ಹೂವು ಹಣ್ಣು ಬೀಜ ಯಾರಿಗಾಗಿ - ಸಸ್ಯ ಅಂಗರಚನಾ ಶಾಸ್ತ್ರ ಶರೀರ ಶಾಸ್ತ್ರ ಭಾಗ 3
ಸಸ್ಯ ಅಂಗರಚನಾಶಾಸ್ತ್ರದ ಪರಿಚಯದ ಪ್ರಯುಕ್ತ ಕಳೆದ ಸಂಚಿಕೆಯಲ್ಲಿ ಬೇರು, ಕಾಂಡ, ಎಲೆಯ ಬಗ್ಗೆ ವಿಸ್ತೃತವಾಗಿ ತಿಳಿಯಲಾಗಿತ್ತು. ಈ ಸಂಚಿಕೆಯಲ್ಲಿ ಮುಂದುವರೆದ ಭಾಗವಾಗಿ ಹೂವು, ಕಾಯಿ, ಹಣ್ಣು, ಬೀಜದ ಅಂಗರಚನೆಯ ಬಗ್ಗೆ ಚರ್ಚಿಸೋಣ. ಹೂ ಬಿಡುವುದು, ಪರಾಗಸ್ಪರ್ಷ, ಹೂವಿನಿಂದ ಕಾಯಿಯಾಗುವಿಕೆ, ಕಾಯಿ ಹಣ್ಣಾಗುವಿಕೆ, ಬೀಜ ರೂಪುಗೊಳ್ಳುವಿಕೆ, ಬೀಜ ಪ್ರಸರಣ, ಬೀಜ ಮೊಳಕೆಯೊಡೆದು ಸಸಿಯಾಗುವಿಕೆ, ಇತ್ಯಾದಿ ಶಾರಿರೀಕ ಕ್ರಿಯೆಯ ಬಗ್ಗೆ ಬೇರೊಂದು ಸಂಚಿಕೆಯಲ್ಲಿ ಬರೆಯಲಾಗುವುದು. ಹೂವು ಹೂವೆಂದರೆ ಸಸ್ಯದ ಸಂತಾನೋತ್ಪತ್ತಿಯ ಅಂಗ. ಸಹಜವಾಗಿ ಬೆಳವಣಿಗೆ ಹೊಂದುತ್ತಿರುವ ಸಸ್ಯದ ಕಾಂಡ ಆಂತರಿಕ ಸೂಚನೆಗಳು (ವಂಶವಾಹಿ, ಪ್ರಚೋದಕಗಳ ಪ್ರಮಾಣ, ವಯಸ್ಸು, ಪೋಷಣೆ) ಮತ್ತು ಹೊರವಾತಾವರಣದ (ಬೆಳಕು ತಾಪಮಾನದ) ಪ್ರಭಾವಕ್ಕೊಳಗಾಗಿ ಸಂತಾನೋತ್ಪತ್ತಿ ಹಂಬಲಿಸಿ ಹೂ ಬಿರಿಯುತ್ತದೆ; ಕಾಂಡ ಮುಂದುವರೆದು ತುದಿಯಲ್ಲಿರುವ ವರ್ಧನಾ ಅಂಗಾಂಶ ಹೂವಾಗಿ ಮಾರ್ಪಾಡಾಗುತ್ತದೆ. ಹೂವು ಮುಂದೆ ಕಾಯಾಗಿ, ಹಣ್ಣಾಗಿ, ಬೀಜವಾಗಿ, ತಲೆತಲೆಮಾರುಗಳ ಕಾಲ ಸಂತತಿಯ ಹೆಸರನ್ನು ಉಳಿಸಿ ಬೆಳೆಸುತ್ತದೆ. ಹೂಗಳಲ್ಲಿ ಸಾವಿರಾರು ಬಗೆ. ಸದ್ಯಕ್ಕೆ ದಾಸವಾಳದ ಹೂವನ್ನು ಮಾದರಿಯಾಗಿ ತೆಗೆದುಕೊಂಡರೆ ನಾಲ್ಕು ಮುಖ್ಯ ಭಾಗಗಳನ್ನು ಗುರುತಿಸಬಹುದು. ಹೊರಗಿನಿಂದ ಒಳಗೆ ಕಣ್ಣಿಗೆ ಕಾಣುವಂತೆ - ಎಲೆಯನ್ನೇ ಹೋಲುವ ಹಸಿರು ಬಣ್ಣದ ಪತ್ರದಳಗಳ ಸುರುಳಿ (ಕ್ಯಾಲಿಕ್ಸ್ ಅಥವಾ ಸೆಪಲ್ಸ್); ಬಣ್ಣ...