ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ
ಒಳಾಂಗಣ ಸಸ್ಯಗಳನ್ನು ಸಂಗ್ರಹಣೆ ಮಾಡಲು ತೊಡಗಿದ್ದ ಪ್ರಾರಂಭದ ದಿನಗಳು; ನರ್ಸರಿಯೊಂದರಲ್ಲಿ ಮೂರು ಇಂಚಿನ ಬಿಳಿ ಪ್ಲಾಸ್ಟಿಕ್ ಪಾಟ್‌ನಲ್ಲಿ ಅಕ್ಟೋಪಸ್‌ನ ಕೊರಕಲು ಕಾಲುಗಳಂತೆ ಹರಡಿದ್ದ ʼಬೇಬಿ ಪಿಂಕ್ʼ ಬಣ್ಣದ ಆ ಗಿಡಕ್ಕೆ ಮನ ಸೋತುಹೋಗಿತ್ತು. ದರವೆಷ್ಟೆಂದು ಕೇಳದೆ ನರ್ಸರಿಯವರು ಹೇಳಿದಷ್ಟು ಕೊಟ್ಟು ತಂದಿದ್ದೆ. ಹೀಗೆ ಪರಿಚಯವಾದದ್ದು ಕ್ರಿಪ್ಟಾಂಥಸ್‌ಗಳ ಕೌತುಕ ಲೋಕ. ಬೇಬಿ ಪಿಂಕ್‌ನಿಂದ ಶುರುಮಾಡಿ ಹಸಿರು, ಕಂದು, ಪಟ್ಟೆಪಟ್ಟೆಯ ವಿವಿಧ ಬಣ್ಣ ವಿನ್ಯಾಸದ ಹಲವಾರು ಕ್ರಿಪ್ಟಾಂಥಸ್‌ಗಳ ಸಂಗ್ರಹವಾಗಿತ್ತು. ಅವುಗಳಲ್ಲೊಂದು ತನ್ನ ಹೊಕ್ಕುಳಲ್ಲಿ ನಕ್ಷತ್ರದಂತ ಬಿಳಿ ಹೂಗಳನ್ನು ಬಿಟ್ಟು ಕಂಗೊಳಿಸುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಆ ಗಿಡ ಸಾಯತೊಡಗಿತು. ಕಾಳಜಿ ಹೆಚ್ಚಾಯಿತೋ, ನನ್ನ ದೃಷ್ಟಿಯೇ ತಾಕಿತೋ; ಗಿಡ ಸಾಯುತ್ತಿರುವುದನ್ನು ಕಂಡು ಬೇಜಾರಾದರೂ ಏನೂ ಮಾಡುವಂತಿರಲಿಲ್ಲ. ಹೇಗಿದ್ದರೂ ಗಿಡದ ಸಾವು ನಿಶ್ಚಿತ ಎಂದುಕೊಂಡು ತಾಯಿಯಿಂದ ಹೊರಟ ಚಿಕ್ಕ ಮರಿಗಳನ್ನು ಬೇರೆ ಮಾಡದೆ ಅವುಗಳ ಪಾಡಿಗೆ ಬಿಟ್ಟು ಸುಮ್ಮನಾದೆ. ಕೆಲವೇ ದಿನದಲ್ಲಿ ಆಶ್ಷರ್ಯ ಕಾದಿತ್ತು. ಆ ಮರಿಗಳೆಲಗಲಾ ದೊಡ್ಡ ದೊಡ್ಡ ಸಸ್ಯಗಳಾಗಿ ತಾಯಿಗಿಂತಲೂ ಚಂದಕ್ಕೆ ಬೆಳೆದು ನಿಂತಿದ್ದವು. ಕ್ರಿಪ್ಟಾಂಥಸ್‌ಗಳ ವಿಶಿಷ್ಟತೆಯ ಬಗ್ಗೆ ತಿಳಿದಿದ್ದು ಆಗಲೇ. ತಮ್ಮ ಜೀವಿತಾವಧಿಯಲ್ಲಿ ಒಂದೇ ಬಾರಿ ಹೂಬಿಟ್ಟು ತಕ್ಷಣ ಸಾಯುವ ಸಸ್ಯಗಳ ಬಗ್ಗೆ ತಿಳಿದೇ ಇರುತ್ತೀರಾ. ಅಂತಹುದೇ ...