ಪ್ರಿಸರ್ವಡ್ ಮೋಸ್
ಮಣ್ಣು, ನೀರು, ಗಾಳಿ, ಬೆಳಕು, ಗಿಡ-ಮರದಂತಹ ಪ್ರಾಕೃತಿಕ ಅಂಶಗಳಿಂದ ಯಾವಾಗಲೂ ಸುತ್ತವರಿದಿರಬೇಕೆಂಬುದು ನಮ್ಮ ಬಯಕೆ. ಹಳ್ಳಿ ಜೀವನದಲ್ಲಿ ಇವೆಲ್ಲವೂ ಸಹಜಲಭ್ಯ. ಪಟ್ಟಣಗಳಲ್ಲಿ ವಿದ್ಯುತ್ ದೀಪ, ಹವಾನಿಯಂತ್ರತೆ, ನೀರಿನ ಕಾರಂಜಿ, ಮರದ ಪೀಠೋಪಕರಣಗಳು, ಹೀಗೆ ಕೃತಕವಾದರೂ ಸರಿ, ಒಂದಿಲ್ಲೊಂದು ರೀತಿಯಲ್ಲಿ ನಿಸರ್ಗದ ಅಂಶಗಳನ್ನು ಒಳಾಂಗಣದಲ್ಲಿ ಅಳವಡಿಸಿಕೊಳ್ಳುವುದನ್ನು ನಾವು ಕಲಿತಿದ್ದೇವೆ. ಪ್ರಾಕೃತಿಕವಾದುದ್ದೇ ಬೇಕೆಂಬ ಹಟ ಬಹುಶಃ ಒಳಾಂಗಣ ಸಸ್ಯಗಳ ಬಳಕೆಯನ್ನು ಮುಂಚೂಣಿಗೆ ತಂದಿರಬೇಕು. ಎಷ್ಟೇ ಇಷ್ಟವಾದರೂ ಒಳಾಂಗಣದಲ್ಲಿ ಸಸ್ಯಗಳನ್ನು ಸಲಹುವುದು ಎಲ್ಲಾ ಸಂದರ್ಭದಲ್ಲೂ ಕಷ್ಟ. ಹೂಕುಂಡಗಳನ್ನಿಡಲು ಜಾಗ, ನೀರು-ಬೆಳಕಿನ ಕನಿಷ್ಟ ನಿರ್ವಹಣೆಯಾದರೂ ಅಗತ್ಯವಿರುವ ಸಲುವಾಗಿ ಹೆಚ್ಚಿನ ಬಾರಿ ಸಸ್ಯ ಪಾಲನೆಗೆ ಹಿಂದೇಟು ಹಾಕುತ್ತಿರುತ್ತೇವೆ. ಮತ್ತು ಪರ್ಯಾಯಗಳನ್ನು ಹುಡುಕುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಗೋಡೆಗಳಿಗೆ ಹೊಸ ಆಯಾಮ ನೀಡಿ, ಶೂನ್ಯ ಕಾಳಜಿಯಲ್ಲಿ ಹಸಿರನ್ನು ಹೊಂದುವ ಆಲೋಚನೆಯನ್ನು ಪ್ರೋತ್ಸಾಹಿಸುವುದು ಹಾವಸೆಗಳ ‘ಮೋಸ್ ಫ್ರೇಮ್’. ಹಾವಸೆಗಳ ಹಾಸು ತೇವವಾದ ಕಾಂಪೌಂಡ್ ಗೋಡೆಯ ಮೇಲೆ ಬೆಳೆಯುವ, ಮಳೆಕಾಡುಗಳಲ್ಲಿ ಮರದ ಮೇಲೆ ಹಬ್ಬುವ ವಿವಿಧ ಜಾತಿಯ ಹಾವಸೆಗಳನ್ನು ನೋಡಿರುತ್ತೀರಾ. ‘ಪಿನ್ ಕುಷನ್’ ‘ಸ್ಪಾಗ್ನಮ್’ ಮುಂತಾದ ಜಾತಿಯ ಈ ಪಾಚಿಗಳನ್ನು‘ಕೊಕೆಡಾಮಾ’, ‘ಟೆರೇರಿಯಮ್’ಗಳಲ್ಲೂ ಬಳಸಿರುತ್ತೀರಾ. ಯುಟ್ಯೂಬ್ ವೀಡಿಯೋ ನೋಡಿ ಮರದ ಚೂರು, ಕಲ್ಲು...