ಅಸಾಧ್ಯ ಪರಿಸರದಲ್ಲಿ ಅಪರೂಪದ ಕೃಷಿ ಪ್ರಯೋಗ, ಭಾಗ ಒಂದು
ನಮ್ಮ ಮನೆ, ತೋಟವಿರುವುದು ಉತ್ತರ ಕನ್ನಡ ಜಿಲ್ಲೆಯ ಹಳ್ಳಿಯಲ್ಲಿ. ಮಲೆನಾಡಿನ ಬಹುತೇಕ ಹಳ್ಳಿಗಳಂತೆ ನಮ್ಮೂರಲ್ಲಿ ನಮ್ಮದು ಬಿಟ್ಟರೆ ಇರುವುದು ಇನ್ನೆರಡೇ ಮನೆ; ತೋಟದ ಗಡಿಯಾಚೆ ಕಾಡು. ನಮ್ಮ ತೋಟಕ್ಕೆ ಭೇಟಿಮಾಡುವ ಎಲ್ಲರೂ ಕೇಳುವ ಮೊದಲ ಪ್ರಶ್ನೆ ಇಲ್ಲಿ ಪ್ರಾಣಿಗಳ ಕಾಟವಿಲ್ಲವೇ? ಯಾಕಿಲ್ಲ; ಮಂಗ, ಮಿಕ, ನವಿಲು, ಹಂದಿ, ಕೆಂಪಳಿಲು, ಮುಳ್ಳಂದಿ ಮತ್ತೂ ಬೇಕೇ… “ಬೆಟ್ಟದಾ ಮೇಲೊಂದು ಮನೆಯ ಮಾಡಿ ಮೃಗಗಳಿಗಂಜಿದೊಡೆಂತಯ್ಯ!” ಎನ್ನುವುದು ನಮ್ಮ ಉತ್ತರ. ಮಳೆಗಾಲಕ್ಕೆ ನೆಂಟರ ಮನೆಗೆ ಹೋದರೆ ಸಾಕು, ಸುದ್ದಿ ಶುರುವಾಗುವುದೇ “ಭಾವಾ, ನಿಮ್ಮಲ್ಲಿ ಕೊಳೆ ಹೆಂಗಿದ್ದೋ” ಅನ್ನುವಲ್ಲಿ. ಮಲೆನಾಡ ಮಳೆ ಕೊಳೆಗೆ ಅಂಜಿ ತೋಟ ಮಾಡುವುದು ಬಿಟ್ಟೀರೇ ಆದೀತೆ! ತೋಟದಲ್ಲಿ ಲುಕ್ಸಾನಾದಾಗೆಲ್ಲಾ “ಅಂಥಾ ನೀರಿಲ್ಲದ ಮರುಭೂಮಿಯಲ್ಲಿ, ಮುಗಿಲು ತೂತಾದಂತೆ ಮಳೆ ಸುರಿವ ಈಶಾನ್ಯ ಭಾರತದಲ್ಲಿ, ಕೊರೆವ ತಂಪಿನ ಹಿಮಾಲಯದ ತಪ್ಪಲಲ್ಲಿ ಬೆಳೆ ಬೆಳೆಯುವರಂತೆ, ನಮ್ಮದೆಂತ” ಎಂದು ಎಷ್ಟೋ ಬಾರಿ ನಮಗೆ ನಾವೇ ಸಮಧಾನ ಹೇಳಿಕೊಂಡಿದ್ದಿದೆ. ವಾತಾವರಣದ ಗಂಭೀರ ಪರಿಸ್ಥಿತಿಯಲ್ಲೂ ಬೆಳೆ ಬೆಳೆವ ಕೆಲವು ಪ್ರದೇಶದ ಜನರ ಕೃಷಿ ನೋಡುವಂತದ್ದು, ಕನಿಷ್ಟ ಓದಿ ತಿಳಿವಂತದ್ದು. ನವಯುಗದ ರೈತರು ತಾಂತ್ರಿಕವಾಗಿಯೂ, ಮಾನಸಿಕವಾಗಿಯೂ ಇದರಿಂದ ಕಲಿಯುವುದೂ ಬಹಳಷ್ಟಿದೆ. ಪ್ರಾಕೃತಿಕ ಸವಾಲುಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ಕೈಗೊಳ್ಳುತ್ತಿರುವ ಅಂತಹ ಕೆಲವು ಕೃಷಿ ಪ್ರಯೋಗಗಳ ಬಗೆಗೊಂದು ಮಾಹಿತಿಭ...