ಕೃಷಿಯಲ್ಲಿ ಸಸ್ಯ ಪ್ರಚೋದಕಗಳು ಭಾಗ 1
ಕಳೆದ ಕೆಲವು ಸಂಚಿಕೆಗಳಲ್ಲಿ ಸಸ್ಯ ಅಂಗರಚನಾಶಾಸ್ತ್ರ ಮತ್ತು ಸಸ್ಯ ಶರೀರಶಾಸ್ತ್ರದ ಬಗ್ಗೆ ವಿವರವಾಗಿ ತಿಳಿಯಲಾಗಿತ್ತು. ಮುಂದುವರೆದ ಭಾಗವಾಗಿ ಸಸ್ಯ ಪ್ರಚೋದಕಗಳ ಬಗ್ಗೆ ವಿವರವಾದ ಮಾಹಿತಿ ಈ ಸಂಚಿಕೆಯಲ್ಲಿ ಅದು 1920ರ ದಶಕ, ನೆದರಲ್ಯಾಂಡಿನ ಯುಟ್ರೆಕ್ಟ್ ವಿಶ್ವವಿದ್ಯಾಲಯದಲ್ಲಿ ಸಸ್ಯಗಳ ಬೆಳವಣಿಗೆ ಬಗ್ಗೆ ಅಧ್ಯಯನ ನಡೆಸುತ್ತಿದ್ದ ಸಂಶೋಧನಾ ವಿದ್ಯಾರ್ಥಿ ‘ವೆಂಟ್’ನ ತಲೆಯಲ್ಲಿ ಸಸ್ಯಗಳೇಕೆ ಬೆಳಕಿನ ಕಡೆಗೆ ಬಾಗುತ್ತವೆ ಎಂಬ ಪ್ರಶ್ನೆ ಕೊರೆಯುತ್ತಿತ್ತು (ಸೂರ್ಯಕಾಂತಿ ಸೂರ್ಯನೆಡೆಗೆ ಬಾಗುವಂತೆ). ಈ ರಹಸ್ಯ ಭೇದಿಸಲು ಕೈಗೊಂಡ ಸಾಲು ಸಾಲು ಪ್ರಯೋಗಗಳ ನಂತರ ವೆಂಟ್ ಗೆ ತಿಳಿದಿದ್ದು ಬೆಳಕಿನೆಡೆಗೆ ವಾಲುತ್ತಿದ್ದ ಸಸ್ಯದ ತುದಿಯಲ್ಲಿ ಶೇಖರವಾಗುತ್ತಿದ್ದ ಒಂದು ರಹಸ್ಯ ವಸ್ತುವಿನ ಬಗ್ಗೆ. 1928ರಲ್ಲಿ ವೆಂಟ್ ತನ್ನ ಸಂಶೋಧನೆಯ ಫಲಿತಾಂಶವನ್ನು ಪ್ರಕಟಿಸಿ ಈ ವಸ್ತುವನ್ನು ಗ್ರೀಕ್ ಭಾಷೆಯಲ್ಲಿ ‘ಬೆಳವಣಿಗೆ’ ಎಂಬ ಅರ್ಥ ಕೊಡುವ ‘ಆಕ್ಸಿನ್’ ಎನ್ನುದಾಗಿ ಕರೆದ. 1930ರ ದಶಕದಲ್ಲಿ ಇದೇ ಹೊತ್ತಿಗೆ ಸರಿಯಾಗಿ ಕ್ಯಾಲಿಫೋರ್ನಿಯಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕೆಲಸ ಮಾಡುತ್ತಿದ್ದ ‘ಥಿಮಾನ್’ ಆಕ್ಸಿನ್‌ಗಳನ್ನು ಸಸ್ಯದೇಹದಿಂದ ಪ್ರತ್ಯೇಕಿಸಿ ಇತರೆ ಬೆಳವಣಿಗೆ ಪ್ರಕ್ರಿಯೆ ಮೇಲೂ ಅವುಗಳ ಪಾತ್ರವನ್ನು ನಿರೂಪಿಸಿದ. ಪ್ರಾಣಿಗಳ ದೇಹದಲ್ಲಿ ಇದೇ ತರಹದ ರಾಸಾಯನಿಕಗಳ ಬಗ್ಗೆ ಅದಾಗಲೇ ಸಂಶೋಧನೆಯಾಗಿತ್ತು. ‘ಸ್ಟರ್ಲಿಂಗ್’ ಎಂಬ ವಿಜ್ಞಾನಿ ಸ...