ಮನೀ ಪ್ಲಾಂಟ್
ಚೀನಾದ ಫೆಂಗ್ ಶೂಯಿ ಬಗ್ಗೆ ಕೇಳಿರುತ್ತೀರಿ. ನಮ್ಮ ಸುತ್ತಲಿನ ವಸ್ತುಗಳಿಂದ ಪ್ರವಹಿಸುವ ಶಕ್ತಿ ನಮ್ಮ ಭಾವ, ಸಂಬಂಧ, ಆರೋಗ್ಯ, ಸಂಪತ್ತಿನ ಮೇಲೆ ಪರಿಣಾಮ ಬೀರಬಲ್ಲದು ಎನ್ನುತ್ತದೆ ಈ ಪ್ರಾಚೀನ ಪದ್ಧತಿ. ಫೆಂಗ್ ಶೂಯಿಯ ತತ್ವಗಳೊಂದಿಗೆ ಸದ್ದಿಲ್ಲದೆ ನಮ್ಮ ದೇಶವನ್ನು ಆಕ್ರಮಿಸಿದ್ದು ಮನೀ ಪ್ಲಾಂಟ್ ನಂತಹ ಒಳಾಂಗಣ ಸಸ್ಯಕುಲ. ಪೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹುಟ್ಟಿದ ಮನೀಪ್ಲಾಂಟ್ ಚೀನಾದ ಸಂಸ್ಕೃತಿಯೊಡನೆ ಬೆರೆತು ಭಾರತದ ವಾಸ್ತುಪ್ರಕಾರಕ್ಕೂ ಸೈ ಎನಿಸಿಕೊಂಡಿದ್ದು ಆಶ್ಚರ್ಯವೇ ಸರಿ. ಈಗಂತೂ ಮನೆ, ಕಚೇರಿ, ಕೆಫೆ, ಅಂಗಡಿ, ಶಾಲೆ-ಕಾಲೇಜು, ಆಸ್ಪತ್ರೆ ಹೀಗೆ ಎಲ್ಲಾ ಸ್ಥಳಗಳಲ್ಲೂ ಕಾಣಸಿಗುವ ಸಸ್ಯವೊಂದಿದ್ದರೆ ಅದು ಮನೀಪ್ಲಾಂಟ್. ಅದ್ಹೇಗೆ ಮನೀಪ್ಲಾಂಟ್ ಹಳೆಯ ಪದ್ಧತಿಯಿಂದ ಶುರುವಾಗಿ ಆಧುನಿಕ ಜಮಾನಾದ ಭಾಗವಾಯಿತೋ ಯಾರೂ ತಿಳಿಯರು. ಆಕರ್ಷಕ ಹಸಿರು ಹೊಳಪಿನ ಎಲೆ, ನೆರಳಲ್ಲೂ ಸಮೃದ್ಧವಾದ ಬೆಳವಣಿಗೆ, ಸುಲಭ ಆರೈಕೆ, ಗಾಳಿ ಶುದ್ಧೀಕರಿಸಬಲ್ಲ ಹಣೆಪಟ್ಟಿ, ಈ ಎಲ್ಲಾ ಕಾರಣಕ್ಕೆ ಅಭಿವೃದ್ಧಿ, ಅದೃಷ್ಟದ ಸಂಕೇತವಾಗಿ ಮನೀಪ್ಲಾಂಟ್ ಬಳಕೆಗೆ ಬಂದಿರಬೇಕು. ಮೇಲಿನ ಹೇಳಿಕೆಗಳಿಗೆ ವೈಜ್ಞಾನಿಕವಾಗಿ ಯಾವುದೇ ಆಧಾರವಿಲ್ಲದಿದ್ದರೂ ಭಾವನಾತ್ಮಕವಾಗಿ ಬೆಸುಗೆ ಆಗಿಹೋಗಿದೆ! ಹಣದ ಹೊಳೆ ಹರಿಸುವ ಭ್ರಮೆಯೊಂದಿಗೆ ಮನೀಪ್ಲಾಂಟ್ ಎಲ್ಲೆಡೆ ಹೊಕ್ಕಿಬಿಟ್ಟಿದೆ. ಎಷ್ಟರ ಮಟ್ಟಿಗೆಯೆಂದರೆ ಶ್ರೀಲಂಕಾದ ಕಾಡುಗಳಲ್ಲಿ ಯಾವ...