ಹಸುರು ಹಬ್ಬುವ ಫೈಕಸ್
ಕಾಡು, ಮೇಡು, ಕಡಲು; ಯಾವುದೇ ಪರಿಸರವಿರಲಿ, ಅಲ್ಲಿಯ ಜೈವಿಕ ವಾತಾವರಣವನ್ನು ಸುವ್ಯವಸ್ಥಿತವಾಗಿ ಇರಿಸುವ ಒಂದು ಅನನ್ಯ ಜೀವ ಪ್ರಭೇದವಿರುತ್ತದೆ. ಬಾಗಿದ ಕಲ್ಲಿನ ಕಮಾನನ್ನು ಹಿಡಿದಿಡುವ ʼನೆತ್ತಿಗಲ್ಲಿʼನಂತೆ ಆ ಒಂದು ಪ್ರಭೇದವಿಲ್ಲದಿದ್ದರೆ ಅಲ್ಲಿಯ ಪರಿಸರವೇ ಕುಸಿದು ಬೀಳುತ್ತದೆ. ಇದನ್ನೇ ʼಕೀ ಸ್ಟೋನ್ ಪ್ರಭೇದʼ ಎನ್ನಲಾಗುತ್ತದೆ. ಉದಾಹರಣೆಗೆ ಸಸ್ಯಾಹಾರಿಗಳ ಸಂಖ್ಯೆಯನ್ನು ಹದ್ದುಬಸ್ತಿನಲ್ಲಿಡುವ ಹುಲಿಗಳು, ಸಮುದ್ರದ ಜೀವರಾಶಿಯನ್ನ ಸಮತೂಗಿಸುವ ಶಾರ್ಕ್‌ಗಳು, ಕರಾವಳಿಯನ್ನು ಕಾಪಾಡುವ ಮ್ಯಾಂಗ್ರೋವ್‌ಗಳು ಇತ್ಯಾದಿ. ಸಸ್ಯಗಳಲ್ಲಿ ಪ್ರಮುಖವಾದದ್ದು ʼಫೈಕಸ್ʼ; ನಮ್ಮ ಸುತ್ತಲೂ ಸದ್ದಿಲ್ಲದೆ ಜೀವವೈವಿಧ್ಯತೆ ಸಲಹುತ್ತಿರುವ ಅತ್ತಿ, ಆಲ, ಅರಳಿ, ಗೋಳಿ, ಬಸರಿ ಮುಂತಾದವು. ಬೃಹದಾಕಾರವಾಗಿ ಹರಡಿಕೊಂಡಿರುವ ಫೈಕಸ್ ಪ್ರಭೇದದ ಒಂದು ಮರವಿದ್ದರೆ ಸುತ್ತಲ ಹತ್ತು ಮೈಲಿನ ಜೀವರಾಶಿ ಸಮೃದ್ಧವಾದಂತೆ. ಅಧ್ಯಯನವೊಂದರ ಪ್ರಕಾರ ಒಂದು ಫೈಕಸ್ ಮರ 1200 ಜಾತಿಯ ಜೀವಿಗಳಿಗೆ ಆವಾಸಸ್ಥಾನವಾಗಬಲ್ಲದಂತೆ, ಆಹಾರ ಮೂಲವಾಗಬಲ್ಲದಂತೆ. ನಮ್ಮ ಸೌಭಾಗ್ಯ ಈ ಎಲ್ಲಾ ಫೈಕಸ್‌ಗಳನ್ನು ಬೋನ್ಸಾಯ್‌ಗಳಾಗಿ ಬೆಳೆಸಬಹುದಾಗಿದೆ. ಇವುಗಳ ಜೊತೆಗೆ ಕೆಲ ಫೈಕಸ್‌ಗಳನ್ನು ಒಳಾಂಗಣ ವಿನ್ಯಾಸಕ್ಕಾಗಿ ಬಳಸುವದಿದೆ. ಐಷಾರಾಮಿ ಹೊಟೇಲ್, ರೆಸ್ಟೋರೆಂಟ್, ಕಛೇರಿಗಳಲ್ಲಿ, ವಿಮಾನ ನಿಲ್ದಾಣಗಳಲ್ಲಿ ಹಸುರು ಸೂಸುವ ಅಂತಹ ಅಲಂಕಾರಿಕ ಫೈಕಸ್‌ಗಳ ಪಟ್ಟಿ ಹೀಗಿದೆ. ʼಫೈಕ...