ಗೋಡೆಗೆ ಹಸುರಿನ ಅಪ್ಪುಗೆ
ಹಾರುತ ದೂರಾ ದೂರಾ, ಮೇಲೆರುವ ಬಾರಾ ಬಾರಾ… ಹೋಲ್ಡಾನ್! ಇದು ಬೇರೆ ಸನ್ನಿವೇಶ, ಇಲ್ಲಿ ನಟನಟಿ ಕೈಕೈ ಹಿಡಿದು ಸಾಗುವುದು ಚಂದಿರ ತಾರೆ ಆಗಲಲ್ಲ, ಸೂರ್ಯನ ಸ್ಪರ್ಶವ ಸವಿಯಲು. ಯಾರೀ ನಟನಟಿ ಎಂದೇ? ಗಾರ್ಡನ್ನಿಗರಿಗೆ ಸಸ್ಯಗಳನ್ನು ಬಿಟ್ಟು ಮತ್ಯಾರಾದರೂ ಸೆಲೆಬ್ರಿಟಿ ಆಗಿರಲು ಸಾಧ್ಯವೇ!. ಉದ್ಯಾನವನವೆಂಬ ನಾಟಕರಂಗದ ಇಂದಿನ ನಾಯಕಿ ಲತೆ, ಬೋರಿಂಗ್ ಕಾಂಕ್ರೀಟು ಗೋಡೆಗೆ ಹಸಿರು ಮೆತ್ತುವ ಚಾರುಲತೆ. ಒಗಟು ಪಕ್ಕಕ್ಕಿರಿಸಿ ನೇರವಾಗಿ ಹೇಳುವುದಾದರೆ ಗೋಡೆಗೆ ಹಬ್ಬುವ ʼವಾಲ್ ಕ್ಲಿಂಗಿಂಗ್ ಕ್ಲೈಂಬರ್ಸ್ʼ. ಗಾರ್ಡನ್ನಿಗರಿಗೆ ಇಷ್ಟವಾದ ಸಸ್ಯವಿಧಗಳಲ್ಲಿ ಬಳ್ಳಿಗಳೂ ಒಂದು. ಮುಂಬೈಮಲ್ಲಿ, ಶಂಖಪುಷ್ಪ, ಪ್ಯಾಷನ್ ಫ್ಲವರ್, ಬ್ಲೀಡಿಂಗ್ ಹಾರ್ಟ್, ಹೀಗೆ ಮನೆಯ ಮುಂದೆ ಹತ್ತಾರು ಹೂಬಿಡುವ ಬಳ್ಳಿಗಳನ್ನು ಹಬ್ಬಿಸುವುದನ್ನು ನೋಡಿರಬಹುದು. ಆದರೆ ಹೂ ಬಿಡದಿದ್ದರೂ ರೊಮಾಂಟಿಕ್ ಆಗಿ ಗೋಡೆಯನ್ನು ತಬ್ಬುತ್ತಾ ಮೇಲೇರುವ ಹಸಿರು ಬಳ್ಳಿಗಳನ್ನು ಕಂಡಿದ್ದೀರಾ? ಹೀಗೆ ಸುಮ್ಮನೆ ಬೆಂಗಳೂರಿನ ʼಪಾಶ್ʼ ಬೀದಿಗಳಲ್ಲಿ ಸುತ್ತುತ್ತಾ ಸಾಗಿದರೆ ಗೋಡೆಯೋ ಗಿಡವೋ ಎಂದು ಭ್ರಮಿಸುವಂತೆ ಕಣ್ಣುಕುಕ್ಕುವ ಈ ಸಸ್ಯಗಳು ಯಾವುದಿರಬಹುದೆಂದು ಉದ್ಘರಿಸುವ ಮುನ್ನ ಅವುಗಳ ಬಗ್ಗೆ ತಿಳಿದಿರಲಿ. · ಫೈಕಸ್ ರೆಪೆನ್ಸ್ ಅಥವಾ ಫೈಕಸ್ ಪ್ಯುಮಿಲಾ: ʼಕ್ರೀಪಿಂಗ್ ಫಿಗ್ʼ ಎಂದೇ ಕರೆಯಲ್ಪಡುವ ಈ ಬಳ್ಳಿ ಆಲದ ಜಾತಿಗೆ ಸೇರಿದ್...