ಸ್ಪೇಸ್ ಫಾರ್ಮಿಂಗ್, ಬಾಹ್ಯಕಾಶದಲ್ಲಿ ಕೃಷಿ ಪ್ರಯೋಗ
ಬಾಹ್ಯಾಕಾಶವೆಂದರೆ ಯಾರಿಗೆ ಕುತೂಹಲವಿಲ್ಲ! ನಮ್ಮ ಕಣ್ಣಿಗೆ ಕಾಣದ, ಕೈಗೆ ಸಿಗದ ಈ ಲೋಕವೇ ರೋಚಕ. ಶುಭಾಂಶು ಶುಕ್ಲಾ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತೀಯರ ಪ್ರತಿನಿಧಿಯಾಗಿ ಗಗನಯಾತ್ರೆ ಗೈದು ವಾಪಾಸಾದ ಮೇಲಂತೂ ಈ ಶಬ್ಧ ಕೇಳಿದರೇ ರೋಮಾಂಚನವೆನಿಸುತ್ತದೆ. ಶುಭಾಂಶು ಅವರ ಗಗನಯಾತ್ರೆಯಷ್ಟೇ ಹೆಮ್ಮೆ ಎನಿಸಿದ್ದು ನಮ್ಮ ಧಾರವಾಡ ಕೃಷಿ ವಿ.ವಿ.ಯ ಮೆಂತೆ ಮತ್ತು ಹೆಸರುಕಾಳು ಬೀಜಗಳು ಬಾಹ್ಯಾಕಾಶ ಮುಟ್ಟಿ ಮೊಳಕೆಯೊಡೆದು ಬಂದದ್ದು. ʼಬಾಹ್ಯಾಕಾಶ ಕೃಷಿʼ ಅಥವಾ ʼಸ್ಪೇಸ್ ಫಾರ್ಮಿಂಗ್ʼನ ಕಲ್ಪನೆ ಹೊಸತಲ್ಲ. ಮೊದಲೇ ಸೈನ್ಸ್ ಫಿಕ್ಷನ್‌ಗಳು (ವಿಜ್ಞಾನದ ಕಪೋಲಕಲ್ಪಿತ ಕತೆಗಳು) ನಿಜವಾಗುವ ಕಾಲಘಟ್ಟವಿದು. ನಾವು ನೀವು ಸ್ಪೇಸಿಗೆ ಹೋಗದೇ ಇದ್ದರೂ ಸೈ, ಕೃಷಿಗೆ ಮಹತ್ತರವಾದ ಕೊಡುಗೆ ನೀಡುವ ಸಂಶೋಧನೆಗಳ ಬಗ್ಗೆ ಇಲ್ಲಿಯೇ ಕುಳಿತು ತಿಳಿಯುವುದರಲ್ಲಿ ತಪ್ಪೇನಿದೆ! ಈ ಹಿನ್ನೆಲೆಯಲ್ಲೊಂದು ಮಾಹಿತಿ ಭರಿತ ರಂಜನೀಯ ಲೇಖನ. ಬರವಣಿಗೆಯ ಜೊತೆಗೆ ಆಗಾಗ ಸಿನೆಮಾಗಳನ್ನು ನೋಡುವುದು ನನ್ನ ಹವ್ಯಾಸಗಳಲ್ಲೊಂದು. ಇತ್ತೀಚೆಗೆ ʼಮಾರ್ಶಿಯನ್ʼ ಎನ್ನುವ ಸಿನೆಮಾ ನೋಡುತ್ತಿರುವಾಗ ಕೃಷಿ ಹಿನ್ನೆಲೆಯಲ್ಲಿ ಇದರ ಕಥಾವಸ್ತು ತುಂಬಾ ಗಮನ ಸೆಳೆಯಿತು. ಗಗನಯಾತ್ರಿಗಳ ತಂಡವೊಂದು ಮಂಗಳ ಗ್ರಹದ ಅಧ್ಯಯನಕ್ಕೆಂದು ಯಾತ್ರೆ ಕೈಗೊಳ್ಳುತ್ತದೆ. ಅಲ್ಲಿ ತಂಗಿ ಅರ್ಧ ಸಮಯವಾಗಿರಬಹುದು, ʼಮಾರ್ಕ್ ವ್ಯಾಟ್ನಿʼ ಎಂಬ ಸಸ್ಯಶಾಸ್ತ್ರಜ್ಞ ಬಿರುಗಾಳಿಗೆ ಸಿಕ್ಕು ತಂಡದಿಂದ ದೂರ...