ತೂಗು ಗಿಡಗಳ ಜೋಗುಳ
ಗೋಡೆಗಂಟಿಸಿದ ನಲವತ್ತಿಂಚಿನ ಟಿವಿ; ಅಕ್ಕ ಪಕ್ಕ ಶೋ ಕೇಸ್; ಮುಂದೊಂದು ಸೋಫಾ; ಪತ್ರಿಕೆ-ಪುಸ್ತಕ ಜೋಡಿಸಿಟ್ಟ ಟೇಬಲ್; ಒಂದೆರಡು ಕುರ್ಚಿ; ಹರಗಣವನ್ನೆಲ್ಲಾ ಬಚ್ಚಿಡಲೊಂದು ಕಪಾಟು. ಇಂತಹ ನೀರಸ ‘ಲಿವಿಂಗ್ ರೂಮ್’ಗೆ ಜೀವ ತುಂಬುವ ಒಳಾಂಗಣ ಸಸ್ಯಗಳು ಇವತ್ತಿನ ಪೇಟೆ ಮಂದಿಯ ಹೊಸ ಗೀಳು. ಮನೆಯೊಳಕ್ಕೆ ಸಸ್ಯಸಂಪತ್ತನ್ನು ಬರಮಾಡಿಕೊಂಡು ಅವುಗಳ ಆರೈಕೆಯಲ್ಲಿ ಖುಷಿ ಕಾಣುತ್ತಿರುವ ನಗರವಾಸಿಗಳು ಇಂದು ಹಲವಾರು. ನರ್ಸರಿಗೆ ಹೋದಾಗಲೆಲ್ಲಾ ಹೊಸ ಗಿಡ ಕೊಳ್ಳುವ ಆಸೆ ಅವರದು. ಆದರೇನು! ಜಾಗದ್ದೇ ಸಮಸ್ಯೆ. ಈ ಹಿನ್ನೆಲೆಯಲ್ಲಿ ‘ಹ್ಯಾಂಗಿಂಗ್ಸ್’ಗಳ ಟ್ರೆಂಡ್ ಹಸಿರು ಮನಸ್ಸುಗಳನ್ನು ಆಕರ್ಷಿ ಸುತ್ತಿದೆ. ಮನೆಯ ಸೀಲಿಂಗ್ ಗಾರ್ಡನ್ ಆದಾಗ ಯಾವುದೇ ಇಂಜಿನಿಯರ್ ಆಗಿರಲಿ, ಮನೆ ಕಟ್ಟುವಾಗ ಮೇಲ್ಛಾವಣಿಗೆ ‘ಹುಕ್’ಗಳನ್ನು ನಿರ್ಮಿಸಿಯೇ ಇರುತ್ತಾರೆ. ಅವುಗಳನ್ನು ವಿಭಿನ್ನ ರೀತಿಯಲ್ಲಿ ಬಳಸುವ, ‘ಝೂಮರ್’ ದೀಪಗಳನ್ನು ಸಸ್ಯಗಳಿಂದ ಬದಲಿಸುವ ಸುಸಮಯವಿದು. ಮನೆಯ ಹಜಾರ, ಬಾಲ್ಕನಿಯ ಛಾವಣಿಗಿರುವ ಕೊಕ್ಕೆ-ಕೊಂಡಿಗಳಿಗೆಲ್ಲಾ ಹ್ಯಾಂಗಿಂಗ್ ಪ್ಲಾಂಟ್ ಗಳನ್ನು ಸಿಕ್ಕಿಸಿ, ಇಳಿಯುವ ತರುಲತೆಗಳ ಸೌಂದರ್ಯವನ್ನು ಅನುಭವಿಸುವ ಸಂದರ್ಭವಿದು. ಕ್ರಿಯಾಶೀಲತೆಯ ಅನುಸಾರವಾಗಿ ಕರ್ಟನ್ ರಾಡ್ ಗಳು, ಬಟ್ಟೆಯ ನ್ಯಾಲೆಗಳು ಕೂಡಾ ಹ್ಯಾಂಗಿಂಗ್ ಪಾಟ್ ಗಳ ನೆಚ್ಚಿನ ನೆಲೆಯಾಗಬಹುದು. ಹುಕ್ ಗಳಿಲ್ಲದಿದ್ದರೂ ಪರವಾಗಿಲ್ಲ, ಗೋಡೆಯಿಂದ ಮುಂದೆ ಚಾಚಿದ ಕಬ್ಬಿಣದ ಸ್ಟಾಂಡ್ ಗಳ ಮೂಲಕ ಹ್ಯಾಂಗಿಂಗ್...