ಅಲೋ ವೆರಾ
‘ಅಲೋ ವೆರಾ’ - ಇಂತದ್ದೊಂದು ಸಸ್ಯದ ಬಗ್ಗೆ ಗೊತ್ತಿಲ್ಲದವರನ್ನು ಹುಡುಕುವುದೆಂದರೆ ಸಾವಿಲ್ಲದ ಮನೆಯಿಂದ ಸಾಸಿವೆ ತಂದಂತೆಯೇ! ಕೈತೋಟ-ಒಳಾಂಗಣದಲ್ಲಿ, ಅಲಂಕಾರಿಕವಾಗಿ-ಔಷಧಿಗಾಗಿ, ಲೋಳೇಸರದ ಪ್ರಸಿದ್ಧಿ ಇಲ್ಲಿಂದ ದಿಲ್ಲಿಯವರೆಗೆ ಹರಡಿರುವಂತದ್ದು. ‘ಅಲೋ ವೆರಾ’ ಎನ್ನುವುದೊಂದು ದ್ವಿನಾಮ. ‘ಅಲೋ’ ಎನ್ನುವುದು ಜಾತಿ (ಜೀನಸ್) ಯಾದರೆ ‘ವೆರಾ’ ಎನ್ನುವುದು ಪ್ರಭೇದ (ಸ್ಪೀಷೀಸ್). ಅರೇಬಿಕ್ ಭಾಷೆಯಿಂದ ಹುಟ್ಟಿದ ಅಲೋ ವೆರಾ ಶಬ್ಧಕ್ಕೆ ಮಿರುಗುವ ಕಹಿ ವಸ್ತು ಎಂಬ ಅರ್ಥವಿದೆ (ಬಹುಶಃ ಕಹಿ ರುಚಿಯ ಮಿರುಗುವ ಲೋಳೆಯ ಕಾರಣಕ್ಕಾಗಿ). ಸಕ್ಯುಲೆಂಟ್ ಸಸ್ಯಗಳ ಪೈಕಿ ಸೇರುವ ಅಲೋ ಗಳದ್ದು ಹತ್ತಿರತ್ತಿರ ಆರುನೂರು ಪ್ರಭೇದಗಳಿರುವ ಕುಲ; ತವರು ಉತ್ತರ ಆಫ್ರಿಕಾವಾದರೂ ಜಗತ್ತಿನಾದ್ಯಂತ ಉಷ್ಣ, ಸಮಶೀತೋಷ್ಣ, ಶುಷ್ಕ, ಹಿಮ ಪ್ರದೇಶದಲ್ಲಿಯೂ ನಾಟಿಯಾಗಿ ಬೆಳೆಯುತ್ತವೆ. ಈಜಿಪ್ಟ್, ಗ್ರೀಸ್, ಚೀನಾ, ಜಪಾನ್, ಭಾರತ ಸೇರಿದಂತೆ ಹಳೆಯ ನಾಗರಿಕತೆಯ ಅವಶೇಷಗಳಲ್ಲಿ, ಕಲ್ಲಿನ ಶಾಸಗಳಲ್ಲಿ, ತಾಳೆಗರಿಗಳಲ್ಲಿ ಇಣುಕುವ ಅಲೋವೆರಾದ ಬಳಕೆಗೆ ಆರುಸಾವಿರ ವರ್ಷಗಳ ಇತಿಹಾಸವಿದೆ. ಅತ್ಯಂತ ಹಳೆಯ ದಾಖಲೆ ಬೊಟ್ಟು ಮಾಡುವುದು ಈಜಿಪ್ಶಿಯನ್ ನಾಗರಿಕತೆಯೆಡೆಗೆ. ಯಾವುದೇ ಪರಿಸ್ಥಿತಿಯಲ್ಲೂ ಬದುಕುವ ಅಲೋವೆರಾ ಈಜಿಪ್ಶಿಯನ್ ಫೇರೋಗಳ ಅಂತ್ಯಕ್ರಿಯೆಯಲ್ಲಿ ಅಮರತ್ವದ ಸಂಕೇತವಾಗಿ ಅವರ ಮುಂದಿನ ಪಯಣಕ್ಕೆ ಉಡುಗೊರೆಯಾಗಿ ಬಳಕೆಯಲ್ಲಿತ್ತಂತೆ. ಜಗತ್ತು ಕಂಡು ಅತ್ಯಂತ ಸುಂದರ ಹೆ...