ಕೋಲಿಯಸ್
ಚಿತ್ರಕಲೆ ಸ್ಪರ್ಧೆ ನಡೆಯುತ್ತಿದೆ ಅಂದುಕೊಳ್ಳಿ. ಎಲೆಯೊಂದನ್ನು ಬಿಡಿಸಲು ಸೂಚನೆ ನೀಡಲಾಗುತ್ತದೆ. ಕಲ್ಪನೆಯಂತೆ ಬಿಡಿಸುತ್ತೀರಿ. ಬಣ್ಣ ತುಂಬುವಾಗ ನಿಮ್ಮ ಆಯ್ಕೆಯೇನು. ತಿಳಿ ಹಸಿರು, ಘಾಡ ಹಸಿರು, ಪಾಚಿ ಹಸಿರು? ಒಟ್ಟಿನಲ್ಲಿ ಹಸಿರು ಅಲ್ಲವೇ. ಅದೇ ಚಿಕ್ಕ ಮಕ್ಕಳ ಕೈಗೆ ಕುಂಚ ಕೊಟ್ಟರೇ? ಗುಲಾಬಿ, ನೇರಳೆ, ಕೆಂಪು, ಕೇಸರಿ, ನಮ್ಮ ಆಲೋಚನೆಗೂ ಮೀರಿ ಅವರ ವರ್ಣ ಲಹರಿ ಸಾಗುವುದು ಸಹಜ. ಹಾಗಾದರೆ ಅವರ ಬಣ್ಣದ ಆಯ್ಕೆ ತಪ್ಪೇ? ಖಂಡಿತ ಇಲ್ಲ. ನಿಮ್ಮ ಹೂದೋಟದಲ್ಲಿ ಕೋಲಿಯಸ್ ಎಂಬ ಅಲಂಕಾರಿಕ ಸಸ್ಯವಿದ್ದರೆ ನೆನಪಿಸಿಕೊಳ್ಳಿ! ಘಾಡ ವರ್ಣದ ಎಲೆಗಳ ಕೋಲಿಯಸ್ ತೋಟಗಾರರ ಇಷ್ಟದ ಅಲಂಕಾರಿಕ ಸಸ್ಯ. ನೆರಳು-ಬಿಸಿಲು, ಮನೆಯೊಳಗಿನ-ಹೊರಗಿನ ಅಂದ ಹೆಚ್ಚಿಸುವಲ್ಲಿ ಇವುಗಳ ‘ಜಾದೂಯೀ ಹಾತ್’ ಇದೆ. ತರಹೇವಾರಿ ಬಣ್ಣದೆಲೆಯೆ ಕೋಲಿಯಸ್ ಸಂಗ್ರಹ ಮಾಡುವುದು ಕೆಲವರ ಖಯಾಲಿ. ಎಷ್ಟೇ ಸಂಗ್ರಹಿಸಿದರೂ ಮುಗಿದು ತೀರದ ವೈವಿಧ್ಯತೆ ಇವುಗಳದ್ದು. ಕೋಲಿಯಸ್ ಗಳ ಹುಟ್ಟೂರು ಆಗ್ನೇಯ ಏಷ್ಯಾ. 1851ರಲ್ಲಿ ವಿಲ್ಲಿಂಕ್ ಎಂಬ ಡಚ್ ತೋಟಗಾರ ಜಾವಾದಿಂದ ಸಂಗ್ರಹಿಸಿದ ಕೋಲಿಯಸ್ ಗಳನ್ನು ಯುರೋಪ್ ನಲ್ಲಿ ಮೊಟ್ಟಮೊದಲು ಪರಿಚಯಿಸಿದ. ಅಗಲವಾದ ಮಡಿಗಳಲ್ಲಿ ಒತ್ತತ್ತಾಗಿ ಬೆಳೆವ ‘ಬೆಡ್ಡಿಂಗ್ ಪ್ಲಾಂಟ್’ಗಳಾಗಿ ಇವು ಪ್ರಸಿದ್ಧಿ ಹೊಂದಿದವು. 1877ರಲ್ಲಿ ವಿಲಿಯಂ ಬುಲ್ ಎಂಬ ತೋಟಗಾರ 150 ವರ್ಣರಂಜಿತ ತಳಿಗಳನ್ನು ಪರಿಚಯಿಸಿದ. ನಂತರದಲ್ಲಿ ನವೀನ ವಿನ್ಯಾಸದ ಕೋಲಿಯಸ್ ತಳಿ...