ಚಿನ ಸಂಖ್ಯೆಯ, ಒಟ್ಟು ಅರವತ್ತು ನಾಲ್ಕು ಬುಡಕಟ್ಟು ಜನಾಂಗವನ್ನು ಹೊಂದಿರುವ ರಾಜ್ಯ ಓಡಿಶಾದ ಟ್ರೈಬಲ್ ಮ್ಯೂಸಿಯಮ್‌ನಲ್ಲಿ ನಾನು ಸ್ತಬ್ಧನಾಗಿ ನಿಂತಿದ್ದೆ. ಬೈಗಾ, ಕೊಂಡಾ, ಮುಂಡಾ, ಸೌರಾ, ಅದೆಷ್ಟು ಜನಾಂಗ; ಅವರದೇ ಆದ ಪೋಷಾಕು, ಆಭರಣ ಧರಿಸಿದ ಸ್ತಬ್ಧ ಚಿತ್ರ; ಅವರ ಕಲೆ , ಗೃಹೋಪಯೋಗಿ ವಸ್ತುಗಳು , ಸಂಗೀತ ವಾದ್ಯಗಳು ಇತ್ಯಾದಿಗಳ ಸಂಗ್ರಹ; ಸ್ಥಳದಲ್ಲೇ ನಡೆಯುತ್ತಿದ್ದ ಢೋಕ್ರಾ ಪಟಚಿತ್ರ, ಭೊತ್ತದ ಮುಂತಾದ ಕಲೆಗಳ ಪ್ರಾತ್ಯಕ್ಷಿಕೆ ನೋಡುತ್ತಾ ಮೂರು ತಾಸು ಕಳೆದುಹೋಗಿದ್ದೇ ತಿಳಿಯಲಿಲ್ಲ. ಮುಂದೆ ʼಕಲಾಭೂಮಿ ಕ್ರಾಫ್ಟ್ ಮ್ಯುಸಿಯಮ್ʼಗೆ ಹೊಕ್ಕಾಗ ನಾಲ್ಕು ಗಂಟೆ...