ಲಕ್ಕಿ ಬಾಂಬೂ
'ಡ್ರೆಸಿನಾ ಸಾಂಡೇರಿಯಾನಾ', ಹೀಗೆಂದಾಗ ಒಮ್ಮೆಲೆಗೆ ನಮ್ಮ ಮನಸ್ಸು ಚಲಿಸುವುದು ಕಷ್ಟಪಟ್ಟು ಸಸ್ಯಶಾಸ್ತ್ರೀಯ ಹೆಸರುಗಳನ್ನು ಉರು ಹೊಡೆಯುತ್ತಿದ್ದ ಕಾಲೇಜಿನ ಜೀವಶಾಸ್ತ್ರದ ತರಗತಿಗೆ. ಚಿರಪರಿಚಿತವಾದ ಈ ಸಸ್ಯವನ್ನು ನಾವೆಲ್ಲರೂ ನೋಡಿರುತ್ತೇವೆ, ಕೊಂಡಿರುತ್ತೇವೆ. ಈಗೊಂದು ದಶಕದ ಹಿಂದಂತೂ ಪ್ರತಿ ಕಚೇರಿ, ಮನೆಗಳಲ್ಲಿ ಅದೃಷ್ಟದ ಸಂಕೇತವಾಗಿ ಈ ಸಸ್ಯ ನೆಲೆಯಾಗಿತ್ತು. ಈಗಲೂ ಇದು ಒಳಾಂಗಣ ಸಸ್ಯ ಪ್ರೇಮಿಗಳ ನಂ.1 ಆಯ್ಕೆ. ಸದಾ ಹಸಿರನ್ನು ಹೊಂದಿರುವ, ಒಳಾಂಗಣದ ನೆರಳನ್ನು ಪ್ರೀತಿಸುವ ಈ ಸಸ್ಯವೇ ಲಕ್ಕಿ ಬಾಂಬೂ. ಲಕ್ಕಿ ಬಾಂಬೂ ಬಿದಿರಲ್ಲ, ಬಿದಿರಿಗೂ ಇದಕ್ಕೂ ಕೌಟುಂಬಿಕವಾಗಿ ತೀರಾ ದೂರದ ಸಂಬಂಧ ಎಂದರೆ ಆಶ್ಚರ್ಯವೆನಿಸಬಹುದು. ಆದರೆ ನಿಜಕ್ಕೂ ಲಕ್ಕಿ ಬಾಂಬೂಗಳು ಸೇರುವುದು 'ಡ್ರೆಸಿನಾ'ಗಳ ಕುಟುಂಬಕ್ಕೆ. ಬಿದಿರು ಮತ್ತು ಡ್ರೆಸಿನಾಗಳು ಏಕದಳ ಸಸ್ಯಗಳೆಂಬುದೊಂದೇ ಎರಡರ ನಡುವಿನ ಸಾಮ್ಯತೆ. ಸಾಂಡರ್ ಎಂಬ ವಿಜ್ಞಾನಿಯ ಕೊಡುಗೆಯಿಂದ 'ಸಾಂಡೇರಿಯಾನಾ' ಆದ ಈ ಡ್ರೆಸಿನಾ, ಚೀನಾದ 'ಫೆಂಗ್ ಶೂಯಿ' ಸಂಪ್ರದಾಯದ ಪ್ರಕಾರ 'ಲಕ್ಕಿ'ಯೆಂದು ಕರೆಯಲ್ಪಟ್ಟಿತು, ಬಿದಿರನ್ನೇ ಹೋಲುವ ಕಾರಣ 'ಬಾಂಬೂ' ಎನಿಸಿಕೊಂಡಿತು. ಆಫ್ರಿಕಾದಲ್ಲಿ ಹುಟ್ಟಿದ್ದರೂ ಗಾಳಿ ಶುದ್ಧೀಕರಿಸುವ, ಸಂಪತ್ತನ್ನು ಆಹ್ವಾನಿಸುವ ವಾಸ್ತು ಗಿಡ ಎಂಬ ಮಾರುಕಟ್ಟೆಯ ತಂತ್ರದೊಡನೆ ಭಾರತಕ್ಕೂ ಪರಿಚಯವಾಯಿತು. ಬಣ್ಣದ ಕಲ್ಲುಗಳಿಂದ ತುಂಬಿದ ಗಾಜಿನ ...