ಸಸ್ಯಕ್ಕೂ ಬೇಕು, ನಮಗೂ ಬೇಕು, ಆಂಟಿ ಆಕ್ಸಿಡಂಟ್ಸ್
ʼಆಂಟಿಆಕ್ಸಿಡೆಂಟ್ʼ ಹೀಗೊಂದು ಶಬ್ಧವನ್ನು ಕೇಳದವರಾರು! ಆಹಾರ ಪೊಟ್ಟಣಗಳ ಮೇಲೆ ಕಡ್ಡಾಯವೆಂಬಂತೆ ಕಂಗೊಳಿಸುವ ಈ ವರ್ಣರಂಜಿತ ಪದವನ್ನು ಕಾಣದವರಾರು!! ನಮ್ಮ ಉತ್ಪನ್ನ ʼರಿಚ್ ಇನ್ ಆಂಟಿಆಕ್ಸಿಡೆಂಟ್ʼ ಎಂಬ ವಿವಿಧ ಕಂಪನಿಯ ಮೋಹಕ ಜಾಹೀರಾತುಗಳಿಗೆ ಮರುಳಾಗದವರಾರು!!! ನಿಜಕ್ಕೂ ಆಂಟಿಆಕ್ಸಿಡೆಂಟ್ಸ್‌ಗಳೆಂದರೇನು, ಸಸ್ಯಗಳಿಗೂ ಆಹಾರಕ್ಕೂ ಆರೋಗ್ಯಕ್ಕೂ ಅವುಗಳ ಸಂಬಂಧವೇನು, ಸತ್ಯ ಮಿಥ್ಯವೇನು ಎಂದು ಚರ್ಚಿಸುವುದು ಈ ಲೇಖನದ ಉದ್ದೇಶ. ಉತ್ಕರ್ಷಣೆ ʼಉತ್ಕರ್ಷಣೆʼ ಅಥವಾ ʼಆಕ್ಸಿಡೇಶನ್ʼ ಎಂಬೊಂದು ಕ್ರಿಯೆಯ ಬಗ್ಗೆ ನಾವೆಲ್ಲರೂ ಹೈಸ್ಕೂಲ್‌ನಲ್ಲಿಯೇ ಓದಿರುತ್ತೇವೆ. ಓದಿ ಬಿಟ್ಟಿರುತ್ತೇವೆ ಎಂದರೆ ಸರಿಯೇನೋ. ಆಗ ಉರು ಹೊಡೆದಿದ್ದ ವಿಜ್ಞಾನದ ಪಾಠವನ್ನು ಈಗ ಸ್ವಲ್ಪ ಝಾಡಿಸೋಣ. ಉತ್ಕರ್ಷಣ ಎನ್ನುವುದು ಯಾವುದೇ ವಸ್ತು ಆಮ್ಲಜನಕದೊಂದಿಗೆ ಕೂಡಿದಾಗ ನಡೆಯುವ ಒಂದು ವಿಧದ ರಾಸಾಯನಿಕ ಕ್ರಿಯೆ. ಅಂದರೆ ಅಣು-ಕಣಗಳ ಕೊಟ್ಟು ತೆಗೆದುಕೊಳ್ಳುವಿಕೆ; ಪರಿಣಾಮ ಮೂಲ ವಸ್ತುವಿನ ಭೌತಿಕ ಅಥವಾ ರಾಸಾಯನಿಕ ರೂಪದಲ್ಲಿ ಬದಲಾವಣೆ ಉಂಟಾಗುವುದು. ಅದೇ ಹೈಸ್ಕೂಲಿನ ಉದಾಹರಣೆ ಕೊಡುವುದಾದರೆ ಆಮ್ಲಜನಕದೊಂದಿಗೆ ಕೂಡಿದಾಗ ಕಬ್ಬಿಣ ತುಕ್ಕಾಗಿ ಬದಲಾಗುವುದು. ಸಸ್ಯ ಪ್ರಾಣಿ ಜೀವಿಗಳ ಶರೀರದೊಳಗೆ ನಡೆಯುವ ಉಸಿರಾಟ, ಜೀರ್ಣಕ್ರಿಯೆ, ದ್ಯುತಿಸಂಶ್ಲೇಷಣೆ ಎಲ್ಲವೂ ಉತ್ಕರ್ಷಣೆಯ ಕ್ರಿಯೆಯನ್ನು ಒಳಗೊಂಡಿರುತ್ತದೆ. ಇಲ್ಲಿ ಹೆಚ್ಚಿನ ಆಸ್ಥೆಯಿರುವುದು ಉತ್ಕರ್ಷಣೆಯ ಕ್ರ...