ಕುಲಾಂತರಿಗಳು
ಸೆಪ್ಟೆಂಬರ್ ತಿಂಗಳಿನ ಶುರುವಿನಲ್ಲಿ ಅಮೇರಿಕಾ ಹೊಸದೊಂದು ಕುಲಾಂತರಿ ತಳಿಯ ಟೊಮೇಟೊವನ್ನು ಬಳಕೆಗೆ ಅನುಮೋದಿಸುವುದರ ಮೂಲಕ ಜಗತ್ತಿನ ಗಮನ ಸೆಳೆದಿತ್ತು. ಭಾರತವೂ ಕೆಲ ದಿನಗಳ ಹಿಂದಷ್ಟೇ ಸ್ವದೇಶಿ ಕುಲಾಂತರಿ ಸಾಸಿವೆಯನ್ನು ಅನುಮೋದಿಸಿ ಬೆಳೆಯಲು ಅನುಮತಿ ನೀಡಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಬಹುಶಃ ಮುಂದಿನ ವರ್ಷದಿಂದ ಅಮೇರಿಕಾದ ಅಂಗಡಿಗಳಲ್ಲಿ ಈ ನೇರಳೆ ಟೊಮೇಟೊ ಖರೀದಿಗೆ ಲಭ್ಯವಿರುತ್ತದೆ, ಮತ್ತು ಭಾರತದಲ್ಲಿ ರೈತ ವರ್ಗಕ್ಕೆ ಧಾರಾ ಸಾಸಿವೆ ಪರಿಚಯಾವಾಗಿರುತ್ತದೆ. ಆದರೆ ಎಂದಿನಂತೆ ಸಾಮಾಜಿಕ ವಲಯದಲ್ಲಿ ಕುಲಾಂತರಿಗೆ ವಿರೋಧ ಶುರುವಾಗಿದೆ. ಸ್ವಾಭಾವಿಕವಾಗಿ ಹರಿದುಬಂದ ಜೀನ್ ಗಳಲ್ಲಿ ಕೃತಕವಾಗಿ ಬದಲಾವಣೆ ತರುವ ‘ಜೆನೇಟಿಕ್ ಎಂಜಿನಿಯರಿಂಗ್’ ತಂತ್ರಜ್ಞಾನದ ಮೂಲಕ ಬೇರೊಂದು ಜೀವಿಯ ಜೀನ್ ಗಳನ್ನು ಅಳವಡಿಸಿದ ಸಸ್ಯಗಳನ್ನು ಕುಲಾಂತರಿ ಬೆಳೆಗಳೆಂದು ಕರೆಯಲಾಗುತ್ತದೆ. ಪೀಳಿಗೆಯಿಂದ ಪೀಳಿಗೆಗೆ ನಮಗೆ ಬೇಕಾದ ಗುಣಲಕ್ಷಣಗಳನ್ನು ಆರಿಸುತ್ತಾ ಸಾಂಪ್ರದಾಯಿಕವಾಗಿ ತಳಿ ಅಭಿವೃದ್ದಿ ಮಾಡಲು ಬೇಕಾಗಿರುವುದು ಕನಿಷ್ಟ 15-20 ವರ್ಷಗಳ ಪರಿಶ್ರಮ. ಈ ಅವಧಿಯನ್ನು ಕಡಿತಗೊಳಿಸಲು ವಿಜ್ಞಾನಿಗಳು ಕಂಡುಕೊಂಡ ಪರ್ಯಾಯ ಹಾದಿ ಜೀನ್ ಎಂಜಿನಿಯರಿಂಗ್. ಈ ವಿಧಾನದಿಂದ ಹೊಸ ತಳಿಯೊಂದನ್ನು ಪಡೆಯಲು ಬೇಕಾಗಿರುವುದು ಐದಾರು ವರ್ಷಗಳಾದರೂ ಅಡೆತಡೆ ದಾಟಿ ಅವು ರಂಗಕ್ಕೆ ಇಳಿಯಬೇಕಾದರೆ ಇಪ್ಪತ್ತು-ಮೂವತ್ತು ವಷ ಬೇಕಾಗುವುದು ವಾಸ್ತವ. ಕುಲಾಂತರಿಗಳು ಏಕೆ?...