ನೀಲಿ ಎಂಬ ನಿಗೂಢದ ಹಿಂದೆ
ಕಲರ್ ಕಲರ್ ವಾಟ್ ಕಲರ್ ಡು ಯು ವಿಶ್? ನಾವೆಲ್ಲ ಚಿಕ್ಕವರಿದ್ದಾಗ ಆಡ್ತಾ ಇದ್ದ ಆಟ ಇದು. 'ಔಟ್' ಆದ ಒಬ್ಬ ಆಟಗಾರನಿಗೆ ಎಲ್ಲರೂ ಕೂಗಿ ಈ ಪ್ರಶ್ನೆ ಕೇಳೋದು, ಆತ ತನಗನ್ನಿಸಿದ ಬಣ್ಣ ಆಯ್ಕೆ ಮಾಡೋದು, ಬಾಕಿ ಆಟಗಾರರೆಲ್ಲ ಪಟ್ಟನೆ ಓಡಿ ಅದೇ ಬಣ್ಣದ ಯಾವುದಾದರೊಂದು ವಸ್ತುವನ್ನು ಮುಟ್ಟಿ ನಿಲ್ಲೋದು. ಬಣ್ಣದ ಹೆಸರು ಕೇಳಿದ್ದೇ ನಾನು ಓಡುತ್ತಿದ್ದದ್ದು ಅಮ್ಮನ ಹೂದೋಟಕ್ಕೆ; ಹಸಿರು, ಕೆಂಪು, ಹಳದಿ, ಕೇಸರಿ, ಗುಲಾಬಿ, ಬಿಳಿ ಹೀಗೆ ಬಹುತೇಕ ಬಣ್ಣಗಳು ಅಲ್ಲಿ ಸುಲಭವಾಗಿ ಸಿಕ್ಕಿ ಬಿಡುತ್ತಿದ್ದವು. ನೀಲಿ, ನೇರಳೆಯ ಸವಾಲು ಬಂದಾಗ ಈ ಪ್ಲಾನ್ ಫ್ಲಾಪ್! ಈಗ ನಿಮ್ಮನ್ನೇ ಕೇಳಿಕೊಳ್ಳಿ; ನೀಲಿ ಬಣ್ಣದ ಹೂಗಳನ್ನು ಪಟ್ಟಿ ಮಾಡಿ ಎಂದರೆ ಶಂಖಪುಷ್ಪ, ಕುರಂಜಿ, ಹೈಡ್ರಾಂಜಿಯಾ, ಪ್ಯಾನ್ಸಿ, ಪೆಟುನಿಯಾ, ಎನ್ನುತ್ತಾ ಗರಿಷ್ಟ ಎಷ್ಟು ಸಸ್ಯಗಳನ್ನು ಹೆಸರಿಸಬಲ್ಲಿರಿ? ಹತ್ತು? ಹದಿನೈದು? ಕಷ್ಟ ಅಲ್ಲವೇ! ಅದೇ ಕೆಂಪು ಬಣ್ಣವಾದರೆ? ಮುಖ ಮೇಲೆತ್ತಿ ನೋಡಿದರೆ ಆಕಾಶ ನೀಲಿ, ಕಂಡಷ್ಟೂ ಮುಗಿಯದ ಸಮುದ್ರ ನೀಲಿ, ರಾತ್ರಿ ಮಿನುಗುವ ನಕ್ಷತ್ರ ನೀಲಿ ಹೀಗೆ ಪರಿಸರದಲ್ಲಿ ನೀಲಿ ಸಾಮಾನ್ಯವೆನೋ ಅನ್ನಿಸಬಹುದು. ಆದರೆ ಸಸ್ಯ-ಪ್ರಾಣಿ ಸಂಕುಲ, ಜೈವಿಕ ವಸ್ತುಗಳನ್ನು ಗಮನಿಸಿದರೆ ನೀಲಿ ದುರ್ಲಭವೇ. ಬೆರಳೆಣಿಕೆಯಷ್ಟು ಪ್ರಾಣಿಗಳಲ್ಲಿ, ಹತ್ತರಲ್ಲೊಂದು ಸಸ್ಯದಲ್ಲಿ ನೀಲಿ ಬಣ್ಣ ಕಾಣಸಿಗಬಹುದು. ನಮ್ಮೆಲ್ಲರ 'ಫೆವರೆಟ್' ...