ಸುಂದರ ಕೈತೋಟಕ್ಕೆ ಸಪ್ತ ಸೂತ್ರಗಳು
ಕೈಗೆಟಕುವ ತೋಟವೋ ಕೈಯಷ್ಟಗಲ ತೋಟವೋ, ‘ಕೈದೋಟ’ ಎಂಬುದು ಪ್ರತಿಯೊಬ್ಬ ಹಳ್ಳಿಗ-ಪಟ್ಟಣಿಗನ ಆಸೆ-ಕನಸು. ಇದೇ ಆಸಕ್ತಿಯ ಪರಿಣಾಮ ಹಿತ್ತಲಿಗೆ ಮೀಸಲಾಗಿದ್ದ ಕೈ ತೋಟ ಇಂದು ತಾರಸಿ ವರೆಗೂ ಬಂದು ಮುಟ್ಟಿದೆ. ಇದೊಂದು ಕಲೆ, ಇದೊಂದು ವಿಜ್ಞಾನ; ಇದೊಂದು ಹವ್ಯಾಸ, ಇದೊಂದು ಹುಚ್ಚು. ನಾವೇ ಬೆಳೆದ ತಾಜಾ ತಾಜಾ ಪೌಷ್ಟಿಕ ಆಹಾರ ನಮ್ಮ ಹೊಟ್ಟೆ ಸೇರುವುದೆಂದರೆ ಸೌಭಾಗ್ಯವೇ!. ಮನೆ ಬಳಕೆಗೆ ಬೇಕಾಗುವ ತರಕಾರಿ, ಹೂವು, ಕೆಲ ಔಷಧೀಯ ಸಸ್ಯಗಳು, ಮೂಲಿಕೆಗಳು, ಹಣ್ಣು, ಹೀಗೆ ತರಹೇವಾರಿ ಬೆಳೆಗಳ ಕೈತೋಟದ ನಿರ್ವಹಣೆಯೇನೂ ಸುಲಭವಲ್ಲ. ಶ್ರಮ, ಶ್ರದ್ಧೆ, ಸಮಯ ಬೇಡುವ ಫುಲ್ ಟೈಮ್ ಜಾಬೇ ಸೈ. ಆದರೂ ಇದರ ಗಮ್ಮತ್ತೇ ಬೇರೆ. ಈಗಾಗಲೇ ಕೈತೋಟವನ್ನು ನಿರ್ವಹಿಸುತ್ತಿರುವವರು, ಇನ್ನು ಮುಂದೆ ಕೈತೋಟದ ಯೋಜನೆ ಹಾಕಿಕೊಂಡವರಿಗೆ ಇಲ್ಲಿದೆ ಕೆಲ ಟಿಪ್ಸ್ 1.ಕಾಲಕ್ಕೆ ತಕ್ಕ ಬೆಳೆಗಳ ಆಯ್ಕೆ ಪ್ರತಿ ಬೆಳೆಗೂ ತನ್ನದೇ ಆದಂತಹ ವಾತಾವರಣದ ಆದ್ಯತೆಯಿದೆ. ಮೂಲತಃ ಉಷ್ಣ ವಲಯದ ಬೆಳೆಗಳು ಹೆಚ್ಚಿನ ತಾಪಮಾನ, ಆರ್ದ್ರತೆ ಬಯಸಿದರೆ ಮೂಲತಃ ಶೀತಲ ವಾತಾವರಣದ ಬೆಳೆಗಳು ತಂಪು, ಒಣ ಹವೆಯನ್ನು ಬಯಸುತ್ತವೆ. ಹಾಗಾಗಿ ಬೀಜ ಕೊಳ್ಳುವ ಮುನ್ನ ಆಯಾ ಕಾಲಕ್ಕೆ ತಕ್ಕಂತಹ ಬೆಳೆಗಳನ್ನು ಆಯ್ದುಕೊಂಡರೆ ಒಳಿತು. ಬೇಸಿಗೆಗೆ: ಟೊಮ್ಯಾಟೋ, ಬದನೆ, ಮೆಣಸು, ಮೂಲಂಗಿ, ಸೌತೆ, ಕುಂಬಳ, ಬೆಂಡೆ ಇತ್ಯಾದಿ. ಬೇಸಿಗೆ ಇವುಗಳ ಆದ್ಯತೆಯಾದರೂ ವರ್ಷಪೂರ್ತಿ ಬೆಳೆಯಬಲ್ಲ ಸುಲಭ ಬೆಳೆಗಳು. ಇನ್ನು ಮೆಂತೆ, ಕೊತ್ತಂಬರಿ, ...