ಗಿಡಗಳಿರಲವ್ವ ಮನೆ ತುಂಬ - ಒಳಾಂಗಣ ಸಸ್ಯಗಳ ಬಗ್ಗೆ
ಕಾಡಿನ ಪ್ರಾಣಿ-ಪಕ್ಷಿಗಳನ್ನು ನಾಡಿಗೆ ತಂದು, ಪಳಗಿಸಿ, ಸಾಕಿ-ಬೆಳೆಸಿ, ಅವುಗಳೊಂದಿಗೆ ಭಾವನಾತ್ಮಕ ಬಂಧ ಬೆಳೆಸುವುದು ಮಾನವನಿಗೆ ಹೊಸದಲ್ಲ. ಯುಗ-ಯುಗಗಳಿಂದ ಮೂಲತಃ ನಮಗೆ ಸೇರದ ಎಷ್ಟೋ ಇಂತಹ ವಸ್ತು-ವಿಷಯಗಳನ್ನು ನಮ್ಮದಾಗಿಸಿದ ಹೊಣೆ ನಮ್ಮ ಪೂರ್ವಿಕರದ್ದು. ಬಹುಶಃ ಇಂತದ್ದೆ ಹಾದಿಯಲ್ಲೆಲ್ಲೋ ಶುರುವಾದದ್ದು ಒಳಾಂಗಣ ಸಸ್ಯಗಳನ್ನು ಪಾಲಿಸಿ ಪೋಷಿಸುವ ‘ಇಂಡೋರ್ ಗಾರ್ಡನಿಂಗ್’ನ ಹವ್ಯಾಸ. ಇತಿಹಾಸದಲ್ಲಿ ಈ ಹವ್ಯಾಸದ ಆರಂಭವನ್ನು ಕರಾರುವಕ್ಕಾಗಿ ಗುರುತಿಸಲಾಗದಿದ್ದರೂ ಕೆಲವೊಂದು ಘಟನೆಗಳನ್ನು ಉಲ್ಲೇಖಿಸಲಾಗುತ್ತದೆ. ಸುಂದರ ಕೆತ್ತನೆಗಳ ಟೆರಾಕೋಟಾ, ಅಮೃತ ಶಿಲೆ, ಪಿಂಗಾಣಿಯ ಹೂಕುಂಡಗಳಲ್ಲಿ ಹಣ್ಣಿನ ಗಿಡಗಳನ್ನು, ಅಲಂಕಾರಿಕ ಗಿಡಗಳನ್ನು ಬೆಳೆಸಿ ಅಂಗಳದಲ್ಲಿ ಒಪ್ಪಗೆ ಜೋಡಿಸುವ ಅಭ್ಯಾಸ ಪ್ರಾಚೀನ ರೋಮನ್, ಈಜಿಪ್ಟ್, ಚೀನಾಗಳಲ್ಲಿ ರೂಢಿಯಲ್ಲಿತ್ತು. ಜಪಾನಿಯನ್ನರು, ಚೀನಿಯರಲ್ಲಿ ಪ್ರಕೃತಿಯನ್ನು ಅನುಕರಿಸಿ ನಕಲಿಸುವ ಬೋನ್ಸಾಯ್, ಪೆನ್ಸಾಯ್ ಕಲೆಗಳು ಇಂದಿಗೂ ಜಗತ್ಪ್ರಸಿದ್ಧ. ನೆಬುಕನೇಜರ್ ಎಂಬ ರಾಜನೊಬ್ಬ ತನ್ನ ಪ್ರೀತಿಯ ಮಡದಿಗಾಗಿ ಬಾಬಿಲೋನ್ (ಇಂದಿನ ಇರಾಕ್)ನ ಅರಮನೆಯಲ್ಲಿ ಖರ್ಜೂರ, ದೇವದಾರು, ಹುಲ್ಲುಗಾವಲುಳ್ಳ ತೇಲುವ ಉದ್ಯಾನವನ್ನು ನಿರ್ಮಿಸಿಸಿದ್ದನಂತೆ. ಅಂದು-ಇಂದು ಈ ಮೈಲಿಗಲ್ಲುಗಳಲ್ಲಿ ಮಹತ್ತರವಾದದ್ದು ಹೊಸ ದೇಶ-ಭೂಭಾಗಗಳ ಅನ್ವೇಷಣೆ, ಹೊಸ ಸಸ್ಯ ಸಂಪತ್ತಿನ ಪರಿಚಯ, ತಳಿಗಳ ಸಂಕರಣೆ ಮತ್ತು ಉದ್ಯಾನವನಗಳಲ್ಲಿ ತಳಿಗಳ ಪ್ರದರ್ಶನ...