ಸುಲಭ ನಿರ್ವಹಣೆಗೆ ಸ್ನೇಕ್ ಪ್ಲಾಂಟ್
ಇದೊಂದು ಅಲಂಕಾರಿಕ ಸಸ್ಯ. ಪಟ್ಟೆ ಪಟ್ಟೆ ಹಾವು ಹೆಡೆ ಎತ್ತಿ ನಿಂತಂತೆ ಕಾಣುವ ಈ ಸಸ್ಯ ಕಚೇರಿ, ಮನೆ, ಉದ್ಯಾನವನ, ಬೀದಿ ಬದಿ ಬೇಲಿಯಲ್ಲೂ ಕಾಣಸಿಗುತ್ತದೆ. ಯಾವುದಿರಬಹುದೆಂದು ಊಹಿಸಬಲ್ಲೀರಾ? ಹೌದು! ಇದೇ ಸ್ನೇಕ್ ಪ್ಲಾಂಟ್; ಗಾರ್ಡನ್ನಿಗರಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ಚಿರಪರಿಚಿತ ʼಸಾನ್ಸಿವೇರಿಯಾʼ. ನೈಜಿರಿಯಾದಿಂದ ಕೊಂಗೋ ವರೆಗಿನ ಭೌಗೋಳಿಕ ಪ್ರದೇಶದಲ್ಲಿ ಹುಟ್ಟಿದ ಸಾನ್ಸಿವೇರಿಯಾ ಪಶ್ಚಿಮ ಆಫ್ರಿಕಾದ ಸೆಲೆಬ್ರಿಟಿ ಸಸ್ಯ. ಆಫ್ರಿಕನ್ನರ ನಂಬಿಕೆಯ ಪ್ರಕಾರ ಸಾನ್ಸಿವೇರಿಯಾ ದುಷ್ಟಶಕ್ತಿಗಳನ್ನು ದೂರವಿಡಬಲ್ಲ ಅದೃಷ್ಟದಾಯಕ ಸಸ್ಯ!. ಪರಿಣಾಮ, ಆಫ್ರಿಕನ್ನರ ವಿವಿಧ ಸಾಂಪ್ರದಾಯಿಕ ಆಚರಣೆಯ ಭಾಗವಾಗಿ, ಔಷಧಿಗಾಗಿ ಸಾನ್ಸಿವೇರಿಯಾ ಬಳಕೆಯಲ್ಲಿದೆ. ಸಾನ್ಸಿವೇರಿಯಾದ ನಾರು ಬಹುಗಟ್ಟಿ ಮತ್ತು ಬಹುಬಾಳಿಕೆ ಬರುವಂತದ್ದು. ಹಾಗಾಗಿ ಇದರ ನಾರನ್ನು ಬಟ್ಟೆ ನೇಯ್ಗೆಯಲ್ಲಿ ಹಗ್ಗ ಹೆಣೆಯಲು ಇಂದಿಗೂ ಉಪಯೋಗಿಸಲಾಗುತ್ತದೆ. ಆಫ್ರಿಕನ್ನರು ಮುಂಚೊಂದು ಕಾಲದಲ್ಲಿ ಈ ನಾರನ್ನು ಬಿಲ್ಲಿನ ತಯಾರಿಕೆಯಲ್ಲಿ ಬಳಸಲಾಗುತ್ತಿದ್ದ ಕಾರಣ ಸಾನ್ಸಿವೇರಿಯಾವನ್ನು ʼವೈಪರ್ಸ್ ಬೋಸ್ಟ್ರಿಂಗ್ ಹೆಂಪ್ʼ ಎಂದು ಕರೆಯುತ್ತಿದ್ದರಂತೆ (ವೈಪರ್ ಎಂದರೆ ಒಂದು ಜಾತಿಯ ಹಾವು, ಹೆಂಪ್ ಎಂದರೆ ಒಂದು ರೀತಿಯ ನಾರು). ಶುಷ್ಕ ಪರಿಸ್ಥಿತಿಗಳಲ್ಲಿ ಬದುಕಬಲ್ಲ ಸಾಮರ್ಥ್ಯವಿರುವ ಸಾನ್ಸಿವೇರಿಯಾ ಮಣ್ಣಿನ ಸವಕಳಿ ತಡೆಯುವ ಮೂಲಕ, ಸಣ್ಣ ಕೀಟಗಳಿಗೆ ಆವಾಸಸ್ಥಾನವನ್ನು ಒದಗಿ...